ಯಾವುದೇ ಪಕ್ಷ ಸೇರುವ ಬಗ್ಗೆ ಕಾರ್ಯಕರ್ತರೊಂದಿಗೆ ಚರ್ಚಿಸಿ ಅವರ ಅಂತಿಮ ತೀರ್ಮಾನಕ್ಕೆ ಬದ್ಧನಾಗಿ ಮುಂದೆ ಸಾಗುವೆ. ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಶಾಸಕನಾಗಿ ಸಚಿವರಾಗುವವರೆಗೂ ನನ್ನ ಜೊತೆಯಲ್ಲೇ ಇರುವ ಕಾರ್ಯಕರ್ತರ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಪುನರುಚ್ಚರಿಸಿದರು.
ಗುಬ್ಬಿ : ಯಾವುದೇ ಪಕ್ಷ ಸೇರುವ ಬಗ್ಗೆ ಕಾರ್ಯಕರ್ತರೊಂದಿಗೆ ಚರ್ಚಿಸಿ ಅವರ ಅಂತಿಮ ತೀರ್ಮಾನಕ್ಕೆ ಬದ್ಧನಾಗಿ ಮುಂದೆ ಸಾಗುವೆ. ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಶಾಸಕನಾಗಿ ಸಚಿವರಾಗುವವರೆಗೂ ನನ್ನ ಜೊತೆಯಲ್ಲೇ ಇರುವ ಕಾರ್ಯಕರ್ತರ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಪುನರುಚ್ಚರಿಸಿದರು.
ತಾಲೂಕಿನ ಕಡಬ ಹೋಬಳಿ ಕೊಪ್ಪ ಗ್ರಾಮದಲ್ಲಿ ಕೋಣನಕೆರೆ ಮಾರ್ಗವಾಗಿ ಕಡಬ ರಸ್ತೆ ಸಂಪರ್ಕಿಸುವ 4 ಕೋಟಿ ರು.ಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಮೊದಲಿಂದ ನನ್ನ ಜೊತೆ ಇರುವ ಮುಖಂಡರು, ಕಾರ್ಯಕರ್ತರು ಈಗಲೂ ಇದ್ದಾರೆ. ಸಾಕಷ್ಟುಮಂದಿ ನನ್ನ ಜೊತೆ ಸೇರಿದ್ದಾರೆ. ಅಂತಹವರನ್ನು ವೈಭವೀಕರಿಸಿ ತೋರುವ ಕೆಲಸ ನಾನು ಮಾಡಿಲ್ಲ. ಕಾಂಗ್ರೆಸ್ ಸೇರುವ ಒಲವು ಕಾರ್ಯಕರ್ತರಲ್ಲಿದೆ ಎಂದರು.
ಜೆಡಿಎಸ್ ಅಧಿಕಾರಕ್ಕೆ ಬರೋದು ಕನಸು: ಡಿಕೆಶಿ
ಕಾಂಗ್ರೆಸ್ ಪಕ್ಷದ ಪಟ್ಟಿಬಗ್ಗೆ ನನಗೆ ತಿಳಿಯದು. ಅದು ಒಂದು ಪಕ್ಷದ ಆಂತರಿಕ ವಿಚಾರ. ಮಾಧ್ಯಮದಲ್ಲಿ ಪಟ್ಟಿವಿಚಾರ ಬಗ್ಗೆ ಪ್ರತಿಕ್ರಿಯೆ ನೀಡಲಾಗದು. ನಾನು ಅಂತಿಮ ನಿರ್ಧಾರ ಕೈಗೊಂಡಿಲ್ಲ. ಬಜೆಟ್ ನಂತರ ನನ್ನ ಕಾರ್ಯಕರ್ತರ ಜೊತೆ ಸಭೆ ನಡೆಸಿಯೇ ಅಂತಿಮ ತೀರ್ಮಾನ ಮಾಡಲಾಗುವುದು. ನಾನು ಎಲ್ಲಿಯೂ ಪಕ್ಷ ಸೇರ್ಪಡೆ ಬಗ್ಗೆ ತಿಳಿಸಿಲ್ಲ. ಊಹಾಪೋಹ ಬಗ್ಗೆ ಉತ್ತರ ನೀಡಲಾಗದು ಎಂದು ಸ್ಪಷನೆ ನೀಡಿ ಉಳಿದ ದಿನದಲ್ಲಿ ಅಭಿವೃದ್ಧಿ ಕೆಲಸ ಪೂರ್ಣಗೊಳಿಸಲು ಮೀಸಲಿಟ್ಟು ರಾಜೀನಾಮೆ ನಂತರ ಕಾರ್ಯಕರ್ತರ ತೀರ್ಮಾನಕ್ಕೆ ಬದ್ಧ ಎಂದರು.
ಮಳೆಯಿಂದ ಹಾನಿಗೊಳಗಾದ ರಸ್ತೆಗಳ ಪಟ್ಟಿಮಾಡಿ ಅನುದಾನ ತರಲಾಗಿದೆ. ಸಾಕಷ್ಟುಗ್ರಾಮಗಳ ರಸ್ತೆಗೆ ಕಾಯಕಲ್ಪ ಶೀಘ್ರದಲ್ಲಿ ನೀಡಲಾಗುವುದು. ಇಂದು ಕೊಪ್ಪ ಕೋಣನಕೆರೆ ಮಾರ್ಗ ಕಡಬ ರಸ್ತೆ ಕೆಲಸಕ್ಕೆ ಚಾಲನೆ ಸಿಕ್ಕಿದೆ. ಇದೇ ರೀತಿ ಚಿಕ್ಕ ಹಡಿಗೆಹಳ್ಳಿ, ದಾಸರಪಾಳ್ಯ, ಸಾರಿಗೇಹಳ್ಳಿ, ಮಂಚಲದೊರೆ, ಸಾತೇನಹಳ್ಳಿ ಗೇಟ್, ನಂದಿಹಳ್ಳಿ, ಹೇರೂರು, ಅಡಗೂರು, ಸಿಂಗೋನಹಳ್ಳಿ ಹಾಗೂ ಹೊಸಪಾಳ್ಯ ಗ್ರಾಮದ ರಸ್ತೆಗಳಿಗೆ ವಾರದಲ್ಲಿ ಚಾಲನೆ ದೊರೆಯಲಿದೆ. ಈಗಾಗಲೇ ಪೂಜೆ ಆಗಿರುವ ಪೆರಮಸಂದ್ರ, ನೆರಳೇಕೆರೆ, ಬಾಡೇನಹಳ್ಳಿ ಗ್ರಾಮದ ರಸ್ತೆ ಡಾಂಬರ್ ಹಂತಕ್ಕೆ ತಲುಪಿವೆ ಎಂದು ಕೆಲಸದ ವಿಚಾರ ವಿವರಿಸಿದರು.
ಇದೇ ಸಂದರ್ಭದಲ್ಲಿ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಮುಖಂಡರು ಶಾಸಕ ವಾಸಣ್ಣ ಅವರಿಗೆ ಬೃಹತ್ ಪುಷ್ಪಾಹಾರ ಹಾಕುವ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಚಂದ್ರಕಲಾ, ಉಪಾಧ್ಯಕ್ಷೆ ರುದ್ರಮ್ಮ, ಮುಖಂಡರಾದ ಪಟೇಲ್ ದೇವರಾಜ್, ಸಿ.ಕೆ.ಗೌಡ, ಪಣಗಾರ್ ವೆಂಕಟೇಶ್, ಸಿದ್ದಲಿಂಗಪ್ಪ, ಕೆ.ಎಸ್.ಹರ್ಷ, ನರಸಿಂಹಮೂರ್ತಿ, ಕೆ.ಆರ್.ಶ್ರೀನಿವಾಸ್, ಕೋಣನಕೆರೆ ರಮೇಶ್, ಧರ್ಮೆಗೌಡ, ರಂಗೇಗೌಡ, ಸಿದ್ದರಾಜು, ವೆಂಕಟೇಶ್, ಗುತ್ತಿಗೆದಾರ ರಘು, ಪಂಚಾಯತ್ ರಾಜ್ ಇಲಾಖೆ ಎಇಇ ನಟರಾಜ್, ಎಇ ಲಿಂಗರಾಜ್ ಶೆಟ್ಟಿ, ಪಿಡಿಓ ಮಂಜುಳಾ ಪಾಟೀಲ್ ಇತರರು ಇದ್ದರು.
ಗುಬ್ಬಿ ತಾಲೂಕಿನ ಕಡಬ ಹೋಬಳಿ ಕೊಪ್ಪ ಗ್ರಾಮದಲ್ಲಿ ಕೋಣನಕೆರೆ ಮಾರ್ಗವಾಗಿ ಕಡಬ ರಸ್ತೆ ಸಂಪರ್ಕಿಸುವ 4 ಕೋಟಿ ರು. ಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಎಸ್.ಆರ್.ಶ್ರೀನಿವಾಸ್.