ಆಕ್ಸಿಜನ್ ಪೂರೈಕೆಗೆ ಕ್ರಯೋಜೆನಿಕ್ ಟ್ಯಾಂಕರ್ ಕೊರತೆ: ಸಮಸ್ಯೆ ಬಿಚ್ಚಿಟ್ಟ ಡಿಸಿ ಜ್ಯೋತ್ಸಾನ| , ಜಿಲ್ಲೆಯಲ್ಲಿರುವ ಶೇ.60ರಿಂದ 70ರಷ್ಟು ಬೆಡ್‌ಗಳನ್ನ ಕೋವಿಡ್ ಸೋಂಕಿತರಿಗೆಂದೇ ಮೀಸಲಿಡಬೇಕು| ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 46 ಹೆಲ್ಪ್‌ಲೈನ್ ತೆರೆದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಉಸ್ತುವಾರಿ ಸಚಿವ ಕಾರಜೋಳ|
ಕಲಬುರಗಿ(ಏ.25): ಜಿಲ್ಲೆಯನ್ನು ಕಾಡುತ್ತಿರುವ ಪ್ರಾಣವಾಯು ಬರಕ್ಕೆ ಕ್ರೋಜೆನಿಕ್ ಟ್ಯಾಂಕರ್ ಕೊರತೆ ಕಾರಣವಾಗಿದೆ ಎಂದು ಜಿಲ್ಲಾಧಿಕಾರಿ ವಿವಿ ಜ್ಯೋತ್ಸಾನ ಅವರು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಜೂಮ್ ಮೀಟಿಂಗ್‌ನಲ್ಲಿ ಹೇಳಿದ್ದಾರೆ.
ಬಳ್ಳಾರಿಯ ಜಿಂದಾಲ್‌ನಿಂದ ಅಗತ್ಯ ಪ್ರಮಾಣದಲ್ಲಿ ಆಕ್ಸಿಜನ್ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಲಬುರಗಿ ಸೇರಿದಂತೆ ನೆರೆಹೊರೆಯ ಜಿಲ್ಲೆಗೆ ಜಿಂದಾಲ್‌ನವರು ಆಕ್ಸಿಜನ್ ನೀಡಲಿದ್ದಾರೆ. ಆದರೆ, ಆಕ್ಸಿಜನ್‌ನನ್ನು ಕ್ರಯೋಜನಿಕ್ ಟ್ಯಾಂಕರ್ ಮೂಲಕ ಮಾತ್ರ ಸಾಗಿಸಬಹುದಾಗಿದೆ. ಸ್ಥಳೀಯವಾಗಿ ಎಲ್ಲೂ ಈ ಕ್ರಯೋಜನಿಕ್ ಟ್ಯಾಂಕರ್ ಸಿಗುತ್ತಿಲ್ಲ. ಹೈದ್ರಾಬಾದ್‌ನಿಂದಲೂ ತರಲು ಪ್ರಯತ್ನ ನಡೆಸಿದರೂ, ಅಲ್ಲಿಯೂ ಸಿಗುತ್ತಿಲ್ಲ ಎಂದು ಡಿಸಿ ಸಚಿವ ಗೋವಿಂದ ಕಾರಜೋಳ ಅವರ ಗಮನಕ್ಕೆ ತಂದರು.
ನಂತರ ಮಾತನಾಡಿದ ಸಚಿವರು, ಕ್ರಯೋಜನಿಕ್ ಟ್ಯಾಂಕರ್ ಸಂಬಂಧ ಜಾಹೀರಾತು ನೀಡಿ, ವಾಹನ ಪಡೆದು ಬಳ್ಳಾರಿಯಿಂದ ಆಕ್ಸಿಜನ್ ತರಿಸಿಕೊಳ್ಳಬೇಕು. ತಾವೂ ಬೆಂಗಳೂರಿನಲ್ಲಿ ಸಂಬಂಧಪಟ್ಟವರ ಜೊತೆ ಮಾತನಾಡುವುದಾಗಿ ತಿಳಿಸಿದರು.
ರೆಮ್‌ಡಿಸಿವಿಯರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟ..!
ಇಎಸ್‌ಐಸಿಯಲ್ಲಿ ಕೋವಿಡ್ ಸೋಂಕಿತರಿಗೆ ವ್ಯವಸ್ಥೆ ಮಾಡಲಾಗಿರುವ 400 ಬೆಡ್‌ಗಳಿಗೆ ಜಂಬೋ ಸಿಲಿಂಡರ್ ಮೂಲಕ ಆಕ್ಸಿಜನ್ ಪೂರೈಕೆಗೆ ಕ್ರಮ ವಹಿಸಬೇಕು. ಇಎಸ್‌ಐಸಿಯನ್ನು ಪೂರ್ಣ ಪ್ರಮಾಣದಲ್ಲಿ ಕೋವಿಡ್ ರೋಗಿಗಳಿಗೆ ಬಳಸಿಕೊಳ್ಳಬೇಕು. ಕಲಬುರಗಿಯ ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆಗಳನ್ನು ಸಹ ಬಳಸಿಕೊಳ್ಳಬೇಕು, ಜಿಲ್ಲೆಯಲ್ಲಿರುವ ಶೇ.60ರಿಂದ 70ರಷ್ಟು ಬೆಡ್‌ಗಳನ್ನ ಕೋವಿಡ್ ಸೋಂಕಿತರಿಗೆಂದೇ ಮೀಸಲಿಡಬೇಕೆಂದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 46 ಹೆಲ್ಪ್‌ಲೈನ್ ತೆರೆದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಉಸ್ತುವಾರಿ ಸಚಿವರು, ಕೋವಿಡ್ ಆಸ್ಪತ್ರೆ, ಬೆಡ್‌ಗಳ ಸಂಖ್ಯೆ, ಭರ್ತಿಯಾದ ಬೆಡ್‌ಗಳು, ಖಾಲಿ ಬೆಡ್‌ಗಳು ಇನ್ನಿತರ ಸಂಪೂರ್ಣ ವಿವರಗಳನ್ನು ನೀಡಿದರೆ, ಕೋವಿಡ್ ರೋಗಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ರಸ್ತೆಯಲ್ಲಿ ಉಗುಳಿದರೆ ದಂಡ ವಿಧಿಸಬೇಕು, ಇದಕ್ಕೆ ಕಾರಣವಾಗುವ ಪಾನ್-ಬೀಡಾ ಅಂಗಡಿಗಳ ಮೇಲೂ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಮಹಾರಾಷ್ಟ್ರ, ತೆಲಂಗಾಣದಿಂದ ಬರುವವರ ಬಗ್ಗೆ ತೀವ್ರ ನಿಗಾವಹಿಸಬೇಕು. ಇಲ್ಲಿಂದ ಬರುವ ಜನರು ಕಡ್ಡಾಯವಾಗಿ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ತಂದಿರಬೇಕು. ಸೋಂಕಿನ ಲಕ್ಷಣಗಳಿರುವ ಜನರನ್ನು ಬೇರೆಡೆ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡಬೇಕು ಎಂದರು.