ಸಂಜೆ 6.30 ನಂತರ ಕಬ್ಬನ್‌ ಪಾರ್ಕ್‌ನಲ್ಲಿ ಜನರ ಪ್ರವೇಶ ನಿಷೇಧಿಸಿ ಆದೇಶ

By Kannadaprabha NewsFirst Published Aug 1, 2022, 7:34 AM IST
Highlights

ಸಂಜೆ 6.30ರ ನಂತರ ಸಾರ್ವಜನಿಕರ ಪ್ರವೇಶ ಮತ್ತು ವಾಯು ವಿಹಾರ ಮಾಡುವುದನ್ನು ತೋಟಗಾರಿಕೆ ಇಲಾಖೆ ನಿರ್ಬಂಧಿಸಿದೆ. ಭದ್ರತೆ ಒದಗಿಸುವುದು ಕಷ್ಟಸಾಧ್ಯ ಎಂಬ ಕಾರಣಕ್ಕೆ ಈ ತೀರ್ಮಾನ ಕೈಗೊಂಡಿದೆ. ರಾತ್ರಿ 10ರವರೆಗೂ ವಾಹನ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

ಬೆಂಗಳೂರು (ಆ.1): ಭದ್ರತೆ ಒದಗಿಸುವುದು ಕಷ್ಟಸಾಧ್ಯ ಹಾಗೂ ಅನೈತಿಕ ಚಟುವಟಿಕೆ ತಡೆಯುವ ಉದ್ದೇಶದಿಂದ ಕಬ್ಬನ್‌ ಉದ್ಯಾನದಲ್ಲಿ ಸಂಜೆ 6.30ರ ನಂತರ ಸಾರ್ವಜನಿಕರ ಪ್ರವೇಶ ಮತ್ತು ವಾಯು ವಿಹಾರ ಮಾಡುವುದನ್ನು ತೋಟಗಾರಿಕೆ ಇಲಾಖೆ ನಿರ್ಬಂಧಿಸಿದೆ. ಆದರೆ ವಾಹನಗಳ ಸಂಚಾರ ಎಲ್ಲ ದ್ವಾರಗಳಲ್ಲಿ ರಾತ್ರಿ 10ರವರೆಗೆ ಇರುತ್ತದೆ. ಸಂಜೆ ರಾತ್ರಿ 7.30ರ ವರೆಗೂ ಪ್ರವಾಸಿಗರು ಓಡಾಡುವುದು ಸಾಮಾನ್ಯವಾಗಿತ್ತು. ಆದರೆ, ಇನ್ನು ಮುಂದೆ ಪ್ರತಿ ದಿನ ಸಂಜೆ 6.30ರ ನಂತರ ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ಉದ್ಯಾನಕ್ಕೆ ಪ್ರವೇಶ ನಿರ್ಬಂಧಿಸುವುದಾಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಲಾಲ್‌ಬಾಗ್‌ನಲ್ಲಿ ಸಂಜೆ 6.30ಕ್ಕೆ ಪ್ರವೇಶ ದ್ವಾರಗಳನ್ನು ಬಂದ್‌ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಕಬ್ಬನ್‌ ಪಾರ್ಕ್ನಲ್ಲೂ ಕ್ರಮ ಕೈಗೊಳ್ಳಲಾಗಿದೆ. ಪ್ರವೇಶ ದ್ವಾರಗಳಲ್ಲಿ ಇರುವ ಭದ್ರತಾ ಸಿಬ್ಬಂದಿ ಸಂಜೆ 6.30ರ ನಂತರ ಬರುವವರಿಗೆ ಅವಕಾಶ ನಿರಾಕರಿಸಲಿದ್ದಾರೆ. ಈ ವೇಳೆ ಉದ್ಯಾನದಲ್ಲಿ ಯಾರಾದರೂ ಸಂಚರಿಸುತ್ತಿದ್ದರೆ ಅಂತಹವರನ್ನು ಹೊರಕ್ಕೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನವೆಂಬರ್‌ನಿಂದ ಫೆಬ್ರವರಿಯವರೆಗೆ ಬೇಗ ಕತ್ತಲಾಗುತ್ತದೆ. ಉದ್ಯಾನದೊಳಗೆ ರಾತ್ರಿ 7ರ ನಂತರ ಜನ ಇದ್ದರೆ ಅವರಿಗೆ ಭದ್ರತೆ ಒದಗಿಸುವುದು ಕಷ್ಟಸಾಧ್ಯ.

ಉದ್ಯಾನದ ಎಲ್ಲಾ ಕಡೆ ಭದ್ರತಾ ಸಿಬ್ಬಂದಿ ನೇಮಕ ಅಥವಾ ಸಿಸಿ ಕ್ಯಾಮೆರಾ ಅಳವಡಿಕೆ ಸಾಧ್ಯವಿಲ್ಲ. ಅಲ್ಲದೆ ಅನೈತಿಕ ಚಟುವಟಿಕೆಗಳೂ ನಡೆಯುತ್ತವೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ತೋಟಗಾರಿಕೆ ಇಲಾಖೆ ಉಪನಿರ್ದೇಶಕ (ಕಬ್ಬನ್‌ಪಾರ್ಕ್ ಉಸ್ತುವಾರಿ) ಎಚ್‌.ಟಿ.ಬಾಲಕೃಷ್ಣ ತಿಳಿಸಿದರು.

ಕಬ್ಬನ್‌ ಪಾರ್ಕ್ನಲ್ಲಿ ಓಪನ್‌ ಜಿಮ್‌ಗೆ ವಿರೋಧ: ಕಬ್ಬನ್‌ ಉದ್ಯಾನವನದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಬಯಲು ವ್ಯಾಯಾಮ ಶಾಲೆ (ಓಪನ್‌ ಜಿಮ್‌) ನಿರ್ಮಿಸಲು ಮುಂದೆ ಬಂದಿರುವ ಬೆಂಗಳೂರಿನಲ್ಲಿರುವ ಸ್ವಿಡ್ಜರ್‌ಲ್ಯಾಂಡ್‌ನ ರಾಯಭಾರಿ ಕಚೇರಿಯ ಪ್ರಸ್ತಾವಕ್ಕೆ ನಡಿಗೆದಾರರು ಮತ್ತು ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಸ್ವಿಡ್ಜರ್‌ಲ್ಯಾಂಡ್‌ನ ರಾಯಭಾರಿ ಕಚೇರಿಯ ಪ್ರತಿನಿಧಿಗಳು ಹಾಗೂ ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಬಹುತೇಕರು ಬಯಲು ವ್ಯಾಯಾಮ ಶಾಲೆ ಸ್ಥಾಪನೆಗೆ ವಿರೋಧಿಸಿದರು.

ಪಾರಂಪರಿಕ ಉದ್ಯಾನವನಗಳಾಗಿರುವ ಕಬ್ಬನ್‌ ಪಾರ್ಕ್ ಮತ್ತು ಲಾಲ್‌ಬಾಗ್‌ನಲ್ಲಿ ಯಾವುದೇ ಕಾರಣಕ್ಕೂ ಕಟ್ಟಡಗಳು, ವ್ಯಾಯಾಮ ಶಾಲೆಗಳನ್ನು ನಿರ್ಮಿಸುವುದಕ್ಕೆ ಅವಕಾಶವಿಲ್ಲ. ಆದ್ದರಿಂದ ಬಯಲು ವ್ಯಾಯಾಮ ಶಾಲೆ ನಿರ್ಮಾಣಕ್ಕೆ ತಮ್ಮ ಒಪ್ಪಿಗೆ ಇಲ್ಲ ಎಂದು ನೂರಾರು ಮಂದಿ ನಡಿಗೆದಾರರು ಹೇಳಿದರು.

 

Bengaluru: ಸಾಕು ನಾಯಿಗಳಿಗೆ ಕಬ್ಬನ್‌ ಪಾರ್ಕ್‌ ಪ್ರವೇಶವಿಲ್ಲ!

ಕಬ್ಬನ್‌ ಉದ್ಯಾನವನದ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್‌ ಮಾತನಾಡಿ, ನೈಸರ್ಗಿಕವಾಗಿರುವ ಕೆರೆ, ಕುಂಟೆ ಪುರಾತನ ಕಟ್ಟಡಗಳು ಉದ್ಯಾನಕ್ಕೆ ಸಾವಿರಾರು ಪ್ರಯಾಣಿಕರನ್ನು ಸೆಳೆಯುತ್ತಿವೆ. ಅದನ್ನು ಅದೇ ರೀತಿಯಲ್ಲಿ ಉಳಿಸಿಕೊಂಡು ಹೋಗಬೇಕು. ಉದ್ಯಾನವನದಲ್ಲಿ ಗಿಡ, ಮರಗಳನ್ನು ಬೆಳೆಸುವ ಕಾರ್ಯಗಳಿಗೆ ಮಾತ್ರ ಅವಕಾಶವಿದೆ. ಆದರೆ, ಪಾರ್ಕ್ಸ್ ಮತ್ತು ಗಾರ್ಡನ್ಸ್‌ ಕಾಯಿದೆಯಡಿಯಲ್ಲಿ ಯಾವುದೇ ಖಾಯಂ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಇಲ್ಲ. ಆದ್ದರಿಂದ ಹೊಸದಾಗಿ ಕಟ್ಟಡ ಮತ್ತು ಪ್ರತಿಮೆಗಳು ಮತ್ತು ಜಿಮ್‌ ಪರಿಕರಗಳನ್ನು ಅಳವಡಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

Bengaluru: ಕಬ್ಬನ್‌ ಪಾರ್ಕ್‌ನಲ್ಲಿ ಲಾಂಛನ ಸ್ಥಾಪನೆಗೆ ಸಾರ್ವಜನಿಕರ ವಿರೋಧ

ಜನರು ನೀಡುವ ಸಲಹೆಗಳನ್ನು ಸರ್ಕಾರ ಆಲಿಸಬೇಕು. ಜನತೆ ಮತ್ತು ಪರಿಸರಕ್ಕೆ ಹಾನಿಯಾಗದ ಯೋಜನೆಗಳನ್ನು ರೂಪಿಸಬೇಕು. ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಿದಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕಬ್ಬನ್‌ ಉದ್ಯಾನವನದಲ್ಲಿ ರೇಸರ್‌ ಪೇ ಕಂಪೆನಿ ‘ಯುನಿಕಾರ್ನ್‌ ವಿತ್‌ ವಿಂಗ್‌್ಸ’ (ಹಾರುವ ಕುದುರೆ) ಪ್ರತಿಮೆ ಸ್ಥಾಪನೆಗೆ ಕೂಡ ಸಾರ್ವಜನಿಕರು ಮತ್ತು ನಡಿಗೆದಾರು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದರು.

click me!