ಟೇಕಲ್(ಕೋಲಾರ) (ಸೆ.21) ; ದೇವರ ಉತ್ಸವದಲ್ಲಿ 14 ವರ್ಷದ ದಲಿತ ಬಾಲಕನೊಬ್ಬ ಉತ್ಸವ ಮೂರ್ತಿಯನ್ನು ಮುಟ್ಟಿದ ಎಂದು ಆತನನ್ನು ಥಳಿಸಿ, ಕುಟುಂಬಕ್ಕೆ .60 ಸಾವಿರ ದಂಡ ವಿಧಿಸಿರುವ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಟೇಕಲ್ ಸಮೀಪದ ಉಳ್ಳೇರಹಳ್ಳಿ ಗ್ರಾಮದಲ್ಲಿ ನಡೆದಿದೆ. ಹಣ ಕಟ್ಟದಿದ್ದ ಪಕ್ಷದಲ್ಲಿ ಗ್ರಾಮದಿಂದ ಬಹಿಷ್ಕಾರ ಹಾಕುವುದಾಗಿ ಬೆದರಿಕೆಯನ್ನೂ ಹಾಕಲಾಗಿದೆ.
ಭೂತಮ್ಮನ ಮೂರ್ತಿಗಳ ಉತ್ಸವ ನಡೆಯುತ್ತಿದ್ದಾಗ ದೇವರನ್ನು ಹೊರುವ ಗುಜ್ಜ ಕೋಲು ಕೆಳಗೆ ಬಿದ್ದಾಗ ಗ್ರಾಮದ ದಲಿತ ಕುಟುಂಬದ ಚೇತನ ಎಂಬ ಬಾಲಕ ತಕ್ಷಣ ಆ ಕೋಲನ್ನು ಎತ್ತಿ ಕೊಟ್ಟಿದ್ದಾನೆ.
ದಲಿತ ಬಾಲಕ ಉತ್ಸವ ಮೂರ್ತಿಯನ್ನು ಮುಟ್ಟಿದ ಎಂದು ಸಿಟ್ಟಾಗಿ ಆತನನ್ನು ಥಳಿಸಿದ ಕೆಲವರು, ಜಾತಿ ನಿಂದನೆ ಮಾಡಿ, ಗ್ರಾಮದಲ್ಲಿ ಪಂಚಾಯಿತಿ ಸೇರಿಸಿ, ಬಾಲಕನ ಪೋಷಕರಿಗೆ .60 ಸಾವಿರ ದಂಡ ಹಾಕಿದ್ದಾರೆ. ಹಣವನ್ನು ಅಕ್ಟೋಬರ್ 1ನೇ ತಾರೀಖಿನೊಳಗೆ ಕಟ್ಟದಿದ್ದರೆ ಕುಟುಂಬವನ್ನು ಗ್ರಾಮದಿಂದ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದಾರೆಂದು ಮಾಸ್ತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಬಾಲಕನ ತಾಯಿ ಶೋಭಾ ತಿಳಿಸಿದ್ದಾರೆ. ಈ ಬಗ್ಗೆ ಗ್ರಾಮದ 7 ಮಂದಿಯ ಮೇಲೆ ಕೇಸು ದಾಖಲಿಸಲಾಗಿದೆ. ಮಾಸ್ತಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಉಳ್ಳೇರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಈ ಬಗ್ಗೆ ಗ್ರಾಮದ ಮುಖಂಡ ವೆಂಕಟೇಶಪ್ಪ ಪ್ರತಿಕ್ರಿಯಿಸಿದ್ದು, ಕೆಲವರು ಕುಡಿದ ಅಮಲಿನಲ್ಲಿ ಬಂದು ಉತ್ಸವ ಮೂರ್ತಿಗಳನ್ನು ಎತ್ತಿಕೊಂಡಿದ್ದರು. ಆಗ ನಾನೇ ಇದಕ್ಕೆ .60 ಸಾವಿರ ಖರ್ಚಾಗಿದೆ. ಕೆಳಗೆ ಬಿದ್ದರೆ ಹಾಳಾಗುತ್ತವೆ ಎಂದು ಬೈದಿದ್ದೇನೆಯೇ ಹೊರತು ಯಾವುದೇ ದಂಡ ಅಥವಾ ಬಹಿಷ್ಕಾರ ಹಾಕಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಅಸ್ಪೃಶ್ಯತೆ ತಡೆಗೆ ವಿನಯ ಸಾಮರಸ್ಯ ಯೋಜನೆಯ ಅಸ್ತ್ರ: ಸಚಿವ ಕೋಟ