ಹೊನ್ನಾವರದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಸೆ. 23 ರಂದು ಪ್ರತಿಭಟನೆ

By Web Desk  |  First Published Sep 21, 2019, 10:55 AM IST

ಪಟ್ಟಣದಲ್ಲಿ ಮೇಲ್ಸೇ​ತುವೆ ನಿರ್ಮಾ​ಣಕ್ಕೆ ಆಗ್ರ​ಹಿಸಿ ಸೆ. 23ರಂದು ಪ್ರತಿಭಟನೆ| ಸಂಸದ ಅನಂತಕುಮಾರ ಹೆಗಡೆ, ಶಾಸಕ ದಿನಕರ ಶೆಟ್ಟಿ, ಶಾಸಕ ಸುನೀಲ ನಾಯ್ಕ ಮೇಲ್ಸೇತುವೆ ನಿರ್ಮಾಣಕ್ಕೆ ಬೆಂಬಲ ಸೂಚಿಸಿದ್ದಾರೆ| ಗಮನ ಸೆಳೆಯಲು ಮೆರವಣಿಗೆ ಆಯೋಜನೆ| ಮೆರವಣಿಗೆಯಲ್ಲಿ ಯಾವುದೇ ಸರ್ಕಾರ ಅಥವಾ ಮುಖಂಡರ ವಿರುದ್ಧ ಘೋಷಣೆ ಯಾರೂ ಕೂಗಬಾರದು| 


ಹೊನ್ನಾವರ:(ಸೆ.21) ಪಟ್ಟಣದಲ್ಲಿ ಚತುಷ್ಪಥ ಹೆದ್ದಾರಿಗೆ ಮೇಲ್ಸೇತುವೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಸರ್ಕಾರದ ಗಮನ ಸೆಳೆಯಲು ಸೆ. 23ರಂದು ಹೊನ್ನಾವರ ಪಟ್ಟಣದ ಎನ್‌ಎಚ್‌ 66 ಮೇಲ್ಸೇತುವೆ ಹೋರಾಟ ಸಮಿತಿ ವತಿಯಿಂದ ಕಾಲೇಜು ಸರ್ಕಲ್‌ದಿಂದ ಶರಾವತಿ ಸರ್ಕಲ್‌ವರೆಗೆ ಮೆರವಣಿಗೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಗುವುದು ಎಂದು ಸಮಿತಿಯ ಅಧ್ಯಕ್ಷ ಎಂ.ಎನ್‌.ಸುಬ್ರಹ್ಮಣ್ಯ ತಿಳಿಸಿದರು.


ಶುಕ್ರವಾರ ಪಟ್ಟಣದ ನ್ಯೂ ಇಂಗ್ಲಿಷ್‌ ಶಾಲಾ ಸಭಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೆರವಣಿಗೆ ಯಾವ ಸರ್ಕಾರದ ಅಥವಾ ಮುಖಂಡರ ವಿರುದ್ಧ ಅಲ್ಲ. ಜನರ ಬೇಡಿಕೆ ಇರುವುದನ್ನು ಸರ್ಕಾರದ ಗಮನ ಸೆಳೆಯಲು ಮೆರವಣಿಗೆ ಆಯೋಜಿಸಲಾಗಿದೆ ಎಂದರು. 

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 


ಸಂಸದ ಅನಂತಕುಮಾರ ಹೆಗಡೆ, ಶಾಸಕ ದಿನಕರ ಶೆಟ್ಟಿ, ಶಾಸಕ ಸುನೀಲ ನಾಯ್ಕ ಮೇಲ್ಸೇತುವೆ ನಿರ್ಮಾಣಕ್ಕೆ ಬೆಂಬಲ ಸೂಚಿಸಿದ್ದಾರೆ. ಸಮಿತಿ ಈಗಾಗಲೇ ಅವರನ್ನು ಭೇಟಿ ಮಾಡಿದ್ದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮೆರವಣಿಗೆಯಲ್ಲಿ ಯಾವುದೇ ಸರ್ಕಾರ ಅಥವಾ ಮುಖಂಡರ ವಿರುದ್ಧ ಘೋಷಣೆ ಯಾರೂ ಕೂಗಬಾರದು ಎಂದು  ವಿನಂತಿ ಮಾಡಿಕೊಂಡರು.


ಕೆಲವು ವರ್ಷಗಳ ಹಿಂದೆ ಶರಾವತಿ ವೃತ್ತದಲ್ಲಿ ಬೆಳ್ಳಂಬೆಳಿಗ್ಗೆ ಬಸ್‌ ಇಳಿಯುತ್ತಿರುವಾಗ ಹಿಂದಿನಿಂದ ವಾಹನ ಗುದ್ದಿ ನಾಲ್ವರು ಮೃತಪಟ್ಟಿದ್ದರು. ಆಗಿನಿಂದ ಪಟ್ಟಣದಲ್ಲಿ ಮೇಲ್ಸೇತುವೆ ಅಗತ್ಯವಿದೆ ಎಂಬ ಕೂಗು ಕೇಳಿಬರುತ್ತಿದೆ. ನಂತರ ಚತುಷ್ಪಥ ಹೆದ್ದಾರಿ ಕಾಮಗಾರಿಯಲ್ಲಿ ಮೇಲ್ಸೇತುವೆ ನಿರ್ಮಾಣ ಇದೆ ಎಂದು ತಿಳಿದು ಬಂದು ಅದು ನಿರ್ಮಾಣವಾಗಬಹುದು ಎಂದು ಭಾವಿಸಿದ್ದೇವು. ಆದರೆ ಕಾಲಕ್ರಮೇಣ ಅದನ್ನು ಕೈಬಿಟ್ಟಿರುವುದು ತಿಳಿದು ಬಂದಿತು ಎಂದು ತಿಳಿಸಿದರು.


ಮೇಲ್ಸೇತುವೆ ಆಗಲೇಬೇಕೆಂದು ಆಗ್ರಹಿಸಿ ಹಲವಾರು ಸಂಘ ಸಂಸ್ಥೆಗಳು ಮನವಿ ನೀಡಿದ್ದರೂ ಪ್ರಯೋಜನವಾಗಲಿಲ್ಲ. ನಂತರ ಹೋರಾಟ ಸಮಿತಿ ರಚಿಸಲಾಯಿತು. ಹೋರಾಟ ಸಮಿತಿ ಶಾಸಕ ದಿನಕರ ಶೆಟ್ಟಿಯವರನ್ನು ಭೇಟಿ ಮಾಡಿದಾಗ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಅವರ ಮೂಲಕ ಕೆಲವು ದಿನಗಳ ಹಿಂದೆ ಕುಮಟಾದಲ್ಲಿ ಸಂಸದರನ್ನು ಭೇಟಿ ಮಾಡಲಾಯಿತು ಎಂದು ಹೇಳಿದರು. 


ಸಂಸದ ಅನಂತಕುಮಾರ ಹೆಗಡೆ ಅಧಿಕಾರಿಗಳನ್ನು ಕರೆಯಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ರಾಜ್ಯ ಸರ್ಕಾರದ ಕಂದಾಯ ಸಚಿವರಿಗೂ ಕರೆ ಮಾಡಿ ಮಾತನಾಡಿದ್ದು ಅಲ್ಲಿಂದಲೂ ಸಕಾರಾತ್ಮಕ ಸ್ಪಂದನ ಸಿಕ್ಕಿದೆ. ಶಾಸಕ ಸುನೀಲ ನಾಯ್ಕ ಹಾಗೂ ಶಾಸಕ ದಿನಕರ ಶೆಟ್ಟಿಮುಖ್ಯಮಂತ್ರಿಯವರ ಬಳಿ ಈ ಕುರಿತು ಒತ್ತಡ ಹೇರುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದರು.


ಜೆ.ಟಿ.ಪೈ ಮಾತನಾಡಿ, ಹೊನ್ನಾವರ ಪಟ್ಟಣಕ್ಕೆ ಪ್ರತಿನಿತ್ಯ 12ಸಾವಿರ ವಿದ್ಯಾರ್ಥಿಗಳು ಬರುತ್ತಾರೆ.ಇವರಲ್ಲದೇ ಹಿರಿಯ ನಾಗರಿಕರು ಬರುತ್ತಾರೆ. ಮೇಲ್ಸೇತುವೆ ನಿರ್ಮಿಸದಿದ್ದರೆ ಪ್ರತಿನಿತ್ಯ ಸಾವು-ನೋವುಗಳ ಸರಮಾಲೆಯೇ ಸಂಭವಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು.


ಸುದ್ದಿಗೋಷ್ಠಿಯಲ್ಲಿ ಲೋಕೇಶ ಮೇಸ್ತ, ಸಂಜೀವ ಕಾಮತ, ಎಂ.ಜಿ.ನಾಯ್ಕ, ರಘು ಪೈ, ಎಚ್‌.ಆರ್‌.ಗಣೇಶ, ಜಗದೀಪ ತೆಂಗೇರಿ, ಸತ್ಯ ಜಾವಗಲ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

click me!