
ಬೆಂಗಳೂರು: ರಾಜ್ಯದ ‘ಎ’ ಮತ್ತು ‘ಬಿ’ ವರ್ಗದ ದೇವಸ್ಥಾನಗಳ ಆಸ್ತಿಯನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಆಯಾ ದೇವಸ್ಥಾನಗಳ ಹೆಸರಿನಲ್ಲೇ ಹೊಸದಾಗಿ ಭೂಮಿ ಖರೀದಿಸಲು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೂಚನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಧಾರ್ಮಿಕ ಇಲಾಖೆಯ ವ್ಯಾಪ್ತಿಯಲ್ಲಿ ಹಲವು ಮಹತ್ವದ ಸುಧಾರಣೆಗಳನ್ನು ತರಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ರಾಜ್ಯದಲ್ಲಿನ 'ಎ' ಮತ್ತು 'ಬಿ' ವರ್ಗದ ದೇವಸ್ಥಾನಗಳಲ್ಲಿ ಲಭ್ಯವಿರುವ ಭಾರಿ ಪ್ರಮಾಣದ ನಿಧಿಯನ್ನು ಬಳಸಿಕೊಂಡು ಆಯಾ ದೇಗುಲಗಳ ಹೆಸರಿನಲ್ಲೇ ಹೊಸ ಭೂಮಿ ಖರೀದಿಸಲು ಒತ್ತು ನೀಡಬೇಕು. ಈ ಆಸ್ತಿಗಳು ಶಾಶ್ವತವಾಗಿ ದೇವಾಲಯಗಳ ಹೆಸರಲ್ಲೇ ಉಳಿಯಲಿದ್ದು, ಇದರಿಂದ ಭವಿಷ್ಯದಲ್ಲಿ ಭಕ್ತಾದಿಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನೆರವಾಗಲಿದೆ ಎಂದು ಡಿಸಿಎಂ ತಿಳಿಸಿದರು.
ದೇವಸ್ಥಾನಗಳ ಹುಂಡಿ ಹಣ ದುರುಪಯೋಗ ತಡೆಗಟ್ಟಲು ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಆಗಸ್ಟ್ ಅಂತ್ಯದೊಳಗೆ ರಾಜ್ಯದ ಎಲ್ಲಾ ದೇವಸ್ಥಾನಗಳ ಹುಂಡಿ ಇರುವ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಗಡುವು ನೀಡಿದ್ದಾರೆ.
ದೇವಸ್ಥಾನಗಳ ಒತ್ತುವರಿಯಾಗಿರುವ ಆಸ್ತಿಗಳನ್ನು ಮರಳಿ ಪಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮುಂದಿನ ಮೂರು ತಿಂಗಳೊಳಗೆ ದೇವಸ್ಥಾನಗಳ ಜಾಗದ ಮೇಲಿನ ಎಲ್ಲಾ ಒತ್ತುವರಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಡೆಡ್‌ಲೈನ್ ವಿಧಿಸಿದ್ದಾರೆ.
ಆರ್ಥಿಕವಾಗಿ ಹಿಂದುಳಿದಿರುವ ‘ಸಿ’ ವರ್ಗದ ದೇವಸ್ಥಾನಗಳನ್ನು ಯಾವುದೇ ಖಾಸಗಿ ಸಂಸ್ಥೆಗಳಿಗೆ ಅಥವಾ ಟ್ರಸ್ಟ್‌ಗಳಿಗೆ ದತ್ತು ನೀಡಬಾರದು ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಶ್ರೀಮಂತ ‘ಎ’ ವರ್ಗದ ದೇವಸ್ಥಾನಗಳ ಒಟ್ಟು ಅನುದಾನದಲ್ಲಿ ಶೇಕಡಾ 10 ರಷ್ಟು ಹಣವನ್ನು ‘ಸಿ’ ವರ್ಗದ ದೇವಸ್ಥಾನಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಬಳಸಿಕೊಳ್ಳಲು ಸೂಚಿಸಿದ್ದಾರೆ.
ರಾಜ್ಯದ ಪ್ರಮುಖ ದೇವಸ್ಥಾನಗಳ ಮೂಲಸೌಕರ್ಯ ಕೊರತೆಯ ಬಗ್ಗೆ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಡಿಸಿಎಂ ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಯೊಂದು ಪ್ರಮುಖ ದೇವಸ್ಥಾನದ ಅಭಿವೃದ್ಧಿಗೆ ಸೂಕ್ತ ಮಾಸ್ಟರ್ ಪ್ಲಾನ್ ರೂಪಿಸಬೇಕು ಮತ್ತು ಯಾವುದೇ ಕಾರಣಕ್ಕೂ ದೇವಾಲಯಗಳ ಪಾವಿತ್ರ್ಯತೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ದೇವಸ್ಥಾನಗಳ ಅರ್ಚಕರು ಮತ್ತು ನೌಕರರ ಮಕ್ಕಳ ಉನ್ನತ ವ್ಯಾಸಂಗಕ್ಕೆ ನೆರವಾಗಲು ವಿದ್ಯಾರ್ಥಿವೇತನಕ್ಕೆ (Scholarship) ಅರ್ಜಿ ಆಹ್ವಾನಿಸುವ ಪ್ರಕ್ರಿಯೆಯನ್ನು ಶೀಘ್ರವಾಗಿ ಆರಂಭಿಸಲು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಈ ಎಲ್ಲಾ ಸುಧಾರಣಾ ಕ್ರಮಗಳು ಜಾರಿಗೆ ಬರುವುದರಿಂದ ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ವ್ಯವಸ್ಥಿತ ಆಡಳಿತ ಮತ್ತು ಭಕ್ತರಿಗೆ ಉತ್ತಮ ಸೌಲಭ್ಯಗಳು ಸಿಗುವಂತಾಗಲಿದೆ.