ಕಾರವಾರ-ಹಳಗಾ ಸಾರಿಗೆ ಬಸ್ ಉಳಗಾ ವರೆಗೆ ವಿಸ್ತರಿಸಲು ಆಗ್ರಹ: ಡಿಪೋ ಮ್ಯಾನೇಜರ್‌ಗೆ ಮನವಿ

Published : Jun 09, 2026, 07:46 AM IST
Karwar halaga

ಸಾರಾಂಶ

ಕಾರವಾರದಿಂದ ಹಳಗಾಕ್ಕೆ ಸಂಚರಿಸುವ ಸಾರಿಗೆ ಬಸ್ಸನ್ನು ನೆರೆಯ ಉಳಗಾ ಗ್ರಾಮದವರೆಗೂ ವಿಸ್ತರಿಸಬೇಕೆಂದು ಹಳಗಾ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಕುರಿತು ಸಾರಿಗೆ ಇಲಾಖೆಯ ಡಿಪೋ ಮ್ಯಾನೇಜರ್‌ಗೆ ಮನವಿ ಸಲ್ಲಿಸಿದ್ದು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಮಾರ್ಗ ವಿಸ್ತರಿಸಲು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಕಾರವಾರ: ಕಾರವಾರದಿಂದ ಹಳಗಾ ಗ್ರಾಮಕ್ಕೆ ಸಂಚರಿಸುವ ಸಾರಿಗೆ ಬಸ್ಸನ್ನು ನೆರೆಯ ಉಳಗಾ ಗ್ರಾಮದವರೆಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿ ಹಳಗಾ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸೋಮವಾರ ಕಾರವಾರ ಸಾರಿಗೆ ಬಸ್ ಡಿಪೋ ಮ್ಯಾನೇಜರ್‌ಗೆ ಮನವಿ ಸಲ್ಲಿಸಿದರು.

ಕೇವಲ 2 ಕಿಮೀ ದೂರದಲ್ಲಿರುವ ಉಳಗಾ ಗ್ರಾಮ

ಪ್ರಸ್ತುತ ಕಾರವಾರ ಬಸ್ ನಿಲ್ದಾಣದಿಂದ ಪ್ರತಿದಿನ ಮುಂಜಾನೆ 6.30ಕ್ಕೆ ಹಾಗೂ ಮಧ್ಯಾಹ್ನ 2.15ಕ್ಕೆ ಹೊರಡುವ ಬಸ್, ಹಣಕೋಣಜೂಗ ಮಾರ್ಗವಾಗಿ ಹಳಗಾ ಗ್ರಾಮಕ್ಕೆ ತಲುಪುತ್ತಿದೆ. ಆದರೆ, ಈ ಬಸ್ ಸೇವೆ ಕೇವಲ ಹಳಗಾ ಗ್ರಾಮಕ್ಕೆ ಮಾತ್ರ ಸೀಮಿತವಾಗಿದೆ. ಇದರಿಂದಾಗಿ ಹಳಗಾದಿಂದ ಕೇವಲ 2 ಕಿಮೀ ದೂರದಲ್ಲಿರುವ ಉಳಗಾ ಗ್ರಾಮದ ವಿದ್ಯಾರ್ಥಿಗಳು ಹಾಗೂ ದಿನನಿತ್ಯ ಕೆಲಸ ಕಾರ್ಯಗಳಿಗೆ ಓಡಾಡುವ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಗ್ರಾಮದ ಮುಖಂಡ ಕುಮಾರ್ ನಾಯ್ಕ್ ಅಧಿಕಾರಿಗಳಿಗೆ ವಿವರಿಸಿದರು.

ಸಾರ್ವಜನಿಕರ ಹಿತದೃಷ್ಟಿಯಿಂದ ಈ ಬಸ್ ಮಾರ್ಗವನ್ನು ತಕ್ಷಣವೇ ವಿಸ್ತರಿಸಬೇಕು ಎಂದು ಅವರು ಆಗ್ರಹಿಸಿದರು.

ಅಗತ್ಯ ಕ್ರಮದ ಭರವಸೆ

ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿ, ಮನವಿ ಸ್ವೀಕರಿಸಿದ ಕಾರವಾರ ಡಿಪೋ ಮ್ಯಾನೇಜರ್ ಸೌಮ್ಯಾ ನಾಯ್ಕ ಸಕಾರಾತ್ಮಕವಾಗಿ ಸ್ಪಂದಿಸಿದರು. ಕೂಡಲೇ ಈ ಮಾರ್ಗವನ್ನು ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಬೇಡಿಕೆಯಂತೆ ಬಸ್ ಸೇವೆಯನ್ನು ಉಳಗಾವರೆಗೂ ವಿಸ್ತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮದ ಪ್ರಮುಖರಾದ ಮನೋಜ್ ನಾಯ್ಕ್, ಯೋಗೇಶ್ ನಾಯ್ಕ್, ಉದಯ್ ನಾಯ್ಕ್ ಸೇರಿದಂತೆ ಹಲವು ಗ್ರಾಮಸ್ಥರು ಇದ್ದರು.

PREV
Read more Articles on
click me!

Recommended Stories

ಕೊಡಗು, ದಕ್ಷಿಣ ಕನ್ನಡ ಗೌಡ ಸಮುದಾಯದ ವಧು-ವರರ ಸಮಾವೇಶ; ಯಾರೆಲ್ಲಾ ಬರಬಹುದು? ಇಲ್ಲಿದೆ ಮಾಹಿತಿ
ಘಟಪ್ರಭಾ ಕುಷ್ಟಗಿ ರೈಲ್ವೆ ಮಾರ್ಗ ಆರಂಭಿಸಲು ಆಗ್ರಹ: ಸಚಿವ ಜೋಶಿ ನೀಡಿದ ಭರವಸೆ ಏನು?