ಸೋಂಕಿತರ ಶವ ಅರೆ-ಬರೆ ದಹನ : ನಾಯಿಗಳಿಗೆ ಆಹಾರ

By Kannadaprabha NewsFirst Published May 4, 2021, 7:55 AM IST
Highlights

ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗಿ ಚಿಂತೆಗೀಡು ಮಾಡಿರುವ ಸಂದರ್ಭದಲ್ಲಿಯೇ ನಗರದ ಚಿತಾಗಾರಗಳಲ್ಲಿ ಶವಗಳನ್ನು ಪೂರ್ಣವಾಗಿ ಸುಡಲು ಸಿಬ್ಬಂದಿ ನಿರ್ಲಕ್ಷ್ಯ ತೋರುತ್ತಿರಿವ ವಿಚಾರ ಬೆಳಕಿಗೆ ಬಂದಿದೆ. 

ಬೆಂಗಳೂರು (ಮೇ.04):  ಕೊರೋನಾದಿಂದ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗಿ ಚಿಂತೆಗೀಡು ಮಾಡಿರುವ ಸಂದರ್ಭದಲ್ಲಿಯೇ ನಗರದ ಚಿತಾಗಾರಗಳಲ್ಲಿ ಶವಗಳನ್ನು ಪೂರ್ಣವಾಗಿ ಸುಡಲು ಸಿಬ್ಬಂದಿ ನಿರ್ಲಕ್ಷ್ಯ ತೋರುತ್ತಿದ್ದು, ಇದರಿಂದ ಅರೆಬೆಂದ ಮೃತದೇಹಗಳು ನಾಯಿಗಳಿಗೆ ಆಹಾರವಾಗುತ್ತಿವೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ತಾವರೆಕೆರೆಯಲ್ಲಿ ಹೊಸದಾಗಿ ತೆರೆದಿರುವ ಚಿತಾಗಾರದಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ ಎಂಬ ಗುಮಾನಿ ವ್ಯಕ್ತವಾಗಿದೆ. ಮೃತದೇಹ ಸಂಪೂರ್ಣವಾಗಿ ಉರಿದು ಬೂದಿಯಾಗುವ ಮೊದಲೇ ನಾಯಿಗಳಿಗೆ ಆಹಾರವಾಗುತ್ತಿವೆ ಎಂದು ಮೃತರ ಕುಟುಂಬ ಸದಸ್ಯರು ತೀವ್ರ ನೋವು ವ್ಯಕ್ತಪಡಿಸುತ್ತಿದ್ದಾರೆ. ಇದು ಪ್ರೀತಿಪಾತ್ರರನ್ನು ಕಳೆದುಕೊಂಡು ನೋವಿನಲ್ಲಿರುವ ಕುಟುಂಬ ಸದಸ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ರಾಜ್ಯದಲ್ಲಿ ಇನ್ನೂ 15 ದಿನ ಸೋಂಕು ತೀವ್ರ ಏರಿಕೆ: ಡಾ| ಬಲ್ಲಾಳ್!

ಶವಗಳ ಅಂತ್ಯಸಂಸ್ಕಾರ ನಡೆಸುವ ವಿಚಾರದಲ್ಲಿ ನಗರದ ಒಳಭಾಗದ ಚಿತಾಗಾರದ ಮೇಲೆ ಉಂಟಾಗಿರುವ ಒತ್ತಡ ಮತ್ತು ಅಂತ್ಯಕ್ರಿಯೆಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸುವ ಉದ್ದೇಶದಿಂದ ಸರ್ಕಾರ ಮತ್ತು ಬಿಬಿಎಂಪಿ ತಾವರೆಕೆರೆಯಲ್ಲಿ ತೆರೆದ ಸ್ಥಳದಲ್ಲಿ ಏಕಕಾಲದಲ್ಲಿ 26 ಮೃತದೇಹಗಳನ್ನು ಸುಡಲು ವ್ಯವಸ್ಥೆ ಹೊಂದಿದ ಚಿತಾಗಾರ ಆರಂಭಿಸಿವೆ. ಅದರಂತೆ ಇಲ್ಲಿ ನಿತ್ಯ ಹತ್ತಾರು ಶವಗಳ ಸಾಮೂಹಿಕ ದಹನ ಕಾರ್ಯ ನಡೆಯುತ್ತಿದೆ.

ಆದರೆ, ಸಂಬಂಧಿಕರು ಇರುವವರೆಗೂ ಮಾತ್ರ ಚಿತೆಯ ಕಟ್ಟಿಗೆಗೆ ಬೆಂಕಿ ಇಟ್ಟು ಶವ ಸುಡಲಾಗುತ್ತಿದೆ. ಸಂಬಂಧಿಕರು ನಿರ್ಗಮಿಸಿದ ಕೂಡಲೇ ಚಿತೆ ಉರಿಸಲು ಸಿಬ್ಬಂದಿ ಅಸಡ್ಡೆ ತೋರುತ್ತಿದ್ದಾರೆ. ಇದರಿಂದ ಕೊರೋನಾ ಸೋಂಕಿತ ಶವಗಳು ಅರೆಬೆಂದ ಸ್ಥಿತಿಯಲ್ಲಿ ಉಳಿಯುತ್ತಾ, ನಾಯಿಗಳಿಗೆ ಆಹಾರವಾಗುತ್ತಿವೆ. ಸಂಪೂರ್ಣವಾಗಿ ಮೃತದೇಹ ಉರಿದು ಬೂದಿಯಾಗುವ ಮೊದಲೇ ನಾಯಿಗಳಿಗೆ ಆಹಾರವಾಗುತ್ತಿರುವುದು ಮೃತರ ಕುಟುಂಬಸ್ಥರ ನೋವಿಗೆ ಕಾರಣವಾಗುತ್ತಿದೆ. ತಾವರೆಕೆರೆಯ ಚಿತಾಗಾರ ಬಳಿಯ ಮೃತದೇಹದ ಅವಶೇಷವನ್ನು ನಾಯಿಗಳು ತಿಂದು ಹಾಕುತ್ತಿರುವ ದೃಶ್ಯ ಸೋಮವಾರ ಕಂಡು ಬಂದಿದೆ. ಅದೇ ರೀತಿ ಚಾಮರಾಜಪೇಟೆ ಚಿತಾಗಾರದಲ್ಲೂ ಸಂಪೂರ್ಣವಾಗಿ ಸುಡದ ಪರಿಣಾಮ ಮೃತದೇಹಗಳ ಬೂದಿಯಾಗದೆ ಅವರ ಅವಶೇಷಗಳು ಉಳಿದಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!