
ಗುಬ್ಬಿ : ಕೃಷಿ ಜೊತೆ ಹೈನುಗಾರಿಕೆ ಆರ್ಥಿಕ ಸದೃಢತೆಗೆ ಸಹಕಾರಿಯಾಗಿದೆ. ಕುಟುಂಬ ನಿರ್ವಹಣೆ ಮಾಡುವ ಮಹಿಳೆಯರಿಗೆ ಹಣಕಾಸು ವ್ಯವಸ್ಥೆಗೆ ಪಶು ಸಂಗೋಪನೆ ಉತ್ತಮ ದಾರಿಯಾಗಿದೆ ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಅಭಿಪ್ರಾಯಪಟ್ಟರು.
ತಾಲೂಕಿನ ಸಿ.ಎಸ್.ಪುರ ಹೋಬಳಿ ಗದ್ದೇಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು 29 ಲಕ್ಷ ರು. ಗಳಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಂಡ ಮಹಿಳಾ ಸಂಘ ಈ ಗ್ರಾಮದಲ್ಲಿ ಚುರುಕಿನ ಕೆಲಸ ಮಾಡುತ್ತಿದೆ. ಈ ಹೋಬಳಿಯಲ್ಲಿ ಅತೀ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದೆ ಎಂಬುದು ಇಲ್ಲಿನ ರೈತರ ಹೆಮ್ಮೆ ವಿಚಾರ ಎಂದರು.
ಕೃಷಿಕ ವರ್ಗಕ್ಕೆ ಈಗಾಗಲೇ ಸೂಕ್ತ ಮಾರುಕಟ್ಟೆಸಿಗುತ್ತಿಲ್ಲ. ಬೆಳೆಗೆ ವೈಜ್ಞಾನಿಕ ಬೆಲೆ ಸಿಗದ ಈ ಸಮಯದಲ್ಲಿ ಹಾಲು ಉತ್ಪಾದನೆಗೆ ಉತ್ತಮ ಬೆಲೆ ಸಿಗುತ್ತಿದೆ. ಈ ಚಟುವಟಿಕೆಗೆ ಮಹಿಳೆಯರು ಭಾಗಿಯಾಗಿರುವುದು ಲಾಭದಾಯಕ ಎಂದ ಅವರು ಗಂಟು ರೋಗದಿಂದ ಬಳಲಿದ ರಾಸುಗಳು ಈಗಾಗಲೇ ಮೃತ ಪಡುತ್ತಿವೆ. ಈ ಹಿನ್ನಲೆ ಹಾಲು ಉತ್ಪಾದನೆ ಇಳಿಮುಖವಾಗಿದೆ. ಇಂತಹ ಸಂದರ್ಭದಲ್ಲಿ ಹಸುಗಳನ್ನು ಹಾರೈಕೆ ಮಾಡುವ ಕೆಲಸ ಮಾಡಬೇಕು. ರೋಗ ಕಾಣಿಸಿಕೊಂಡ ರಾಸುಗಳನ್ನು ಸ್ವಲ್ಪ ಅಂತರ ಕಾದು ನೋಡಿಕೊಳ್ಳಬೇಕು. ಗ್ರಾಮದಲ್ಲಿ ನಾನು ಸಹ ಡೈರಿ ಮೂಲಕವೇ ರಾಜಕಾರಣಕ್ಕೆ ಬಂದಿದ್ದೇನೆ. ಡೈರಿಗಳಲ್ಲಿ ಸಲ್ಲದ ರಾಜಕಾರಣ ಬೆರೆಯದಂತೆ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ತುಮಕೂರು ಹಾಲು ಒಕ್ಕೂಟ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ಕೃಷಿಕ ವರ್ಗಕ್ಕೆ ಸದ್ಯ ಸೂಕ್ತ ಮಾರುಕಟ್ಟೆಸಿಗುತ್ತಿಲ್ಲ. ಬೆಳೆದ ಕೃಷಿ ಬೆಳೆಗೆ ವೈಜ್ಞಾನಿಕ ಬೆಲೆ ಬರುತ್ತಿಲ್ಲ. ಆದರೆ ಮನೆ ಬಾಗಿಲಿಗೆ ಡೈರಿ ನೀಡಿ ಹಾಲುಕೊಳ್ಳುವ ವ್ಯವಸ್ಥೆ ನಮ್ಮ ಒಕ್ಕೂಟ ಮಾಡಿದೆ. ಈ ಜೊತೆಗೆ ಯಡಿಯೂರಪ್ಪ ಅವರು ನೀಡಿದ ಎರಡು ರು. ಗಳ ಪ್ರೋತ್ಸಾಹಧನ ನೀಡಿದ್ದು ಇಂದು ಐದು ರು.ಗಳಿಗೆ ಏರಿಕೆಯಾಗಿ ನೇರ ಖಾತೆಗೆ ಕೊಡಲಾಗುತ್ತಿದೆ ಎಂದ ಅವರು ತುರುವೇಕೆರೆ ಕ್ಷೇತ್ರಕ್ಕೆ ಮಸಾಲಾ ಜಯರಾಮ್ ನೀಡಿರುವ ಕೊಡುಗೆ ಅಪಾರ. ನೆನೆಗುದಿಗೆ ಬಿದ್ದ ಕೆಲಸಗಳು ಕಾರ್ಯಗತ ಮಾಡಿದ್ದಾರೆ. ಅವರನ್ನು ಮತ್ತೊಮ್ಮೆ ಗೆಲ್ಲಿಸಿ ಸಚಿವರಾಗಿ ಕೆಲಸ ಮಾಡಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಮಹಿಳಾ ಸಂಘದ ಅಧ್ಯಕ್ಷೆ ಹುಚ್ಚಮ್ಮ, ತುಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ಪಿ.ಸುರೇಶ್, ವ್ಯವಸ್ಥಾಪಕ ಡಾ.ಟಿ.ಎಂ.ಪ್ರಸಾದ್, ಉಪ ವ್ಯವಸ್ಥಾಪಕ ಚಂದ್ರಶೇಖರ್, ವಿಸ್ತರಣಾಧಿಕಾರಿ ಸಿದ್ದಲಿಂಗಸ್ವಾಮಿ, ಮಂಜುನಾಥ್, ಪುಷ್ಪಲತಾ, ಸಂಘದ ಮುಖ್ಯ ಕಾರ್ಯನಿರ್ವಾಹಕಿ ಲಕ್ಷ್ಮೀದೇವಿ, ಹಾಲು ಪರೀಕ್ಷಕಿ ನೇತ್ರಾವತಿ ಇತರರು ಇದ್ದರು.
ಬೇಸಿಗೆಯ ಈ ಸಮಯದಲ್ಲಿ ಹಾಲು ಉತ್ಪಾದನೆ ಕ್ಷೀಣಿಸಿದೆ. ಈ ಜೊತೆಗೆ ಗಂಟು ರೋಗ ಸಹ ಹೈನುಗಾರಿಕೆಗೆ ಪೆಟ್ಟು ನೀಡಿದೆ. ಇದರ ಬಗ್ಗೆ ರೈತರು ನಿಗಾ ವಹಿಸಬೇಕು. ಹಾಲು ಕಡಿಮೆಯಾದರೂ ಗ್ರಾಹಕರಿಗೆ ಹಾಲು ವಿತರಣೆ ಮಾಡುತ್ತಿದ್ದೇವೆ. ಇತರೆ ಉತ್ಪನ್ನಗಳನ್ನು ಕಡಿಮೆಗೊಳಿಸಿ ಹಾಲು ವಿತರಣೆ ವ್ಯವಸ್ಥೆ ಮಾಡಲಾಗುವುದು. ಈ ನಡುವೆ ತುಮುಲ್ ಲಾಭದಾಯಕಗೊಳಿಸಲು ಸಾಕಷ್ಟುಶ್ರಮ ವಹಿಸಿದ್ದೇವೆ. ಉತ್ಪಾದಕರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಸಹಾಯ, ರಾಸು, ರೈತರಿಗೆ ವಿಮೆ, ಅಕಾಲಿಕ ಮರಣಕ್ಕೆ ಪರಿಹಾರ ಹೀಗೆ ಅನೇಕ ಸವಲತ್ತು ಒಕ್ಕೂಟ ನೀಡುತ್ತಿದೆ.
ಮಹಾಲಿಂಗಯ್ಯ ಅಧ್ಯಕ್ಷ, ತುಮಕೂರು ಹಾಲು ಉತ್ಪಾದಕ ಒಕ್ಕೂಟ