Cyclone Asani ಬಿರುಗಾಳಿ ಮಳೆಗೆ ಮೆಕ್ಕೆಜೋಳ ನಾಶ, ಚಿತ್ರದುರ್ಗ ರೈತ ಕಂಗಾಲು

By Suvarna NewsFirst Published May 13, 2022, 4:00 PM IST
Highlights
  • ಬಿರುಗಾಳಿ ಮಳೆಗೆ ಕಂಗಾಲಾದ ಬೆಳಗಟ್ಟ ಗ್ರಾಮದ ರೈತ ಪವನ್
  • ಗಾಳಿ ಮಳೆಯಿಂದ ನೆಲಕಚ್ಚಿ ನಾಶವಾದ 5 ಎಕರೆ ಮೆಕ್ಕೆಜೋಳ.
  • ನೆಲಕ್ಕುರುಳಿರೋ 50ಕ್ಕೂ ಅಧಿಕ ಫಸಲಿಗೆ ಬಂದಿದ್ದ ಅಡಕೆ ಮರಗಳು. 

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಮೇ.13): ಚಿತ್ರದುರ್ಗ ಅಂದ್ರೆ ಸಾಕು ಎಲ್ಲರೂ ಅದು ಬರಪೀಡಿತ ಪ್ರದೇಶ ಅನ್ನೋದು ಸಹಜ. ಆದ್ರೆ ಅಪರೂಪಕ್ಕೆ ಸುರಿದ ಅಕಾಲಿಕ ಮಳೆ ಹಾಗೂ ಬಿರುಗಾಳಿಯು ಕೋಟೆನಾಡಿನ ರೈತರ ಬದುಕನ್ನು ಬೀದಿಗೆ ತಂದಿದೆ.  ನೆಲಕ್ಕೆ ಬಿದ್ದಿರೋ ಬಾಳೆ, ಅಡಿಕೆ ಹಾಗೂ ಮೆಕ್ಕೆಜೋಳ. ಕೈಗೆ ಬಂದ ಬೆಳೆಯನ್ನು ಕಳೆದುಕೊಂಡು ಕಂಗಾಲಾದ ರೈತರು.  ಕೋಟೆನಾಡು ಚಿತ್ರದುರ್ಗ ತಾಲೂಕಿನ ಬೆಳಗಟ್ಟ ಗ್ರಾಮ.   ಕಳೆದ ಒಂದು ವಾರದಿಂದ ಸುರಿಯುತ್ತಿರುವ ಅಕಾಲಿಕ‌ಮಳೆ ಹಾಗು ಬಿರುಗಾಳಿಗೆ ರೈತರು ಬೆಳೆದ  ಬೆಳೆಗಳು ಬಲಿಯಾಗಿದೆ. ಪರಿಣಾಮ ಲಕ್ಷಾಂತರ ರೂಪಾಯಿ   ಮೌಲ್ಯದ ಬಾಳೆ ತೋಟ,ಅಡಿಕೆ ತೋಟ ಮತ್ತು ಮೆಕ್ಕೆಜೋಳ  ಸಂಪೂರ್ಣ ಸರ್ವನಾಶವಾಗಿದೆ‌.

ಹೀಗಾಗಿ ರೈತರ ಕೈಗೆ ಬಂದ ತುತ್ತು ಬಾಯಿಗೆ ಇಲ್ಲವಾಗಿದ್ದೂ, ಬರಗಾಲದಿಂದ ತತ್ತರಿಸಿದ ಅನ್ನದಾತರಿಗೆ ಏಕಾಏಕಿ ಸುರಿದ ಮಳೆಗಾಳಿ ಮಾರಕವಾಗಿ ಪರಿಣಮಿಸಿದೆ. ಇದರಿಂದಾಗಿ ಸಾಲ ಸೂಲ ಮಾಡಿ ಬಾಳೆ ಹಾಗು ಮೆಕ್ಕೆಜೋಳ ಬೆಳೆದಿದ್ದ ಕೋಟೆನಾಡಿನ ರೈತರು ಬಾರಿ ಆತಂಕಕ್ಕೆ ಸಿಲುಕಿದ್ದೂ, ಈವರೆಗೆ ಕೃಷಿ ಸಚಿವ ಬಿಸಿ ಪಾಟೀಲ್ ಆಗಲಿ, ಕೃಷಿ ಹಾಗೂ ತೋಟಗಾರಿಗೆ ಇಲಾಖೆ ಅಧಿಕಾರಿಗಳಾಗಲಿ ತಿರುಗಿ ನೋಡಿಲ್ಲವೆಂದು ರೈತರು ಆಕ್ರೋಶ ಹೊರಹಾಕಿದ್ದಾರೆ.

BELAGAVI ಸಂಪುಟ ವಿಸ್ತರಿಸಿದ್ರೆ ಗಡಿ ಉಸ್ತುವಾರಿ ಸಚಿವರ ನೇಮಿಸಿ ಕನ್ನಡಿಗರ ಆಗ್ರಹ
 
ಇನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಳ್ಳಕೆರೆ ಸೇರಿದಂತೆ, ಚಿತ್ರದುರ್ಗ ತಾಲೂಕುಗಳಾದ್ಯಂತ ಸುರಿದಿರೋ ಮಳೆಯಿಂದಾಗಿ ಹಲವು ಜನ ರೈತರು ಬೆಳೆದಿದ್ದ ಬೆಳೆಗಳು ನಾಶವಾಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸ್ಥಳಕ್ಕೆ ತೋಟಗಾರಿಕೆ ಇಲಾಖೆ‌ ಅಧಿಕಾರಿಗಳು ಹಾಗು ಸರ್ಕಾರದ ಸಚಿವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ನೊಂದ ರೈತರಿಗೆ ಅಗತ್ಯ ಪರಿಹಾರ ಒದಗಿಸಲು ಮುಂದಾಗಬೇಕೆಂದು ರೈತರು ಆಗ್ರಹಿಸಿದ್ದಾರೆ.

ಒಟ್ಟಾರೆ ಅಕಾಲಿಕ ಮಳೆಗಾಳಿಗೆ  ಕೋಟೆನಾಡಲ್ಲಿ  ಬೆಳೆದಿದ್ದ ಬಾಳೆ, ಅಡಿಕೆ ಹಾಗು ಮೆಕ್ಕೆಜೊಳ ನೆಲಕ್ಕುರುಳಿವೆ. ಹೀಗಾಗಿ ಸಾಲದ ಸುಳಿಗೆ ಸಿಲುಕಿರೊ ರೈತರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಆದ್ದರಿಂದ ಸರ್ಕಾರ ನೊಂದ ರೈತರಿಗೆ ಸೂಕ್ತ ಪರಿಹಾರ ಒದಗಿಸುವ ಮೂಲಕ ನೊಂದ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ.

Udupi ಪೇಜಾವರ ವಿಶ್ವೇಶ ತೀರ್ಥರ ನೆನಪಲ್ಲಿ ಸ್ಮೃತಿವನ 

ಕಳೆದೊಂದು ವಾರದಿಂದ ಕರ್ನಾಟಕದಲ್ಲಿ ಅಸಾನಿ ಚಂಡಮಾರುತ ಅಬ್ಬರಿಸುತ್ತಿದೆ.‌ ಆದ್ರೆ‌ ಕೋಟೆನಾಡಿನಲ್ಲಿರೋ ಜೋಗಿಮಟ್ಟಿ ವನ್ಯಧಾಮ ಮಾತ್ರ ಮಿನಿ ಊಟಿ ಅಂತೆ ಕಂಗೊಳಿಸುತ್ತಿರುವ ಮನಮೋಹಕ ಪರಿಸರ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ. 

 ಕೈಗೆ ಸಿಗೋ ರೀತಿ ಕಾಣ್ತಿರೋ ಬಿಳಿ‌ ಮೋಡಗಳು. ಎತ್ತ ನೋಡಿದರತ್ತ ಮಂಜು ಕವಿದ ವಾತಾವರಣ. ಇಂತಹ ಅದ್ಭುತ ದೃಶ್ಯಗಳು ಕಂಡು ಬಂದಿದ್ದು ಮಧ್ಯ ಕರ್ನಾಟಕದ ಮಿನಿ ಊಟಿ ಎಂದೇ ಪ್ರಖ್ಯಾತಿ ಪಡೆದಿರೋ ಚಿತ್ರದುರ್ಗ ನಗರದ ಹೊರವಲಯದಲ್ಲಿ ಜೋಗಿಮಟ್ಟಿ ವನ್ಯಧಾಮದಲ್ಲಿ. 

 ಕಳೆದ ಒಂದು ವಾರದಿಂದಲೂ ಅಸಾನಿ ಚಂಡಮಾರುತ ರಾಜ್ಯಾದ್ಯಂತ ಅರ್ಭಟಿಸ್ತಿದೆ. ಆದ್ರೆ ಇಂತಹ ಸಮಯದಲ್ಲಿ ಬರ್ತಿರೋ ಜಿಟಿ ಜಿಟಿ ಮಳೆಯಿಂದ ಕಂಗೊಳಿಸ್ತಿರೋ ಜೋಗಿಮಟ್ಟಿಯನ್ನು ನೋಡೋದಕ್ಕೆ ಎರಡು ಕಣ್ಣು ಸಾಲದು ಆಕಾಶವೇ ಕೆಳಗಿಳಿದೆ ಬಂದಂತೆ ಫೀಲ್ ಆಗ್ತಿದೆ. ಜೊತೆಗೆ ಕಳೆದೊಂದು ತಿಂಗಳಿಂದ‌ ಬೇಸಿಗೆ ಹಿನ್ನೆಲೆ ಜೋಗಿಮಟ್ಟಿ ವೀಕ್ಷಣೆಗೆ ನಿರ್ಬಂಧ ಹೇರಲಾಗಿತ್ತು. ಆದ್ರೆ ಈಗ ಮಳೆಗಾಲ ಬೇಗನೇ ಶುರುವಾಗಿರೋದ್ರಿಂದ ನಮ್ಮ ಮಿನಿ ಊಟಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳೋದಕ್ಕೆ ಅವಕಾಶ ಮಾಡಿಕೊಡಬೇಕು ಅಂತಾರೆ ಪ್ರವಾಸಿಗರು.

ಬೆಂಗ್ಳೂರಲ್ಲಿ 10 ದಿನದ ಬಳಿಕ ವಿರಾಮ ಕೊಟ್ಟ ವರುಣ: ಚಳಿಯ ವಾತಾವರಣ

ಇನ್ನೂ ಈ ಬಗ್ಗೆ ಅರಣ್ಯಾಧಿಕಾರಿಯನ್ನೇ ಕೇಳಿದ್ರೆ,  ಪ್ರತೀ ವರ್ಷ ಬೇಸಿಗೆ ಸಮಯದಲ್ಲಿ ಜೋಗಿಮಟ್ಟಿ ವನ್ಯಧಾಮವನ್ನು ವೀಕ್ಷಿಸಲು ಯಾವುದೇ ಪ್ರವಾಸಿಗರಿಗೆ ಅವಕಾಶ ಇರೋದಿಲ್ಲ. ಯಾಕಂದ್ರೆ ಬೇಸಿಗೆ ಸಮಯದಲ್ಲಿ ಯಾರಾದ್ರು ಕಿಡಿಗೇಡಿಗಳು ದಟ್ಟ ಅರಣ್ಯಧಾಮಕ್ಕೆ ಬೆಂಕಿ ಹಾಕಿ ಹೋಗ್ತಾರೆ. ಇದ್ರಿಂದ ಪ್ರಾಣಿ ಪಕ್ಷಿಗಳಿಗೆ ಅನಾಹುತ ಆಗುತ್ತೆ ಎಂಬ ಕಾರಣಕ್ಕೆ ಕ್ಲೋಸ್‌ ಮಾಡಲಾಗುತ್ತದೆ. ಸದ್ಯ ಜೋಗಿಮಟ್ಟಿ ಅರಣ್ಯಧಾಮದಲ್ಲಿ ಮಳೆ ಹೆಚ್ಚೆಚ್ಚು ಬೀಳ್ತಿರೋದ್ರಿಂದ ಹಚ್ಚ ಹಸಿರಿನಿಂದ ಕೂಡಿದೆ. ಈ ಸಂದರ್ಭದಲ್ಲಿ ಯಾವುದೇ ಅನಾಹುತ ಆಗುವ ಸಂಭವ ಕಡಿಮೆ ಇರುತ್ತದೆ. ಆದ್ದರಿಂದ ಇದೇ ಶನಿವಾರದಿಂದ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗುವುದು. ಮಿನಿ ಊಟಿ ಎಂದೇ ಪ್ರವಾಸಿಗರು ನಾನಾ ರಾಜ್ಯಗಳಿಂದಲೂ ಆಗಮಿಸಿ ವೀಕ್ಷಣೆ ಮಾಡೋದಕ್ಕೆ ಬರ್ತಾರೆ ಅದಕ್ಕೆ ಇದೇ ವಾರದ ವೀಕೆಂಡ್ ನಿಂದಲೇ ಜೋಗಿಮಟ್ಟಿ ನೋಡಲು ಪ್ರವಾಸಿಗರು ಬರಬಹುದು ಅಂತಾರೆ ಅರಣ್ಯಾಧಿಕಾರಿ.

click me!