ತಾಲೂಕಿನ ಅನೇಕ ಕಡೆ ಕಂಬಳಿ ಹುಳುಗಳ ಕಾಟ ಹೆಚ್ಚಾಗಿದ್ದು, ರೈತರು ಬೆಳೆದ ಎಕರೆಗಳ ಗಟ್ಟಲೇ ಬೆಳೆ ಕಂಬಳಿ ಹುಳುಗಳ ಪಾಲಾಗುತ್ತಿದೆ. ಸತತವಾಗಿ ಮಳೆಯಿಂದ ನಷ್ಟಅನುಭವಿಸಿದ ರೈತರು ಇದೀಗ ಕಂಬಳಿ ಹುಳುಗಳ ಕಾಟದಿಂದ ಕಂಗಾಲಾಗಿದ್ದಾರೆ.
ಗುಡಿಬಂಡೆ (ಸೆ.02): ತಾಲೂಕಿನ ಅನೇಕ ಕಡೆ ಕಂಬಳಿ ಹುಳುಗಳ ಕಾಟ ಹೆಚ್ಚಾಗಿದ್ದು, ರೈತರು ಬೆಳೆದ ಎಕರೆಗಳ ಗಟ್ಟಲೇ ಬೆಳೆ ಕಂಬಳಿ ಹುಳುಗಳ ಪಾಲಾಗುತ್ತಿದೆ. ಸತತವಾಗಿ ಮಳೆಯಿಂದ ನಷ್ಟಅನುಭವಿಸಿದ ರೈತರು ಇದೀಗ ಕಂಬಳಿ ಹುಳುಗಳ ಕಾಟದಿಂದ ಕಂಗಾಲಾಗಿದ್ದಾರೆ. ತಾಲೂಕಿನ ಚಿಕ್ಕತಮ್ಮನಹಳ್ಳಿ, ಹನುಮಂತಪುರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಸದ್ಯ ಕಂಬಳಿ ಹುಳುಗಳ ಬಾಧೆ ರೈತರನ್ನು ಕಂಗಾಲಾಗಿಸಿದೆ.
ಸತತವಾಗಿ ಸುರಿದ ಮಳೆಯಿಂದಾಗಿ ಚಿಗುರಿದ ಹುಲ್ಲಿಗೆ ಕಂಬಳಿ ಹುಳಗಳು ಲಗ್ಗೆಯಿಟ್ಟಿವೆ. ಗುಂಪುಗಳ ಗಟ್ಟಲೇ ವ್ಯಾಪಿಸಿಕೊಂಡಿರುವ ಹುಳಗಳು ಕೃಷಿ ಜಮೀನಿನಲ್ಲಿರುವ ಹುಲ್ಲು, ಸಸಿಗಳ ಎಲೆಗಳನ್ನು ತಿಂದುಹಾಕುತ್ತಿದ್ದು, ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಮಳೆಗಾಲ ಆರಂಭಕ್ಕೂ ಮುನ್ನ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಬೇಕಿದ್ದ ರೈತರಿಗೆ ಇದೀಗ ಸೈನಿಕ ಹುಳುಗಳ ದಾಳಿ ತಲೆನೋವು ಉಂಟುಮಾಡಿದೆ.
ಚಿಕ್ಕಬಳ್ಳಾಪುರ: ಬರದೂರಿನಲ್ಲೀಗ ಭರಪೂರ ಭತ್ತದ ನಾಟಿ..!
ಈಗಾಗಲೇ ನಾವು ಲಕ್ಷಾಂತರ ಹಣ ಖರ್ಚುಮಾಡಿ ಸಾಲ ಮಾಡಿ ಸುಮಾರು 3 ಎಕರೆ ಪ್ರದೇಶದಲ್ಲಿ ಬೆಳೆದಿರುವ ಸೂರ್ಯಕಾಂತಿ ಬೆಳೆ ಕಂಬಳಿಹುಳಗಳ ಕಾಟದಿಂದ ಸಂಪೂರ್ಣವಾಗಿ ನಾಶವಾಗಿದೆ. ಉಳಿದಂತೆ ರಾಗಿ, ಜೋಳ, ತೊಗರಿ, ಮೆಣಸು, ಬೀನ್ಸ್ ಸೇರಿದಂತೆ ಇತರೆ ಬೆಳೆಗಳನ್ನು ಸಹ ಇಟ್ಟಿದ್ದು ಅವುಗಳಿಗೂ ಸಹ ದಾಳಿಮಾಡಿವೆ. ಎಷ್ಟೇ ಔಷದಿ ಸಿಂಪಡಣೆ ಮಾಡಿದರೂ ಪ್ರಯೋಜವಾಗಿಲ್ಲ ಹೀಗೇ ಆದರೆ ಈಗಿರುವ ಬೆಳೆಗಳನ್ನು ಕಳೆದುಕೊಳ್ಳಬೇಕಾದ ಆತಂಕ ಎದುರಾಗಿದೆ ಎಂದು ರೈತ ಧನಂಜಯ್ ತಿಳಿಸಿದ್ದಾರೆ.
ವಿಜ್ಞಾನಿಗಳ ತಂಡ ಭೇಟಿ: ಇನ್ನೂ ಕಂಬಳಿ ಹುಳುಗಳ ನಿಯಂತ್ರಣಕ್ಕಾಗಿ ಸ್ಥಳಕ್ಕೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡ ಭೇಟಿ ನೀಡಿತ್ತು. ಕಂಬಳಿ ಹುಳುಗಳನ್ನು ನಿಯಂತ್ರಣ ಮಾಡಲು ರೈತರಿಗೆ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದರು. ಕಂಬಳಿ ಹುಳುಗಳನ್ನು ನಿಯಂತ್ರಣ ಮಾಡಲು ರೈತರೇ ಸ್ವಯಂ ಔಷಧಿಯನ್ನು ತಯಾರಿಸಿಕೊಳ್ಳಬಹುದಾಗಿದೆ. ಜಮೀನುಗಳ ಕಾಲುವೆಗಳಲ್ಲಿ ಮೆಲಾಥಿಯನ್ ಅಥವಾ ಫೆನೋಲರೇಟ್ ಔಷಧಿಯನ್ನು ಉದುರಿಸುವುದು, ಅಥವಾ ಅಕ್ಕಿ ತೌಡು, ಬೆಲ್ಲದ ಪಾಕದ ಜೊತೆಗೆ ಕ್ಲೋರೋಪೈರಿಪಾಸ್ ಸೇರಿಸಿ ಉಂಡೆಗಳನ್ನು ಮಾಡಿ ಸಾಲುಗಳಲ್ಲಿ ಸಾಯಂಕಾಲದ ಸಮಯದಲ್ಲಿ ಹಾಕುವುದರಿಂದ ಈ ಕಂಬಳಿ ಹುಳುಗಳು ನಾಶವಾಗುತ್ತವೆ ಎಂದು ವಿಜ್ಞಾನಿಗಳು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.
Chikkaballapur: ಕೋವಿಡ್ ವೇಳೆ ಶೇ. 20ರಷ್ಟು ರೇಷ್ಮೆ ಉತ್ಪಾದನೆ ಹೆಚ್ಚಳ
ಈ ವೇಳೆ ಜಂಟಿ ಕೃಷಿ ನಿರ್ದೇಶಕಿ ಜಾವೀದಾ, ಉಪಕೃಷಿ ನಿರ್ದೇಶಕ ಚಂದ್ರಶೇಖರ್, ಸಹಾಯಕ ಕೃಷಿ ನಿರ್ದೇಶಕ ಅಮರನಾರಾಯಣರೆಡ್ಡಿ, ಕೆವಿಕೆ ವಿಜ್ಞಾನಿಗಳಾದ ಡಾ.ಪಾಪಿರೆಡ್ಡಿ, ಡಾ.ಶ್ರೀನಿವಾಸರೆಡ್ಡಿ, ಡಾ.ಮಂಜುಳಾ, ಕೃಷಿ ಅಧಿಕಾರಿ ಶಂಕರಯ್ಯ, ತೋಟಗಾರಿಕೆ ಇಲಾಖೆಯ ಕೃಷ್ಣಮೂರ್ತಿ, ರವಿಕುಮಾರ್ ಸೇರಿದಂತೆ ಹಲವರು ಇದ್ದರು.