ಸಮುದಾಯಗಳಿಗೆ ನ್ಯಾಯ ಒದಗಿಸದಿದ್ದರೆ ಬಿಜೆಪಿ ಮಿಷನ್ 150 ತಲುಪಲ್ಲ: ಜಯ ಮೃತ್ಯುಂಜಯ ಸ್ವಾಮೀಜಿ

By Gowthami KFirst Published Aug 19, 2022, 6:51 PM IST
Highlights

ಕುರುಬ, ವಾಲ್ಮೀಕಿ , ಪಂಚಮಸಾಲಿ ಈ  ಮೂರೂ ಅತಿ ದೊಡ್ಡ ಸಮಾಜಗಳಿಗೆ ನ್ಯಾಯ ಕೊಡದಿದ್ದರೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ 150 ಮಿಷನ್ ತಲುಪೋದು ಸಾಧ್ಯವಿಲ್ಲ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ವರದಿ: ಪವನ್ ಕುಮಾರ್ , ಏಷ್ಯಾನೆಟ್ ಸುವರ್ಣ ನ್ಯೂಸ್ 

ಹಾವೇರಿ (ಅಗಸ್ಟ್ 19): ಕುರುಬ, ವಾಲ್ಮೀಕಿ , ಪಂಚಮಸಾಲಿ ಇವು ಮೂರು ದೊಡ್ಡ ಸಮುದಾಯಗಳಾಗಿದ್ದು, ಬಿಜೆಪಿ ಸರ್ಕಾರ ಈ ಮೂರು ಸಮಾಜಗಳ ಬೇಡಿಕೆಗಳಿಗೆ ಸ್ಪಂದಿಸಬೇಕು.  ಪಂಚಮಸಾಲಿ ಸಮಾಜದ ಜೊತೆ ವಾಲ್ಮೀಕಿ , ಕುರುಬ ಸಮಾಜದವರೂ ಮೀಸಲಾತಿ ಹೋರಾಟ ಮಾಡ್ತಿದ್ದಾರೆ. ಈ  ಮೂರೂ ಅತಿ ದೊಡ್ಡ ಸಮಾಜಗಳಿಗೆ ನ್ಯಾಯ ಕೊಡದಿದ್ದರೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ 150 ಮಿಷನ್ ತಲುಪೋದು ಸಾಧ್ಯವಿಲ್ಲ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಹಾವೇರಿಯಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯದ ಜೊತೆಗೆ ವಾಲ್ಮೀಕಿ , ಕುರುಬ ಸಮಾಜದವರಿಗೂ ಸರ್ಕಾರ ನ್ಯಾಯ ವದಗಿಸಲಿ ಎಂದರು.  ಪಂಚಮಸಾಲಿ  ಸಮಾಜಕ್ಕೆ 2A ಮೀಸಲಾತಿ ನೀಡುವಂತೆ ಆಗ್ರಹಿಸಿ ಕಳೆದ ಜೂನ್ 27 ರಂದು ಉಪವಾಸ ಸತ್ಯಾಗ್ರಹವನ್ನು ಮಾಡಲು ತೀರ್ಮಾನ ಮಾಡಲಾಗಿತ್ತು. ಮುಖ್ಯಮಂತ್ರಿಗಳು ಮೂರು ಸಲ ಮಾತುಕತೆ ಕರೆದರೂ ನಾವು ಹೋಗಿರಲಿಲ್ಲ. ಆದರೆ ಸಚಿವ ಸಿ.ಸಿ ಪಾಟೀಲ್ ಮನವಿ ಮೇರೆಗೆ ಯತ್ನಾಳ್ ಸೇರಿದಂತೆ ನಾವೆಲ್ಲಾ ಸಿಎಂ ಜೊತೆ ಮಾತುಕತೆ ನಡೆಸಿದ್ದೆವು. 6 ತಿಂಗಳು ಅವಕಾಶ ಮಾಡಿಕೊಡಿ ,ಆಯೋಗದವರು ಹಾವೇರಿ ಜಿಲ್ಲೆಯಲ್ಲಿ ಅದ್ಯಯನ ಮಾಡ್ತಿದ್ದಾರೆ ಎಂದು ಸಿಎಂ ಕೇಳಿಕೊಂಡರು. ಆದರೆ 6 ತಿಂಗಳು ಆಗಲ್ಲ, 2 ತಿಂಗಳು ಕಾಲಾವಕಾಶ ಕೊಡ್ತೀವಿ ಎಂದು ಒಪ್ಪಿಕೊಂಡೆವು.ಸಿಎಂ ಮನವಿ ಮೇರೆಗೆ ನಾವು ಸತ್ಯಾಗ್ರಹ 2 ತಿಂಗಳು ಮುಂದೂಡಿದೆವು.

ಅಗಸ್ಟ್ 22 ಕ್ಕೆ ಸರ್ಕಾರಕ್ಕೆ ಕೊಟ್ಟ ಕಾಲಾವಕಾಶ ಮುಗೀತು. 2 ತಿಂಗಳಲ್ಲಿ ಮೀಸಲಾತಿ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳದಿದ್ದರೆ ಯತ್ನಾಳ್ ಅವರು ನಾನೇ ಬಂದು ಸಿಎಂ ಮನೆ ಮುಂದೆ ಹೋರಾಟ ಮಾಡ್ತೀನಿ ಅಂತ ಹೇಳಿದ್ದಾರೆ. ಸಿಎಂ ನಾಲ್ಕನೇ ಬಾರಿ ಮಾತು ಕೊಟ್ಟ ಹಾಗೆ ನಡೆದು ಕೊಳ್ಳಬೇಕು. ನಾವು 2 ತಿಂಗಳು ಸುಮ್ಮನೆ ಕುಳಿತಿಲ್ಲ.ಶ್ರಾವಣ ಅಂತ ಮೈ ಮರೆತಿಲ್ಲ.ಹುಬ್ಬಳ್ಳಿ ಚೆನ್ನಮ್ಮ ಸರ್ಕಲ್ ನಲ್ಲಿ ಸತ್ಯಾಗ್ರಹ ಮಾಡಿದ್ದೆವು. ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಪ್ರಹ್ಲಾದ ಜೋಷಿಯವರ ಮೇಲೂ ಒತ್ತಡ ಹಾಕಿದ್ದೇವೆ. ಈ ತಿಂಗಳು ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿಕೊಡುವ ದೃಷ್ಟಿಯಿಂದ ಶಿವಮೊಗ್ಗದಲ್ಲಿ ಹೋರಾಟ ಶುರು ಮಾಡಿಕೊಂಡಿದ್ದೇವೆ.
ಯಡಿಯೂರಪ್ಪನವರ ಮೂಲಕ ಸಿಎಂ ಮೇಲೆ ಒತ್ತಡ ಹಾಕಲು ಶಿವಮೊಗ್ಗ ಜಿಲ್ಲೆಯಲ್ಲಿ ಹೋರಾಟ ಮಾಡಲಾಗ್ತಿದೆ ಎಂದರು. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡದಿದ್ದರೆ ಅಗಸ್ಟ್ 23 ಕ್ಕೆ ಶಿಗ್ಗಾವಿಯಲ್ಲಿ ಬೃಹತ್ ಹೋರಾಟ

ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪ್ರಾರಂಭದಲ್ಲೇ ಐದು ಪೀಠಗಳ ಮಾಡುವ ಚಿಂತನೆ: ಬಿ.ಸಿ.ಉಮಾಪತಿ

ಸಿಎಂ ಬೊಮ್ಮಾಯಿಯವರ ಮೇಲೆ ಬಹಳ‌ ನಂಬಿಕೆ ಇಟ್ಟಿದ್ದೇವೆ. ಪದೇ ಪದೇ ಮಾತು ಕೊಟ್ಟು ಹೋರಾಟದ ಕಾವು ಕಡಿಮೆ ಮಾಡಲು ಸರ್ಕಾರ ಪ್ರಯತ್ನ ಮಾಡಬಾರದು. ಮೀಸಲಾತಿ ಕೊಡೋಕಾದರೆ ಕೊಟ್ಟು ಬಿಡಿ. ಇಲ್ಲದಿದ್ದರೆ ಕೊಡೋಕೆ ಆಗಲ್ಲ ಅಂತ ಹೇಳಿಬಿಡಿ. ಅಗಸ್ಟ್ 22 ನೇ ತಾರೀಖು ಮದ್ಯರಾತ್ರಿವರೆಗೂ ಕಾಯುತ್ತೇವೆ. ನಿಮ್ಮ ಸಿಹಿ ಸುದ್ದಿಗಾಗಿ ಕಾಯುತ್ತೇವೆ. ವಿನಾಕಾರಣ ವಿಳಂಬ ಮಾಡದೇ ಮೀಸಲಾತಿ ಘೋಷಣೆ ಮಾಡಿ. ವಿಜಯಪುರ , ಧಾರವಾಡ, ಭಾಗಲಕೋಟೆ ಜಿಲ್ಲೆಗಳಲ್ಲಿ  ಇನ್ನೂ ಆಯೋಗದ ಸಮೀಕ್ಷೆ ನಡೆದಿಲ್ಲ. ಅಗಸ್ಟ್ 22 ಕ್ಕೆ ಮೀಸಲಾತಿ  ಘೋಷಣೆ ಮಾಡಿದರೆ ಮಾರನೇ ದಿನ ಶಿಗ್ಗಾವಿಯ ಚೆನ್ನಮ್ಮ ಸರ್ಕಲ್ ನಲ್ಲಿ  ಸನ್ಮಾನ ಮಾಡ್ತೀವಿ.

ಸಿಎಂ ಬೊಮ್ಮಾಯಿಗೆ ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಗಡುವು ನೆನಪಿಸಿದ ಕಾಶಪ್ಪನವರ

ಶಿಗ್ಗಾವಿ ಚೆನ್ನಮ್ಮ ಸರ್ಕಲ್ ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಟೌಟಿಗೆ ಹಾಲಿನ ಅಭಿಷೇಕ ಮಾಡ್ತೀವಿ. ಮೀಸಲಾತಿ ಘೋಷಣೆ ಮಾಡದೇ ಇದ್ದರೆ ಅಗಸ್ಟ್ 23 ರಂದೇ ಹೋರಾಟ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದರು. ಸಿಎಂ ತಮ್ಮ ಇಚ್ಚಾಶಕ್ತಿಯ ಮೂಲಕ ಘೋಷಣೆ ಮಾಡಲಿ. ಸಿ.ಸಿ ಪಾಟೀಲ್ ಹಾಗೂ ಯತ್ನಾಳ್ ಅವರ ಮೇಲೆ ನಾವು ಒತ್ತಡ ಹಾಕ್ತಿದ್ದೇವೆ. ಮೊನ್ನೆ ಯತ್ನಾಳ ಅವರನ್ನು ಕರೆ ದು ಸಿಎಂ 2 ಎ ಮೀಸಲಾತಿ ಕುರಿತು ಚರ್ಚೆ ಮಾಡಿದ್ದಾರೆ. ಮೀಸಲಾತಿ ನೀಡುವಂತೆ ಯತ್ನಾಳ ಕೂಡಾ ಮನವಿ ಮಾಡಿದ್ದಾರೆ.ಹೋರಾಟಕ್ಕೆ ಇತಿಶ್ರೀ ಹಾಡುವ ನಿರ್ಧಾರ ಮಾಡುತ್ತೇವೆ. ಕೂತು ಚರ್ಚೆ ಮಾಡಿ ನಿರ್ಧಾರ ಮಾಡ್ತೀವಿ ಸತ್ಯಾಗ್ರಹವೋ, ಶಿಗ್ಗಾವಿ ಬಂದ್ ಮಾಡಬೇಕೋ ಅಂದೇ ನಿರ್ಧಾರ ಮಾಡ್ತೀವಿ ಎಂದರು.

click me!