ತಾಲೂಕಿನಲ್ಲಿ ವರುಣನ ಅರ್ಭಟ ಮುಂದುವರಿದಿದ್ದು, ತಾಲೂಕಿನ ರಂಗಸಮುದ್ರ ಕೆರೆ ಈಗಾಗಲೇ ಭರ್ತಿಯಾಗಿ ಕೋಡಿ ಬೀಳುವ ಹಂತಕ್ಕೆ ತಲುಪಿದೆ.
ಪಾವಗಡ (ಅ.17): ತಾಲೂಕಿನಲ್ಲಿ ವರುಣನ ಅರ್ಭಟ ಮುಂದುವರಿದಿದ್ದು, ತಾಲೂಕಿನ ರಂಗಸಮುದ್ರ ಕೆರೆ ಈಗಾಗಲೇ ಭರ್ತಿಯಾಗಿ ಕೋಡಿ ಬೀಳುವ ಹಂತಕ್ಕೆ ತಲುಪಿದೆ.
ಕಳೆದ ನಾಲ್ಕೈದು ದಿನಗಳಿಂದ ಸತತವಾಗಿ ಮಳೆ (Rain) ಸುರಿಯುತ್ತಿದ್ದು, ತಾಲೂಕಿನ ಗ್ರಾಮೀಣ ಭಾಗದ ಹಳ್ಳಕೊಳ್ಳಗಳಲ್ಲಿ ಭಾರಿ ಪ್ರಮಾಣದ ನೀರು (water) ನಿರಂತರವಾಗಿ ಹರಿಯುತ್ತಿದೆ.
ಲಿಂಗದಹಳ್ಳಿ, ಕೆಂಚಮ್ಮನಹಳ್ಳಿ, ಪೊಲೇನಹಳ್ಳಿ, ಮಲ್ಲಮ್ಮನಹಳ್ಳಿ, ಸಾಸಲಕುಂಟೆ, ಓಬಳಾಪುರ, ರಂಗಸಮುದ್ರ, ಕಾರನಾಗನಹಟ್ಟಿ, ಬೆಳ್ಳಿಬಟ್ಟಲು, ಶೈಲಾಪುರದ ಬೆಟ್ಟಗುಡ್ಡಗಳಿಂದ ಹೆಚ್ಚು ಪ್ರಮಾಣದ ನೀರು ಹರಿದು ಬರುತ್ತಿದೆ. ದೊಡ್ಡದೊಡ್ಡ ಹಳ್ಳಗಳಲ್ಲಿ ಬೃಹತ್ ಪ್ರಮಾಣದ ನೀರು ಹರಿಯುತ್ತಿರುವ ಕಾರಣ ಕೆರೆಕುಂಟೆಗಳು ಸಂಪೂರ್ಣ ಭರ್ತಿಯಾಗಿ ಎಲ್ಲಿ ನೋಡಿದರೂ ನೀರೇ ನೀರು ಕಾಣತೊಡಗಿದೆ.
ಬೆಳ್ಳಿಬಟ್ಟಲು ಹಾಗೂ ಓಬಳಾಪುರದ ಹಳ್ಳದ ಮೂಲಕ ಹೆಚ್ಚು ಪ್ರಮಾಣದಲ್ಲಿ ನೀರು ಹರಿಯುತ್ತಿರುವ ಕಾರಣ ತಾಲೂಕಿನ ರಂಗಸಮುದ್ರ ಕೆರೆ ಕೋಡಿ ಬೀಳುವ ಹಂತಕ್ಕೆ ತಲುಪಿದೆ. ಕಳೆದ 40 ವರ್ಷಗಳಿಂದ ರಂಗಸಮುದ್ರ ಕೆರೆ ತುಂಬಿರಲಿಲ್ಲ. ಇತಿಹಾಸ ಅನ್ವಯ ಈ ಹಿಂದೆ ಗ್ರಾಮಸ್ಥರಿಂದ ಕಿರುಕುಳಕ್ಕೆ ಒಳಪಟ್ಟಕೆರೆಯ ದಡದ ಮೇಲೆ ಸ್ಥಾಪಿತವಾಗಿರುವ ಶ್ರೀ ತಿಪ್ಪೇರುದ್ರಸ್ವಾಮಿ ಹಗಲು ನೀರು ಬಂದ ನೀರು ಹಗಲಿಗೆ ಮತ್ತು ಇರುಳು ಬಂದ ನೀರು ಇರುಳಿಗೆ ಮಾತ್ರ ಸೀಮಿತವಾಗಲೆಂದು ಶಾಪವಿಟ್ಟಿದ್ದರೆನ್ನಲಾಗಿದೆ. ಹೀಗಾಗಿ ಈ ಕೆರೆ ತುಂಬುವುದಿಲ್ಲ, ಕೋಡಿಯೂ ಹರಿಯುವುದಿಲ್ಲ ಎಂದು ಈ ಭಾಗದ ಜನತೆ ನಂಬಿದ್ದರು. ಈ ಭಾರಿ ದಡದ ಮೇಲಿನ ಶ್ರೀ ತಿಪ್ಪೇರುದ್ರಸ್ವಾಮಿ ಕರುಣೆ ತೋರಿದ್ದು ಹೀಗಾಗಿ ಕೆರೆಗೆ ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹವಾಗಿ ಅಚ್ಚರಿ ಮೂಡಿಸಿದೆ. ಅಪಾಯ ಸ್ಥಿತಿ ಇರುವ ಕಡೆ ಕೆರೆಕಟ್ಟೆಗೆ ಗ್ರಾಮಸ್ಥರು ನಿರಂತರ ಮಣ್ಣು ಹಾಕಿ ಭದ್ರ ಮಾಡುವಲ್ಲಿ ನಿರತರಾಗಿದ್ದು, ಇನ್ನೂ ಕೇವಲ ಒಂದು ಅಡಿಗಳಷ್ಟುನೀರು ತುಂಬಿದರೆ, ರಂಗಸಮುದ್ರ ಕೆರೆ ಕೋಡಿ ಬೀಳಲಿದೆ.
ಹಗ್ಗದ ಸಹಾಯದಿಂದ ಜನ ಸಂಚಾರ
ಸಾಸಲಕುಂಟೆ ಗ್ರಾಮದಲ್ಲಿ ಹೆಚ್ಚು ಪ್ರಮಾಣದ ಮಳೆ ಬಿದ್ದ ಕಾರಣ ಗ್ರಾಮದ ವಿಶಾಲವಾದ ದೊಡ್ಡಹಳ್ಳ ಬೃಹತ್ ಮಟ್ಟದಲ್ಲಿ ಹರಿಯುತ್ತಿದ್ದು ಬೇರೆಡೆಯಿಂದ ಗ್ರಾಮದ ಒಳ ಮತ್ತು ಹೊರ ಹೋಗಲು ಸಾಧ್ಯವಾಗದೇ ಜನತೆ ಪರದಾಡುತ್ತಿದ್ದಾರೆ. ಹಗ್ಗದ ಸಹಾಯದ ಮೇರೆಗೆ ಆಚೆಯಿಂದ ಈಚೆಗೆ ಒಡಾಡುವ ಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ನಿಡಗಲ್ ಹಾಗೂ ವೈ.ಎನ್.ಹೊಸಕೋಟೆ ಹೋಬಳಿ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಅಡಕೆ, ವಿಳ್ಯದಲೆ, ತೆಂಗು, ದಾಳಿಂಬೆ ತೋಟಗಳಿಗೆ ಸಂಪೂರ್ಣ ಹಾನಿಯಾಗಿದೆ. ಹತ್ತಿ, ರೇಷ್ಮೆ, ಶೇಂಗಾ, ಟೊಮೆಟೊ ಬೆಳೆ ಮುಳುಗಡೆಯಾಗಿದ್ದು ಹಳ್ಳಗಳಿಂದ ಹರಿದು ಬರುವ ನೀರು ನುಗ್ಗಿ ಜಲಾವೃತ್ತಗೊಂಡಿದ್ದು ಅತಿವೃಷ್ಟಿಯಿಂದ ನೀರಾವರಿ ಹಾಗೂ ತೋಟಗಾರಿಕೆ ಬೆಳೆಗಳು ನೆಲಕಚ್ಚಿದ್ದು ರೈತರಲ್ಲಿ ಆತಂಕ ಮನೆ ಮಾಡಿದೆ.
ಒಡೆದ ಮನಸುಗಳನ್ನು ಒಂದುಗೂಡಿಸುತ್ತಿರುವ ಕೆರೆ
ತುಮಕೂರು
ಒಂದೆಡೆ ಮಳೆಯ ಆರ್ಭಟಕ್ಕೆ ಬಹಳಷ್ಟುಜಿಲ್ಲೆಗಳು ತತ್ತರಿಸುತ್ತಿದ್ದರೆ ಇನ್ನೊಂದೆಡೆ ಬಯಲು ಸೀಮೆ ತುಮಕೂರು ಜಿಲ್ಲೆಯಲ್ಲಿ ಇದೇ ಮಳೆ ದಶಕಗಳ ಕಾಲ ಮನಸ್ತಾಪದದಿಂದ ಮಾತು ಬಿಟ್ಟಿದ್ದ ಮನಸ್ಸುಗಳನ್ನು ಒಂದುಗೂಡಿಸುತ್ತಿದೆ.
ಮಳೆಯಾಶ್ರಿತ ಪ್ರದೇಶವಾದ ಬಯಲು ಸೀಮೆ ಜಿಲ್ಲೆಗಳಲ್ಲಿ ಒಂದಾದ ತುಮಕೂರು ಜಿಲ್ಲೆ ಪ್ರತಿ ಬಾರಿ ಬರಗಾಲಕ್ಕೆ ತುತ್ತಾಗುತ್ತಿತ್ತು. ಆದರೆ ಈ ಬಾರಿ ಬಿದ್ದ ಭಾರಿ ಮಳೆಗೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಬರುವ 371 ಕೆರೆಗಳ ಪೈಕಿ 300 ಕ್ಕೂ ಹೆಚ್ಚು ಕೆರೆಗಳು ಕೋಡಿ ಬಿದ್ದಿವೆ. ಮಳೆ ಹಾಗೂ ಕೆರೆ ಕೋಡಿ ಬಿದ್ದಿರುವುದು ಬಯಲು ಸೀಮೆ ಜಿಲ್ಲೆಯಾದ ತುಮಕೂರಿನ ಜನರಲ್ಲಿ ಹರ್ಷ ಮನೆ ಮಾಡಿದೆ.
ಕೆರೆ ಕೋಡಿ ಬಿದ್ದಿರುವುದರಿಂದ ಗ್ರಾಮಸ್ಥರೆಲ್ಲಾ ಒಟ್ಟಾಗಿ ಗಂಗಾಪೂಜೆ ಮಾಡುವ ಮೂಲಕ ತಮ್ಮ ಸಂತೋಷವನ್ನು ಹೊರ ಹಾಕುತ್ತಿದ್ದಾರೆ. ಈ ಮಧ್ಯೆ ಜಮೀನಿನ ವ್ಯಾಜ್ಯ, ಕೌಟುಂಬಿಕ ಕಲಹ, ನಿವೇಶನದ ಗಲಾಟೆಯಲ್ಲಿ ಮಾತು ಬಿಟ್ಟಿದ್ದವರನ್ನು ಈ ಮಳೆ ಒಂದಾಗಿಸಿದೆ. ಮಾತು ಬಿಟ್ಟು ದೂರ ದೂರವಾಗಿದ್ದ ಗೆಳೆಯರು, ಸಂಬಂಧಿಕರ ಮಧ್ಯೆ ಮತ್ತೆ ಸ್ನೇಹ, ನೆಂಟಸ್ತನ ಚಿಗುರಿದೆ. ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ದೂರವಾದ ಮನಸ್ಸುಗಳು ಒಂದಾಗಿ ಗಂಗಾಪೂಜೆ ಮಾಡುತ್ತಿದ್ದಾರೆ.
ಗ್ರಾಮ ತೊರೆದವರು ಮತ್ತೆ ಹಳ್ಳಿಗೆ: ವ್ಯಾಪಾರ, ಉದ್ಯೋಗ ಮತ್ತಿತರೆ ಕಾರಣದಿಂದ ಗ್ರಾಮಗಳನ್ನು ತೊರೆದು ಪಟ್ಟಣ ಸೇರಿದವರು, ಹಾಗೆಯೇ ಜಮೀನುಗಳನ್ನು ಮಾರಿ ಗ್ರಾಮದ ಜೊತೆ ಸಂಬಂಧ ಕಳಕೊಂಡವರು ಕೂಡ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಗಂಗಾಪೂಜೆಯಲ್ಲಿ ಪಾಲ್ಗೊಳ್ಳಲು ಗ್ರಾಮಕ್ಕೆ ಬರುತ್ತಿರುವುದು ಸಾಮಾನ್ಯವಾಗಿದೆ.