ಹಾನಿಯಾದ ಡ್ಯಾಂಗಳಲ್ಲಿ ನಿಂತೀತೇ ನೀರು!? ಶಾಶ್ವತ ಕಾಮಗಾರಿ ಆಗದಿದ್ದರೆ ಪೆಟ್ಟು!

By Web DeskFirst Published Sep 21, 2019, 11:48 AM IST
Highlights

ಬೆಳ್ತಂಗಡಿ: ಹಾನಿಯಾದ ಡ್ಯಾಂಗಳಲ್ಲಿ ನಿಂತೀತೇ ನೀರು!?| ತಾಲೂಕಿನ 43 ಕಿಂಡಿ ಅಣೆಕಟ್ಟುಗಳಲ್ಲಿ 36ಕ್ಕೆ ಹಾನಿ, ಇನ್ನೆರಡು ತಿಂಗಳೊಳಗೆ ಶಾಶ್ವತ ಕಾಮಗಾರಿ ಆಗದಿದ್ದರೆ ನೀರಾವರಿಗೆ ಪೆಟ್ಟು

ಸಂದೀಪ್‌ ವಾಗ್ಲೆ

ಮಂಗಳೂರು[ಸೆ.21]: ಕಳೆದ ತಿಂಗಳು ಪಶ್ಚಿಮಘಟ್ಟದಲ್ಲಿ ನಡೆದ ಜಲಸ್ಫೋಟ ಮತ್ತು ಅದರಿಂದಾದ ಭಾರೀ ಪ್ರವಾಹದಿಂದ ಅತಿ ಹೆಚ್ಚು ಸಂಕಷ್ಟಕ್ಕೊಳಗಾದ ಬೆಳ್ತಂಗಡಿ ತಾಲೂಕಿನ ಬಹುತೇಕ ಕಿಂಡಿ ಅಣೆಕಟ್ಟುಗಳು ಹಾನಿಗೀಡಾಗಿವೆ. ಸಣ್ಣ ನೀರಾವರಿ ಇಲಾಖೆ ತುರ್ತು ಕ್ರಮ ಕೈಗೊಂಡು ತಾತ್ಕಾಲಿಕವಾಗಿ ದುರಸ್ತಿಗೊಳಿಸಿದ್ದರೂ, ಇನ್ನೆರಡು ತಿಂಗಳೊಳಗೆ ಶಾಶ್ವತ ಕಾಮಗಾರಿ ನಡೆಯದ್ದರೆ ತಾಲೂಕಿನ ನೀರಾವರಿ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.

ಆಗಸ್ಟ್‌ 9ರಂದು ಪಶ್ಚಿಮ ಘಟ್ಟದ ಸಾಲುಗಳಲ್ಲಿ ಭೂಕುಸಿತ ಉಂಟಾಗಿ ದಿಢೀರನೆ ಪ್ರವಾಹ ಬಂದು ನೂರಾರು ಮಂದಿ ನಿರ್ವಸಿತರಾಗಿದ್ದರು. ಈ ವೇಳೆ ಪ್ರವಾಹದಲ್ಲಿ ಹರಿದು ಬಂದ ಭಾರೀ ಗಾತ್ರದ ಮರ, ಕಲ್ಲುಗಳು ಸಿಲುಕಿ ಕಿಂಡಿ ಅಣೆಕಟ್ಟುಗಳಿಗೆ ತೀವ್ರ ರೀತಿಯ ಹಾನಿಯಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿರುವುದು 43 ಕಿಂಡಿ ಅಣೆಕಟ್ಟುಗಳು. ಅವುಗಳಲ್ಲಿ 36 ಅಣೆಕಟ್ಟುಗಳು ಹಾನಿಗೊಳಗಾಗಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

2 ತಿಂಗಳೊಳಗೆ ನೀರು ನಿಲ್ಲಿಸಬೇಕು: ಮಳೆಗಾಲ ಅಂತ್ಯವಾಗುತ್ತಿರುವುದರಿಂದ ಕಿಂಡಿ ಅಣೆಕಟ್ಟುಗಳಲ್ಲಿ ಇನ್ನೊಂದೆರಡು ತಿಂಗಳೊಳಗೆ ಹಲಗೆ ಹಾಕಿ ನೀರು ನಿಲ್ಲಿಸಬೇಕಾಗುತ್ತದೆ. ಆದರೆ ಈಗ ಹಾನಿಗೀಡಾದ ಅಣೆಕಟ್ಟುಗಳಿಗೆ ತಾತ್ಕಾಲಿಕ ದುರಸ್ತಿ ಮಾತ್ರ ಮಾಡಿರುವುದರಿಂದ ಅದರಲ್ಲಿ ನೀರು ನಿಲ್ಲಿಸುವುದು ಕಷ್ಟಸಾಧ್ಯವಾಗಲಿದೆ. ಸರ್ಕಾರ ಕೂಡಲೆ ಮುತುವರ್ಜಿ ವಹಿಸಿ ಶಾಶ್ವತ ಕಾಮಗಾರಿಯನ್ನು ಈ ಅವಧಿಯೊಳಗೆ ಮಾಡಬೇಕು ಎಂದು ಬೆಳ್ತಂಗಡಿಯ ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳುತ್ತಾರೆ.

36 ಕಿಂಡಿ ಅಣೆಕಟ್ಟುಗಳು ಹಾನಿಯಾಗಿದ್ದರಿಂದ ಸುಮಾರು 500-600 ಎಕರೆ ಪ್ರದೇಶಕ್ಕೆ ಸಮಸ್ಯೆಯಾಗಬಹುದು ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ನವೆಂಬರ್‌ ಅಂತ್ಯದೊಳಗೆ ಶಾಶ್ವತ ಕಾಮಗಾರಿ ಮಾಡಿ ಹಲಗೆ ಹಾಕದಿದ್ದರೆ ರೈತರಿಗೆ ಸಮಸ್ಯೆಯಾಗಲಿದೆ. ಈಗಾಗಲೇ ಪ್ರವಾಹದಿಂದ ಸಂತ್ರಸ್ತರಾಗಿರುವವರಲ್ಲಿ ರೈತರೇ ಅಧಿಕ. ಅಣೆಕಟ್ಟಿನಲ್ಲಿ ನೀರು ನಿಲ್ಲಿಸಲು ಸಾಧ್ಯವಾಗದಿದ್ದರೆ ಈ ವರ್ಷ 600 ಎಕರೆಗಳಷ್ಟುಭೂಪ್ರದೇಶದ ಕೃಷಿಗೆ ಹೊಡೆತ ಬೀಳುವ ಸಾಧ್ಯತೆಗಳಿವೆ. ರೈತರು ಮತ್ತೊಂದು ಮಜಲಿನ ಕಷ್ಟಗಳಿಗೆ ಈಡಾಗಲಿದ್ದಾರೆ.

6 ದೊಡ್ಡ ಅಣೆಕಟ್ಟು ಪೂರ್ತಿ ಹಾನಿ: ‘‘ಪ್ರವಾಹದಿಂದ ಹಾನಿಗೀಡಾದ 36 ಅಣೆಕಟ್ಟುಗಳಲ್ಲಿ ಚಾರ್ಮಾಡಿ, ದಿಡುಪೆ, ಶಿಶಿಲ, ನೆರಿಯ ಕಡೆಗಳಲ್ಲಿರುವ 60- 70 ಮೀ. ಅಗಲದ ದೊಡ್ಡ ಮಟ್ಟದ ಆರು ಅಣೆಕಟ್ಟುಗಳು ದೊಡ್ಡ ಮಟ್ಟದಲ್ಲೇ ಹಾನಿಗೆ ಒಳಗಾಗಿವೆ. ಉಳಿದಂತೆ 15-50 ಮೀ. ಅಗಲದ ಅಣೆಕಟ್ಟುಗಳು ಸಣ್ಣಪುಟ್ಟಹಾನಿಗೆ ಒಳಗಾಗಿವೆ’’ ಎಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಕೃಷ್ಣ ಕುಮಾರ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

‘‘ಅನೇಕ ಕಡೆಗಳಲ್ಲಿ ನದಿಗಳು ಪಥ ಬದಲಿಸಿ ಹರಿದಿದ್ದರಿಂದ ಅನೇಕ ಕಿಂಡಿ ಅಣೆಕಟ್ಟುಗಳ ದಂಡೆ ಕೊರೆದು ಹೋಗಿದೆ. ಕೆಲವೆಡೆ ಮರ, ಬಂಡೆಗಳು ಬಡಿದು ಅಲ್ಪ ಹಾನಿ ಉಂಟಾಗಿದೆ. ಅವುಗಳನ್ನೆಲ್ಲ ತೆಗೆದು ತಾತ್ಕಾಲಿಕ ವ್ಯವಸ್ಥೆ ಮಾಡಿದ್ದೇವೆ. ಕೆಲವೆಡೆ ಹೂಳನ್ನೂ ಎತ್ತಿದ್ದೇವೆ. ಕಿಂಡಿ ಅಣೆಕಟ್ಟುಗಳು ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಹೋಗಲು ಹಳ್ಳಿಗರಿಗೆ ಸಂಪರ್ಕ ಸೇತುವೆಯಾಗಿಯೂ ಕಾರ್ಯ ನಿರ್ವಹಿಸುತ್ತಿವೆ. ಅದನ್ನೂ ತಾತ್ಕಾಲಿಕವಾಗಿ ಸರಿಪಡಿಸಿದ್ದೇವೆ’’ ಎಂದು ಹೇಳಿದರು.

ಕೊಚ್ಚಿಹೋದ ಹಲಗೆ ಶೆಡ್‌: ಅರಣ್ಯಪಾದೆ ಎಂಬಲ್ಲಿ ದೊಡ್ಡ ಕಿಂಡಿ ಅಣೆಕಟ್ಟಿಗೆ ಹಾಕಬೇಕಾದ ಸುಮಾರು 4 ಲಕ್ಷ ರು. ಮೌಲ್ಯದ ಹಲಗೆಗಳನ್ನು ಸ್ಟೋರ್‌ ರೂಮ್‌ನಲ್ಲಿಡಲಾಗಿತ್ತು. ಪ್ರವಾಹದಿಂದ ಈ ಹಲಗೆಯೂ ಕೊಚ್ಚಿ ಹೋಗಿದೆ. ಸರ್ಕಾರದ ಅನುದಾನ ಬಿಡುಗಡೆಯಾಗದಿದ್ದರೆ ಈ ಕಿಂಡಿ ಅಣೆಕಟ್ಟಿಗೆ ಈ ಬಾರಿ ಹಲಗೆ ಭಾಗ್ಯ ಸಿಕ್ಕಲ್ಲ.

ಸರ್ಕಾರಕ್ಕೆ 36 ಕೋಟಿ ಪ್ರಸ್ತಾವನೆ

ಹಾನಿಗೀಡಾದ ಕಿಂಡಿ ಅಣೆಕಟ್ಟುಗಳ ದುರಸ್ತಿಗೆ 36 ಕೋಟಿ ರು.ಗಳ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಈಗಾಗಲೇ ಕಳುಹಿಸಿಕೊಡಲಾಗಿದೆ. ಇನ್ನೂ ಅಲ್ಲಿಂದ ಒಪ್ಪಿಗೆ ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಸಾವಿರಾರು ಮಂದಿ ಸಂತ್ರಸ್ತರಿಗೆ ಪರಿಹಾರ ಕೊಡಿಸಬೇಕಾದ ಅನಿವಾರ್ಯತೆ ನಡುವೆ ಈ ಪ್ರಸ್ತಾವನೆಗೆ ಕೂಡಲೆ ಅನುಮೋದನೆ ಸಿಗುತ್ತದೋ ಕಾದು ನೋಡಬೇಕಿದೆ.

click me!