ಹುಲಿಗೆಮ್ಮ ದೇವಸ್ಥಾನ ತೆರೆಯದಿರಲು ನಿರ್ಧಾರ| ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನ| ಹುಲಿಗೆಮ್ಮ ದೇವಸ್ಥಾನಕ್ಕೆ ನೆರೆಯ ರಾಜ್ಯ ಮಹಾರಾಷ್ಟ್ರದಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸುವ ಭಕ್ತರು| ಇದರಿಂದ ಕೋವಿಡ್-19 ಹರಡುವ ಸಾಧ್ಯತೆ ಅಧಿಕ|
ಕೊಪ್ಪಳ(ಜೂ.07): ಜೂನ್ 8ರಿಂದ ರಾಜ್ಯಾದ್ಯಂತ ದೇವಸ್ಥಾನಗಳನ್ನು ತೆರೆಯಲು ರಾಜ್ಯ ಸರ್ಕಾರ ನಿರ್ಧಾರ ಮಾಡಿರುವ ಬೆನ್ನಲ್ಲೇ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನವನ್ನು ಜೂನ್ 30ರ ವರೆಗೂ ತೆರೆಯದಿರಲು ನಿರ್ಧರಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಅವರು ಅಧಿಕೃತ ಪ್ರಕಟಣೆ ನೀಡಿದ್ದು, ಈಗ ದೇವಸ್ಥಾನದ ಪ್ರವೇಶಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ಹುಲಿಗೆಮ್ಮ ದೇವಸ್ಥಾನಕ್ಕೆ ಕೇವಲ ಸ್ಥಳೀಯ ಭಕ್ತರು ಆಗಮಿಸುವುದಿಲ್ಲ. ನೆರೆಯ ರಾಜ್ಯದಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅದರಲ್ಲೂ ಮಹಾರಾಷ್ಟ್ರದಿಂದಲೇ ಅಧಿಕ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇದರಿಂದ ಕೋವಿಡ್-19 ಹರಡುವ ಸಾಧ್ಯತೆ ಅಧಿಕವಾಗಿರುತ್ತದೆ. ಮೇ ತಿಂಗಳಲ್ಲಿ ಹುಲಿಗೆಮ್ಮ ದೇವಿಯ ಜಾತ್ರೆ ಇತ್ತು. ಈ ವರ್ಷ ಜಾತ್ರೆಯೂ ಆಗದೆ ಇರುವುದರಿಂದ ಮತ್ತು ಲಾಕ್‌ಡೌನ್ ಇರುವುದರಿಂದ ಭಕ್ತರು ಆಗಮಿಸುವುದಕ್ಕೆ ಅವಕಾಶ ಸಿಕ್ಕಿಲ್ಲ. ಈಗ ಏಕಾಏಕಿ ದೇವಸ್ಥಾನದಲ್ಲಿ ದರ್ಶನಕ್ಕೆ ಅವಕಾಶ ನೀಡಿದರೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅದರಲ್ಲೂ ಮಹಾರಾಷ್ಟ್ರದಿಂದಲೇ ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹೀಗಾಗಿ, ಕೋವಿಡ್-19 ಹರಡುವ ಸಾಧ್ಯತೆ ಅಧಿಕವಿರುತ್ತದೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಆಗುವುದಿಲ್ಲ ಎಂದು ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
ಕೊರೋನಾತಂಕ: ಹುಲಿಗೆಮ್ಮಾ ದೇವಸ್ಥಾನ ತೆರೆಯದಿರಲು ಆಗ್ರಹ
ಗ್ರಾಮ ಪಂಚಾಯಿತಿ ಠರಾವು:
ಈ ಎಲ್ಲ ಅಂಶಗಳನ್ನೊಳಗೊಂಡು ಈಗ ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ದೇವಸ್ಥಾನ ಆಡಳಿತ ಮಂಡಳಿ ದೇವಸ್ಥಾನ ತೆರೆಯದಿರಲು ಠರಾವು ಮಾಡಿದ್ದಾರೆ. ಈ ಠರಾವು ಆಧರಿಸಿ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಆದೇಶ ಹೊರಡಿಸಿದ್ದಾರೆ. ಜೂನ್ 30ರ ವರೆಗೂ ಹುಲಿಗೆಮ್ಮಾ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ, ಭಕ್ತರಿಗೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
75 ದಿನಗಳ ಬಳಿಕ ರಾಜ್ಯ 98% ಅನ್‌ಲಾಕ್: ಹೋಟೆಲ್, ಮಾಲ್ ಓಪನ್!
ಕನ್ನಡಪ್ರಭ, ಸುವರ್ಣ ನ್ಯೂಸ್.ಕಾಂ ವರದಿ
ಹುಲಿಗೆಮ್ಮ ದೇವಸ್ಥಾನವನ್ನು ತೆರೆಯದಿರಲು ಗ್ರಾಮ ಪಂಚಾಯಿತಿ ಚಿಂತನೆ ನಡೆಸಿದೆ. ನೆರೆಯ ಮಹಾರಾಷ್ಟ್ರದಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸುವುದರಿಂದ ಕೋವಿಡ್ ಹರಡುವ ಪ್ರಮಾಣ ಅಧಿಕವಾಗುತ್ತದೆ. ಹೀಗಾಗಿ, ಸರ್ಕಾರ ಉಳಿದ ದೇವಸ್ಥಾನಗಳನ್ನು ತೆರೆದರೂ ಸ್ಥಳೀಯವಾಗಿ ದೇವಸ್ಥಾನ ತೆರೆಯದಿರಲು ನಿರ್ಧರಿಸಲಿದೆ ಎನ್ನುವುದನ್ನು ‘ಕನ್ನಡಪ್ರಭ’ ಹಾಗೂ ಸುವರ್ಣ ನ್ಯೂಸ್.ಕಾಂ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ದೇವಸ್ಥಾನ ಆಡಳಿತ ಮಂಡಳಿ ಮತ್ತು ಗ್ರಾಮ ಪಂಚಾಯಿತಿ ಠರಾವು ಮಾಡಿ, ದೇವಸ್ಥಾನನವನ್ನು ತೆರೆಯದಿರಲು ನಿರ್ಧರಿಸಿದೆ. ಹೀಗಾಗಿ, ಸಾರ್ವಜನಿಕರ ಪ್ರವೇಶಕ್ಕೆ ಜೂನ್ 30ರ ವರೆಗೂ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ಸುನೀಲ್‌ಕುಮಾರ ಅವರು ಹೇಳಿದ್ದಾರೆ.