ಮಲೆನಾಡಿನಾದ್ಯಂತ ಕಳೆದೊಂದು ವಾರದಿಂದಲೂ ಕೂಡ ಮೋಡ ಕಡುಗಟ್ಟುತ್ತಿದ್ದು ಇಡೀ ದಿನ ನಿರಂತರವಾಗಿ ಸಾಧಾರಣ ಮಳೆ ಸುರಿಯುತ್ತಿದೆ. ಬಿಸುತ್ತಿರುವ ರಣ ಗಾಳಿಯಿಂದ ಮರಗಳು ಮುರಿದು ಬೀಳುತ್ತಿದ್ದು ಮಲೆನಾಡಿನ ಕುಗ್ರಾಮಗಳಲ್ಲಿ ಅಲ್ಲಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತ ಗೊಳ್ಳುತ್ತಿದ್ದು, ಮರಗಿಡಗಳು ವಿದ್ಯುತ್ ಅಂತಿಗಳ ಮೇಲೆ ಬಿದ್ದ ಪರಿಣಾಮ ಹಳ್ಳಿಗಳು ಕತ್ತಲಲ್ಲಿ ಬದುಕುವ ಸ್ಥಿತಿಯು ನಿರ್ಮಾಣವಾಗಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಜು.04): ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಮಳೆ-ಗಾಳಿ ಅಬ್ಬರ ಹೆಚ್ಚುತ್ತಿದ್ದು ಭಾರೀ ಗಾಳಿಗೆ ಬೃಹತ್ ಮರಗಳು ಧರೆಗುರುಳುತ್ತಿವೆ. ಇಂದು(ಮಂಗಳವಾರ) ಜಿಲ್ಲೆಯ ಕಳಸ ತಾಲೂಕಿನ ಚನ್ನಹಡ್ಲು ಗ್ರಾಮದಲ್ಲಿ ಭಾರೀ ಗಾಳಿಗೆ ನೂರಾರು ವರ್ಷದ ಬೃಹತ್ ಬೀಟೆ ಮರ ಧರೆಗುರುಳಿದ್ದು, ಸುಮಾರು 2 ಗಂಟೆಗಳ ಕಾಲ ಕಳಸ ಹಾಗೂ ಚನ್ನಹಡ್ಲು ಗ್ರಾಮದ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿತ್ತು. ಬಳಿಕ ಸುರಿಯೋ ಮಳೆ ಮಧ್ಯೆ ಚನ್ನಹಡ್ಲು ಜನ ಮರವನ್ನ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಂಡಿದ್ದಾರೆ.
undefined
ಸ್ಥಳೀಯರು ಮರವನ್ನ ತೆರವುಗೊಳಿಸುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಸ್ಥಳೀಯರ ಜೊತೆ ಸೇರಿ ಮರವನ್ನ ತೆರವುಗೊಳಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇನ್ನು ಕಳಸ ತಾಲೂಕಿನ ಕಲ್ಮಕ್ಕಿ ಎಂಬ ಗ್ರಾಮದ ಬಳಿ ಮನೆ ನಿರ್ಮಾಣದ ಕಾಮಗಾರಿಗೆ ಎಂ.ಸ್ಯಾಂಡ್ ಮರಗಳನ್ನ ಕೊಂಡೊಯ್ಯುತ್ತಿದ್ದ ಟಿಪ್ಪರ್ ಲಾರಿ ಚಾಲಕನಾ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಟಿಪ್ಪರ್ ಲಾರಿ ಚಾಲಕ ಹಾಗೂ ಕ್ಲೀನರ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ. ಲಾರಿ ಪಲ್ಟಿ ಆಗುತ್ತಿದ್ದಂತೆ ಸ್ಥಳೀಯರು ಚಾಲಕ ಹಾಗೂ ಕ್ಲೀನರ್ ನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಲೆನಾಡಿನಾದ್ಯಂತ ಕಳೆದೊಂದು ವಾರದಿಂದಲೂ ಕೂಡ ಮೋಡ ಕಡುಗಟ್ಟುತ್ತಿದ್ದು ಇಡೀ ದಿನ ನಿರಂತರವಾಗಿ ಸಾಧಾರಣ ಮಳೆ ಸುರಿಯುತ್ತಿದೆ. ಬಿಸುತ್ತಿರುವ ರಣ ಗಾಳಿಯಿಂದ ಮರಗಳು ಮುರಿದು ಬೀಳುತ್ತಿದ್ದು ಮಲೆನಾಡಿನ ಕುಗ್ರಾಮಗಳಲ್ಲಿ ಅಲ್ಲಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದ್ದು, ಮರಗಿಡಗಳು ವಿದ್ಯುತ್ ಅಂತಿಗಳ ಮೇಲೆ ಬಿದ್ದ ಪರಿಣಾಮ ಹಳ್ಳಿಗಳು ಕತ್ತಲಲ್ಲಿ ಬದುಕುವ ಸ್ಥಿತಿಯು ನಿರ್ಮಾಣವಾಗಿದೆ.
ಚಿಕ್ಕಮಗಳೂರು: ಬೈಕ್‌ಗಳ ಕರ್ಕಶ ಶಬ್ಧ, ಪ್ರವಾಸಿಗರಿಂದ ಸ್ಥಳೀಯರಿಗೆ ಕಿರಿ ಕಿರಿ..!
ಮಳೆಯಿಂದ ಸಸಿಗಳಿಗೆ ಜೀವ ಕಳೆ :
ಕಡಲತೀರದ ಜಿಲೆಗಳಾದ ಮಂಗಳೂರು ಮತ್ತು ಉಡುಪಿಯಲ್ಲಿ ವರುಣನ ಆರ್ಭಟ ಮುಂದುವರೆದ ಪರಿಣಾಮ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುಂಗಾರು ಮಳೆಯ ಪ್ರವೇಶದ ಮುನ್ಸೂಚನೆ ದೊರೆತ್ತಿದೆ. ಮಣ್ಣಿನಿಂದ ಮೇಲೆದ್ದಿರುವ ಸಸಿಮಡಿಗಳು ನೀರಿಗಾಗಿ ಆಗಸದತ್ತ ಮುಖಮಾಡಿದ್ದು, ಮಳೆಯಿಂದ ಸಸಿಗಳಿಗೆ ಜೀವ ಕಳೆ ಬಂದಂತಾಗಿದೆ. ಆರದ್ರಾ ಮಳೆಗೆ ಕಳೆದ ವರ್ಷ ಗದ್ದೆಯ ಬೇಸಾಯ ಕಾರ್ಯಗಳು ಆರಂಭಗೊಂಡಿದ್ದವು ಈ ವರ್ಷ ಮಳೆ ಕೈಕೊಟ್ಟಿದ್ದರಿಂದ ಗದ್ದೆಕೆಲಸಗಳು ವಿಳಂಬವಾಗಿವೆ. ಈಗಾಗಲೇ ಬೆಳೆದುನಿಂತಿರುವ ಶುಂಠಿ ಬೆಳೆಗೆ ಮಳೆ ವರದಾನವಾಗಿದೆ. ಮುಂಗಾರು ಪೂರ್ವ ಮಳೆ ಜಿಲ್ಲೆಯಲ್ಲಿ ಉತ್ತಮವಾಗಿ ಸುರಿದಿದ್ದರಿಂದ ಅಲ್ಲೊಂದು ಇಲ್ಲೊಂದು ಕಾಫಿಗಿಡದಲ್ಲಿ ಕಾಫಿಹಣ್ಣುಬಿಟ್ಟಿದ್ದು, ಮಳೆಸುರಿದರೆ ಮಣ್ಣುಪಾಲಾಗುವುದನ್ನು ತಪ್ಪಿಸಲು ಅವುಗಳನ್ನು ಬಿಡಿಸುವ ಕಾರ್ಯದಲ್ಲಿ ಕಾರ್ಮಿಕರು ಮುಂದಾಗಿದ್ದಾರೆ.ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗಿರುವ ಸೂಚನೆಗಳು ಕಂಡುಬರುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದಂತಾಗಿದೆ.
ಆರೆಂಜ್ ಅಲರ್ಟ್:
ಭಾರತ ಹವಾಮಾನ ಇಲಾಖೆ, ನವದೆಹಲಿ ಹಾಗೂ ರಾಜ್ಯ ಹವಾಮಾನ ಇಲಾಖೆ, ಬೆಂಗಳೂರು ನೀಡಿರುವ ಮುನ್ಸೂಚನೆಯ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮುಂದಿನ2 ರಿಮದ 3 ದಿನಗಳು ಮೋಡ ಕವಿದ ವಾತಾವರಣ ಹಾಗೂ ಸಾಧಾರಣದಿಂದ ಭಾರಿ ಮಳೆಯಾಗುವ ಸಂಭವವಿದೆ ಎಂದು ಜಿಲ್ಲಾ ಕೃಷಿ ಹವಾಮಾನ ಘಟಕದ ಸಂಪರ್ಕ ಅಧಿಕಾರಿ ಹಾಗೂ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಕೃಷ್ಣಮೂರ್ತಿ ಎ.ಟಿ. ತಿಳಿಸಿದ್ದಾರೆ.
ತಾಲ್ಲೂಕುವಾರು ಮುನ್ಸೂಚನೆಯ ಪ್ರಕಾರ ಜಿಲ್ಲೆಯ ಮಲೆನಾಡು ತಾಲ್ಲೂಕುಗಳಾದ ಕೊಪ್ಪ, ಮೂಡಿಗೆರೆ, ಎನ್.ಆರ್.ಪುರ, ಶೃಂಗೇರಿ ಹಾಗೂ ಚಿಕ್ಕಮಗಳೂರು ತಾಲ್ಲೂಕುಗಳಿಗೆ ಮುಂದಿನ 2ರಿಂದ 3ದಿನಗಳಲ್ಲಿ ಮೋಡ ಕವಿದ ವಾತಾವರಣದ ಜೊತೆಗೆ ಗುಡುಗು - ಮಿಂಚು ಸಹಿತ ಸಾಧಾರಣದಿಂದ ಭಾರಿ ಮಳೆಯಾಗುವ ಸಂಭವವಿದೆ ಹಾಗೂ ಇದರ ಜೊತೆ ಗಾಳಿಯ ವೇಗ ಹೆಚ್ಚು ಇರುವ ಸಂಭವವಿದೆ. ತರೀಕೆರೆ ಹಾಗೂ ಕಡೂರು ತಾಲ್ಲೂಕ್ ನಲ್ಲೂ ಮುಂದಿನ ಮೂರು ದಿನಗಳು ಮೋಡ ಕವಿದ ವಾತಾವರಣದ ಜೊತೆಗೆ ಗುಡುಗು-ಮಿಂಚು ಸಹಿತ ಸಾಧಾರಣದಿಂದ ಹೆಚ್ಚು ಮಳೆಯಾಗುವ ಸಂಭವವಿದೆ ಹಾಗೂ ಇದರ ಜೊತೆ ಗಾಳಿಯ ವೇಗ ಹೆಚ್ಚು ಇರುವ ಸಂಭವವಿದೆ. ಆದ್ದರಿಂದ ರೈತರು ಗೊಬ್ಬರ ಹಾಕುವುದು, ಬಿತ್ತನೆ ಚಟುವಟಿಕೆಗಳು ಹಾಗೂ ಕೃಷಿ ಚಟುವಟಿಕೆಗಳನ್ನು ಮುಂದಿನ 2 ರಿಂದ 3 ದಿನಗಳವರೆಗೆ ಮುಂದೂಡುವುದು ಸೂಕ್ತ ಎಂದು ಜಿಲ್ಲಾ ಕೃಷಿ ಹವಾಮಾನ ಘಟಕದ ವಿಷಯ ತಜ್ಞ ಶಬ್ನಂ ಪಿ.ಎಸ್ ತಿಳಿಸಿದ್ದಾರೆ.
ಮುಂದಿನ 3 ದಿನ ಭಾರೀ ಮಳೆ ಎಚ್ಚರಿಕೆ, ಹೈ ಅಲರ್ಟ್ ಘೋಷಣೆ
ಹವಾಮಾನ ಇಲಾಖೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಅಲರ್ಟ್ ಘೋಷಣೆ ಮಾಡಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಕಛೇರಿಯಿಂದ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದೆ. ಸಾರ್ವಜನಿಕರು, ಪ್ರವಾಸಿಗರು ಹೊಳೆ-ನದಿಗಳಿಗೆ ಇಳಿಯದಂತೆ ಎಚ್ಚರಿಕೆ ನೀಡಿದೆ. ಮಳೆ ಬರುವ ಸಮಯದಲ್ಲಿಯಾಗಲಿ ಅಥವಾ ಮಳೆ ನಿಂತ ಸಮಯದಲ್ಲಿಯಾಗಲಿ ವಿದ್ಯುತ್ ಕಂಬ, ಮರಗಳ ಬಳಿ/ಕೆಳಗೆ ನಿಲ್ಲದಂತೆ ಸೂಚನೆ ನೀಡಿದೆ, ವೃದ್ಧರು ಮತ್ತು ಮಕ್ಕಳು ನದಿ, ಕೆರೆ, ತಗ್ಗು ಪ್ರದೇಶಗಳ ಬಳಿ ಹೋಗದಂತೆ ಸಂಬಂಧಿಸಿದವರು, ಪೋಷಕರು, ಶಾಲಾ ಮುಖ್ಯಸ್ಥರು ಕ್ರಮ ವಹಿಸಲು ಸೂಚನೆ ನೀಡಿದೆ. ಅಕಸ್ಮಾತ್ ಹಿರಿಯರು ಹೊರಗೆ ಹೋಗಲೇಬೇಕಾದ ಅನಿವಾರ್ಯವಿದ್ದಲ್ಲಿ ಮನೆಯ ಇತರ ಸದಸ್ಯರ ಜೊತೆ ಹೋಗಬೇಕು. ಸಾರ್ವಜನಿಕರು ಜಿಲ್ಲಾಡಳಿತದ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಚಿಕ್ಕಮಗಳೂರು ನೂತನ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.