
ತುಮಕೂರು (ಜು.08): ದಾವಣಗೆರೆ ನಗರ ಠಾಣೆಯ ಪಿಎಸ್‌ಐ ಆಗಿ ಸೇವೆ ಸಲ್ಲಿಸುತ್ತಿದ್ದ ನಾಗರಾಜಪ್ಪ ತುಮಕೂರಿನ ಲಾಡ್ಜ್ ಒದರಲ್ಲಿ ಸಾವಿಗೆ ಶರಣಾಗಿರುವುದು ಆತಂಕ ಸೃಷ್ಟಿಸಿದೆ. ತುಮಕೂರು ನಗರದ ದ್ವಾರಕ ಲಾಡ್ಜ್‌ನಲ್ಲಿ ಶವವಾಗಿ ಪತ್ತೆಯಾಗಿರುವ ನಾಗರಾಜಪ್ಪ ನೇಣಿಗೆ ಶರಣಾಗಿರುವುದಾಗಿ ಪೊಲೀಸರು ದೃಢಪಡಿಸಿದ್ದಾರೆ. ಈ ಘಟನೆಗೆ ಮಗನ ಬಗ್ಗೆ ಹತಾಶೆಯೇ ಕಾರಣ ಎಂದು ಹೇಳಲಾಗುತ್ತಿದೆ.
ಮಗನ ಭವಿಷ್ಯದ ಬಗ್ಗೆ ತೀವ್ರ ಬೇಸರ…
ತುಮಕೂರು ಪೋಲೀಸರು ತಿಳಿಸಿರುವಂತೆ, ಮೃತ ಪಿಎಸ್‌ಐ ನಾಗರಾಜಪ್ಪ ಡೆತ್ ನೋಟ್ ಬರೆದಿದ್ದು, ತನಿಖೆ ವೇಳೆ ಅದು ಪೊಲೀಸರಿಗೆ ಸಿಕ್ಕಿದೆ. ಡೆತ್ ನೋಟ್‌ನಲ್ಲಿ ಅವರು ತಮ್ಮ ಮಗನ ಭವಿಷ್ಯದ ಬಗ್ಗೆ ತೀವ್ರ ಚಿಂತೆಯಲ್ಲಿದ್ದರು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇಂಜಿನಿಯರಿಂಗ್ ಮುಗಿಸಿಕೊಂಡಿದ್ದ ಮಗ ಕೆಲಸ ಸಿಗದೇ ಮನೆಯಲ್ಲೇ ಇದ್ದಾನೆ. ಆತನಿಗೆ ಉದ್ಯೋಗ ಸಿಗದಿರುವ ವಿಚಾರವಾಗಿ ಮನೆಯಲ್ಲಿ ಜಗಳ ನಡೆದಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ನೊಂದ ನಾಗರಾಜಪ್ಪ, ದಾವಣಗೆರೆಯಿಂದ ಹೊರಟು ತುಮಕೂರಿಗೆ ಬಂದು ಲಾಡ್ಜ್‌ನಲ್ಲಿ ಬದುಕಿಗೆ ವಿದಾಯ ಹೇಳಿದ್ದಾರೆ ಎನ್ನಲಾಗುತ್ತಿದೆ.
ಆತ್ಮಹ*ತ್ಯೆಗೆ ಮುನ್ನ ಬರೆದ ಡೆತ್ ನೋಟ್:
ನನ್ನ ಮಗನಿಗೆ ಕೆಲಸ ಸಿಗಲಿ ಎಂಬ ಉದ್ದೇಶದಿಂದ ನಾನು ಈ ತೀರ್ಮಾನ ತೆಗೆದುಕೊಂಡಿದ್ದೇನೆ' ಎಂಬ ಭಾವನಾತ್ಮಕ ಸಾಲುಗಳು ಡೆತ್ ನೋಟ್‌ನಲ್ಲಿ ಕಾಣಿಸಿಕೊಂಡಿವೆ. ಒಬ್ಬ ತಂದೆಯಾಗಿ ಮಗನನ್ನು ಓದಿಸಿ ಅವನಿಗೆ ಉತ್ತಮ ಭವಿಷ್ಯದ ಜೀವನ ರೂಪಿಸುವಲ್ಲಿ ಸೋತಿದ್ದೇನೆ ಎಂಬ ಮನೋಭಾವದಿಂದ ಈ ತೀರ್ಮಾನ ಕೈಗೊಂಡಿದ್ದಾರೆ ಎಂಬಂತೆ ಭಾಸವಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ತುಮಕೂರು ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಡೆತ್ ನೋಟ್ ಮತ್ತು ಲಾಡ್ಜ್ ನೊಂದಣಿ ದಾಖಲೆಗಳನ್ನು ಸೀಜ್ ಮಾಡಲಾಗಿದೆ. ಕುಟುಂಬಸ್ಥರ ಹೇಳಿಕೆ ಕೂಡ ದಾಖಲಿಸಲಾಗುತ್ತಿದೆ.
ಸಮಾಜಕ್ಕೆ ಎಚ್ಚರಿಕೆ:
ಈ ಘಟನೆಯು ಯುವಕರು ಉದ್ಯೋಗವಿಲ್ಲದೆ ಮನೆಯಲ್ಲಿ ನಿರುದ್ಯೋಗವಾಗಿ ಕುಳಿತುಕೊಳ್ಳುವುದರಿಂದ, ಪೋಷಕರಲ್ಲಿ ಉಂಟಾಗುವ ಮಾನಸಿಕ ಒತ್ತಡ ಎಷ್ಟು ಗಂಭೀರವಾಗಬಹುದು ಎಂಬುದಕ್ಕೆ ಇದು ಜೀವಂತ ಉದಾಹರಣೆ. ಸರ್ಕಾರ ಮತ್ತು ಸಮಾಜವು ನಿರುದ್ಯೋಗ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ಉದ್ಯೋಗ ಸೃಷ್ಟಿ ಯೋಜನೆಗಳನ್ನು ರೂಪಿಸಬೇಕಾಗಿದೆ.