ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ

Published : Dec 06, 2025, 09:57 PM IST
DK Shivakumar

ಸಾರಾಂಶ

ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿಗೆ ವೇಗ ನೀಡಲು ಸೂಚಿಸಲಾಗಿದ್ದು, ನಿಗದಿತ ಗಡುವಿನಲ್ಲಿ ಪೂರ್ಣಗೊಳಿಸದಿದ್ದರೆ ಗುತ್ತಿಗೆದಾರರಿಗೆ ಮುಂದೆ ಯಾವುದೇ ಕಾಮಗಾರಿಯನ್ನೂ ನೀಡುವುದಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದರು.

ಬೆಂಗಳೂರು (ಡಿ.06): ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿಗೆ ವೇಗ ನೀಡಲು ಸೂಚಿಸಲಾಗಿದ್ದು, ನಿಗದಿತ ಗಡುವಿನಲ್ಲಿ ಪೂರ್ಣಗೊಳಿಸದಿದ್ದರೆ ಗುತ್ತಿಗೆದಾರರಿಗೆ ಮುಂದೆ ಯಾವುದೇ ಕಾಮಗಾರಿಯನ್ನೂ ನೀಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದರು. ಕೊಡಿಗೆಹಳ್ಳಿಯಲ್ಲಿ ನಡೆಯುತ್ತಿರುವ ನಮ್ಮ ಮೆಟ್ರೋ ಕಾಮಗಾರಿ ಪ್ರಗತಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮೆಟ್ರೋ ರೈಲು ಮಾರ್ಗದ ಕಾಮಗಾರಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವ ಕುರಿತು ಗುತ್ತಿಗೆದಾರರೊಂದಿಗೆ ಚರ್ಚಿಸಲಾಗಿದೆ.

ಗುತ್ತಿಗೆದಾರ ಸಂಸ್ಥೆ ಕೆಲ ಸಬೂಬು ಹೇಳುತ್ತಿದ್ದು, ಅದನ್ನು ಬದಿಗೊತ್ತಿ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದೇನೆ. 2026ರ ಡಿಸೆಂಬರ್‌ ವೇಳೆಗೆ ಕೆ.ಆರ್‌.ಪುರ-ಸಿಲ್ಕ್‌ಬೋರ್ಡ್‌ ಮಾರ್ಗ, 2027ರ ಜೂನ್‌ ವೇಳೆಗೆ ಹೆಬ್ಬಾಳ-ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗ ಹಾಗೂ 2027ರ ಡಿಸೆಂಬರ್‌ಗೆ ಕೆ.ಆರ್‌.ಪುರ-ಹೆಬ್ಬಾಳ ಮಾರ್ಗ ಕಾಮಗಾರಿ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ ಎಂದರು.

ಈ ಭಾಗದಲ್ಲಿ ಕೆಲ ಸಮಸ್ಯೆಗಳಿದ್ದ ಕಾರಣ ಸ್ಥಳಕ್ಕೆ ಬಂದು ಭೇಟಿ ನೀಡಿದ್ದೇನೆ. ಇಲ್ಲಿ ಕೆಲಸ ಪೂರ್ಣವಾಗುವವರೆಗೂ ಪ್ರಮುಖ ಯಂತ್ರವನ್ನು ಬೆಂಗಳೂರಿನ ಹೊರವಲಯಕ್ಕೆ ಸ್ಥಳಾಂತರಿಸಲು ಅವಕಾಶ ನೀಡುವುದಿಲ್ಲ. ಅದರ ಉಸ್ತುವಾರಿಯನ್ನು ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಅವರಿಗೆ ನೀಡಲಾಗಿದೆ. 58 ಕಿ.ಮೀ. ಉದ್ದದ ಮಾರ್ಗ ನಿರ್ಮಾಣಕ್ಕೆ 15 ಸಾವಿರ ಕೋಟಿ ರು. ವ್ಯಯಿಸಲಾಗುತ್ತಿದೆ. ಸಿಲ್ಕ್‌ಬೋರ್ಡ್‌ನಿಂದ ವಿಮಾನ ನಿಲ್ದಾಣದವರೆಗಿನ ಮಾರ್ಗದಲ್ಲಿ 30 ನಿಲ್ದಾಣಗಳನ್ನು ನಿರ್ಮಿಸಲಾಗುವುದು. ಈ ಮಾರ್ಗ ಪೂರ್ಣಗೊಳ್ಳುವವರೆಗೆ ಕಾಯದೆ ಮೊದಲ 5ರಿಂದ 10 ನಿಲ್ದಾಣಗಳ ನಿರ್ಮಾಣ ಪೂರ್ಣಗೊಳ್ಳುತ್ತಿದ್ದಂತೆ ಮೆಟ್ರೋ ರೈಲು ಸಂಚಾರ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

ಗಡುವು ಮೀರಿದರೆ ಮುಂದೆ ಕೆಲಸವಿಲ್ಲ

ಮೆಟ್ರೋ ರೈಲು ಮಾರ್ಗ ನಿರ್ಮಾಣ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲೇಬೇಕು. ಎನ್‌ಸಿಸಿ ಅಥವಾ ಬೇರೆ ಯಾವುದೇ ಗುತ್ತಿಗೆದಾರರಾದರೂ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದರೆ, ಮುಂದೆ ಯಾವುದೇ ಕಾಮಗಾರಿಯನ್ನೂ ಅವರಿಗೆ ನೀಡುವುದಿಲ್ಲ. ನಮಗೆ ಯೋಜನೆ ಜಾರಿ ಮುಖ್ಯ. ಉಳಿದ ಇಬ್ಬರು ಗುತ್ತಿಗೆದಾರರು ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಎನ್‌ಸಿಸಿ ಬಗ್ಗೆ ಕೆಲ ದೂರುಗಳಿವೆ. ಅದನ್ನು ಸರಿಪಡಿಸಿ ಕೆಲಸ ಮಾಡಬೇಕು ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು. ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಬೆಂಗಳೂರು ಕೇಂದ್ರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್‌ ಇತರರಿದ್ದರು.

PREV
Read more Articles on
click me!

Recommended Stories

ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌
ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ