ನನ್ನ ಬಳಿ ಕೆಜಿಗಟ್ಟಲೇ ಕದ್ದ ಚಿನ್ನ ಐತಿ, ಬನ್ನಿ ಎಂದು ಪಂಗನಾಮ ಹಾಕಿದ ಶಿಗ್ಲಿ ಬಸ್ಯಾ

Published : Jun 09, 2026, 08:31 AM IST
Gold

ಸಾರಾಂಶ

ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ, ದಾವಣಗೆರೆ ಜಿಲ್ಲೆಯ ಸುರಹೊನ್ನೆ ಗ್ರಾಮದ ಶಿವರಾಜ ಎಂಬುವವರಿಗೆ ಶಿಗ್ಲಿ ಬಸ್ಯಾ ಎಂಬಾತ ₹70 ಸಾವಿರ ವಂಚಿಸಿದ್ದಾನೆ. ಜಗಳೂರಿನಲ್ಲಿ ಹಣ ಪಡೆದು ನಾಪತ್ತೆಯಾದ ಆರೋಪಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

ದಾವಣಗೆರೆ: ಕಡಿಮೆ ಹಣಕ್ಕೆ ಬೆಲೆ ಬಾಳುವ ಚಿನ್ನ ನೀಡುವುದಾಗಿ ನಂಬಿಸಿ ಜಿಲ್ಲೆಯ ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದ ವ್ಯಕ್ತಿಗೆ ಶಿಗ್ಲಿ ಬಸ್ಯಾ ಎಂಬಾತ ₹70 ಸಾವಿರ ವಂಚಿಸಿರುವ ಬಗ್ಗೆ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸುರಹೊನ್ನೆಯ ಎಲ್.ಎನ್. ಶಿವರಾಜ (59) ಎಂಬವರಿಗೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾ. ಈಸೂರು ಗ್ರಾಮದ ಶಿಗ್ಲಿ ಬಸ್ಯಾ ಎಂಬಾತ ಕಡಿಮೆ ಹಣಕ್ಕೆ ಚಿನ್ನ ನೀಡುವುದಾಗಿ ನಂಬಿಸಿದ್ದ. ಹಂತ ಹಂತವಾಗಿ ಒಟ್ಟು ₹70 ಸಾವಿರ ಪಡೆದು ವಂಚಿಸಿದ್ದು, ಈ ಬಗ್ಗೆ ಶಿವರಾಜ ಜಗಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕೆಜಿಗಟ್ಟಲೇ ಕದ್ದ ಚಿನ್ನದ ಸಂಗ್ರಹದ ಕಥೆ ಹೇಳಿದ್ದ ಬಸ್ಯಾ

ದಾವಣಗೆರೆ ಹೊರವಲಯದ ಶಾಬನೂರು ಗ್ರಾಮದಲ್ಲಿ ಆರೋಪಿ ಶಿಗ್ಲಿ ಬಸ್ಯಾ ಹಾಗೂ ದೂರುದಾರ ಸುರಹೊನ್ನೆಯ ಶಿವರಾಜ ಅವರಿಗೆ 2025ರ ನ.12ರಂದು ಪರಿಚಯವಾಗಿತ್ತು. ತಾನು ಶಿಕಾರಿಪುರದ ಈಸೂರು ಗ್ರಾಮದವನು, ತನ್ನಲ್ಲಿ ಕೆಜಿಗಟ್ಟಲೇ ಕದ್ದ ಚಿನ್ನದ ಸಂಗ್ರಹವಿದೆ. ಅದನ್ನು ಕಡಿಮೆ ಬೆಲೆಗೆ ಮಾರುತ್ತಿದ್ದೇನೆ ಎಂಬುದಾಗಿ ಶಿಗ್ಲಿ ಬಸ್ಯಾ ನಂಬಿಸಿದ್ದನು. ಬಳಿಕ ಕಡಿಮೆ ದರಕ್ಕೆ ತಮಗೂ 10 ಗ್ರಾಂ ಚಿನ್ನ ನೀಡುವಂತೆ ಶಿವರಾಜ ಅವರು ಈಸೂರಿನ ಶಿಗ್ಲಿ ಬಸ್ಯಾಗೆ ಹೇಳಿದ್ದರು.

ಶಿಗ್ಲಿ ಬಸ್ಯಾನ ಮಾತು ನಂಬಿದ ಶಿವರಾಜ ನ.18ರಂದು ದಾವಣಗೆರೆಯಲ್ಲಿ ₹60 ಸಾವಿರದೊಂದಿಗೆ ಬಂದಿದ್ದರು. ಅಲ್ಲಿಂದ ಇಬ್ಬರೂ ಜಗಳೂರು ಪೊಲೀಸ್ ಠಾಣೆಯ ಪಕ್ಕದ ಹೋಟೆಲ್‌ನಲ್ಲಿ ಶಿವರಾಜ ಮಧ್ಯಾಹ್ನ 1 ಗಂಟೆ ಹೊತ್ತಿನಲ್ಲಿ ಶಿಗ್ಲಿ ಬಸ್ಯಾನಿಗೆ ₹60 ಸಾವಿರ ನೀಡಿದ್ದಾರೆ. ಬಳಿಕ ಚಿನ್ನದ ಅಂಗಡಿಯಲ್ಲಿರುವ ತನ್ನ ಚಿನ್ನ ತರುತ್ತೇನೆ, ನೀವು ಹೋಟೆಲ್‌ನಲ್ಲಿ ಇರಿ ಎಂದು ಹೇಳಿ ಹೋಗಿ, ಮೊಬೈಲ್ ಸಹ ಸ್ವಿಚ್ ಆಫ್‌ ಮಾಡಿದ್ದಾನೆ. 1 ಗಂಟೆ ನಂತರ ಮತ್ತೆ ಶಿವರಾಜಗೆ ಕರೆ ಮಾಡಿದ ಬೇರೆ ಮೊಬೈಲ್‌ ನಂಬರಿಗೆ ₹5 ಸಾವಿರ ಫೋನ್ ಪೇ ಮಾಡಿಸಿಕೊಂಡು ನಾಪತ್ತೆಯಾಗಿದ್ದ. 3 ದಿನಗಳ ನಂತರ ಮತ್ತೆ ಕರೆ ಮಾಡಿ, ಇನ್ನೊಂದು ನಂಬರ್‌ಗೆ ₹5 ಸಾವಿರದಂತೆ ಒಟ್ಟಾರೆ ₹70 ಸಾವಿರ ಪಡೆದು ವಂಚಿಸಿದ್ದಾನೆ.

ಜಗಳೂರು ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆ

ಬಳಿಕ ಸುರಹೊನ್ನೆ ಶಿವರಾಜ ಮೊದಲು ಶಿಕಾರಿಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಅಲ್ಲಿ ದಾಖಲಾಗಿದ್ದ ಕೇಸ್ ಈಗ ಘಟನೆ ನಡೆದ ಜಗಳೂರು ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ. ಸುರಹೊನ್ನೆ ಶಿವರಾಜ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಇನ್‌ಸ್ಪೆಕ್ಟರ್‌ ಸಿದ್ದರಾಮಯ್ಯ, ಆರೋಪಿ ಶಿಗ್ಲಿ ಬಸ್ಯಾನ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

PREV
Read more Articles on
click me!

Recommended Stories

ಬಿಲ್ ಪಾವತಿ, ಹೊಸ ಸಂಪರ್ಕ, ವರ್ಗಾವಣೆ ಸೇರಿ ಬೆಸ್ಕಾಂ ಆನ್‌ಲೈನ್ ಸೇವೆಗಳು ಇನ್ನು 21 ದಿನ ಸಿಗಲ್ಲ
ಕಾರವಾರ-ಹಳಗಾ ಸಾರಿಗೆ ಬಸ್ ಉಳಗಾ ವರೆಗೆ ವಿಸ್ತರಿಸಲು ಆಗ್ರಹ: ಡಿಪೋ ಮ್ಯಾನೇಜರ್‌ಗೆ ಮನವಿ