Davanagere: ಕುಡಿಯುವ ನೀರಿನ ಸಮಸ್ಯೆ: ಕೊಳವೆಬಾವಿ ಬಾಡಿಗೆ ಪಡೆದ ಸಚಿವ KS ಬಸವಂತಪ್ಪ

Published : Nov 19, 2026, 08:32 AM IST
Davanagere Water Crisis

ಸಾರಾಂಶ

ದಾವಣಗೆರೆ ತಾಲೂಕಿನ ಗುಡಾಳ್ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದ್ದು, ಸಚಿವ ಕೆ.ಎಸ್.ಬಸವಂತಪ್ಪ ಖಾಸಗಿ ಕೊಳವೆಬಾವಿ ಬಾಡಿಗೆ ಪಡೆದು ನೀರು ಪೂರೈಸಲು ಮುಂದಾಗಿದ್ದಾರೆ. ಸರ್ಕಾರದ ನಿಯಮಗಳಿಗೆ ಕಾಯದೆ ತಾವೇ ಹಣ ನೀಡಿ ಗ್ರಾಮದ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.

ದಾವಣಗೆರೆ: ಕುಡಿಯುವ ನೀರಿನ ತೀವ್ರ ಸಮಸ್ಯೆ ಉಲ್ಭಣವಾಗಿರುವ ತಾಲೂಕಿನ ಗುಡಾಳ್ ಗ್ರಾಮಸ್ಥರ ಸಂಕಷ್ಟಕ್ಕೆ ಸ್ಪಂದಿಸಿದ ಸಚಿವ ಕೆ.ಎಸ್.ಬಸವಂತಪ್ಪ ಗ್ರಾಮಕ್ಕೆ ಬುಧವಾರ ತೆರಳಿ, ಗ್ರಾಮದಲ್ಲಿ ಖಾಸಗಿ ಕೊಳವೆಬಾವಿಯೊಂದನ್ನು ಬಾಡಿಗೆ ಪಡೆಯುವ ಮೂಲಕ ಗ್ರಾಮಸ್ಥರಿಗೆ ನೀರು ಪೂರೈಸಲು ಮುಂದಾಗಿದ್ದಾರೆ.

ಖಾಸಗಿ ಕೊಳವೆಬಾವಿ ಬಾಡಿಗೆ ಪಡೆದ ಸಚಿವರು

ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಗುಡಾಳ್ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿನಕ್ಕೂ ಹೆಚ್ಚುತ್ತಿದ್ದು, ಎರಡು ಕೊಳವೆಬಾವಿ ಕೊರೆಸಿದರೂ ನೀರಿನ ಸಮಸ್ಯೆಗೆ ಮುಕ್ತಿ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಸಚಿವ ಕೆ.ಎಸ್.ಬಸವಂತಪ್ಪ ಅವರು, ವೈಯಕ್ತಿಕವಾಗಿ ಮುಂಗಡ ಹಣ‍ ಪಾವತಿಸಿ, ಗ್ರಾಮದ ಖಾಸಗಿ ಕೊಳವೆಬಾವಿ ಬಾಡಿಗೆ ಪಡೆದು, ಗ್ರಾಮಸ್ಥರಿಗೆ ನೀರು ಪೂರೈಸಲು ಮುಂದಾಗಿ, ಮಾನವೀಯತೆ ಮೆರೆದರು.

ಸುಮಾರು 2 ಸಾವಿರಕ್ಕೂ ಅಧಿಕ ಮನೆಗಳ ಇಡೀ ಗುಡಾಳ್ ಗ್ರಾಮಕ್ಕೆ ಒಂದೇ ಕೊಳವೆಬಾವಿ ಮೂಲಕ ನೀರು ಪೂರೈಸಲಾಗುತ್ತಿತ್ತು. ಗ್ರಾಮದ ಮನೆಗೊಂದು ತಳ್ಳುಗಾಡಿ ಇದ್ದು, ಅದರಲ್ಲಿ ಕೊಡಪಾನಗಳನ್ನು ಇಟ್ಟುಕೊಂಡು ಸರದಿಯಲ್ಲಿ ಗ್ರಾಮಸ್ಥರು ನಿಲ್ಲಬೇಕಾಗಿತ್ತು. ಒಂದೇ ಕೊಳವೆಬಾವಿಯಿಂದ ಸಮರ್ಪಕವಾಗಿ ನೀರು ಪೂರೈಕೆಯಾಗದೇ, ಆಗಾಗ್ಗೆ ನೀರು ಬರುವುದು, ನಿಲ್ಲುವುದು ಸಹಜವಾಗಿತ್ತು. ಕೆಲಸ, ಕಾರ್ಯ ಬಿಟ್ಟು ಮಕ್ಕಳು, ಮಹಿಳೆಯರು, ವೃದ್ಧರು ನೀರಿಗಾಗಿ ಸರದಿಯಲ್ಲಿ ನಲ್ಲಿಗಳ ಬಳಿ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

ಕೆಲ ದಿನಗಳ ಹಿಂದೆ ನೀರಿನ ಸಮಸ್ಯೆ ಪರಿಹರಿಸುವಂತೆ ಗ್ರಾಪಂ ಕಚೇರಿಗೆ ಬೀಗ ಜಡಿದು ಗ್ರಾಮಸ್ಥರು ಪ್ರತಿಭಟಿಸಿದ್ದರು. ವಿಷಯ ತಿಳಿದ ಸಚಿವ ಕೆ.ಎಸ್.ಬಸವಂತಪ್ಪ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ದುಸ್ಥಿತಿ ಗಮನಿಸಿದರು. ಸಮಸ್ಯೆ ಪರಿಹಾರಕ್ಕೆ ಗ್ರಾಮಸ್ಥರು, ಅಧಿಕಾರಿಗಳೊಂದಿಗೆ ಚರ್ಚಿಸಿದ ಸಚಿವ ಬಸವಂತಪ್ಪ, ಗ್ರಾಮದಲ್ಲಿ ನೀರು ಲಭ್ಯವಿರುವ ಖಾಸಗಿ ಕೊಳವೆಬಾವಿ ಮಾಲೀಕರ ಜೊತೆಗೆ ಚರ್ಚಿಸಿ, ತಿಂಗಳ ಬಾಡಿಗೆ ಆಧಾರದ ಒಪ್ಪಂದ ಮಾಡಿಕೊಂಡು, ತಾವೇ ಹಣ ಕೊಟ್ಟು, ನೀರು ಪೂರೈಸಲು ಮುಂದಾಗಿದ್ದಾರೆ.

ಸರ್ಕಾರದ ನಿಯಮಗಳಿಗೆ ಕಾಯದೇ ಗ್ರಾಮಸ್ಥರಿಗೆ ತುರ್ತಾಗಿ ನೀರು ಪೂರೈಸುವುದಷ್ಟೇ ಬಸವಂತಪ್ಪ ಅವರ ಉದ್ದೇಶ‍ವಾಗಿತ್ತು. ಅದರಂತೆ ಗುಡಾಳ್ ಗ್ರಾಮಸ್ಥರಿಗೆ ಇದೀಗ 2 ಬೋರ್‌ಗಳ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಂಡಂತಾಗಿದೆ. ಇದೇ ವೇಳೆ ಸಚಿವರ ಸ್ಪಂದನೆಗೆ ಗ್ರಾಮಸ್ಥರು ವಿಶೇಷವಾಗಿ ಮಹಿಳೆಯರು, ವೃದ್ಧರು ಮೆಚ್ಚುಗೆ ವ್ಯಕ್ತಪಡಿಸಿ, ತಮ್ಮ ಊರಿನ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ, ಪುಣ್ಯ ಕಟ್ಟಿಕೊಳ್ಳುವಂತೆ ಸಚಿವಗೆ ಮನವಿ ಮಾಡಿದರು.

ಗ್ರಾಮೀಣ ನೀರು ಪೂರೈಕೆ ಇಲಾಖೆ ಇಂಜಿನಿಯರ್ ಮಾಳಪ್ಪ, ಗ್ರಾಪಂ ಆಡಳಿತಾಧಿಕಾರಿ ಮಲ್ಲೇಶ ನಾಯ್ಕ, ಪಿಡಿಒ ಸುರೇಶ, ಗ್ರಾಮಸ್ಥರಾದ ವೆಂಕಟೇಶಪ್ಪ, ಶಂಭುಲಿಂಗಪ್ಪ, ರುದ್ರೇಶಣ್ಣ, ಕಲ್ಲೇಶಪ್ಪ, ಲೋಕೇಶ ಸೇರಿದಂತೆ ಗ್ರಾಮಸ್ಥರು ಇದ್ದರು.

ನೀರು ಸಮಸ್ಯೆ ಪರಿಹಾರಕ್ಕೆ ಅನುದಾನ ಕೊರತೆಯಿಲ್ಲ: ಸಚಿವ

ಸಚಿವ ಕೆ.ಎಸ್.ಬಸವಂತಪ್ಪ ಮಾತನಾಡಿ, ರಾಜ್ಯ ಸರ್ಕಾರ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅನುದಾನ ಮೀಸಲಿಟ್ಟಿದ್ದು, ನೀರಿಗೆ ಯಾವುದೇ ಅನುದಾನದ ಕೊರತೆಯಿಲ್ಲ. ನೀರು ಲಭ್ಯ ಪ್ರದೇಶದಲ್ಲಿ ಹೊಸ ಬೋರ್‌ವೆಲ್ ಕೊರೆಸಬೇಕು. ಅಂತರ್ಜಲ ಲಭ್ಯವಿಲ್ಲದ ಕಡೆ ಖಾಸಗಿ ಬೋರ್‌ವೆಲ್‌ ಬಾಡಿಗೆಗೆ ಪಡೆದು, ಜನರಿಗೆ ಕುಡಿಯುವ ನೀರು ಪೂರೈಸುವ ಕೆಲಸವನ್ನು ನಮ್ಮ ಅಧಿಕಾರಿಗಳು ಮಾಡಬೇಕು ಎಂದು ತಾಕೀತು ಮಾಡಿದರು.

ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆಯಾದರೆ ಅಧಿಕಾರಿಗಳು ನಿರ್ಲಕ್ಷ್ಯ ತೋರದೇ ಮೊದಲ ಆದ್ಯತೆಯಲ್ಲಿ ಪರಿಹಾರ ಒದಗಿಸಬೇಕು. ಮುಂದಿನ ದಿನಗಳಲ್ಲಿ ಬೇಸಿಗೆ ಆರಂಭ ಆಗುವುದರಿಂದ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಿಸುವ ಸಾಧ್ಯತೆಯಿದೆ. ಹಾಗಾಗಿ, ಈಗಿನಿಂದಲೇ ಮುಂಜಾಗ್ರತಾ ಕ್ರಮ ಕೈಗೊಂಡು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ಜನರು ನೀರನ್ನು ಮಿತವಾಗಿ ಬಳಸಿ. ನೀರು ಅತ್ಯಮೂಲ್ಯ ಸಂಪನ್ಮೂಲವಾಗಿದ್ದು, ಯಾರೂ ವ್ಯರ್ಥ ಮಾಡಬಾರದು. ನೀರಿನ ಸಮಸ್ಯೆ ಎದುರಾಗದಂತೆ ಜನತೆ, ಅಧಿಕಾರಿಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು ಎಂದು ಬಸವಂತಪ್ಪ ಮನವಿ ಮಾಡಿದರು.

ಸಮಸ್ಯೆ ಹೇಳಿಕೊಂಡು ಸಚಿವರ ಬಳಿ ಹೋದರೆ ಭೇಟಿ ಕಷ್ಟವೆಂಬ ಮಾತು ಸಾಮಾನ್ಯ. ಆದರೆ ನಮ್ಮ ಕ್ಷೇತ್ರದ ಶಾಸಕ ಸಚಿವ ಕೆ.ಎಸ್.ಬಸವಂತಪ್ಪ ಯಾವುದೇ ಸಮಸ್ಯೆ ಇದ್ದರೂ ತಕ್ಷಣ ಜನರ ನೆರವಿಗೆ ಧಾವಿಸುತ್ತಾರೆ. ಇಂತಹ ಸಚಿವರನ್ನು ಪಡೆದ ನಾವೇ ಧನ್ಯರು. ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ನಮ್ಮ ಗ್ರಾಮದ ನೀರಿನ ದಾಹ ನೀಗಿಸಿದ ಭಗೀರಥರಂತೆ ಸಚಿವರು ಕಾರ್ಯನಿರ್ವಹಿಸಿದ್ದಾರೆ. ಇದಕ್ಕಾಗಿ ಎಲ್ಲರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ.

- ವೆಂಕಟೇಶಪ್ಪ, ಗ್ರಾಮದ ಹಿರಿಯ, ಗುಡಾಳ್.

PREV
Read more Articles on
click me!

Recommended Stories

ನಾನು ಆ ಸ್ಥಾನ ಕೇಳಿಯೂ ಇಲ್ಲ, ಲಾಭಿಯೂ ಮಾಡ್ತಿಲ್ಲ: ಮಾಜಿ ಸಚಿವ ಮುರುಗೇಶ್ ನಿರಾಣಿ!
ಮಾಜಿ ಸಿಎಂ ಬಂಗಾರಪ್ಪ ಮನೇಲಿ ನಾನು ಪೇಯ್ಡ್ ಸರ್ವೆಂಟ್ ಆಗಿರ್ಲಿಲ್ಲ: ಹರತಾಳು ಹಾಲಪ್ಪ