* ದಕ್ಷಿಣ ಕೇದಾರವಾಗಲಿದೆ ದೇವನಗರಿ ದಾವಣಗೆರೆ
* ಮುಂದಿನ ಐದು ವರ್ಷಗಳಲ್ಲಿ ಈ ಕಾರ್ಯ ಪೂರ್ಣ
* ಕೇದಾರ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ
ದಾವಣಗೆರೆ, ಜು.10: ಉತ್ತರದಲ್ಲಿ ಕೇದಾರನಾಥನ ಸನ್ನಿದಾನ ಇರುವಂತೆ ದಕ್ಷಿಣದಲ್ಲೂ ಕೇದಾರನಾಥ ಮಠ ಮತ್ತು ಕೇದಾರ ಮಾದರಿಯ ಭವ್ಯ ಮಂದಿರ ನಿರ್ಮಾಣ ಮಾಡುವ ಇಚ್ಛೆಯಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯಾರಂಭವಾಗಿದೆ ಎಂದು ಶ್ರೀ ಕೇದಾರ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು.
ದಾವಣಗೆರೆಯ ತ್ರಿಶೂಲ್ ಕಲಾಭವನದಲ್ಲಿ ಭಾನುವಾರ ನಡೆದ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆಯ ನಂತರ ಭಕ್ತರನ್ನುದ್ದೇಶಿಸಿ ಸಂದೇಶ ನೀಡುತ್ತಾ, ದಾವಣಗೆರೆ-ಹರಿರಹ ನಡುವೆ ಬರುವ ಶಂಶೀಪುರ ಬಳಿ ನಾವು ಬಂದು ತಂಗಲು ಗುರು ನಿವಾಸ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 2023ರ ಜ.27ರಂದು ಶ್ರೀ ರಂಭಾಪುರಿ ಶ್ರೀಗಳು ಹಾಗೂ ನಮ್ಮ ಸಾನ್ನಿಧ್ಯದಲ್ಲಿ ಗುರು ನಿವಾಸ ಉದ್ಘಾಟನೆಗೊಳ್ಳಲಿದೆ. ಈ ಕಾರ್ಯದಲ್ಲಿ ನಾವು ನಿಮಿತ್ತ ಮಾತ್ರವಾಗಿದ್ದು, ಕೇದಾರನಾಥನೇ ತನ್ನ ಭಕ್ತರಿಂದ ಈ ಎಲ್ಲಾ ಕಾರ್ಯಗಳನ್ನು ಮಾಡಿಸುತ್ತಿದ್ದಾನೆ ಎಂದು ಹೇಳಿದರು.
ಚಾರ್‌ಧಾಮ್ ಯಾತ್ರೆ: 2 ತಿಂಗಳಲ್ಲಿ 203 ಭಕ್ತರ ಸಾವು: ಹೃದಯಾಘಾತದಿಂದ ಮೃತಪಟ್ಟವರೇ ಹೆಚ್ಚು
ಉತ್ತರದಲ್ಲಿರುವ ಕೇದಾರಕ್ಕೆ ದಕ್ಷಿಣದವರು ಭೇಟಿ ನೀಡುವುದು ಕಷ್ಟಕರವಾಗಿದ್ದು, ಭಕ್ತರಿಗೆ ಕೇದಾರನಾಥನ ದರ್ಶನಕ್ಕಾಗಿ ಕರ್ನಾಟಕದ ಕೇಂದ್ರ ಭಾಗವಾಗಿರುವ ದೇವನಗರಿ ದಾವಣಗೆರೆ ದಕ್ಷಿಣ ಕೇದಾರ ಕ್ಷೇತ್ರವಾಗಿ ರೂಪುಗೊಳ್ಳಲಿದೆ. ಮುಂದಿನ ಐದು ವರ್ಷಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದ್ದು, ದಾವಣಗೆರೆ ‘ದಕ್ಷಿಣ ಕೇದಾರ’ ಎಂದು ಪ್ರಸಿದ್ಧಿ ಪಡೆಯಲಿದೆ ಎಂದು ನುಡಿದರು.
ಇಷ್ಟಲಿಂಗ ತೀರ್ಥ ಕೊರೋನಾ ಲಸಿಕೆಗಿಂತ ಪರಿಣಾಮಕಾರಿ
‘ಎಲ್ಲ ಭಕ್ತಿರಿಗೂ ಇಷ್ಟಲಿಂಗ ಮಹಾಪೂಜೆಯ ತೀರ್ಥ ಪ್ರಸಾದ ವಿನಿಯೋಗ ಮಾಡಲಾಗುತ್ತದೆ. ಈ ತೀರ್ಥವನ್ನು ಎಲ್ಲರೂ ಸೇವಿಸಬೇಕು. ಇದು ಶ್ರೇಷ್ಠ ತೀರ್ಥ. ಇದನ್ನು ಸೇವಿಸಿದರೆ ಕೊರೊನಾ ನಿಮ್ಮ ಬಳಿ ಸುಳಿಯುವುದಿಲ್ಲ. ಸರಕಾರ ಕೊರೊನಾ ಸೋಂಕು ತಡೆಯಲು ನೀಡುವ ಲಸಿಕೆ ಡೋಸ್ಗಿಂತಲೂ ಈ ಕೇದಾರ ಲಿಂಗ ತೀರ್ಥ ಹತ್ತುಪಟ್ಟು ಪರಿಣಾಮಕಾರಿ ಮತ್ತು ಶಕ್ತಿಶಾಲಿ’ ಎಂದು ಕೇದಾರ ಶ್ರೀಗಳು ತಿಳಿಸಿದರು.
ದೇಹವನ್ನು ಸತ್ಕಾರ್ಯಗಳಲ್ಲಿ ತೊಡಗಿಸಿ ದುಷ್ಟ ದುರ್ಯೋಧನನ ರೀತಿ ದೇಹವನ್ನು ಪಾಪ ಕಾರ್ಯಗಳಿಗೆ ಬಳಸಿಕೊಳ್ಳದೆ ಸತ್ಕಾರ್ಯಗಳಿಗೆ ಬಳಸಿಕೊಳ್ಳಿ ಎಂದು ಕೇದಾರ ಶ್ರೀಗಳು ಉಪದೇಶ ನೀಡಿದರು. ಇಂದು ಮನುಷ್ಯ ತನ್ನ ದೇಹವನ್ನು ದುಷ್ಟ ಕಾರ್ಯಗಳಿಗೆ ಬಳಸಿಕೊಂಡು ಅದನ್ನು ಅಪವಿತ್ರ ಮಾಡಿಕೊಂಡಿದ್ದಾನೆ. ಕೈಗಳು ಮತ್ತೊಬ್ಬರ ಕೆಡುಕಿಗೆ ಬಳಕೆಯಾದರೆ, ಕಿವಿಗಳು ಸದ್ವಾಖ್ಯದ ಬದಲು ಕೇವಲ ದುಷ್ಟವಾಖ್ಯ ಕೇಳುತ್ತಿವೆ. ಸುಂದರ ಸೃಷ್ಟಿಯ ಸೊಬಗು ಸವಿಯಲು ನೀಡಿರುವ ಕಣ್ಣುಗಳ ಮೂಲಕ ಅಪವಿತ್ರ ಭಾವನೆಯಿಂದ ನೋಡುತ್ತಿದ್ದೇವೆ. ಹೊಟ್ಟೆಯ ತುಂಬಾ ಅನ್ಯಾಯದ ಗಳಿಕೆಯೇ ತುಂಬಿದೆ. ಪಾದಗಳು ಕೇವಲ ಮತ್ತೊಬ್ಬರಿಗೆ ಕಷ್ಟಕೊಡಲು ಓಡಾಡುತ್ತಿವೆ. ತಲೆಯ ತುಂಬಾ ಗರ್ವ, ಅಹಂಕಾರ, ದುರಾಲೋಚನೆಗಳು ತುಂಬಿವೆ. ಇದರಿಂದ ಹೊರಬಂದು ದೇಹವನ್ನು ಸತ್ಕಾರ್ಯಗಳಿಗೆ ತೊಡಗಿಸಿಕೊಳ್ಳಿ ಎಂದು ಕರೆ ನೀಡಿದರು.