
ಮಂಗಳೂರು: ಹೆದ್ದಾರಿಯಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳನ್ನು ಪೊಲೀಸ್ ಅಧಿಕಾರಿಗಳು ನಿಲ್ಲಿಸುವಂತೆ ನಿಲ್ಲಿಸಿ, ಬಳಿಕ ವಾಹನದ ಎಂಜಿನ್ ನ್ನು ತಂಪಾಗಿಸುವ ಮತ್ತು ಹೆಚ್ಚು ಮೈಲೇಜ್ ನೀಡುವ ಸಾಧನ ಅಳವಡಿಸುತ್ತೇವೆ ಎಂದು ಹೇಳಿ 800ರಿಂದ 1000 ರು.ವರೆಗೆ ಕಬಳಿಸುವ ತಂಡವೊಂದು ಹೆದ್ದಾರಿಯ ಆಯಕಟ್ಟಿನ ಸ್ಥಳದಲ್ಲಿ ಕಾರ್‍ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬರತೊಡಗಿವೆ.
ಕೆಲ ದಿನಗಳ ಹಿಂದೆ ಉಪ್ಪಿನಂಗಡಿಯ ಟೈಲರೊಬ್ಬರು ತನ್ನ ಮಗನನ್ನು ಶಾಲೆಯಿಂದ ಮನೆಗೆ ಕರೆದೊಯ್ಯುತ್ತಿದ್ದಾಗ ಉಪ್ಪಿನಂಗಡಿ ಗಾಂಧಿ ಪಾರ್ಕ್ ಅಂಡರ್ ಪಾಸ್ ಬಳಿ ವ್ಯಕ್ತಿಯೊಬ್ಬ ಬೈಕನ್ನು ಸೈಡ್ ನಿಲ್ಲಿಸಲು ಸೂಚಿಸುತ್ತಾನೆ. ಸಾಮಾನ್ಯ ಉಡುಪಿನಲ್ಲಿರುವ ಪೊಲೀಸ್ ಅಧಿಕಾರಿ ಎಂದು ಭಾವಿಸಿ ಬೈಕ್ ಸವಾರ ಬೈಕ್‌ನ್ನು ಸರ್ವೀಸ್ ರಸ್ತೆಯ ಬದಿಯಲ್ಲಿ ನಿಲ್ಲಿಸಿದಾಗ ಬೈಕ್ ನ ಎಂಜಿನ್ ಬಳಿ ವಸ್ತುವೊಂದನ್ನು ಅಳವಡಿಸಿ 1000 ರು. ಆಗುತ್ತೆ. ಇದನ್ನು ಅಳವಡಿಸುವುದರಿಂದ ನಿಮ್ಮ ಬೈಕ್ ಎಂಜಿನ್ ತಂಪಾಗಿರುತ್ತದೆ. ಮಾತ್ರವಲ್ಲದೆ ಹೆಚ್ಚು ಮೈಲೇಜ್ ಸಿಗುತ್ತದೆ ಎಂದು ಮನವರಿಕೆ ಮಾಡುತ್ತಾನೆ. ಆತ ಕೇಳಿದಷ್ಟು ಮೊತ್ತ ತನ್ನಲ್ಲಿ ಇಲ್ಲವೆಂದು ತಿಳಿಸಿದಾಗ ವಾಗ್ವಾದಕ್ಕಿಳಿದ ಆತನ ವರ್ತನೆಯಿಂದ ಅನುಮಾನಗೊಂಡ ಸ್ಥಳೀಯರು ಜಮಾಯಿಸುತ್ತಿದ್ದಂತೆಯೇ ಆತ ಸ್ಥಳದಿಂದ ಪಲಾಯನ ಮಾಡಿದ್ದಾನೆ.
ಉಪ್ಪಿನಂಗಡಿಯ ಹೂವಿನ ವ್ಯಾಪಾರಿಯೊಬ್ಬರು ತನ್ನ ದ್ವಿಚಕ್ರ ವಾಹನದಲ್ಲಿ ಮನೆ ಕಡೆಗೆ ಹೋಗುತ್ತಿದ್ದಾಗ ಹೆದ್ದಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಧಿಮಾಕಿನಲ್ಲಿ ವಾಹನವನ್ನು ಸೈಡ್ ಹಾಕಲು ತಿಳಿಸಿ ಬಳಿಕ ವಾಹನದ ಎಂಜಿನ್ ತಂಪಾಗಿಸುವ ಮತ್ತು ಹೆಚ್ಚಿನ ಮೈಲೇಜ್ ನೀಡುತ್ತದೆನ್ನುವ ಸಾಧನವನ್ನು ಒಪ್ಪಿಗೆ ವಿನಃ ಅಳವಡಿಸಿ 800 ರು. ಶುಲ್ಕ ವಿಧಿಸಿ ವಸೂಲು ಮಾಡಿದ್ದಾನೆ. ಪೊಲೀಸ್ ಇಲಾಖೆಯವರೇ ಇರಬೇಕೆಂದು ಭಾವಿಸಿ ಅವರು ಹಣ ಪಾವತಿಸಿ ಮನೆಯತ್ತ ಹೋಗಿದ್ದಾರೆ. ಪಡೆದ ಹಣಕ್ಕೆ ಯಾವುದೇ ರಶೀದಿ ನೀಡದಿರುವುದರಿಂದ ಸಂದೇಹಗೊಂಡ ಅವರು ಬಳಿಕ ತನ್ನ ಹೂವಿನ ಅಂಗಡಿಗೆ ಬಂದು ಅಕ್ಕಪಕ್ಕದವರಿಗೆ ವಿಷಯ ತಿಳಿಸಿದಾಗಲೇ ಇದೊಂದು ವಂಚನೆಯ ಜಾಲ ಎಂದು ತಿಳಿಯಿತು.
ಇದನ್ನೂ ಓದಿ: ಉಡುಪಿ: ಸಾಸ್ತಾನ ಯುವಕನ ಅಪಹರಣ ಪ್ರಕರಣ, ಪ್ರಮುಖ ಆರೋಪಿಗಳ ಪತ್ತೆಗೆ 50,000 ಬಹುಮಾನ ಘೋಷಣೆ
ಪೊಲೀಸರು ಹೆದ್ದಾರಿ ಮಧ್ಯೆ ನಿಂತು ವಾಹನಗಳನ್ನು ಅಡ್ಡಗಟ್ಟಿ ದಾಖಲೆಗಳನ್ನು ಪರಿಶೀಲಿಸುವ ರೀತಿಯಲ್ಲೇ ಈ ವ್ಯಕ್ತಿಗಳೂ ವಾಹನಗಳನ್ನು ತಡೆಯುವುದರಿಂದ ಹೆಚ್ಚಿನವರು ಇವರೂ ಪೊಲೀಸರೆಂದು ತಿಳಿದು ವಾಹನಗಳನ್ನು ಬದಿಗೆ ನಿಲ್ಲಿಸುತ್ತಾರೆ. ವಾಹನ ಸವಾರರು ಪೊಲೀಸರ ದಂಡ ಪ್ರಯೋಗಕ್ಕೆ ಹೆದರುವುದನ್ನೇ ಬಂಡವಾಳವನ್ನಾಗಿಸುವ ಈ ಮಂದಿ ಬೈಕ್ ಗೆ ಸಾಧನವನ್ನು ಅಳವಡಿಸುವ ನೆಪವೊಡ್ಡಿ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಂಡು ವಂಚಕರ ಜಾಲಕ್ಕೆ ಕಡಿವಾಣ ಹಾಕಬೇಕಾಗಿದೆ.
ಇದನ್ನೂ ಓದಿ: ತನಿಮಾನಿಗ ಹೆಣ್ಣು ದೈವಕ್ಕೆ ಗಗ್ಗರ ಕಟ್ಟಿ ಭೂತ ಕೋಲ ನೆರವೇರಿಸಿದ 12 ವರ್ಷದ ಸಮರ್ಥ್