ಹಾವೇರಿ(ಆ.14): ಸಾವಿನಲ್ಲಿಯೂ ಒಂದಾಗುವ ಬಹಳಷ್ಟು ಘಟನೆ ನಡೆಯುತ್ತಲೇ ಇರುತ್ತದೆ. ವಿವಾಹವಾಗಿ ಜೊತೆಯಾಗಿ ಬಾಳಿ, ಮಕ್ಕಳು, ಮೊಮ್ಮಕ್ಕಳನ್ನು ಕಂಡು, ಸಿಹಿ ಕಹಿ, ನೋವು ಕಷ್ಟ ಸವಾಲುಗಳನ್ನು ಒಟ್ಟಿಗೇ ಎದುರಿಸಿ ಒಟ್ಟಿಗೇ ಸ್ವಗಸ್ಥರಾಗುವುದೆಂದರೆ ಸುಮ್ಮನೆಯಾ ? ಎಲ್ಲೋ ಒಂದಷ್ಟು ಜೋಡಿಗಳಷ್ಟೇ ಈ ಪುಣ್ಯ ಮಾಡಿರುತ್ತಾರೆ. ಸಾವಿನಲ್ಲೂ ಸಂಗಾತಿ ಜೊತೆಗೆ ಅನ್ನೋದು ಇದೇನಾ ?
ಶನಿವಾರ ಬೆಳಗ್ಗೆ ನಾಲ್ಕು ಗಂಟೆಗೆ ವೃದ್ಧ ದಂಪತಿ ಸಾವಿನಲ್ಲೂ ಒಂದಾಗಿ ಸಾರ್ಥಕತೆ ಮೆರೆದ ಘಟನೆ ಹಾವೇರಿ ತಾಲೂಕು ಗುತ್ತಲ ಸಮೀಪದ ಕಂಚಾರಗಟ್ಟಿ ಗ್ರಾಮದಲ್ಲಿ ನಡೆದಿದೆ.
ಪತಿ ಅಂತ್ಯಸಂಸ್ಕಾರ ಮಾಡಿ ಬಂದ ಬಳಿಕ ಪತ್ನಿ ಸಾವು: ಸಾವಿನಲ್ಲೂ ಒಂದಾದ ದಂಪತಿ
ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ದೆ ಹೊನ್ನಮ್ಮ ಶೇಖರಗೌಡ ಹುಳ್ಯಾಳ (65)ಇಂದು ಬೆಳಗಿನ ಜಾವ ನಾಲ್ಕು ಗಂಟೆಗೆ ಕೊನೆ ಉಸಿರೆಳೆದರು, ಮಡದಿಯ ಸಾವಿನ ಸುದ್ದಿ ಕೇಳುತ್ತಿದ್ದ ಹಾಗೆ ಪತಿ ಶೇಖರಗೌಡ ಹುಳ್ಯಾಳ (70) ತಾವು ಕೂಡಾ ಕೊನೆ ಉಸಿರೆಳೆವುದರೊಂದಿಗೆ ಸಾವಿನಲ್ಲೂ ಒಂದಾಗಿದ್ದಾರೆ. ಇಂದು ಅವರ ಮನೆಯಲ್ಲಿ ಕುಟುಂಬಸ್ಥರು ದಿವಂಗತ ದಂಪತಿಯನ್ನು ಜೋಡಿಯಾಗಿಯೇ ಕೂಡಿಸಿ ಅಂತ್ಯ ಕ್ರಿಯೆ ನಡೆಸಿದ್ದಾರೆ.