ರಾಜ್ಯಾದ್ಯಂತ ಫ್ಲೆಕ್ಸ್ ವಿವಾದದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ಡಾ.ಕೆ.ವಿ.ರಾಜೇಂದ್ರ ಅಧಿಕಾರಿಗಳ ಸಭೆ ನಡೆಸಿ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಗಳೂರು (ಆ.19): ರಾಜ್ಯಾದ್ಯಂತ ಫ್ಲೆಕ್ಸ್ ವಿವಾದದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ಡಾ.ಕೆ.ವಿ.ರಾಜೇಂದ್ರ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಮಂಗಳೂರು ಕಮಿಷನರ್ ಶಶಿಕುಮಾರ್, ಎಸ್ಪಿ ಹೃಷಿಕೇಶ್, ಜಿ. ಪಂ ಸಿಇಓ ಕುಮಾರ್, ಪಾಲಿಕೆ ಕಮಿಷನರ್ ಅಕ್ಷಯ್ ಶ್ರೀಧರ್ ಭಾಗಿಯಾದ ಈ ಸಭೆಯಲ್ಲಿ ಜಿಲ್ಲೆಯಲ್ಲಿ ಫ್ಲೆಕ್ಸ್ ಅಳವಡಿಕೆ ಸಂಬಂಧ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ಅನಧಿಕೃತ ಮತ್ತು ವಿವಾದಾತ್ಮಕ ಫ್ಲೆಕ್ಸ್ ತೆರವಿಗೆ ಡಿಸಿ ರಾಜೇಂದ್ರ ಸೂಚನೆ ನೀಡಿದ್ದಾರೆ. ಅಧಿಕಾರಿಗಳ ಸಭೆ ಬಳಿಕ ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹೇಳಿಕೆ ನೀಡಿದ್ದು, ಜಿಲ್ಲೆ ಕೋಮುಸೂಕ್ಷ್ಮ ಪ್ರದೇಶವಾಗಿರೋ ಕಾರಣ ಅಧಿಕಾರಿಗಳ ಸಭೆ. ಅಧಿಕೃತ ಜಾಗಗಳಲ್ಲಿ ಬ್ಯಾನರ್ ಅಳವಡಿಗೆ ಅವಕಾಶ ನೀಡಬೇಕು. ಅದರಲ್ಲಿ ವಿವಾದಾತ್ಮಕ ವಿಷಯಗಳಿದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು. ಅನಧಿಕೃತ ಫ್ಲೆಕ್ಸ್ ಹಾಕಿದ್ರೆ ನಿರ್ದಾಕ್ಷಿಣ್ಯವಾಗಿ ತೆರವು ಮಾಡಬೇಕು. ಅನಧಿಕೃತ ಫ್ಲೆಕ್ಸ್ ಗಳ ಬಗ್ಗೆ ಕಂದಾಯ, ಪೊಲೀಸ್ ಇಲಾಖೆ, ಪಾಲಿಕೆ ಸಮನ್ವಯಕ್ಕೆ ಸೂಚನೆ ನೀಡಲಾಗಿದೆ.
ಅನಧಿಕೃತ ಫ್ಲೆಕ್ಸ್ ಗಳನ್ನು ತೆರವು ಮಾಡಲು ಸಮಯ ತೆಗೆದುಕೊಳ್ಳಬಾರದು. ಬೀಟ್ ಪೊಲೀಸರು ತಕ್ಷಣ ಅಂಥವುಗಳನ್ನ ತೆರವು ಮಾಡಬೇಕು. ಅನಧಿಕೃತ ಫ್ಲೆಕ್ಸ್ ತೆರವಿಗೆ ತಂಡ ರಚಿಸಿ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತದೆ. ಪೊಲೀಸ್ ಇಲಾಖೆ ಮತ್ತು ಕಂದಾಯ ತಂಡದಿಂದ ಕಾರ್ಯಾಚರಣೆ ನಡೆಯುತ್ತೆ. ಅನಧಿಕೃತ ಫ್ಲೆಕ್ಸ್ ಹಾಕಿದವರ ವಿರುದ್ದ ಪೊಲೀಸ್ ವರದಿಯನ್ವಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾವರ್ಕರ್ ಆಯ್ತು, ಈಗ ಗೋಡ್ಸೆ ಫ್ಲೆಕ್ಸ್: ಮಂಗಳೂರಿನಲ್ಲಿ ಹಿಂದೂ ಮಹಾಸಭಾದಿಂದ ಗೋಡ್ಸೆಗೆ ಗೌರವ!
ಮಂಗಳೂರಲ್ಲಿ ಸಾವರ್ಕರ್ ಜತೆ ಗೋಡ್ಸೆ ಬ್ಯಾನರ್ ಪ್ರತ್ಯಕ್ಷ!
ಮಂಗಳೂರಿನಲ್ಲಿ ವಿನಾಯಕ ದಾಮೋದರ್ ಸಾವರ್ಕರ್ ಬ್ಯಾನರ್ ಜತೆ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಬ್ಯಾನರ್ ಪ್ರತ್ಯಕ್ಷವಾಗಿದ್ದು, ವಿವಾದಕ್ಕೆ ಕಾರಣವಾಗಿದೆ. ಮಂಗಳೂರಿನ ಸುರತ್ಕಲ್, ಬೈಕಂಪಾಡಿ, ಕೂಳೂರು ಭಾಗದಲ್ಲಿ ಗುರುವಾರ ಗೋಡ್ಸೆ ಚಿತ್ರ ಇರುವ ಬ್ಯಾನರ್ ಅಳವಡಿಸಲಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿಗೆ ಶುಭ ಕೋರುವ ನೆಪದಲ್ಲಿ ಗೋಡ್ಸೆಗೆ ಗೌರವ ಸೂಚಿಸಲಾಗಿದೆ.
ಗಣೇಶ ಹಬ್ಬಕ್ಕೆ ಧಾರವಾಡ ಸಜ್ಜು: ಫ್ಲೆಕ್ಸ್, ಬ್ಯಾನರ್ ನಿಷೇಧ, ಮೈಕ್ ಬಳಕೆಗೆ ರಾತ್ರಿ 10ರವರೆಗೆ ಅವಕಾಶ
ಹಿಂದೂ ಮಹಾಸಭಾ ಹೆಸರಿನಲ್ಲಿ ಮಂಗಳೂರಿನ ಹಲವೆಡೆ ಫ್ಲೆಕ್ಸ್ ಅಳವಡಿಸಲಾಗಿದೆ. ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಹೆಸರಿನಲ್ಲಿ ಈ ಬ್ಯಾನರ್‌ಗಳನ್ನು ಹಾಕಲಾಗಿದೆ. ‘ರಾಜಕೀಯವನ್ನು ಹಿಂದುತ್ವಗೊಳಿಸಿ, ಹಿಂದೂಗಳನ್ನು ಸೈನಿಕೀಕರಣಗೊಳಿಸಿ’ ಎಂಬ ಬರಹದ ಜತೆ ಸಾವರ್ಕರ್ ಹಾಗೂ ಗೋಡ್ಸೆ ಫೋಟೋ ಹಾಕಲಾಗಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರ ಗಮನಕ್ಕೆ ತಂದಿದ್ದು, ಈ ಕುರಿತು ಹಿಂದೂ ಮಹಾಸಭಾಗೆ ಪೊಲೀಸರು ನೋಟಿಸ್ ಜಾರಿಗೊಳಿಸಿ, ಬ್ಯಾನರ್ ತೆರವುಗೊಳಿಸಲು ಕ್ರಮ ಕೈಗೊಂಡಿದ್ದಾರೆ.