ದಾವಣಗೆರೆಯಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ 50ಕ್ಕೂ ಹೆಚ್ಚು ಅಪೆಗಳ ಹೆಚ್ಚುವರಿ ಸೀಟುಗಳನ್ನು ತೆರವುಗೊಳಿಸಲಾಯಿತು. ಅಪೆ ಆಟೋಗಳೂ ನಿಗದಿಪಡಿಸಿದ ಪ್ರಯಾಣಿಕರನ್ನಷ್ಟೇ ಕರೆದೊಯ್ಯಬೇಕು ಎಂದು ಅಪೆ ಆಟೋಚಾಲಕರಿಗೆ ಎಚ್ಚರಿಕೆ ನೀಡಲಾಯಿತು.
ದಾವಣಗೆರೆ(ಜು.17): ಅಪೆ ಆಟೋಗಳಲ್ಲಿ ನಿಗದಿಗಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿಸಿಕೊಂಡು ಸಂಚರಿಸುತ್ತಿದ್ದ ಆಟೋಗಳ ಹೆಚ್ಚುವರಿ ಸೀಟುಗಳನ್ನು ತೆಗೆಸಿ ಹಾಕಲಾಯಿತು.
ನಗರದ ಬಡಾವಣೆ ಪೊಲೀಸ್ ಠಾಣೆ ಆವರಣದಲ್ಲಿ ಅಪೆ ಆಟೋಗಳನ್ನು ತರಿಸಿ, ನಿಯಮ ಮೀರಿ 3 ಪ್ಲಸ್ 1ಕ್ಕಿಂತಲೂ ಹೆಚ್ಚು ಸೀಟುಗಳನ್ನು ಅಳವಡಿಸಿದ್ದನ್ನು ಹಿರಿಯ ಅಧಿಕಾರಿಗಳ ಸಮ್ಮುಖ ಸಂಚಾರ ಪೊಲೀಸ್ ಠಾಣೆ ಅಧಿಕಾರಿ, ಸಿಬ್ಬಂದಿ ತೆರವುಗೊಳಿಸಿದರು. ಹೆಚ್ಚುವರಿ ಸೀಟುಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಸಂಚಾರ ಪೊಲೀಸ್ ಠಾಣೆ ಅಧಿಕಾರಿ, ಸಿಬ್ಬಂದಿ ಪೊಲೀಸ್ ಉಪಾಧೀಕ್ಷಕ ನಾಗರಾಜ ಮಾರ್ಗದರ್ಶನದಲ್ಲಿ ಕೈಗೊಂಡರು.
50ಕ್ಕೂ ಹೆಚ್ಚು ಆಟೋಗಳ ಹೆಚ್ಚುವರಿ ಸೀಟ್ ತೆರವು:
50ಕ್ಕೂ ಹೆಚ್ಚು ಆಟೋಗಳ ಸೀಟುಗಳನ್ನು ತೆಗೆಸಿ, ದಂಡ ವಿಧಿಸಲಾಯಿತು. ಮುಂದಿನ ದಿನಗಳಲ್ಲಿ ಇದು ಆವರ್ತಿಸಿದರೆ ಪರವಾನಿಗೆಯನ್ನೇ ರದ್ಧುಪಡಿಸಲಾಗುವುದು. ಇನ್ನೂ ಅನೇಕ ಆಟೋಗಳಲ್ಲಿ ಹೆಚ್ಚುವರಿ ಸೀಟುಗಳಿದ್ದು, ಆಯಾ ಅಪೆ ಆಟೋ ಮಾಲೀಕರು, ಚಾಲಕರು ಸ್ವಯಂ ಪ್ರೇರಿತರಾಗಿ ಹೆಚ್ಚುವರಿ ಸೀಟು ತೆಗೆಯಲಿ. ಇಲ್ಲವಾದರೆ ಇಲಾಖೆಯೇ ಆ ಕೆಲಸ ಮಾಡಿ, ಕಾನೂನು ಕ್ರಮ ಜರುಗಿಸಲಿದೆ ಎಂದು ಎಚ್ಚರಿಸಿದರು.
ಪ್ರಯಾಣಿಕರ ಸುರಕ್ಷತೆಗೆ ಕಾರ್ಯಾಚರಣೆ:
ಅಪೆ ಆಟೋಗಳಲ್ಲಿ ಹೆಚ್ಚು ಪ್ರಯಾಣಿಕರಿದ್ದ ಸಂದರ್ಭದಲ್ಲಿ ಆಕಸ್ಮಾತ್ ಯಾವುದೇ ಅಪಘಾತ, ಅನಾಹುತ ಸಂಭವಿಸಿ ಪ್ರಾಣ ಹಾನಿ ಸೇರಿ ಏನಾದರೂ ಅಪಾಯವಾದರೆ ಯಾವುದೇ ರೀತಿಯ ಪರಿಹಾರ ಸಿಗುವುದಿಲ್ಲ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ಇಲಾಖೆ ಇಂತಹದ್ದೊಂದು ಕಾರ್ಯಾಚರಣೆ ಕೈಗೊಂಡಿದೆ, ಇನ್ನು ಮುಂದೆ ಎಲ್ಲಾ ಅಪೆ ಆಟೋಗಳೂ ನಿಗದಿಪಡಿಸಿದ ಪ್ರಯಾಣಿಕರನ್ನಷ್ಟೇ ಕರೆದೊಯ್ಯಬೇಕು ಎಂದು ಅಪೆ ಆಟೋಚಾಲಕರಿಗೆ ಎಚ್ಚರಿಕೆ ನೀಡಲಾಯಿತು.
ಒಂದು ಗುಂಡಿ ತಪ್ಪಿಸಲು ಹೋಗಿ ನಾಲ್ವರ ಪ್ರಾಣ ತೆಗೆದ ಆಟೋ ಡ್ರೈವರ್
ಸಂಚಾರ ಠಾಣೆ ಎಸ್‌ಐ ಮಂಜುನಾಥ, ವೀರಬಸಪ್ಪ ಕುಸುಲಾಪುರ, ಲಕ್ಷ್ಮೀಪತಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು. ಸುಮಾರು 50ಕ್ಕೂ ಹೆಚ್ಚು ಅಪೆ ಆಟೋ ರಿಕ್ಷಾಗಳ ಹೆಚ್ಚುವರಿ ಸೀಟುಗಳನ್ನು ತೆರವು ಮಾಡಿ, ದಂಡ ವಿಧಿಸಲಾಯಿತು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.