Davanagere shocking: ಬೊಲೆರೋದಲ್ಲಿ ಬಂದು ದೇವರಿಗೆ ಬಿಟ್ಟಿದ್ದ ಗೂಳಿ ಕದ್ದೊಯ್ದ ಖದೀಮರು!

Kannadaprabha News   | Kannada Prabha
Published : Jul 02, 2026, 07:53 AM IST
Davanagere Bull Theft

ಸಾರಾಂಶ

ಚನ್ನಗಿರಿ ತಾಲೂಕಿನ ಸಂಗಾಹಳ್ಳಿ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಸೇರಿದ್ದ 'ಕರಿಬಸವ' ಎಂಬ ಪವಿತ್ರ ಗೂಳಿಯನ್ನು ದುಷ್ಕರ್ಮಿಗಳು ಬೊಲೆರೋ ವಾಹನದಲ್ಲಿ ಕದ್ದೊಯ್ದಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ಘಟನೆಯಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಗೂಳಿ ರಕ್ಷಿಸುವಂತೆ ಆಗ್ರಹಿಸಿದ್ದಾರೆ.

ದಾವಣಗೆರೆ (ಜು.2): ಊರ ಜನರಿಗೆ ನಡೆದಾಡುವ ನಂದಿಯೇ ಆಗಿದ್ದ ದೇವರಿಗೆ ಬಿಟ್ಟಿದ್ದ ಗೂಳಿಯನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ದೇವಸ್ಥಾನಕ್ಕೆ ನುಗ್ಗಿ, ಹೋರಿಯ ಕೊರಳಿಗೆ ಹಗ್ಗ ಕಟ್ಟಿ, ಬೊಲೆರೋ ವಾಹನದಲ್ಲಿ ಕದ್ದೊಯ್ದ ಘಟನೆ ಚನ್ನಗಿರಿ ತಾಲೂಕಿನ ಸಂಗಾಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.

ಬೊಲೆರೋ ವಾಹನದಲ್ಲಿ ಗೂಳಿ ಹತ್ತಿಸಿದ ಖದೀಮರು!

ಚನ್ನಗಿರಿ ತಾ. ಸಂಗಾಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಬಿಟ್ಟಿದ್ದ ಕರಿಬಸವ ಹೆಸರಿನ ಗೂಳಿಯನ್ನು ಬಿಳಿಬಣ್ಣದ ಸರಕು ಸಾಗಣೆಯ ಬೊಲೆರೋ ವಾಹನದಲ್ಲಿ ಬಂದ ಮೂವರು ಮುಸುಕುಧಾರಿ ದುಷ್ಕರ್ಮಿಗಳ ಪೈಕಿ ಇಬ್ಬರು ದೇವಸ್ಥಾನಕ್ಕೆ ನುಗ್ಗಿ, ನಂದಿಯ ಕೊರಳಿಗೆ ಹಗ್ಗ ಕಟ್ಟಿ, ತಾಡಪಾಲು ಮುಚ್ಚಿದ್ದ ಬೊಲೆರೋ ವಾಹನದಲ್ಲಿ ಹತ್ತಿಸಿಕೊಂಡು ಕದ್ದೊಯ್ದಿದ್ದಾರೆ. ಈಗ ಈ ಘಟನೆ ಇಡೀ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣ‍ವಾಗಿದೆ.

ಕರಿಬಸವ ಹೆಸರಿನ ಗೂಳಿಯನ್ನ ಗ್ರಾಮಸ್ಥರು ಪೂಜಿಸುತ್ತಿದ್ದರು!

ಕರಿಬಸವ ಹೆಸರಿನ ಗೂಳಿಗೆ ಗ್ರಾಮಸ್ಥರು, ನೆರೆಹೊರೆಯ ಗ್ರಾಮಸ್ಥರು ಪೂಜಿಸುತ್ತಿದ್ದರು. ನಂದಿಯು ದೇವಸ್ಥಾನ, ಗ್ರಾಮದ ಬೀದಿಗಳು, ಗ್ರಾಮಸ್ಥರ ಮನೆ ಬಾಗಿಲಿಗೆ ಹೋಗಿ ಎಲ್ಲರಿಗೂ ದರ್ಶನ ನೀಡುತ್ತಿತ್ತು. ಮಕ್ಕಳಾದಿಯಾಗಿ ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯುತ್ತಿದ್ದ ಕರಿಬಸವ ಹೆಸರಿನ ಗೂಳಿಯನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ.

ಕದ್ದೊಯ್ದವರಿಗೆ ದೇವರು ಒಳ್ಳೇದು ಮಾಡೋಲ್ಲ:

ಕರಿಬಸವ ಗೂಳಿಯ ಕೊರಳಲ್ಲೊಂದು ದೊಡ್ಡ ಗಂಟೆ ಹಾಗೂ ಸರಪಳಿ ಇತ್ತು. ಇಬ್ಬರು ಮುಸುಕುಧಾರಿ ಜಾನುವಾರುಗಳ್ಳರು ಗೂಳಿ ಕೊರಳಿಗೆ ಹಗ್ಗ ಕಟ್ಟಿ, ಎಳೆದುಕೊಂಡು ಬರುವುದು, ವಾಹನದಲ್ಲಿ ಅದನ್ನು ಹತ್ತಿಸಿಕೊಂಡು, ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಎಲ್ಲ ದೃಶ್ಯಗಳನ್ನು ಸಿಸಿ ಟಿವಿ ಕ್ಯಾಮೆರಾದಲ್ಲಿ ನೋಡಿರುವ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಇಡೀ ಊರಿನ ಜನರು ಭಕ್ತಿಯಿಂದ ಪೂಜಿಸುತ್ತಿದ್ದ ನಮ್ಮೂರಿನ ನಡೆದಾಡುವ ದೇವರನ್ನು ಕದ್ದೊಯ್ದವರಿಗೆ ಒಳ್ಳೆಯದನ್ನಂತೂ ದೇವರು ಮಾಡುವುದಿಲ್ಲ. ಊರಿನ ಬಸವೇಶ್ವರ ದೇವರಿಗೆ ಬಿಟ್ಟಿದ್ದ ಗೂಳಿಯನ್ನು ಯಾರೇ ಕದ್ದೊಯ್ದಿದ್ದರೂ ಪೊಲೀಸರು ಗೂಳಿ ಪತ್ತೆ ಮಾಡಬೇಕು. ಗೂಳಿ ಕಳ್ಳರನ್ನು ಪತ್ತೆ ಮಾಡಿ, ನಮ್ಮ ಕೈಗೆ ಒಪ್ಪಿಸಬೇಕು ಎಂದು ಗ್ರಾಮದ ದೇವಸ್ಥಾನ ಸಮಿತಿ, ಭಕ್ತರು, ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಸಂಬಂಧ ಬಸವಾಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ದೇವರ ನಂದಿಯನ್ನು ಕದ್ದೊಯ್ದ ದುಷ್ಕರ್ಮಿಗಳು ಹಾಗೂ ಕೃತ್ಯಕ್ಕೆ ಬಳಸಿದ ಬೊಲೆರೋ ವಾಹನದ ಶೋಧಕ್ಕೆ ಮುಂದಾಗಿದ್ದಾರೆ.

PREV
Read more Articles on
click me!

Recommended Stories

Bidadi Township row: ಬಿಡದಿ ಟೌನ್‌ಶಿಪ್‌ಗೂ ಎಚ್‌ಡಿಕೆಗೂ ಸಂಬಂಧ ಇಲ್ಲ, ಚರ್ಚೆ ಬೇಕಿಲ್ಲ - ಸಿಎಂ ಡಿಕೆಶಿ
Drought: ಮಳೆ ಕೊರತೆಯಿಂದ ರಾಜ್ಯದಲ್ಲೀಗ 150 ವರ್ಷದಲ್ಲೇ ಭೀಕರ ಬರಗಾಲ! ಡಿಸಿಎಂ ಪರಮೇಶ್ವರ ಬಿಚ್ಚಿಟ್ಟ ಶಾಕಿಂಗ್ ಮಾಹಿತಿ