
ಬಳ್ಳಾರಿ (ಆ.27): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ನಟ ದರ್ಶನ್ ಅವರ ಬಿಡುಗಡೆಗಾಗಿ ಅವರ ಪತ್ನಿ ವಿಜಯಲಕ್ಷ್ಮಿ ಬಳ್ಳಾರಿಯ ಕನಕ ದುರ್ಗಮ್ಮ ದೇವಾಲಯದಲ್ಲಿ ಹರಕೆ ಕಟ್ಟಿಕೊಂಡಿದ್ದರು. ದರ್ಶನ್‌ಗೆ ಜಾಮೀನು ಸಿಕ್ಕ ಬಳಿಕ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುವುದಾಗಿ ವಿಜಯಲಕ್ಷ್ಮಿ ಭರವಸೆ ನೀಡಿದ್ದರು. ಆದರೆ, ಬಿಡುಗಡೆಯಾದ ಬಳಿಕ ಅವರು ದೇವಸ್ಥಾನಕ್ಕೆ ಭೇಟಿ ನೀಡದೇ ಇರುವುದು ನಟನಿಗೆ ಮತ್ತಷ್ಟು ಸಂಕಷ್ಟ ತಂದಿದೆ ಎಂದು ಹೇಳಲಾಗುತ್ತಿದೆ.
ದರ್ಶನ್ ಜೈಲಿನಲ್ಲಿದ್ದಾಗ ವಿಜಯಲಕ್ಷ್ಮಿ ಹಲವು ಬಾರಿ ಕನಕ ದುರ್ಗಮ್ಮ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ನಾಲ್ಕನೇ ಭೇಟಿಯ ನಂತರ ದರ್ಶನ್‌ಗೆ ಜಾಮೀನು ಮಂಜೂರಾಗಿತ್ತು. ಆದರೆ, ನಿರೀಕ್ಷೆಯಂತೆ ಅವರು ಬಿಡುಗಡೆಯಾದ ಬಳಿಕ ದೇವಾಲಯಕ್ಕೆ ಬಾರದೇ ಇದ್ದುದರಿಂದ ಈ ಚರ್ಚೆ ಶುರುವಾಗಿದೆ.
ಈ ಕುರಿತು ಮಾತನಾಡಿರುವ ದೇವಸ್ಥಾನದ ಪ್ರಧಾನ ಅರ್ಚಕ ಗಾದೆಪ್ಪವರ್, "ವಿಜಯಲಕ್ಷ್ಮಿ ಈ ಹಿಂದೆ ಎರಡು ಬಾರಿ ಭೇಟಿ ನೀಡಿದ್ದರು. ಬಿಡುಗಡೆಯಾದ ಮೇಲೆ ಮತ್ತೊಮ್ಮೆ ಬಂದು ಪೂಜೆ ಸಲ್ಲಿಸಲು ನಾವು ಅವರಿಗೆ ಹೇಳಿದ್ದೆವು. ಆದರೆ ದರ್ಶನ್ ಬಿಡುಗಡೆಯಾದ ಬಳಿಕ ವಿಜಯಲಕ್ಷ್ಮಿ ಬಂದಿಲ್ಲ. ದುರ್ಗಮ್ಮನಿಗೆ ಸಲ್ಲಿಸಿದ ಹರಕೆ ತೀರಿಸಿದರೆ ಎಲ್ಲವೂ ಪರಿಹಾರವಾಗುತ್ತದೆ ಎಂಬ ನಂಬಿಕೆ ಎಲ್ಲರಿಗೂ ಇದೆ" ಎಂದು ತಿಳಿಸಿದ್ದಾರೆ.
ವಿಜಯಲಕ್ಷ್ಮೀ ದೇವಸ್ಥಾನಕ್ಕೆ ಬಂದಿದ್ದರು. ಬಿಡುಗಡೆ ಆದ ನಂತರ ಒಮ್ಮೆ ಬಂದಿದ್ದರು. 2ನೇ ಬಾರಿ ಬಂದಾಗ, ಅವರು ದುಗುಡ ವಾತಾವರಣದಲ್ಲಿದ್ದರು. ಮನಸ್ಸಲ್ಲಿ ಸಂಕಟ ಇರೋದು ಕಾಣುತ್ತಿತ್ತು. ಅರ್ಚನೆ, ಪೂಜೆ ಮಾಡಿಸಿಕೊಂಡು ಮುಂದಿನ ದಿನದಲ್ಲಿ ಹರಕೆ ತೀರಿಸುತ್ತೇನೆ ಎಂದು ಹೇಳಿ ಹೋಗಿದ್ದರು. ಆ ನಂತರ ಅವರು ಬಂದಿರಲಿಲ್ಲ.
ಸಾಮಾನ್ಯವಾಗಿ ಎಲ್ಲಾ ಭಕ್ತರು, ಹಣ್ಣು-ಕಾಯಿ ಅರ್ಚನೆ ಮಾಡಿಸುತ್ತಾರೆ. ಇನ್ನೂ ಕೆಲವರು ವಿಶೇಷವಾಗಿ ನಮ್ಮಲ್ಲಿ ಎಲೆಪೂಜೆ, ಅಭಿಷೇಕ, ಭಂಡಾರ ಪೂಜೆ ಮತ್ತು ಕುಂಕುಮಾರ್ಚನೆ ಮಾಡಿಸುತ್ತಾರೆ. ಮಹಿಳೆಯರು ಮುಖ್ಯವಾಗಿ ಉಡಿ-ಅಕ್ಕಿ ಪೂಜೆ ಕೊಡುತ್ತಾರೆ. ಬಳ್ಳಾರಿ ಕನಕ ದುರ್ಗಮ್ಮ ಗ್ರಾಮದೇವತೆ ಆಗಿರೋದರಿಂದ ಆಕೆಗೆ ಉಡಿ-ಅಕ್ಕಿ ಕೊಡೋದು ಸಂಪ್ರದಾಯ. ಅವರದ್ದು ಏನು ಪೂಜೆ ಅನ್ನೋದು ಗೊತ್ತಿಲ್ಲ. ಇಲ್ಲಿ ಬಂದಾಗ ಹರಕೆ ತೀರಿಸ್ತೀವಿ ಅಂತಾ ಹೇಳಿ ಹೋಗಿರ್ತಾರೆ. ಮೂರು ತಿಂಗಳ ಒಳಗೆ ಬಂದು ಹರಕೆ ತೀರಿಸ್ತೇನೆ ಎಂದು ವಿಜಯಲಕ್ಷ್ಮೀ ಹೇಳಿ ಹೋಗಿದ್ದರು. ಆ ನಂತರ ಅವರು ಬಂದಿಲ್ಲ.
ಸಾಮಾನ್ಯವಾಗಿ ಭಕ್ತಾದಿಗಳ ಮನೋಭಾವ. ದುರ್ಗಮ್ಮನ ಶಕ್ತಿಯ ಬಗ್ಗೆ ಇಲ್ಲಿನವರಿಗೆ ಗೊತ್ತಿದೆ. ಅವರ ಕಷ್ಟಗಳನ್ನು ಪರಿಹರಿಸುವ ದೇವತೆ ಈಕೆ. ಶಾಪ ಕೊಡ್ತಾಳೆ ಅನ್ನೋದು ಸುಳ್ಳು. ಹರಕೆಗೆ 12 ವರ್ಷ ಆಯಸ್ಸು ಎನ್ನುತ್ತಾರೆ. ಮುಂದೆ ಅವರು ತೀರಿಸಬಹುದು. ಅದು ಅವರಿಗೆ ಗೊತ್ತಾಗಬೇಕು. ಅವರಿಗೆ ಒಳ್ಳೆಯದಾಗಲಿ ಎನ್ನುತ್ತೇನೆ. ಕೆಲವು ಹರಕೆಗಳನ್ನು ಪೂಜಿಸಲು ಒಂದು ದಿನ ಮುಂಚೆ ಹೇಳಬೇಕು. ಹರಕೆ ತೀರಿಸಿದ ಬಳಿಕ ಎಲ್ಲರಿಗೂ ಒಳ್ಳೆಯದಾಗಿದೆ ಎಂದಿದ್ದಾರೆ. ಈ ಘಟನೆಯು ದರ್ಶನ್ ಅವರ ಜೀವನದಲ್ಲಿ ಹೊಸ ಸಂಕಷ್ಟವನ್ನು ತಂದಿದೆ ಎಂಬ ವದಂತಿಗಳಿಗೆ ಕಾರಣವಾಗಿದೆ.