ತುಮಕೂರಿನ 11 ಕೇಂದ್ರಗಳಲ್ಲಿ ರಾಗಿ ಖರೀದಿಗೆ ಡಿಸಿ ಸೂಚನೆ

By Kannadaprabha News  |  First Published Nov 23, 2023, 8:25 AM IST

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರದ ಆದೇಶದನ್ವಯ ಜಿಲ್ಲೆಯ 11 ಖರೀದಿ ಕೇಂದ್ರಗಳಲ್ಲಿ ರೈತರಿಂದ ರಾಗಿ ಖರೀದಿಸಲು ಪ್ರತಿ ಕ್ವಿಂಟಲ್‌ಗೆ 3846 ರು. ದರ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದರು.


 ತುಮಕೂರು : ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರದ ಆದೇಶದನ್ವಯ ಜಿಲ್ಲೆಯ 11 ಖರೀದಿ ಕೇಂದ್ರಗಳಲ್ಲಿ ರೈತರಿಂದ ರಾಗಿ ಖರೀದಿಸಲು ಪ್ರತಿ ಕ್ವಿಂಟಲ್‌ಗೆ 3846 ರು. ದರ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಖರೀದಿಗಾಗಿ ಪೂರ್ವಸಿದ್ಧತೆ ಕೈಗೊಳ್ಳುವ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ತೆರೆಯಲಾಗುವ 11 ರಾಗಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ಅನುಕೂಲವಾಗುವಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Latest Videos

undefined

ರಾಗಿ ಖರೀದಿಗೆ ಸಂಬಂಧಿಸಿದಂತೆ ಡಿಸೆಂಬರ್ 1 ರಿಂದ ರೈತರ ನೋಂದಣಿ ಕಾರ್ಯವನ್ನು ಪ್ರಾರಂಭಿಸಬೇಕು. 2024 ರ ಜನವರಿ 1 ರಿಂದ ಮಾರ್ಚ್ 31 ರವರೆಗೆ ರೈತರಿಂದ ರಾಗಿ ಖರೀದಿಸಬೇಕು. ರಾಗಿ ಖರೀದಿ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳು ಪ್ರವೇಶಿಸದಂತೆ ಹಾಗೂ ಖರೀದಿಸಿದ ದಾಸ್ತಾನನ್ನು ಸಂಗ್ರಹಣೆ ಮಾಡಲು ಸ್ಥಳಾವಕಾಶದ ಕೊರತೆಯಾಗದಂತೆ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ರಾಗಿ ಖರೀದಿಸುವ ಹಂತದಲ್ಲಿ ಅಧಿಕಾರಿಗಳು ಎಫ್.ಎ.ಕ್ಯೂ, ಗುಣಮಟ್ಟವನ್ನು ದೃಢೀಕರಿಸಬೇಕು. ಪ್ರತಿ ಖರೀದಿ ಕೇಂದ್ರಕ್ಕೆ ಕೃಷಿ ಇಲಾಖೆಯಿಂದ ಗ್ರೇಡರ್‌ಗಳನ್ನು ನೇಮಿಸಬೇಕು ಹಾಗೂ ಗ್ರೇಡರ್‌ಗಳೊಂದಿಗೆ ರಾಗಿಯ ಗುಣಮಟ್ಟವನ್ನು ಜಂಟಿಯಾಗಿ ದೃಢೀಕರಿಸಲು 3ನೇ ವ್ಯಕ್ತಿಯನ್ನು ಗುಣಮಟ್ಟ ಪರೀಕ್ಷಕರನ್ನಾಗಿ ನೇಮಿಸಬೇಕು. ರಾಗಿ ಸಂಗ್ರಹಣೆಗೆ ಅಗತ್ಯವಿರುವ ಗೋಣಿ ಚೀಲಗಳನ್ನು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ಒದಗಿಸಬೇಕೆಂದು ಸೂಚಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಮಾತನಾಡಿ, ಜಿಲ್ಲೆಯ ಚಿಕ್ಕನಾಯನಹಳ್ಳಿ ಮತ್ತು ಕುಣಿಗಲ್ ತಾಲೂಕಿನಲ್ಲಿ 2 ಖರೀದಿ ಕೇಂದ್ರ ಹಾಗೂ ಗುಬ್ಬಿ, ಹುಳಿಯಾರು, ಮಧುಗಿರಿ, ಶಿರಾ, ತಿಪಟೂರು, ತುಮಕೂರು ಮತ್ತು ತುರುವೇಕೆರೆ ತಾಲೂಕುಗಳಲ್ಲಿ ತಲಾ 1 ಕೇಂದ್ರ ಸೇರಿದಂತೆ ಒಟ್ಟು 11 ಖರೀದಿ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಕಳೆದ ಬಾರಿ ಏಪ್ರಿಲ್ 30 ರವರೆಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 65709 ರೈತರು ನೋಂದಾಯಿಸಿದ್ದು, 9,60,432.50 ಕ್ವಿಂಟಲ್ ರಾಗಿಯನ್ನು ನೋಂದಣಿ ಮಾಡಲಾಗಿತ್ತು ಹಾಗೂ 61550 ರೈತರಿಂದ 8,95,876 ಕ್ವಿಂಟಲ್ ರಾಗಿಯನ್ನು ಖರೀದಿಸಲಾಗಿತ್ತು ಎಂದು ವಿವರಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಕೃಷಿ ಮಾರುಕಟ್ಟೆ ಇಲಾಖೆ ಉಪನಿರ್ದೇಶಕ ರಾಜಣ್ಣ, ಕೃಷಿ ಅಧಿಕಾರಿಗಳು, ವಿವಿಧ ತಾಲೂಕಿನ ತಹಸೀಲ್ದಾರರು, ಕಾನೂನು ಮಾಪನ ಶಾಸ್ತ್ರ ಇಲಾಖೆಯ ನಿರೀಕ್ಷಕರು, ಎಪಿಎಂಸಿ ಕಾರ್ಯದರ್ಶಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

click me!