ಕೊಪ್ಪಳ: ಹಾಲವರ್ತಿಯಲ್ಲಿ ದಲಿತರಿಗೆ ಹೊಟೇಲ್‌ ಪ್ರವೇಶವಿಲ್ಲ, ಕ್ಷೌರಕ್ಕೂ ನಕಾರ!

By Kannadaprabha News  |  First Published Feb 15, 2024, 8:16 PM IST

ತಾಲೂಕಿನ ಹಾಲವರ್ತಿ ಗ್ರಾಮದಲ್ಲಿ ದಲಿತರಿಗೆ ಹೊಟೇಲ್‌ ಮತ್ತು ಕ್ಷೌರದ ಅಂಗಡಿಗಳಲ್ಲಿ ಪ್ರವೇಶ ನಿರಾಕರಿಸಿದ ಘಟನೆ ನಡೆದಿದ್ದು, ಬುಧವಾರ ದಲಿತ ಯುವಕರೇ ಈ ಘಟನೆ ಖಂಡಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 


ಕೊಪ್ಪಳ (ಫೆ.15): ತಾಲೂಕಿನ ಹಾಲವರ್ತಿ ಗ್ರಾಮದಲ್ಲಿ ದಲಿತರಿಗೆ ಹೊಟೇಲ್‌ ಮತ್ತು ಕ್ಷೌರದ ಅಂಗಡಿಗಳಲ್ಲಿ ಪ್ರವೇಶ ನಿರಾಕರಿಸಿದ ಘಟನೆ ನಡೆದಿದ್ದು, ಬುಧವಾರ ದಲಿತ ಯುವಕರೇ ಈ ಘಟನೆ ಖಂಡಿಸಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಹೊಟೇಲುಗಳಲ್ಲಿ ಪ್ರವೇಶವಿಲ್ಲ, ಬದಲಾಗಿ ದಲಿತರಿಗಾಗಿಯೇ ಪ್ರತ್ಯೇಕ ಪ್ಲೇಟ್‌, ತಟ್ಟೆ ಇಟ್ಟಿರುತ್ತಾರೆ. ಯಾವುದೇ ಸಂದರ್ಭದಲ್ಲೂ ಅವರು ಎಲ್ಲರ ಜೊತೆ ಕುಳಿತು ತಿಂಡಿ ತಿನ್ನುವಂತಿಲ್ಲ. ಕ್ಷೌರದ ಅಂಗಡಿಯಲ್ಲಿ ದಲಿತರಿಗೆ ಕ್ಷೌರ ಮಾಡುತ್ತಿಲ್ಲ. 

ಇದರಿಂದ ರೊಚ್ಚಿಗೆದ್ದ ವಿದ್ಯಾವಂತ ದಲಿತ ಯುವಕರು ಅಸ್ಪೃಶ್ಯತೆ ವಿರುದ್ಧ ಸಿಡಿದೆದ್ದಿದ್ದಾರೆ. ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ನಮಗೆ ಗ್ರಾಮದ ಹೊಟೇಲುಗಳಲ್ಲಿ ಪ್ರವೇಶವಿಲ್ಲ ಯಾಕೆ, ಹೊರಗಡೆಯೇ ಕುಳಿತು ಪ್ರತ್ಯೇಕ ಪ್ಲೇಟ್‌, ಗ್ಲಾಸ್‌ನಲ್ಲಿ ಉಪಾಹಾರ ಸೇವಿಸಬೇಕು, ನಾವು ಮನುಶ್ಯರಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಹೊಟೇಲ್‌ಗೆ ಹೋಗಿ ಈ ಯುವಕರು ಪ್ರಶ್ನಿಸುತ್ತಿದ್ದಂತೆ ಆ ಹೊಟೇಲ್‌ನವರು ಬಂದ್‌ ಮಾಡಿಕೊಂಡು ಮನೆಗೆ ತೆರಳಿದರು.

Tap to resize

Latest Videos

undefined

ಸಿದ್ದರಾಮಯ್ಯ ಹತ್ತು ಸಲ ರಾಜಕೀಯ ನಿವೃತ್ತಿ ಪಡಿಬೇಕಿತ್ತು: ಪ್ರಲ್ಹಾದ್‌ ಜೋಶಿ

ಕ್ಷೌರಕ್ಕೆ ನಿರಾಕರಣೆ: ಕ್ಷೌರ ಯಾಕೆ ಮಾಡುವುದಿಲ್ಲ ಎಂದು ಅಂಗಡಿಯ ಕ್ಷೌರಿಕನನ್ನು ಯುವಕರು ಪ್ರಶ್ನಿಸಿದ್ದಾರೆ. ನಿಮ್ಮ ಜನಾಂಗಕ್ಕೆ ನಾವು ಕ್ಷೌರ ಮಾಡುವುದಿಲ್ಲ ಎಂದು ಕ್ಷೌರಿಕನೊಬ್ಬ ಉತ್ತರಿಸುತ್ತ ದಲಿತರ ಮಕ್ಕಳಿಗೂ ಕ್ಷೌರ ಮಾಡಲು ನಿರಾಕರಿಸಿದ್ದಾರೆ. ನಮಗೆ ಕ್ಷೌರ ಮಾಡಿ ಎಂದು ಒತ್ತಾಯಿಸಿದ್ದಕ್ಕೆ ಅವರು ತಮ್ಮ ಅಂಗಡಿ ಬಂದ್ ಮಾಡಿದ್ದಾರೆ. ಇದರಿಂದ ಸಿಡಿದೆದ್ದಿರುವ ಹಾಲವರ್ತಿಯಲ್ಲಿ ದಲಿತ ಯುವಕರು, ನಮಗೂ ಸಾಮಾಜಿಕ ನ್ಯಾಯ ನೀಡಿ ಎಂದು ಅಸ್ಪೃಷ್ಯತೆಯ ವಿರುದ್ಧ ಧ್ವನಿ ಎತ್ತಿದ್ದಾರೆ. ಜಿಲ್ಲೆಯಲ್ಲಿ ಹೀನ, ಅಮಾನವೀಯ, ನಾಗರೀಕ ಸಮಾಜ ತಲೆ ತಗ್ಗಿಸುವಂತಹ ಅಸ್ಪೃಶ್ಯತೆ ಆಚರಣೆಯ ಘಟನೆಗಳು ಪದೇ ಪದೇ ಬೆಳಕಿಗೆ ಬರುತ್ತಲೇ ಇದ್ದು, ಇದೀಗ ಸ್ವಾಭಿಮಾನಿ ದಲಿತರೇ ಅಸ್ಪೃಶ್ಯತೆ ವಿರುದ್ಧ ಸಿಡಿದೆದ್ದಿರುವುದು ವಿಶೇಷ.

ಹಾಲವರ್ತಿ ಘಟನೆ ಸಹಿಸಲ್ಲ: ಜಿಲ್ಲೆಯ ಹಾಲವರ್ತಿ ಗ್ರಾಮದಲ್ಲಿ ದಲಿತರಿಗೆ ಹೋಟೆಲ್ ಪ್ರವೇಶ ನಿರಾಕರಣೆ, ಕ್ಷೌರ ನಿಷೇಧದಂತಹ ಘಟನೆ ಸಹಿಸುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ಹಾಲವರ್ತಿಯಲ್ಲಿನ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನಾನು ಒಬ್ಬ ದಲಿತ ಮಂತ್ರಿಯಾಗಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ. ಈ ಸಂಬಂಧ ಅಲ್ಲಿನ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಜಾಗೃತಿ ಬಳಿಕವೂ ಅದೇ ರೀತಿ ಮುಂದುವರೆದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಹಾಲವರ್ತಿ ಗ್ರಾಮದಲ್ಲಿನ ಘಟನೆ ನನ್ನ ಗಮನಕ್ಕೆ ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಭೇಟಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ, ಕೂಡಲೇ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು. ಗ್ರಾಮಸ್ಥರೊಂದಿಗೆ ಸಭೆ ನಡೆಸುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜಿಲ್ಲೆಯಲ್ಲಿ ಇಂತಹ ಪ್ರಕರಣ ಮತ್ತೊಮ್ಮೆ ‌ಮರುಕಳಿಸುವ ಪ್ರಶ್ನೆಯೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ‌ ಪ್ರತಿಕ್ರಿಯಿಸಿದ್ದಾರೆ.

ಎಸ್ಸಿ ಎಸ್ಟಿ ಸಮುದಾಯಕ್ಕೆ ಕಾಂಗ್ರೆಸ್ಸಿನಿಂದ ಮೋಸ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಹಾಲವರ್ತಿ ಗ್ರಾಮದಲ್ಲಿ ದಲಿತರನ್ನು ಕಡೆಗಣಿಸಲಾಗುತ್ತಿದೆ. ನಮ್ಮನ್ನು ಸಮಾನತೆಯಿಂದ ಕಾಣುತ್ತಿಲ್ಲ. ನಮ್ಮನ್ನು ಮುಟ್ಟಿಸಿಕೊಳ್ಳದೆ, ನಾವು ಬಂದರೆ ದೂರ ಸರಿಯುವ ಅನಿಷ್ಟ ಪದ್ಧತಿ ಜೀವಂತದಲ್ಲಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆದರೂ ಜನರು ಸಮಾನತೆಯ ಕೂಗಿಗೆ ಧ್ವನಿಗೂಡಿಸುತ್ತಿಲ್ಲ. ಯಾಕೆ ನಾವು ಮನುಷ್ಯರಲ್ಲವೇ?
ಚಾಮರಾಜ, ಗ್ರಾಮದ ದಲಿತ ಯುವಕ, ಹಾಲವರ್ತಿ

click me!