ಮುಂಗಾರು ವಿಳಂಬ: ಜಲಾಶಯ, ನದಿಗಳು ಭಣ ಭಣ, ಭೀಕರ ಬರಗಾಲದ ಛಾಯೆ?

By Kannadaprabha NewsFirst Published Jul 4, 2023, 11:00 PM IST
Highlights

ಬೆಳಗಾವಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ತೊಂದರೆ ಹಾಗೂ ಮುಂಗಾರು ಮಳೆ ವಿಳಂಬ ಸಮಸ್ಯೆ ತಲೆದೋರಿದೆ. ಕೃಷ್ಣಾ, ದೂಧಗಂಗಾ, ವೇದಗಂಗಾ, ಮಾರ್ಕಂಡೇಯ, ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ ನದಿಗಳು ಸೇರಿದಂತೆ ಇತರೆ ಜಲಮೂಲಗಳೆಲ್ಲವೂ ಬತ್ತಿ ಬರಿದಾಗಿವೆ. 

ಶ್ರೀಶೈಲ ಮಠದ

ಬೆಳಗಾವಿ(ಜು.04):  ಮುಂಗಾರು ಮಳೆ ವಿಳಂಬವಾಗಿದೆ. ಜೂನ್‌ ತಿಂಗಳು ಮುಗಿದರೂ ಮಳೆ ಆಗುವ ಲಕ್ಷಣ ಕಾಣುತ್ತಿಲ್ಲ. ಈಗಾಗಲೇ ಬರದ ಛಾಯೆ ಆವರಿಸಿದೆ.ಬೆಳೆ ಬಿತ್ತನೆ ಕುಂಠಿತಗೊಂಡಿದೆ. ಜಿಲ್ಲೆಯ ಬಹುತೇಕ ನದಿಗಳು ಬತ್ತಿ ಬರಿದಾಗಿವೆ. ಜಲಾಶಯಗಳು ಖಾಲಿ ಖಾಲಿಯಾಗಿವೆ. ಘಟಪ್ರಭಾ ಜಲಾಶಯಕ್ಕೆ ಸದ್ಯ 69 ಕ್ಯುಸೆಕ್‌ ಒಳಹರವಿದ್ದರೆ, ಮಲಪ್ರಭಾ ಜಲಾಶಯಕ್ಕೆ ಒಳಹರಿವು ಶೂನ್ಯವಾಗಿದೆ. ಜಲಾಶಯಗಳಲ್ಲಿನ ನೀರಿನ ಸಂಗ್ರಹ ತಳಮಟ್ಟ ತಲುಪಿದೆ.

ಹುಕ್ಕೇರಿ ತಾಲೂಕಿನ ಹಿಡಕಲ್‌ ಬಳಿ ಘಟಪ್ರಭಾ ನದಿಗೆ ಕಟ್ಟಲಾಗಿರುವ ರಾಜಾಲಖಮ್‌ ಗೌಡ ( ಘಟಪ್ರಭಾ) ಜಲಾಶಯ 51 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಆದರೆ, ಈಗ ಕೇವಲ 2.2 ಟಿಎಂಸಿ ನೀರು ಲಭ್ಯವಿದೆ. ಹಿಡಕಲ್‌ ಜಲಾಶಯನ ಪ್ರದೇಶದಲ್ಲಿ ಮಳೆ ಸುರಿಯುತ್ತಿರುವುದರಿಂದ ಜಲಾಶಯದಲ್ಲಿ 69 ಕುಸೆಕ್‌ ನೀರಿನ ಒಳಹರಿವಿದೆ. ಕಳೆದ ಬಾರಿ ಇದೇ ದಿನದಂದು 810 ಕ್ಯುಸೆಕ್‌ ಒಳಹರಿವಿತ್ತು. ಅಲ್ಲದೇ, 7110 ಹೊರ ಹರಿವಿತ್ತು.

ಡಿಜಿಟಲ್ ಕ್ರಾಂತಿಗೆ ಹೊಸ ಮುನ್ನುಡಿ ಬರೆದ ಸಾರ್ವಜನಿಕ ಗ್ರಂಥಾಲಯ

ಸವದತ್ತಿಯ ಬಳಿ ಮಲಪ್ರಭಾ ನದಿಗೆ ಕಟ್ಟಲಾಗಿರುವ ನವಿಲುತೀರ್ಥ ಜಲಾಶಯದಲ್ಲಿ 37 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದೆ. ಆದರೆ, ಸೋಮವಾರ ಕೇವಲ 3.5 ಟಿಎಂಸಿ ನೀರು ಮಾತ್ರ ಇತ್ತು. ಇದರಲ್ಲಿ ಕೇವಲ ಅರ್ಧ ಟಿಎಂಸಿ ನೀರು ಮಾತ್ರ ಉಪಯೋಗಕ್ಕೆ ಲಭ್ಯವಿದೆ. 2079 ಅಡಿಯಷ್ಟುಸಾಮರ್ಥ್ಯ ಇರುವ ಈ ಜಲಾಶಯದಲ್ಲಿ ಸದ್ಯ 2043.56 ಅಡಿಯಷ್ಟುನೀರಿದೆ. ನೀರಿನ ಒಳಹರಿವು ಇಲ್ಲ. ಕಳೆದ ವರ್ಷ ಇದೇ ದಿನದಂದು 2053.30 ಅಡಿಗಳವರೆಗೆ ನೀರು ಸಂಗ್ರಹವಿತ್ತು. 8.3 ಟಿಎಂಸಿ ನೀರು ಲಭ್ಯವಿತ್ತು.194 ಕ್ಯುಸೆಕ್‌ ನೀರು ಹರಿದು ಬರುತ್ತಿತ್ತು. ಆದರೆ, ಈ ಬಾರಿ ಮುಂಗಾರು ಮಳೆ ವಿಳಂಬವಾಗಿರುವುದರಿಂದ ಇವರೆಗೂ ಜಲಾಶಯಕ್ಕೆ ನೀರು ಹರಿದುಬಂದಿಲ್ಲ. ಜಿಲ್ಲೆಯ ಪ್ರಮುಖ ಜಲಾಶಯಗಳಾಗಿರುವ ಘಟಪ್ರಭಾ ಮತ್ತು ಮಲಪ್ರಭಾ ಜಲಾಶಯಗಳಲ್ಲಿ ನೀರಿನ ಸಂಗ್ರಹ ಖಾಲಿ ಖಾಲಿಯಾಗಿದೆ. ನದಿ ತೀರದ ಗ್ರಾಮಗಳ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ.

ಜಿಲ್ಲೆಯಲ್ಲಿ ಕುಡಿಯುವ ನೀರಿನ ತೊಂದರೆ ಹಾಗೂ ಮುಂಗಾರು ಮಳೆ ವಿಳಂಬ ಸಮಸ್ಯೆ ತಲೆದೋರಿದೆ. ಕೃಷ್ಣಾ, ದೂಧಗಂಗಾ, ವೇದಗಂಗಾ, ಮಾರ್ಕಂಡೇಯ, ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ ನದಿಗಳು ಸೇರಿದಂತೆ ಇತರೆ ಜಲಮೂಲಗಳೆಲ್ಲವೂ ಬತ್ತಿ ಬರಿದಾಗಿವೆ. ಕುಡಿಯುವ ನೀರಿನ ಸಮಸ್ಯೆ ತಲೆದೋರಿದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಮನವಿ ಮೇರೆಗೆ ಇತ್ತೀಚೆಗಷ್ಟೇ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಲಾಗಿತ್ತು. ಅಲ್ಲದೇ, ಘಟಪ್ರಭಾ ಜಲಾಶಯದಿಂದಲೂ ಕುಡಿಯುವ ಸಲುವಾಗಿ ನೀರು ಬಿಡುಗಡೆ ಮಾಡಲಾಗಿತ್ತು. ಆದರೆÜ, ಈಗ ನದಿಗಳು, ಜಲಾಶಯಗಳೆಲ್ಲವೂ ಬತ್ತಿಬರಿದಾಗಿವೆ. ಮಹಾರಾಷ್ಟ್ರದ ಜಲಾಶನಯ ಪ್ರದೇಶಗಳಲ್ಲಿಯೂ ಮುಂಗಾರು ವಿಳಂಬವಾಗಿದೆ. ಜೂನ್‌ ತಿಂಗಳು ಮುಗಿದರೂ ಮುಂಗಾರು ಮಳೆ ಬಾರದಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ. ಸದ್ಯ ಸುರಿಯುವ ಮಳೆಯ ಮೇಲೆಯೇ ಅವಲಂಬನೆಯಾಗಿದೆ.

ಬಿತ್ತನೆ ಕುಂಠಿತ

ಮುಂಗಾರು ವಿಳಂಬವಾಗಿರುವುದರಿಂದ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯದಲ್ಲಿ ಕುಂಠಿತವಾಗಿದೆ. ಮುಂಗಾರು ಮಳೆ ಕೈಕೊಟ್ಟರೆ ಪರಿಸ್ಥಿತಿ ಮತ್ತಷ್ಟು ಕಠಿಣವಾಗುತ್ತದೆ. ಜಿಲ್ಲೆಯಲ್ಲಿ ಈಗಾಗಲೇ ಬರಡು ಭೂಮಿಗಳೇ ಕಾಣುತ್ತಿವೆ. ರೈತರು ಬಿತ್ತನೆಗೆ ಸಜ್ಜು ಮಾಡಿಕೊಂಡಿದ್ದರೂ ಮಳೆ ಕೈಕೊಟ್ಟಿರುವುದರಿಂದ ಬಿತ್ತನೆ ಕಾರ್ಯವನ್ನು ಕೈಗೊಂಡಿಲ್ಲ. ಕೆಲ ರೈತರು ಧೈರ್ಯಮಾಡಿ ಬಿತ್ತನೆ ಮಾಡಿದ್ದರೂ ಬೆಳೆ ನೀರಿಲ್ಲದೇ ಮೊಳಕೆಯೊಡೆಯುವ ಮೊದಲೇ ಕಮರಿಹೋಗಿವೆ. ಸರ್ಕಾರ ಕೂಡಲೇ ಬೆಳಗಾವಿ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ರೈತರು ಆಗ್ರಹಿಸಿದ್ದಾರೆ.

ಮರಳು ಮಾಫಿಯಾ ವಿರುದ್ಧ ಪೊಲೀಸ್‌ ಸಮರ ಹಠಾತ್‌ ಧಾಳಿ; 30ಕ್ಕೂ ಅಧಿಕ ವಾಹನಗಳ ವಶ

ಪುರಾತನ ದೇವಸ್ಥಾನ ದರ್ಶನಕ್ಕೆ ಮುಕ್ತ

ಮುಂಗಾರು ವಿಳಂಬವಾಗಿರುವುದರಿಂದ ಹುಕ್ಕೇರಿ ತಾಲೂಕಿನ ಘಟಪ್ರಭಾ ಜಲಾಶಯದಲ್ಲಿ ನೀರು ಖಾಲಿಯಾಗಿದೆ. ಬರೋಬ್ಬರಿ 40 ವರ್ಷಗಳ ನಂತರ ಪುರಾತನ ವಿಠ್ಠಲ ದೇವಸ್ಥಾನ ಭಕ್ತರ ದರ್ಶನಕ್ಕೆ ಮುಕ್ತಗೊಂಡಿದೆ.

ಹಿಡಕಲ್‌ ಜಲಾಶಯವೂ ಡೆಡ್‌ ಸ್ಟೋರೇಜ್‌ ಹಂತಕ್ಕೆ ತಲುಪಿದೆ. ಹೀಗಾಗಿ ಡ್ಯಾಂನ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಹುನ್ನೂರಿನ ಪುರಾತನ ವಿಠ್ಠಲ ದೇವಸ್ಥಾನವು ಭಕ್ತರ ದರ್ಶನಕ್ಕೆ ಮುಕ್ತವಾಗಿದ್ದು, ವಿಠ್ಠಲನ ದರ್ಶನಕ್ಕೆ ಭಕ್ತರ ದಂಡೇ ಹರಿದುಬರುತ್ತಿದೆ. 40 ವರ್ಷಗಳ ಬಳಿಕ ವಿಠ್ಠಲನ ಈ ದೇವಸ್ಥಾನವು ಸಂಪೂರ್ಣವಾಗಿ ಕಾಣಿಸಿಕೊಂಡಿದೆ. 1928ರಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಆದರೆ, 1977ನೇ ವರ್ಷದಲ್ಲಿ ಘಟಪ್ರಭಾ ಜಲಾಶಯ ನಿರ್ಮಾಣ ಮಾಡುವ ಸಂದರ್ಭದಲ್ಲಿ ವಿಠ್ಠಲ ದೇವಸ್ಥಾನವು ಸಂಪೂರ್ಣವಾಗಿ ಮುಳುಗಡೆಯಾಗಿತ್ತು. ಆದಾದ ಬಳಿಕ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದಂತಹ ಸಂದರ್ಭಗಳಲ್ಲಿ ಮಾತ್ರ ಈ ದೇವಸ್ಥಾನ ಕಾಣಿಸುತ್ತದೆ. ಈ ಬಾರಿ ಸಂಪೂರ್ಣವಾಗಿ ದೇವಸ್ಥಾನವು ಕಾಣಿಸುತ್ತಿದೆ. ಹಾಗಾಗಿ, ವಿಠ್ಠಲನ ದರ್ಶನಕ್ಕೆ ಭಕ್ತರ ದಂಡೇ ಬರಿದುಬರುತ್ತಿದೆ.

click me!