ಬೆಂಗಳೂರು ಕಬ್ಬನ್‌ಪಾರ್ಕ್‌ ಪುಷ್ಪ ಪ್ರದರ್ಶನಕ್ಕೆ ಇಂದು ತೆರೆ

Kannadaprabha News   | Kannada Prabha
Published : Dec 07, 2025, 04:25 AM IST
Cubbon Park Flower Show

ಸಾರಾಂಶ

ಕರ್ನಾಟಕ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಅಂಗವಾಗಿ ಕಬ್ಬನ್‌ ಉದ್ಯಾನದಲ್ಲಿ ಕಳೆದ ಹತ್ತು ದಿನಗಳಿಂದ ನಡೆಯುತ್ತಿರುವ ಪುಷ್ಪ ಪ್ರದರ್ಶನಕ್ಕೆ ಭಾನುವಾರ ತೆರೆ ಬೀಳಲಿದೆ. ವಾರಾಂತ್ಯದ ಶನಿವಾರವೂ ಪುಷ್ಪ ಪ್ರದರ್ಶನ ವೀಕ್ಷಣೆಗೆ ಸಾವಿರಾರು ಜನರು ಆಗಮಿಸಿದ್ದರು

ಬೆಂಗಳೂರು : ಕರ್ನಾಟಕ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಅಂಗವಾಗಿ ಕಬ್ಬನ್‌ ಉದ್ಯಾನದಲ್ಲಿ ಕಳೆದ ಹತ್ತು ದಿನಗಳಿಂದ ನಡೆಯುತ್ತಿರುವ ಪುಷ್ಪ ಪ್ರದರ್ಶನಕ್ಕೆ ಭಾನುವಾರ ತೆರೆ ಬೀಳಲಿದೆ.

ಪ್ರದರ್ಶನ ವೀಕ್ಷಣೆಗೆ ಸಾವಿರಾರು

ವಾರಾಂತ್ಯದ ಶನಿವಾರವೂ ಪುಷ್ಪ ಪ್ರದರ್ಶನ ವೀಕ್ಷಣೆಗೆ ಸಾವಿರಾರು ಜನರು ಆಗಮಿಸಿದ್ದರು. ಭಾನುವಾರ ಕಡೇ ದಿನ ಆಗಿರುವುದರಿಂದ ಜನದಟ್ಟಣೆ ಹೆಚ್ಚುವ ನಿರೀಕ್ಷೆಯಿದೆ. ಹಾಗಾಗಿ ಟಿಕೆಟ್‌ ವಿತರಣೆ ಮತ್ತು ವಾಹನಗಳ ಪಾರ್ಕಿಂಗ್‌ ವ್ಯವಸ್ಥೆಯಲ್ಲಿ ತೋಟಗಾರಿಕೆ ಇಲಾಖೆ ಸ್ವಲ್ಪ ಬದಲಾವಣೆ ಮಾಡಿದೆ.

ಪುಷ್ಪ ಪ್ರದರ್ಶನಕ್ಕೆ ಆಗಮಿಸುವ ವೀಕ್ಷಕರು ಹಡ್ಸನ್‌ ಸರ್ಕಲ್‌ ಗೇಟ್‌, ಯುಬಿ ಸಿಟಿ ಸರ್ಕಲ್‌ ಗೇಟ್‌, ಹೈಕೋರ್ಟ್‌ ಸಮೀಪದ ಗೇಟ್‌, ಅನಿಲ್‌ಕುಂಬ್ಳೆ ವೃತ್ತದ ಗೇಟ್‌ ಮತ್ತು ಬಾಲಭವನ ಸಮೀಪದ ಗೇಟ್‌ ಬಳಿಯೇ ಟಿಕೆಟ್‌ ಪಡೆಯಲು ವ್ಯವಸ್ಥೆ ಮಾಡಲಾಗಿದೆ.

ವಾಹನದಲ್ಲಿ ಬರುವ ವೀಕ್ಷಕರು ಕಂಠೀರವ ಸ್ಟೇಡಿಯಂ, ಸೇಂಟ್‌ ಜೋಸೆಫ್‌ ಕಾಲೇಜು ಮೈದಾನ ಮತ್ತು ಹೈಕೋರ್ಟ್‌ ಪಕ್ಕದ ಪಾರ್ಕಿಂಗ್‌ ಏರಿಯಾದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಬಹುದು ಎಂದು ಕಬ್ಬನ್‌ ಉದ್ಯಾನದ ಉಪ ನಿರ್ದೇಶಕಿ ಕುಸುಮಾ ತಿಳಿಸಿದರು.

4 ಲಕ್ಷಕ್ಕೂ ಹೆಚ್ಚು ವೀಕ್ಷಕರು: ನ.27ರಿಂದ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ನಾಲ್ಕು ಲಕ್ಷಕ್ಕೂ ಹೆಚ್ಚು ವೀಕ್ಷಕರು ಆಗಮಿಸಿದ್ದು 45.50 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಿದೆ. ಭಾನುವಾರ ವೀಕ್ಷಕರ ಸಂಖ್ಯೆ 5 ಲಕ್ಷ ದಾಟಲಿದ್ದು ಒಟ್ಟಾರೆ 50 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಬಹುದು ಎಂದು ತೋಟಗಾರಿಕೆ ಇಲಾಖೆ ನಿರೀಕ್ಷಿಸಿದೆ.

ಇದೇ ಮೊದಲ ಬಾರಿಗೆ ಪ್ರತ್ಯೇಕವಾಗಿ ತೋಟಗಾರಿಕೆ ಇಲಾಖೆ, ಕಬ್ಬನ್‌ಪಾರ್ಕ್‌ ವಾಕರ್ಸ್‌ ಅಸೋಸಿಯೇಷನ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಸಂಘ -ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ ಪುಷ್ಪ ಪ್ರದರ್ಶನಕ್ಕೆ ನಿರೀಕ್ಷೆ ಮೀರಿ ಜನರಿಂದ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕಬ್ಬನ್‌ಪಾರ್ಕ್‌ ಅಧಿಕಾರಿ, ಸಿಬ್ಬಂದಿಗಳು ಸಂತಸಗೊಂಡಿದ್ದಾರೆ.

ಗಮನ ಸೆಳೆಯುತ್ತಿರುವ ಗ್ರಾನೈಟ್‌ ಶಿಲ್ಪ:

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸಹಯೋಗದಲ್ಲಿ ಅಕಾಡೆಮಿ ಸದಸ್ಯರಾದ ಎಸ್‌. ಶಿವಪ್ರಸಾದ್‌ ಚನ್ನಪಟ್ಟಣ, ಕಲಾವಿದರಾದ ಎಂ. ವೆಂಕಟೇಶ್‌, ರೇವಣ್ಣ ಕೆಂಚಪ್ಪಗೋಳ್‌, ಮರಿಯಪ್ಪ, ಚಂದ್ರಕಾಂತ್‌, ದಾವಣಗೆರೆ ದೃಶ್ಯಕಲಾ ವಿಶ್ವವಿದ್ಯಾಲಯದ ಕಲಿಕಾ ವಿದ್ಯಾರ್ಥಿಗಳಾದ ಮದನ್‌ರಾಜ್‌, ವಿನೋದ್‌ ದಾವಣಗೆರೆ ಅವರು ಕಬ್ಬನ್‌ ಉದ್ಯಾನದಲ್ಲಿದ್ದ ಹಳೆಯ ಗ್ರಾನೈಟ್‌ ಕಲ್ಲುಗಳನ್ನು ಬಳಸಿಕೊಂಡು ಉದ್ಯಾನಕ್ಕೆ ಭೇಟಿ ನೀಡುವ ಪರಿಸರ ಪ್ರೇಮಿಗಳು ಫೋಟೋ ಕ್ಲಿಕ್ಕಿಸಿಕೊಳ್ಳಲು ಅನುಕೂಲವಾಗುವಂತೆ ಫೋಟೋ ಫ್ರೇಮ್‌ ರೀತಿಯ ಚೌಕಾಕಾರದ ಮೂರು ಬಾಕ್ಸ್‌ಗಳನ್ನು ನಿರ್ಮಿಸಿದ್ದಾರೆ. ಜೊತೆಗೆ ಲಾರ್ಡ್‌ ಕಬ್ಬನ್‌ ಅವರ ಕಲಾಕೃತಿಯುಳ್ಳ ಒಂದು ಸಮಕಾಲಿನ ಶಿಲ್ಪವನ್ನು ನಿರ್ಮಿಸಿದ್ದು ಗಮನ ಸೆಳೆಯುತ್ತಿದೆ.

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ