
ದಾವಣಗೆರೆ: ಇಲ್ಲಿನ ಪ್ರತಿಷ್ಠಿತ ಚಿಗಟೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ ಭಾರಿ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಆಸ್ಪತ್ರೆಯ ಶಸ್ತ್ರಚಿಕಿತ್ಸೆ ಕೊಠಡಿಯ (Operation Theater) ಅನೆಸ್ತೇಶಿಯಾ ವರ್ಕ್ ಸ್ಟೇಷನ್‌ನಲ್ಲಿ (Anaesthesia Workstation) ಅನಿಲ ಸಿಲಿಂಡರ್ ಸ್ಫೋಟಗೊಂಡು ಭೀಕರ ಬೆಂಕಿ ಕಾಣಿಸಿಕೊಂಡಿದೆ. ಈ ಘಟನೆಯಲ್ಲಿ ಎರಡು ಆಪರೇಷನ್ ಥಿಯೇಟರ್‌ಗಳಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಯಂತ್ರೋಪಕರಣಗಳು ಸುಟ್ಟು ಭಸ್ಮವಾಗಿದ್ದರೂ, ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸದೆ ಇಡೀ ಆಸ್ಪತ್ರೆ ನಿಟ್ಟುಸಿರು ಬಿಟ್ಟಿದೆ.
ಇಂದು ಬೆಳಗ್ಗೆ ಸುಮಾರು 8:30ರ ವೇಳೆಗೆ ಚಿಗಟೇರಿ ಜಿಲ್ಲಾಸ್ಪತ್ರೆಯ ಆಪರೇಷನ್ ಥಿಯೇಟರ್ ಸಂಖ್ಯೆ 5 ಮತ್ತು 6 ರಲ್ಲಿ ಸಿಬ್ಬಂದಿ ಎಂದಿನಂತೆ ಕರ್ತವ್ಯ ನಿರತರಾಗಿದ್ದರು. ಈ ವೇಳೆ ಅನೆಸ್ತೇಶಿಯಾ ವರ್ಕಿಂಗ್ ಸ್ಟೇಷನ್‌ನಲ್ಲಿ ಇದ್ದಕ್ಕಿದ್ದಂತೆಯೇ ಬೆಂಕಿಯ ಕಿಡಿ ಕಾಣಿಸಿಕೊಂಡಿದೆ. ಕಿಡಿ ಕಾಣಿಸಿಕೊಂಡ ಕೆಲವೇ ಕ್ಷಣಗಳಲ್ಲಿ ಅಲ್ಲಿದ್ದ ನೈಟ್ರಸ್ ಆಕ್ಸೈಡ್ (Nitrous Oxide) ಸಿಲಿಂಡರ್ ಭಾರಿ ಶಬ್ದದೊಂದಿಗೆ ಸ್ಫೋಟಗೊಂಡಿದೆ. ಸಾಮಾನ್ಯವಾಗಿ ಅನೆಸ್ತೇಶಿಯಾ ವರ್ಕ್ ಸ್ಟೇಷನ್‌ನಲ್ಲಿ ನೈಟ್ರಸ್ ಆಕ್ಸೈಡ್ ಮತ್ತು ಆಕ್ಸಿಜನ್ (Oxygen) ಎಂಬ ಎರಡು ಸಿಲಿಂಡರ್‌ಗಳಿರುತ್ತವೆ. ಇದರಲ್ಲಿ ನೈಟ್ರಸ್ ಆಕ್ಸೈಡ್ ಅತ್ಯಂತ ದಹನಕಾರಿ (Inflammable) ಅನಿಲವಾಗಿದ್ದರಿಂದ, ಬೆಂಕಿ ತಗುಲಿದ ತಕ್ಷಣ ಇಡೀ ಕೊಠಡಿ ತುಂಬಾ ಜ್ವಾಲೆ ವ್ಯಾಪಿಸಿದೆ.
ಸ್ಫೋಟ ಸಂಭವಿಸಿದಾಗ ಕೊಠಡಿಯ ಒಳಗೆ ಹತ್ತಕ್ಕೂ ಹೆಚ್ಚು ಜನ ವೈದ್ಯಕೀಯ ಸಿಬ್ಬಂದಿ ಇದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಸಿಬ್ಬಂದಿ ಒಳಗೆ ಸಿಲುಕಿದ್ದವರನ್ನು ಸುರಕ್ಷಿತವಾಗಿ ಹೊರಗೆ ಕರೆತಂದರು. ಆಸ್ಪತ್ರೆಯ 'ಡಿ ಗ್ರೂಪ್' (D-Group) ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಆಪರೇಷನ್ ಥಿಯೇಟರ್ ಒಳಗೆ ಸಿಲುಕಿದ್ದ ಸಹೋದ್ಯೋಗಿಗಳನ್ನು ರಕ್ಷಿಸಿ ಹೊರತಂದಿದ್ದಾರೆ. ಡಿ ಗ್ರೂಪ್ ಸಿಬ್ಬಂದಿಯ ಈ ಧೈರ್ಯ ಮತ್ತು ಅದ್ಭುತ ಕಾರ್ಯವನ್ನು ನೆನೆದು ಅಲ್ಲಿದ್ದ ಹಿರಿಯ ನರ್ಸ್ ಒಬ್ಬರು ಭಾವುಕರಾದರು.
ಆಪರೇಷನ್ ಥಿಯೇಟರ್‌ನಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಸುತ್ತಿದ್ದಂತೆಯೇ ಆಸ್ಪತ್ರೆಯಲ್ಲಿದ್ದ ರೋಗಿಗಳು ಮತ್ತು ಅವರ ಸಂಬಂಧಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಶಸ್ತ್ರಚಿಕಿತ್ಸಾ ಕೊಠಡಿಯ ಅಕ್ಕಪಕ್ಕದ ವಾರ್ಡ್‌ಗಳಲ್ಲಿದ್ದ ರೋಗಿಗಳು ಭಯದಿಂದ ತಕ್ಷಣವೇ ಕಟ್ಟಡದಿಂದ ಕೆಳಗೆ ಓಡಿ ಬಂದರು. ಇನ್ನು ಕೆಲವರನ್ನು ಸ್ಟ್ರೆಚರ್ ನಲ್ಲಿ ಕೆಳಗೆ ತರಲಾಯ್ತು. ತಕ್ಷಣ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದ ಆಸ್ಪತ್ರೆಯ ವೈದ್ಯರು ಮತ್ತು ಹಿರಿಯ ಅಧಿಕಾರಿಗಳು, ರೋಗಿಗಳಿಗೆ ಧೈರ್ಯ ತುಂಬಿ ಸುರಕ್ಷಿತವಾಗಿ ಮರಳಿ ವಾರ್ಡ್‌ಗಳಿಗೆ ಕಳುಹಿಸಿಕೊಟ್ಟರು.
ಸ್ಫೋಟದ ತೀವ್ರತೆಗೆ ಆಪರೇಷನ್ ಥಿಯೇಟರ್ 5 ಮತ್ತು 6 ರಲ್ಲಿದ್ದ ಬೆಡ್‌ಗಳು, ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಸೇರಿದಂತೆ ಬಹುತೇಕ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿವೆ. ಸ್ಫೋಟದ ನಂತರ ಇಡೀ ಶಸ್ತ್ರಚಿಕಿತ್ಸಾ ಬ್ಲಾಕ್‌ನಲ್ಲಿ ದಟ್ಟವಾದ ಕಪ್ಪು ಹೊಗೆ ಆವರಿಸಿಕೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ತೀವ್ರ ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸಿ, ಕಾರಿಡಾರ್‌ನಲ್ಲಿ ತುಂಬಿದ್ದ ಹೊಗೆಯನ್ನು ನಿಯಂತ್ರಣಕ್ಕೆ ತಂದರು.
ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ದಾವಣಗೆರೆ ಜಿಲ್ಲಾಧಿಕಾರಿ (DC) ಜಿ.ಎಂ. ಗಂಗಾಧರಸ್ವಾಮಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ಅನೆಸ್ತೇಶಿಯಾ ವರ್ಕ್ ಸ್ಟೇಷನ್‌ನಲ್ಲಿ ಸ್ಫೋಟ ಸಂಭವಿಸಿದ್ದು, ಹಲವು ಯಂತ್ರೋಪಕರಣಗಳು ಹಾನಿಗೊಳಗಾಗಿವೆ. ಅದೃಷ್ಟವಶಾತ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಜಿಲ್ಲಾ ಸರ್ಜನ್ ಹಾಗೂ ಡಿಹೆಚ್‌ಒ (DHO) ಅವರಿಗೆ ಸ್ಥಳದಲ್ಲೇ ಇದ್ದು ಪರಿಸ್ಥಿತಿಯನ್ನು ಅವಲೋಕಿಸಲು ಸೂಚಿಸಿದ್ದೇನೆ. ಆಸ್ಪತ್ರೆಗೆ ಆಪರೇಷನ್ ಥಿಯೇಟರ್ ಅತ್ಯಗತ್ಯವಾಗಿರುವುದರಿಂದ, ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಮತ್ತು ಅಗ್ನಿಶಾಮಕ ಅಧಿಕಾರಿಗಳ ತಂಡದಿಂದ ಜಂಟಿ ಪರಿಶೀಲನೆ ನಡೆಸಿ ಒಂದು ವಾರದೊಳಗೆ ಇದನ್ನು ಸರಿಪಡಿಸಿಕೊಡಲಾಗುವುದು. ಪ್ರಾಥಮಿಕ ಮಾಹಿತಿಯ ಪ್ರಕಾರ ಇದು ತಾಂತ್ರಿಕ ದೋಷದಿಂದ ಆಗಿರಬಹುದು ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ" ಎಂದರು.
ಘಟನೆಗೆ ನಿಖರವಾದ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಆಸ್ಪತ್ರೆಯ ವತಿಯಿಂದ ಸಮಗ್ರ ಆಂತರಿಕ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಸರ್ಜನ್ ಡಾ. ಎಂ.ಬಿ. ನಾಗೇಂದ್ರಪ್ಪ ತಿಳಿಸಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದ್ದು, ಆಸ್ಪತ್ರೆಯ ಇತರೆ ವಿಭಾಗ ಎಂದಿನಂತೆ ನಡೆಯುತ್ತಿದೆ.