ಮುಂಗಾರು ಆರಂಭವಾದರೂ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳ್ತಂಗಡಿ ಹೊರತುಪಡಿಸಿ ಇತರೆಡೆ ಮಳೆ ಸುರಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಶನಿವಾರ ಹಗಲಿಡೀ ಬಿಸಿಲಿನ ವಾತಾವರಣವಿದ್ದರೆ ರಾತ್ರಿ ಮಾತ್ರ ಕೆಲಹೊತ್ತು ಅಲ್ಪ ಮಳೆಯಾಗಿದೆ.
ಮಂಗಳೂರು/ಉಡುಪಿ(ಜೂ.07): ಮುಂಗಾರು ಆರಂಭವಾದರೂ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳ್ತಂಗಡಿ ಹೊರತುಪಡಿಸಿ ಇತರೆಡೆ ಮಳೆ ಸುರಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಶನಿವಾರ ಹಗಲಿಡೀ ಬಿಸಿಲಿನ ವಾತಾವರಣವಿದ್ದರೆ ರಾತ್ರಿ ಮಾತ್ರ ಕೆಲಹೊತ್ತು ಅಲ್ಪ ಮಳೆಯಾಗಿದೆ. ಬೆಳ್ತಂಗಡಿ ತಾಲೂಕಿನ ದಿಡುಪೆ, ಚಾರ್ಮಾಡಿಯಲ್ಲಿ ಶನಿವಾರ ಸತತ 3 ಗಂಟೆ ಸುರಿದ ಭಾರಿ ಮಳೆಗೆ ನೇತ್ರಾವತಿ, ಮೃತ್ಯುಂಜಯ ನದಿಗಳು ತುಂಬಿ ಹರಿದವು.
ರಾಜ್ಯಕ್ಕೆ ಗುರುವಾರವೇ ಮುಂಗಾರು ಪ್ರವೇಶವಾಗಿದ್ದರೂ ಶುಕ್ರವಾರವೇ ಬಿಸಿಲು ಮೂಡಿತ್ತು. ಇದೀಗ ಎರಡನೇ ದಿನವೂ ಇದೇ ಪರಿಸ್ಥಿತಿ ಮುಂದುವರಿದಿದೆ. ಬೆಳ್ತಂಗಡಿ ಹೊರತುಪಡಿಸಿ ಇತರ ಭಾಗದಲ್ಲಿ ಮಳೆ ಆರಂಭವಾಗದೆ ಗ್ರಾಮೀಣ ಪ್ರದೇಶಗಳಲ್ಲಿ ಬತ್ತ ಕೃಷಿಕರು ಕಾಯುವಂತಾಗಿದೆ.
ವಿಮಾನ ನಿಲ್ದಾಣದ 6 ಸಿಬ್ಬಂದಿ ಸೇರಿ 24 ಮಂದಿಗೆ ಸೋಂಕು
ಉಡುಪಿ ಜಿಲ್ಲಾದ್ಯಂತ ಶನಿವಾರವೂ ಸಾಧಾರಣ ಮಳೆಯಾಗಿದೆ. ಆದರೆ ಶುಕ್ರವಾರ ರಾತ್ರಿ ಸುರಿದ ಮಳೆಗೆ ಬ್ರಹ್ಮಾವರ ತಾಲೂಕಿನಲ್ಲಿ 1 ಮನೆ ಮತ್ತು ಒಂದು ದನದ ಕೊಟ್ಟಿಗೆಗೆ ಹಾನಿಯಾಗಿದೆ. ಬ್ರಹ್ಮಾವರ ತಾಲೂಕಿನ ಪಾಂಡೇಶ್ವರ ಗ್ರಾಮದ ರಾಜು ದೇವಾಡಿಗ ಅವರ ದನದ ಕೊಟ್ಟಿಗೆಗೆ ಗಾಳಿ ಮಳೆಯಿಂದ ಭಾಗಶಃ ಹಾನಿಯಾಗಿ 25 ಸಾವಿರ ರು. ಮತ್ತು ಗಿಳಿಯಾರು ಗ್ರಾಮದ ಮಾಧವ ಆಚಾರ್ಯ ಅವರ ವಾಸದ ಮನೆ ಭಾಗಶಃ ಹಾನಿಯಾಗಿ 25 ಸಾವಿರ ರು. ನಷ್ಟವಾಗಿದೆ.