
ಉಪ್ಪಿನಂಗಡಿ: ಹಿಂದು ಧರ್ಮದ ವ್ಯಕ್ತಿಯೋರ್ವರು ನಿಧನರಾದ ಕಾರಣಕ್ಕೆ ಮಸೀದಿಯಲ್ಲಿ ಈದ್ ಮಿಲಾದ್ ಕಾರ್ಯಕ್ರಮವನ್ನು ಮುಂದೂಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕೊಯಿಲ ಗ್ರಾಮದಲ್ಲಿ ನಡೆದಿದೆ. ಕುದುಲೂರು ನಿವಾಸಿ, ಆಟೋರಿಕ್ಷಾ ಚಾಲಕ ಗುರುಪ್ರಸಾದ್ (35) ಹೃದಯಾಘಾತದಿಂದ ಶನಿವಾರ ನಿಧನರಾದರು.
ಶಾಲಾ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ, ಬಾಡಿಗೆ ವಾಹನ ಹೊಂದಿದ್ದ ಇವರು ತಾಯಿ, ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಮೃ ತ ಗುರುಪ್ರಸಾದ್ ಮನೆ ಬಳಿ ಇರುವ ಕುದುಲೂರು ಮಸೀದಿಯಲ್ಲಿ ಈದ್ ಮಿಲಾದ್ ಹಬ್ಬದ ಪೂರ್ವಭಾವಿಯಾಗಿ ಮಕ್ಕಳ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗುರುಪ್ರಸಾದ್ ನಿಧನದ ಸೂತಕದ ವಾತಾವರಣದಲ್ಲಿ ಕಾರ್ಯಕ್ರಮ ನಡೆಸುವುದು ಸರಿಯಲ್ಲ ಎಂದು ತೀರ್ಮಾನಿಸಿದ ಮಸೀದಿಯ ಆಡಳಿತ ಮಂಡಳಿ, ಕಾರ್ಯಕ್ರಮವನ್ನು ಮುಂದೂಡಿ ಗುರುಪ್ರಸಾದ್ ಕುಟುಂಬದ ದುಃಖದಲ್ಲಿ ಭಾಗಿಯಾಯಿತು.
ಕಾನೂನು ಸುವ್ಯವಸ್ಥೆಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ, ಅಶಾಂತಿ ಸೃಷ್ಟಿಯಾಗದಂತೆ, ಜಾತಿ-ಮತ ಭೇದವಿಲ್ಲದೆ ಈದ್ ಮಿಲಾದ್ ಹಬ್ಬದ ಆಚರಣೆ ನಡೆಸ ಬೇಕಿದ್ದು, ಶಾಂತಿಯುತ ಹಬ್ಬದ ಆಚರಣೆಗೆ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಪುತ್ತೂರು ನಗರ ಪೊಲೀಸ್ ಇನ್‌ಸ್ಪೆಕ್ಟರ್ ಜಾನ್ಸನ್ ಡಿಸೋಜ ಹೇಳಿದರು.ಅವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಸೀದಿಗಳ ಅಧ್ಯಕ್ಷರು- ಪದಾಧಿಕಾರಿಗಳೊಂದಿಗೆ ಶಾಂತಿಸಭೆ ನಡೆಸಿದರು.
ನಗರ ಠಾಣಾ ವ್ಯಾಪ್ತಿಯ 33 ಮಸೀದಿಗಳಲ್ಲಿ ಹಬ್ಬದ ಆಚರಣೆಯ ಭಾಗವಾಗಿ ನಡೆಯುವ ಮೆರವಣಿಗೆ, ರ್ಯಾಲಿಯ ವಿವರಗಳನ್ನು ಪಡೆದುಕೊಂಡರು. ನಿಮ್ಮ ಮೆರವಣಿಗೆಗಳು ಯಾವ ರೀತಿ ಇರುತ್ತದೆ ಎಂಬುದರ ವಿವರ ನೀಡಿ, ಕಾನೂನು ಚೌಕಟಿನಲ್ಲಿ ಅನುಮತಿ ನೀಡಿ ಬಂದೋಬಸ್ತ್ ಒದಗಿಸುತ್ತೇವೆ. ಎಲ್ಲಿಯೂ ಕೂಡ ಬೈಕ್ ರ್ಯಾಲಿಗೆ ಅವಕಾಶ ಇರುವುದಿಲ್ಲ, ಬೈಕಿಗೆ ಅವಕಾಶ ನೀಡಿದರೆ ಯುವಕರು ತಮ್ಮ ಚೇಷ್ಠೆಯ ಮೂಲಕ ಒಂದಷ್ಟು ಗೊಂದಲ ಸೃಷ್ಟಿಸುತ್ತಾರೆ. ಹೀಗಾಗಿ ಕೇವಲ ಕಾಲ್ನಡಿಗೆಯ ಜಾಥಾಗಳಿಗೆ ಮಾತ್ರ ಅವಕಾಶವಿರುತ್ತದೆ. ಅದರ ಸೀಮಿತ ಸಂಖ್ಯೆಯ ವಾಹನಗಳಿಗೆ ಅವಕಾಶ ಇರುತ್ತದೆ ಎಂದರು.
ಅಪ್ರಾಪ್ತರಿಗೆ ವಾಹನ ನೀಡಬೇಡಿ: ಮೆರವಣಿಗೆಯ ಸಂದರ್ಭದಲ್ಲಿ ಮಕ್ಕಳು ಮನೆಯವರು, ಸಂಘಟಕರಿಗೆ ತಿಳಿಯದ ರೀತಿಯಲ್ಲಿ ಯಾವುದೇ ಸಂಚಾರ ನಿಯಮಗಳನ್ನು ಪಾಲಿಸದೆ ಬೈಕಿನಲ್ಲಿ ಬರುವ ಘಟನೆಗಳು ನಡೆಯುತ್ತದೆ. ಹೀಗಾಗಿ ಅದಕ್ಕೆ ಯಾವುದೇ ರೀತಿಯ ಅವಕಾಶ ನೀಡಬಾರದು, ಜತೆಗೆ ಕಾರು, ಇತರ ವಾಹನಗಳನ್ನೂ ಮಕ್ಕಳಿಗೆ ನೀಡಬಾರದು ಎಂದು ನಗರ ಠಾಣಾ ಪಿಎಸ್‌ಐ ಸೇಸಮ್ಮ ತಿಳಿಸಿದರು.
ಕಬಕ ದಿಂದ ಮಂಜಲ್ಪಡ್ಪು ತನಕ ಮೆರವಣಿಗೆ: ಕಬಕದಿಂದ ಮಂಜಲ್ಪಡ್ಪು ತನಕ ನಡೆಯುವ ಅಲಂಕೃತ ವಾಹನಗಳ ಮೆರವಣಿಗೆ, ಪೇರಮಜಲು- ಸತ್ತಿಕಲ್ಲು ಭಾಗದ ಮೆರವಣಿಗೆಯ ಕುರಿತು ಆಯಾ ಭಾಗದ ಮುಖಂಡರು ಸಭೆಗೆ ವಿವರ ನೀಡಿದರು. ಜತೆಗೆ ಪ್ರತಿ ಮಸೀದಿಗಳಲ್ಲಿ ನಡೆಯುವ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ವಿವರಣೆ ನೀಡಿದರು. ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಸುಹಾಸ್ ಆರ್. ಉಪಸ್ಥಿತರಿದ್ದರು.