ಹುಣಸೂರು ಪಟ್ಟಣದ ಮಳೆಹಾನಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಡಾ. ಗೌತಮ್ ಬಗಾದಿ ಭೇಟಿನೀಡಿ ಪರಿಶೀಲಿಸಿದರು.
ಹುಣಸೂರು (ಅ.17): ಹುಣಸೂರು ಪಟ್ಟಣದ ಮಳೆಹಾನಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಡಾ. ಗೌತಮ್ ಬಗಾದಿ ಭೇಟಿನೀಡಿ ಪರಿಶೀಲಿಸಿದರು.
ಮಂಜುನಾಥ ಬಡಾವಣೆಯಲ್ಲಿನ ಅವ್ಯವಸ್ಥೆಯನ್ನು ಕಂಡು ದಂಗಾದರು. ಸಮಸ್ಯೆಗೆ ಮೂಲಕಾರಣ ಸುತ್ತಮುತ್ತಲ ಅನಧಿಕೃತ ಖಾಸಗಿ ಬಡಾವಣೆಗಳಾಗಿದ್ದು ಕಾಲುವೆ ಇದ್ದ ಜಾಗವನ್ನು ಒತ್ತುವರಿ ಮಾಡಿಕೊಂಡು ಮಾರಾಟ ಮಾಡಿದ್ದಾರೆ ಎಂದು ನಾಗರಿಕರು ಆರೋಪಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ (dc) , ಮಳೆಹಾನಿ ಸಾಕಷ್ಟು ಪ್ರಮಾಣದಲ್ಲಿ ಉಂಟಾಗಿದ್ದು, ಸರ್ಕಾರದಿಂದ (Karnataka Fovt) ಮನೆಯೊಳಗೆ ನೀರು ನುಗ್ಗಿ ಹಾನಿಗೊಳಗಾದ ಮನೆಗೆ ನೀಡುತ್ತಿದ್ದ ಪ್ರಕೃತಿ ವಿಕೋಪ ನಿದಿಯಡಿ . 3800 ಪರಿಹಾರವನ್ನು . 10 ಸಾವಿರಕ್ಕೆ ಏರಿಸಲು ತಹಸೀಲ್ದಾರ್‌ಗೆ ಸೂಚಿಸಿದ್ದೇನೆ. ನಾಳೆಯೇ ತಾಲೂಕಿನಾದ್ಯಂತ ಮನೆಯೊಳಗೆ ನೀರು ನುಗ್ಗಿರುವ ಕುಟುಂಬಕ್ಕೆ . 10ಸಾವಿರ ಪರಿಹಾರ ವಿತರಿಸಲಾಗುವುದು ಎಂದರು.
ಖಾಸಗಿ ಬಡಾವಣೆಗಳ ಅಕ್ರಮದಿಂದಾಗಿ ಮಳೆಹಾನಿ (Rain) ಹೆಚ್ಚಾಗಿರುವುದು ಕಂಡುಬಂದಿದ್ದು, ಖಾಸಗಿ ಲೇಔಟ್‌ಗಳಲ್ಲಿ ಇರುವ ಸಿಎ ನಿವೇಶನಗಳನ್ನು ತಹಸೀಲ್ದಾರ್, ನಗರಸಭೆ ಮತ್ತು ಹುಡಾ ಅಧಿಕಾರಿಗಳು ಜಂಟಿಯಾಗಿ ಪರಿಶೀಲಿಸಿ ವಶಕ್ಕೆ ಪಡೆಯಲು ಸೂಚಿಸಿದ್ದೇನೆ. ಅಲ್ಲದೆ ನಗರೋತ್ಥಾನ ಯೋಜನೆಯಡಿ ನಿರ್ಮಾಣಗೊಳ್ಳಲಿರುವ ಕಾಲುವೆಗೆ ಒತ್ತುವರಿ ಸಮಸ್ಯೆಯಾದರೆ ಯಾವುದೇ ಮುಲಾಜಿಲ್ಲದೆ ಒತ್ತುವರಿ ತೆರವುಗೊಳಿಸಿ ಕಾಮಗಾರಿ ಮುಂದುವರೆಸಲು ಸೂಚಿಸಿದ್ದೇನೆ ಎಂದರು.
ನಗರದ ಕಲ್ಕುಣಿಕೆ ಬಡಾವಣೆಯ ಗುರುಗಳ ಕಟ್ಟೆಕೆರೆಯು 2.13 ಕೆರೆ ಇದ್ದು, ಒತ್ತುವರಿಯಿಂದಾಗಿ ಕೆರೆಯ ವಿಸ್ತೀರ್ಣ ಕಡಿಮೆಯಾಗಿದೆ. ಅಲ್ಲದೇ ಸುತ್ತಮುತ್ತಲು ಒತ್ತುವರಿ ಮಾಡಿಕೊಂಡವರು ಮನೆ ನಿರ್ಮಿಸಿಕೊಂಡಿದ್ದಾರೆ. ಕೆರೆಯ ಕುರಿತು ಸಮಗ್ರ ಮಾಹಿತಿ ನೀಡಲು ತಹಸೀಲ್ದಾರ್‌ರಿಗೆ ಸೂಚಿಸಿದ್ದು, ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.
ಶಾಸಕ ಎಚ್.ಪಿ. ಮಂಜುನಾಥ್, ನಗರಸಭಾಧ್ಯಕ್ಷೆ ಗೀತಾ ನಿಂಗರಾಜು, ಸದಸ್ಯರಾದ ರಾಧಾ, ಸ್ವಾಮಗೌಡ, ದೇವನಾಯ್ಕ, ಪ್ರಭಾರ ಪೌರಾಯುಕ್ತೆ ಎಲ್. ರೂಪಾ, ಉಪ ವಿಭಾಗಾಧಿಕಾರಿ ವರ್ಣಿತ್ ನೇಗಿ, ತಹಸೀಲ್ದಾರ್ ಡಾ.ಎಸ್.ಯು. ಅಶೋಕ್ ಹಾಗು ನಾಗರಿಕರು ಇದ್ದರು.
ಅಪಾರ ಪ್ರಮಾಣದ ಬೆಳೆ ನಾಶ
ರೈತರಿಗೆ ಮಳೆ ಬಂದರೂ ಕಷ್ಟಬಾರದೆ ಇದ್ದರೂ ಕಷ್ಟ. ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ ಎಂದು ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ ತಿಳಿಸಿದರು.
ಸಾಲಿಗ್ರಾಮ ತಾಲೂಕಿನ ಅಂಕನಹಳ್ಳಿ ರಾಮ ಸಮುದ್ರದ ಎಡದಂಡೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಸುರಿದ ಮಳೆಗೆ ನೂರಾರು ಎಕರೆ ಪ್ರದೇಶದಲ್ಲಿ ಭತ್ತದ ಗದ್ದೆಗಳಲ್ಲಿ ತೆಂಗು, ಅಡಿಕೆ, ಬಾಳೆ, ಕಬ್ಬು, ರಾಗಿ ಜಮೀನುಗಳಲ್ಲಿ ನೀರು ತುಂಬಿದ್ದು ಎಲ್ಲಾ ಗದ್ದೆಗಳು ಕೆರೆಯಂತೆ ಆಗಿದೆ.
ಭತ್ತ ಬೆಳೆಯು ಸಂಪೂರ್ಣ ನಾಶವಾಗಿದೆ. ಬರಗಾಲದಲ್ಲಿ ಬೆಳೆಗಳಿಗೆ ನೀರು ಇಲ್ಲದೆ ಒಣಗಿ ರೈತರು ಕಣ್ಣೀರು ಹಾಕುವ ಪರಿಸ್ಥಿತಿ ನೋಡಿದ್ದೇವೆ. ಎಲ್ಲಾ ಚೆನ್ನಾಗಿ ಫಸಲು ಬಂದಿದೆ ಎಂದರೆ ಸೂಕ್ತ ಬೆಲೆ ಸಿಗುವುದಿಲ್ಲ. ನಮ್ಮ ರೈತರ ಪಾಡನ್ನು ಯಾವ ಸರ್ಕಾರವು ಕೇಳುತ್ತಿಲ್ಲ. ಬೆಂಬಲ ಬೆಲೆ ಕೊಡದೆ ರಾಜಕಾರಣಿಗಳ ಅನುಕೂಲಕ್ಕೆ ತಕ್ಕಂತೆ ಬೆಲೆ ನಿಗದಿಪಡಿಸುತ್ತಿದ್ದಾರೆ. ಈಗಲಾದರೂ ರೈತರ ಕಷ್ಟಕ್ಕೆ ಸರ್ಕಾರ ಸ್ಪಂದಿಸಿ ಆರ್ಥಿಕ ನೆರವು ಘೋಷಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಮಿರ್ಲೆ ಚುಂಚ್ಚನಕಟ್ಟೆರಸ್ತೆ ತುಂಬೆಲ್ಲ ನೀರು ಹರಿಯುತ್ತಿದ್ದು ಅಂಕನಹಳ್ಳಿ ಮಾಳನಾಯ್ಕನಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆ ಸಂಪರ್ಕ ಕಡಿತವಾಗಿದೆ. ವಾಹನ ಸವಾರರು ಸಾಲಿಗ್ರಾಮದಿಂದ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅನೇಕ ಮನೆಗಳು, ರೈತರು ಬೆಳೆದ ಬೆಳೆಗಳು ಸಂಪೂರ್ಣ ಹಾನಿಯಾಗಿದ್ದು ಶಾಸಕ ಸಾ.ರಾ. ಮಹೇಶ್ ಅವರೊಂದಿಗೆ ಮೊನ್ನೆ ಕೂಡ ತಾಲೂಕಿನಲ್ಲಿ ಆಗಿರುವ ಅನಾಹುತದ ಬಗ್ಗೆ ಸ್ಥಳ ಪರಿಶೀಲಿಸಿ ಇಂದು ಕೂಡ ಭೇಟಿ ನೀಡುತ್ತಿದ್ದೇನೆ. ಆಗಿರುವ ಹಾನಿಗೆ ಸೂಕ್ತ ಪರಿಹಾರಕ್ಕೆ ವರದಿ ಸಲ್ಲಿಸಲು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
- ಮೋಹನ್‌ಕುಮಾರ್, ತಹಸೀಲ್ದಾರ್, ಸಾಲಿಗ್ರಾಮ ತಾಲೂಕು