ವಿಶ್ವನಾಥ್ ಅನುಭವಿ, ಸಾಹಿತಿ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ, ಯೋಗೀಶ್ವರ್‌ಗೆ ಸಚಿವ ಸ್ಥಾನ ನೀಡೋದು ಸಿಎಂ ಮತ್ತು ರಾಷ್ಟ್ರೀಯ ಅಧ್ಯಕ್ಷರಿಗೆ ಬಿಟ್ಟ ವಿಚಾರ| ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯಗೆ ಟಾಂಗ್ ಕೊಟ್ಟ ಸವದಿ|
ಕಲಬುರಗಿ(ಡಿ.03): ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ವಿಚಾರ ಕೇವಲ ಗಾಳಿಮಾತು, ಇಲ್ಲದೆ ಇರೋದಕ್ಕೆ ರೆಕ್ಕೆ ಪುಕ್ಕ ಕಟ್ಟಿಕಾಗೆ ಹಾರಿಸಲಾಗುತ್ತಿದೆ, ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ವಿಚಾರದ ಪ್ರಶ್ನೆಯೇ ಇಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಬಿಜೆಪಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಲಬುರಗಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಬದಲಾವಣೆ ವಿಚಾರ ಆಧಾರ ರಹಿತವಾದದ್ದು ಎಂದಿದ್ದಾರೆ. ತಮ್ಮ ಸೋಲಿಗೆ ಯೋಗೇಶ್ವರ ಕಾರಣ ಎಂದು ವಿಶ್ವನಾಥ ನೀಡಿರುವ ಹೇಳಿಕೆಯ ಬಗ್ಗೆ ಸ್ಪಂದಿಸಿರುವ ಸವದಿ ವಿಶ್ವನಾಥ್ ಅನುಭವಿ, ಸಾಹಿತಿ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ, ಯೋಗೀಶ್ವರ್‌ಗೆ ಸಚಿವ ಸ್ಥಾನ ನೀಡೋದು ಸಿಎಂ ಮತ್ತು ರಾಷ್ಟ್ರೀಯ ಅಧ್ಯಕ್ಷರಿಗೆ ಬಿಟ್ಟ ವಿಚಾರ ಎಂದರು.
ಕೆಲವರು ತಮ್ಮ ಸಚಿವ ಸ್ಥಾನ ತಪ್ಪುತ್ತೆ ಅಂತಾ ಮತ್ತೊಬ್ಬರ ಸಚಿವ ಸ್ಥಾನಕ್ಕೆ ಆಕ್ಷೇಪ ವ್ಯಕ್ತಪಡಿಸುವುದು ಸಾಮಾನ್ಯ ಎಂದು ಹೇಳುತ್ತ ಪರೋಕ್ಷವಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯಗೆ ಟಾಂಗ್ ಕೊಟ್ಟರು. ಸಿದ್ದರಾಮಯ್ಯ ಕ್ರಾಸ್‌ಬ್ರೀಡ್ ಹೇಳಿಕೆ ವಿಚಾರವಾಗಿಯೂ ಸ್ಪಂದಿಸಿದ ಸವದಿ, ಸಿದ್ದರಾಮಯ್ಯ ಅವರು ಐದು ವರ್ಷ ಪೂರ್ಣಾವಧಿ ಸಿಎಂ ಆದವರು ಈ ರೀತಿಯ ಹೇಳಿಕೆ ನೀಡಬಾರದು, ಇಂತಹ ಶಬ್ದ ಬಳಕೆಯಿಂದ ಸಮಾಜದ ಮೇಲೆ ಏನಾಗುತ್ತದೆ ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ಒಂದು ಸಮಾಜವನ್ನು ತುಚ್ಛೀಕರಿಸಲು ಈ ರೀತಿಯ ಹೇಳಿಕೆ ನೀಡಿರೋದು ಸರಿಯಲ್ಲ ಎಂದರು.
ಸಿಎಂ ಯಡಿಯೂರಪ್ಪ ವಿರುದ್ಧ ಬಿಜೆಪಿ ಶಾಸಕನ ಅಸಮಾಧಾನ
ಶ್ರೀರಾಮುಲು ಹೇಳಿಕೆಗೆ ಸ್ಪಷ್ಟನೆ:
ಮೊಳಕಾಲ್ಮುರು ಕ್ಷೇತ್ರವನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಸೇರಿಸುವ ಕುರಿತು ಸಚಿವ ಶ್ರೀರಾಮುಲು ಹೇಳಿಕೆ ನೀಡಿರುವ ಕುರಿತು ಸ್ಪಷ್ಟನೆ ನೀಡಿದ ಸವದಿ, ಅಲ್ಲಿನ ಜನ ಮನವಿ ಕೊಟ್ಟಿದ್ದಾರೆ. ವಿಶೇಷ ಸ್ಥಾನಮಾನದ ವ್ಯಾಪ್ತಿಗೆ ತಮ್ಮ ಕ್ಷೇತ್ರವನ್ನೂ ಸೇರಿಸುವಂತೆ ಕೇಳಿ ಕೊಂಡಿದ್ದಾರೆ. ಮನವಿ ಸ್ವೀಕರಿಸಿ, ಸೂಕ್ತ ಕ್ರಮ ಕೈಗೊಳ್ಳೋದಾಗಿ ಹೇಳಿದ್ದಾರೆ ಅಷ್ಟೇ. ಆದರೆ, ಮೊಳಕಾಲ್ಮುರು ಕ್ಷೇತ್ರವನ್ನು 371(ಜೆ) ವ್ಯಾಪ್ತಿಗೆ ಸೇರಿಸೋದು ಅಷ್ಟುಸುಲಭವಲ್ಲ. ಅದು ನನ್ನ ಕೈಯಲ್ಲೂ ಇಲ್ಲ, ರಾಮುಲು ಕೈನಲ್ಲೂ ಇಲ್ಲ. ಕೇಂದ್ರ ಸರ್ಕಾರ ಮತ್ತೊಮ್ಮೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಸದ್ಯಕ್ಕೆ ರಾಜ್ಯ ಸರ್ಕಾರದ ಮುಂದೆ ಮೊಳಕಾಲ್ಮುರು ಸೇರಿಸೋ ವಿಚಾರವೇ ಇಲ್ಲ ಎಂದರು.