
ಉಡುಪಿ(ಜ.13): ನಮ್ಮ ದೇಶದ ಜನರ ಆರೋಗ್ಯದ ದೃಷ್ಟಿಗಿಂತ ನಮ್ಮದೇ ದೇಶದಲ್ಲಿ ತಯಾರಾದ ಲಸಿಕೆಯ ಬಗ್ಗೆ ಕೆಲವು ಪಕ್ಷಗಳು ಅಪಪ್ರಚಾರ ಮಾಡುತ್ತಿರುವುದು ಒಂದು ಷಡ್ಯಂತ್ರ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಪ್ರಧಾನಿ ಮೋದಿ ಸ್ಪಷ್ಟವಾಗಿ, ಆರೋಗ್ಯ ಕಾರ್ಯಕರ್ತರಿಗೆ ಮೊದಲು, ನಂತರ 50 ವರ್ಷ ಮೇಲ್ಪಟ್ಟರಿಗೆ ಕೋವಿಡ್ ನಿರೋಧಕ ಲಸಿಕೆ ನೀಡಲಾಗುತ್ತದೆ. ಈ ಬಗ್ಗೆ ಎಲ್ಲಾ ಅಗತ್ಯ ಎಚ್ಚರಿಕೆಯ ಕ್ರಮಗಳನ್ನು ವಹಿಸಲಾಗಿದೆ ಎಂದಿದ್ದಾರೆ. ಜನರು ಕೂಡಾ ಕೋವಿಡ್ ಲಸಿಕೆಯ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಆದರೆ ಕೆಲವು ಪಕ್ಷಗಳು ತಾನು ಮಾಡುವುದಿಲ್ಲ, ಮಾಡುವವರಿಗೂ ಬಿಡುವುದಿಲ್ಲ ಎಂಬಂತೆ ಆಡುತಿದ್ದಾರೆ. ಅವರು ತಮ್ಮ ಮನಃಸ್ಥಿತಿ ಬದಲಾಯಿಸಿಕೊಳ್ಳಲಿ, ಇಲ್ಲದಿದ್ದರೆ ಅವರನ್ನು ಜನರು ದೇಶದ ರಾಜಕಾರಣದಿಂದ ಅಳಿಸಿ ಹಾಕುತ್ತಾರೆ ಎಂದು ಎಚ್ಚರಿಸಿದರು.
'ಸರ್ವೇ ಸಂತು ನಿರಾಮಯಃ' ಸಂಸ್ಕೃತ ಶ್ಲೋಕದೊಂದಿಗೆ 13 ನಗರ ತಲುಪಿದ ಲಸಿಕೆ
ನಮ್ಮ ದೇಶದಲ್ಲಿ ತಯಾರಾದ ಲಸಿಕೆ ಮೇಲೆ ನಂಬಿಕೆ ಇಲ್ಲ ಅಂದರೆ ನಮ್ಮ ವಿಜ್ಞಾನಿಗಳ ಮೇಲೆ ವಿಶ್ವಾಸವಿಲ್ಲ ಎಂದಂತಾಯಿತು. ಅದು ಇಟಲಿಯಿಂದ ಬಂದಿದ್ದರೆ, ಬರುವ ಮೊದಲೇ ಬಹಳ ಒಳ್ಳೆಯದು ಎನ್ನುವ ಸರ್ಟಿಫಿಕೇಟ್ ಕೊಡುತ್ತಿದ್ದರು ಎಂದವರು ಕಾಂಗ್ರೆಸ್ ಪಕ್ಷದ ಹೆಸರು ಹೇಳದೇ ಟೀಕಿಸಿದರು.
ಯಾರಿಗೆ ಮಂತ್ರಿಯೋಗ?:
ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿ.ಟಿ.ರವಿ, ನಾಳೆ ಸಿಎಂ ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರೆ. ಬಿಜೆಪಿಯಲ್ಲಿ ಸಚಿವರಾಗುವು ಯೋಗ್ಯತೆ ಇರುವವರು ಬಹಳಷ್ಟು ಮಂದಿ ಇದ್ದಾರೆ, ಆದರೆ ಯಾರಿಗೆಲ್ಲ ಸಚಿವರಾಗುವ ಯೋಗ ಇದೆ ಎಂಬುದನ್ನು ನಾಳೆ ನೋಡೋಣ ಎಂದರು.