Chikkamagaluru: ಪುನರ್ವಸು ಮಳೆ ಅಬ್ಬರಕ್ಕೆ ಕಾಫಿನಾಡು ತತ್ತರ!

By Govindaraj S  |  First Published Jul 11, 2022, 9:58 PM IST

ಪುನರ್ವಸು ಮಳೆ ಅಬ್ಬರಕ್ಕೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ತತ್ತರಿಸಿ ಹೋಗುತ್ತಿದೆ. ಕಳೆದ 8 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಇಂದು ಕೂಡ ಮಳೆ ಅಬ್ಬರಕ್ಕೆ ಮನೆಗಳು, ವಿದ್ಯುತ್ ಕಂಬ, ಸೇತುವೆ, ಗುಡ್ಡಗಳು ಕುಸಿಯಲಾರಂಭಿಸಿದ್ದು ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಜು.11): ಪುನರ್ವಸು ಮಳೆ ಅಬ್ಬರಕ್ಕೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ತತ್ತರಿಸಿ ಹೋಗುತ್ತಿದೆ. ಕಳೆದ 8 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಇಂದು ಕೂಡ ಮಳೆ ಅಬ್ಬರಕ್ಕೆ ಮನೆಗಳು, ವಿದ್ಯುತ್ ಕಂಬ, ಸೇತುವೆ, ಗುಡ್ಡಗಳು ಕುಸಿಯಲಾರಂಭಿಸಿದ್ದು ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ.

Tap to resize

Latest Videos

ಗಿರಿಶ್ರೇಣಿಯಲ್ಲಿ ನಿಲ್ಲದ ಗುಡ್ಡ ಕುಸಿತ: ಮಳೆ ಆರ್ಭಟಕ್ಕೆ ಚಂದ್ರದ್ರೋಣ ಪರ್ವತ ತಪ್ಪಲಿನ ಗಿರಿಶ್ರೇಣಿಯಲ್ಲಿ ಕೆಲವೆಡೆ ಗುಡ್ಡಗಳು ಕುಸಿಯಲಾರಂಭಿಸಿದ್ದು, ಬಂಡೆಕಲ್ಲುಗಳು ಉರುಳಿವೆ. ಗುಡ್ಡ ಜರುಗಿ ಕಾಫಿತೋಟಕ್ಕೆ ಅಪಾರ ಹಾನಿಯಾಗಿದೆ. 33 ಮನೆಗಳು ಕುಸಿದಿವೆ, 147 ವಿದ್ಯುತ್ ಕಂಬಧರೆಗುರುಳಿದ್ದು, 19.40 ಹೆಕ್ಟೇರ್ ಬೆಳೆನಾಶವಾಗಿದೆ. ಪುನರ್ವಸು ಅಬ್ಬರಿಸಿದ್ದರಿಂದ 6 ಮನೆಗಳು ನೆಲಸಮಗೊಂಡರೆ 27 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 3 ಪೂರ್ತಿಮನೆ, 14 ಭಾಗಶಃ, ಮೂಡಿಗೆರೆ 1ಪೂರ್ತಿ, 5 ಮನೆ ಭಾಗಶಃ, ಕೊಪ್ಪ 1 ಮನೆ ಪೂರ್ತಿಯಾನಿಯಾಗಿದ್ದರೆ, 3 ಭಾಗಶಃ, ನರಸಿಂಹರಾಜಪುರ 5 ಭಾಗಶಃ, ಅಜ್ಜಂಪುರ 2 ಮನೆಗಳಿಗೆ ಶೇ.30ಕ್ಕಿಂತ ಹೆಚ್ಚು ಹಾನಿಯಾಗಿದ್ದು, ಕಳಸದಲ್ಲಿ 1 ಮನೆ ನೆಲಸಮಗೊಂಡಿದೆ. 

ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆ ಅಬ್ಬರಕ್ಕೆ ಮೊದಲ ಬಲಿ..!

ಹಲವು ಮನೆಗಳ ಗೋಡೆ ಕುಸಿದಿದೆ. ತುಂಗಾ ಭದ್ರಾ, ಹೇಮಾವತಿ ನದಿಗಳ ಅಪಾಯದ ಮಟ್ಟ ತಲುಪಿವೆ. ಚಂದ್ರದ್ರೋಣ ಪರ್ವತ ತಪ್ಪಲಿನ ಗಿರಿಪ್ರದೇಶದಲ್ಲಿ ನಿರಂತರ ಮಳೆಯಿಂದ ಗುಡ್ಡಗಳು ಕುಸಿದಿದ್ದು, ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಮುಳ್ಳಯ್ಯನಗಿರಿ ಮತ್ತು ಬಾಬಾಬುಡನ್‌ ಗಿರಿಯಲ್ಲಿ ಸಾಗುವ ಮಾರ್ಗದಲ್ಲಿ ಗುಡ್ಡಗಳು ಕುಸಿಯುತ್ತಿದ್ದು, ಹೆಚ್ಚು ವಾಹನಗಳಿಗೆ ತೆರಳಲು ಜಿಲ್ಲಾಡಳಿತ ಅವಕಾಶ ನೀಡದೆ, ಕೇವಲ 300 ವಾಹನಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಶಾಲಾ-ಕಾಲೇಜುಗಳಿಗೆ ಇಂದಿನಿಂದ ಎರಡು ದಿನಗಳ ಕಾಲ ರಜೆ ಘೋಷಿಸಲಾಗಿದೆ.

ತೋಟದಲ್ಲಿ ಭಾರೀ ಭೂ ಕುಸಿತ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ: ಬಾಳೆಹೊನ್ನೂರು ಮಾರ್ಗದ ಮಾಗೋಡು ಸಮೀಪದ ಅರೆನೂರು ಗ್ರಾಮದಲ್ಲಿ 100 ಅಡಿ ಎತ್ತರದಿಂದ ಗುಡ್ಡ ಕುಸಿದಿದ್ದು, ರಾಮು ಎಂಬುವರಿಗೆ ಸೇರಿದ ಕಾಫಿ, ಅಡಿಕೆ, ಮೆಣಸು ಬೆಳೆಗಳಿಗೆ ಹಾನಿಯಾಗಿದೆ. ಆವತಿ ಹೋಬಳಿಯ ಕಸ್ಕೆಮನೆಯಲ್ಲಿ ಗುಡ್ಡ ಕುಸಿತ ಪರಿಣಾಮ ಧರ್ಮೇಗೌಡ ಎಂಬುವರಿಗೆ ಸೇರಿದ ಕಾಫಿ ತೋಟಕ್ಕೆ ಮಣ್ಣು ಬಿದ್ದು, ಫಸಲಿಗೆ ಬಂದಿದ್ದ ಕಾಫಿ ಮಣ್ಣು ಪಾಲಾಗಿದೆ. ಸಾವಿರಾರು ಕಾಫಿಗಿಡಗಳು ನಾಶವಾಗಿ ಹೆಚ್ಚು ನಷ್ಟ ಉಂಟಾಗಿದೆ. ಸ್ಫೋಟಗೊಳ್ಳುವ ವೇಳೆ ಇಡೀ ಊರೇ ಬೆಚ್ಚಿ ಬೀಳುವ ಹಾಗೆ ಶಬ್ದ ಕೇಳಿಸಿತು. ತೋಟಕ್ಕೆ ಬಂದು ನೋಡಿದರೆ ಪ್ರವಾಹದ ರೀತಿಯಲ್ಲಿ ತೋಟದಲ್ಲಿ ನೀರು ಹರಿಯುತ್ತಿತ್ತು. ನನ್ನ ಜೀವಮಾನದಲ್ಲೇ ಈ ರೀತಿಯ ಘಟನೆಯನ್ನು ಕಂಡಿಲ್ಲ ಎಂದು ರೈತ ಧರ್ಮೇಗೌಡ ಹೇಳಿದರು. ಘಟನಾ ಸ್ಥಳಕ್ಕೆ ಶಾಸಕ ಎಂ.ಪಿ ಕುಮಾರಸ್ವಾಮಿ ಭೇಟಿ ನೀಡಿ ಪರೀಶಿಲಿಸಿದ್ದಾರೆ.

ಅರೇನೂರು ಗ್ರಾಮ ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ಈ ಬಾರಿ ಮಳೆಯಿಂದ ಸಾಕಷ್ಟು ನಷ್ಟ ಸಂಭವಿಸಿದೆ. ಸಂತ್ರಸ್ತರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ನೊಂದಿರುವ ಕುಟುಂಬಕ್ಕೆ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ಸತತ ಮಳೆಗೆ ನಗರ ಹೊರವಲಯದ ನಲ್ಲೂರು ನಲ್ಲೂರು ಕೆರೆ  ಕೋಡಿ ಬಿದ್ದಿದೆ. ಇದೇ ಮೊದಲ ಬಾರಿಗೆ ಜುಲೈ ತಿಂಗಳಲ್ಲೇ ಕೆರೆ ಕೋಡಿ ಬಿದ್ದಿದೆ. ಕೆರೆಕೋಡಿ ಬಿದ್ದಿದ್ದರಿಂದ ಹೊಲ ಗದ್ದೆಗಳಿಗೆ ನೀರು ನುಗ್ಗುವ ಆತಂಕ ರೈತರಲ್ಲಿ ಮನೆಮಾಡಿದೆ. ಕಳಸ ತನೂಡಿ ಗ್ರಾಮದಲ್ಲಿ ಉಮೇಶ್ ಎಂಬುವರಿಗೆ ಸೇರಿದ ಮನೆ ಕುಸಿಯವ ಶಬ್ದವನ್ನು ಅಂದಾಜಿಸಿದ ಮನೆಯವರು ಮನೆಯಿಂದ ಹೊರಗಡೆ ಬಂದಾಕ್ಷಣ ಮನೆಯ ಕುಸಿದು ಬಿದ್ದಿದ್ದು, ಕ್ಷಣಮಾತ್ರದಲ್ಲಿ ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಳೆಗಾಳಿ ಹೊಡೆತಕ್ಕೆ ಮೂಡಿಗೆರೆ ತಾಲೂಕು ಸಬ್ಬಿಗ್ರಾಮದ ರಾಮಮ್ಮ  ಎಂಬುವರಿಗೆ ಸೇರಿದ ಮನೆ ಸಂಪೂರ್ಣ ನೆಲಸಮಗೊಂಡಿದೆ. ಮನೆಯವರು ನೆಂಟರಮನೆಗೆ ಹೋಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಿರಂತರ ಮಳೆಯಿಂದ ಮೈ ತುಂಬಿ ಹರಿಯುತ್ತಿರುವ ಹಳ್ಳ ಕೊಳ್ಳಗಳು: ಗ್ರಾಮೀಣ ಪ್ರದೇಶದಲ್ಲಿ ಮಳೆ ನಿರಂತವಾಗಿ ಸುರಿಯುತ್ತಿರುವುದರಿಂದ ಹಳ್ಳ,ಕೊಳ್ಳಗಳು ತುಂಬಿಹರಿಯುತ್ತಿವೆ. ಗದ್ದೆಗಳ ಜಲಾವೃತಗೊಂಡಿವೆ. ಕೃಷಿ ಮತ್ತು ತೋಟದ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ. ಮಳೆ ಇಲ್ಲದೆ ಆಗಸದಿಟ್ಟಿಸಿ ನೋಡುತ್ತಿದ್ದ ಸಸಿಮಡಿಗಳು ನೀರಿನಿಂದ ಆವೃತಗೊಂಡಿವೆ. ಶೃಂಗೇರಿಯಲ್ಲಿ ತುಂಗಾನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಬಾಳೆಹೊನ್ನೂರಿನಲ್ಲಿ ಭದ್ರಾನದಿ ಮತ್ತು ಮೂಡಿಗೆರೆಯ ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿದ್ದು, ನದಿಪಾತ್ರದ ತೋಟಗಳು ಜಲಾವೃತಗೊಂಡಿವೆ. ಒಟ್ಟಾರೆಯಾಗಿ ದಿನವಿಡಿ ಮಳೆನಿರಂತವಾಗಿ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ತೋಟಗಳಲ್ಲಿ ಮರಗಳು ಬೀಳುತ್ತಿರುವುದರಿಂದ ಕಾರ್ಮಿಕರು ತೋಟದ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕೃಷಿ ಚಟುವಟಿಕೆಗೆ ಮಳೆಬಿಡುವು ನೀಡುತ್ತಿಲ್ಲ ಹಾಗಾಗಿ ಬೇಸಾಯ ಕಾರ್ಯಸ್ಥಗಿತಗೊಳಿಸಲಾಗಿದೆ.

8ನೇ ದಿನದತ್ತ ಶೋಧಕಾರ್ಯ: ಹೊಸಪೇಟೆ ಗ್ರಾಮದಲ್ಲಿ ತೋಟದ ಹಳ್ಳದಲ್ಲಿ ಕೊಚ್ಚಿಹೋಗಿದ್ದ ವಿದ್ಯಾರ್ಥಿನಿ ಪತ್ತೆಕಾರ್ಯ 8ನೇ ದಿನದಲ್ಲಿ ಮುಂದುವರೆದಿದೆ. ಬೆಂಗಳೂರಿನ ಎಸ್ಡಿಆರ್ಎಫ್, ಅಗ್ನಿಶಾಮಕದಳ, ಸ್ಥಳೀಯ ಈಜುಗಾರರು ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿಯ ವಿಪತ್ತು ನಿರ್ವಹಣೆ ಘಟಕಗಳು ಶೋಧಕಾರ್ಯ ಮುಂದುವರೆದಿದೆ.ವಿದ್ಯಾರ್ಥಿನಿ ನೀರಿನಲ್ಲಿ ಕೊಚ್ಚಿಹೋಗಿ 8 ದಿನವಾದರೂ ಪತ್ತೆಯಾಗಿಲ್ಲ, ಹೊಸಪೇಟೆಯಿಂದ ಮದಗಡೆಕೆರೆಯವರೆಗೆ ಶೋಧಕಾರ್ಯ ಮುಂದುವರೆದಿದ್ದು, ಗ್ರಾಮದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಹಳ್ಳತುಂಬಿ ಹರಿಯುತ್ತಿದ್ದು, ಪತ್ತೆಕಾರ್ಯಕ್ಕೆ ಸ್ವಲ್ಪ ಅಡಚರಣೆಯಾಗುತ್ತಿದೆ.

ಚಿಕ್ಕಮಗಳೂರು: ಮಳೆ ಅಬ್ಬರಕ್ಕೆ ಚಂದ್ರದ್ರೋಣ ಪರ್ವತ ಶ್ರೇಣಿ ಗಢ ಗಢ..!

ಕಿಗ್ಗದಲ್ಲಿ ಅಧಿಕ ಮಳೆ: ಶೃಂಗೇರಿ ತಾಲೂಕಿನ ಕಿಗ್ಗದಲ್ಲಿ ಗರಿಷ್ಠ 152 .4 ಮಿ.ಮೀ.ಮಳೆಯಾಗಿದ್ದರೆ, ತರೀಕೆರೆ ತಾಲೂಕಿನ ಹುಣಸಘಟ್ಟದಲ್ಲಿ ಕನಿಷ್ಠ 1 ಮಿಲಿಮೀಟರ್ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ವಿವಿಧ ತಾಲೂಕಿನ ಹಲವೆಡೆ ಬಿದ್ದಿರುವ ಮಳೆವಿವರ ಮಿಲಿಮೀಟರ್ಗಳಲ್ಲಿ ಇಂತಿದೆ. ಚಿಕ್ಕಮಗಳೂರು ಕಸಬಾ 24, ವಸ್ತಾರೆ 48, ಆಲ್ದೂರು 64, ಮೂಡಿಗೆರೆ 33 ಕೊಟ್ಟಿಗೆಹಾರ 59.8 ಜಾವಳಿ 71 .8, ಹಿರೇಬೈಲು 60 ,ಕಳಸ 73.8, ಅಜ್ಜಂಪುರ 2, ಬುಕ್ಕಾಂಬುದಿಯಲ್ಲಿ 2 ಮಿಲಿಮೀಟರ್ ಮಳೆಬಿದ್ದಿದೆ.

click me!