
ಕೆಲವೊಮ್ಮೆ ಅದೃಷ್ಟ ಎನ್ನುವುದು ಯಾವ ರೂಪದಲ್ಲಿಯಾದರೂ ಬರುತ್ತದೆ. ಆಯಸ್ಸು ಗಟ್ಟಿಯಾಗಿದ್ದರೆ, ಜೀವ ಉಳಿಸಲು ಒಂದು ಹುಲ್ಲುಕಡ್ಡಿಯೂ ಸಾಕು ಎನ್ನುವ ಮಾತೇ ಇದೆ. ಆದರೆ ಉಡುಪಿಯ ವೃದ್ಧರೊಬ್ಬರಿಗೆ ಹುಲ್ಲುಕಡ್ಡಿಯಲ್ಲ, ಬದಲಿಗೆ ಗ್ಯಾಸ್ ಸಿಲಿಂಡರ್ ಓಟಿಪಿ ಜೀವ ಕಾಪಾಡಿದೆ! ಮೂರು ದಿನಗಳಿಂದ ಬಾವಿಯಲ್ಲಿ ಬಿದ್ದು ನರಕಯಾತನೆ ಅನುಭವಿಸಿದ್ದ ವ್ಯಕ್ತಿಗೆ ಓಟಿಪಿ ಜೀವ ನೀಡಿದೆ. ವಿಚಿತ್ರ ಎನ್ನಿಸಿದರೂ ಸತ್ಯ ಘಟನೆ ಇದಾಗಿದ್ದು, ಈಗ ಪವಾಡ ಸದೃಶರಾಗಿ ಬದುಕಿಬಂದವರು 62 ವರ್ಷದ ಶ್ರೀನಿವಾಸ ಆಚಾರ್ಯ ಅವರು. ಉಡುಪಿಯ ಕಂಬಳಕಟ್ಟೆಯಲ್ಲಿ ಈ ಘಟನೆ ನಡೆದಿದೆ.
ಶ್ರೀನಿವಾಸ ಆಚಾರ್ಯ ಅವರು ಒಂಟಿಯಾಗಿ ವಾಸವಾಗಿದ್ದರು. ಅವರು ಮೂರು ದಿನಗಳ ಹಿಂದೆ ನೀರು ತರುವುದಕ್ಕಾಗಿ ಬಾವಿಗೆ ಹೋಗಿದ್ದರು. ಆ ಸಮಯದಲ್ಲಿ ಹಗ್ಗ ತುಂಡಾಗಿ 20 ಅಡಿ ಆಳದ ನೀರಿರುವ ಬಾವಿಗೆ ಬಿದ್ದು ಬಿಟ್ಟಿದ್ದಾರೆ. ಮೇಲೆ ಬರಲು ಎಲ್ಲಾ ರೀತಿಯ ಸಾಹಸ ಪಟ್ಟರೂ ಅದು ಸಾಧ್ಯವಾಗಲಿಲ್ಲ. ಅವರ ಕೂಗು ಕೂಡ ಸಮೀಪದಲ್ಲಿ ಯಾರಿಗೂ ಕೇಳಿಸಲಿಲ್ಲ. ಒಂದು ಹಂತದಲ್ಲಿ ಅವರು ಜೀವದ ಆಸೆಯನ್ನೇ ಬಿಟ್ಟುಬಿಟ್ಟಿದ್ದರು. ಆ ಬಾವಿಯ ಕಡೆಗೆ ಬೇರೆಯವರು ಬಾರದ ಕಾರಣ, ಹಾಗೂ ಶ್ರೀನಿವಾಸ್ ಅವರು ಒಬ್ಬರೇ ವಾಸವಾಗಿದ್ದ ಕಾರಣ, ಅವರು ಎಲ್ಲಿ ಹೋದರು ಎಂದು ತಿಳಿಯುವವರೂ ಯಾರೂ ಇಲ್ಲವಾಗಿದ್ದರು. ಬಾವಿಯಿಂದ ಮೇಲಕ್ಕೆ ಬರಲು ಬಾವಿಯೊಳಗಿದ್ದ ಫುಟ್ ಬಾಲ್ ಪೈಪ್ ಹಾಗೂ ಅದಕ್ಕೆ ಕಟ್ಟಿದ್ದ ಹಗ್ಗ ಹಿಡಿದುಕೊಂಡಿದ್ದರು. ಆದರೂ ಯಾರಿಗೂ ಅವರು ಬಾವಿಯಲ್ಲಿ ಬಿದ್ದದ್ದು ತಿಳಿಯಲೇ ಇಲ್ಲ.
ಇಲ್ಲಿಯೇ ಇರುವುದು ರೋಚಕ ಟರ್ನ್. ಶ್ರೀನಿವಾಸ್ ಅವರು ಗ್ಯಾಸ್ ಬುಕ್ ಮಾಡಿದ್ದರು. ಆದರೆ ಗ್ಯಾಸ್ ಸಮಸ್ಯೆ ಇದ್ದುದರಿಂದ ಅದು ಬಂದಿರಲಿಲ್ಲ. ಆದ್ದರಿಂದ ಶ್ರೀನಿವಾಸ್ ಅವರು, ತಮ್ಮ ಪರಿಚಯದ ಗಣೇಶ್ ಎನ್ನುವವರ ಬಳಿ ಇದ್ದ ಹೆಚ್ಚುವರಿ ಸಿಲಿಂಡರ್ ಪಡೆದುಕೊಂಡಿದ್ದರು. ಮೂರ್ನಾಲ್ಕು ದಿನಗಳಾದರೂ ಸಿಲಿಂಡರ್ ಬಂದಿರಲಿಲ್ಲ. ಬಳಿಕ ಗಣೇಶ್ ಅವರಿಗೆ ಗ್ಯಾಸ್ ಅಗತ್ಯ ಇದ್ದುದರಿಂದ ಗ್ಯಾಸ್ ಎಜೆನ್ಸಿಗೆ ಕರೆ ಮಾಡಿ ಭಟ್ಟರಿಗೆ ಗ್ಯಾಸ್ ಸಿಲಿಂಡರ್‌ವೊಂದು ಆದಷ್ಟು ಬೇಗ ನೀಡುವಂತೆ ಮನವಿ ಮಾಡಿದ್ದರು. ಇದಾದ ಬಳಿಕ ಗ್ಯಾಸ್ ಸಿಬ್ಬಂದಿ ಸಿಲಿಂಡರ್ ತೆಗೆದುಕೊಂಡು ಶ್ರೀನಿವಾಸ್ ಆಚಾರ್ ಅವರ ಮನೆಗೆ ಹೋದರು, ಆದರೆ ಅವರು ಅಲ್ಲಿ ಇರದ ಕಾರಣ ವಾಪಸಾದರು.
ಆದರೆ ಈ ವಿಷಯ ಗಣೇಶ್ ಅವರಿಗೆ ತಿಳಿದಿರಲಿಲ್ಲ. ಪುನಃ ಗ್ಯಾಸ್ ಏಜೆನ್ಸಿಗೆ ಕಾಲ್ ಮಾಡಿದಾಗ, ಅವರ ಮನೆಗೆ ಎರಡು ದಿನಗಳ ಹಿಂದೆ ಹೋಗಿದ್ದೆ. ಓಟಿಪಿ ಬೇಕಿತ್ತು. ಆದರೆ ಮನೆಯಲ್ಲಿ ಯಾರೂ ಇರಲಿಲ್ಲ ಎಂದಾಗ ಸಂದೇಹಗೊಂಡ ಗಣೇಶ್ ಅವರು ಸಮೀಪವೇ ಇದ್ದ ಶ್ರೀನಿವಾಸ್ ಅವರ ಮನೆಗೆ ಹೋಗಿದ್ದಾರೆ. ಆದರೆ ಅಲ್ಲಿ ಅವರು ಇಲ್ಲದಾಗ ಸಂದೇಹ ಬಂದಿದೆ. ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಗ್ಯಾಸ್ ಕೊಳ್ಳುವುದಕ್ಕಾದರೂ ಅವರಿಗೆ ಓಟಿಪಿಯ ಅಗತ್ಯವಿತ್ತು. ಆದ್ದರಿಂದ ಎಲ್ಲಾ ಕಡೆ ಹುಡುಕಿ ಕೊನೆಗೆ ಬಾವಿಯನ್ನು ಇಣುಕಿದಾಗ ವಿಷಯ ಬೆಳಕಿಗೆ ಬಂದಿದೆ.
ಕೂಡಲೇ ಸ್ಥಳೀಯರು ಬಾವಿಗೆ ಏಣಿ ಹಾಕಿ ಅವರನ್ನು ಮೇಲಕ್ಕೆ ಎತ್ತಲು ನೋಡಿದರು. ಆದರೆ, ಮೂರು ದಿನಗಳಿಂದ ಉಪವಾಸ ಇದ್ದು, ನಿತ್ರಾಣಗೊಂಡಿದ್ದ ಅವರು ಹಗ್ಗ ಹಿಡಿದುಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಅವರು ಬಾವಿಯೊಳಗೆ ಇಳಿದು ಆಚಾರ್ಯರನ್ನು ಮೇಲಕ್ಕೆ ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಅವರು ಆರೋಗ್ಯವಾಗಿದ್ದಾರೆ.