ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಎಂಬ ಗಾದೆ ಮಾತಿನಂತೆ ನಿರ್ವಹಣೆ ಮತ್ತು ಕಾಯಾಚರಣೆ (ಒ ಅಂಡ್ ಎಂ)ಯಡಿ ಮೈಷುಗರ್ ಕಾರ್ಖಾನೆ ಪುನಾರಂಭಗೊಂಡಿದೆ. ಎರಡು ವರ್ಷದ ಹಿಂದೆಯೇ ಇದಕ್ಕೆ ಜಿಲ್ಲೆಯ ರೈತ-ಪ್ರಗತಿಪರ ಸಂಘಟನೆಗಳು ಒಲವು ತೋರಿದ್ದರೆ ಕಬ್ಬು ಸಾಗಣೆ ವೆಚ್ಚ 40 ಕೋಟಿಗೂ ಹೆಚ್ಚು ಹಣ ರೈತರಿಗೆ ಉಳಿಯುತ್ತಿತ್ತು ಎನ್ನುವುದು ವಾಸ್ತವ ಸತ್ಯವಾಗಿದೆ.
ಮಂಡ್ಯ ಮಂಜುನಾಥ
ಮಂಡ್ಯ (ಸೆ.02): ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಎಂಬ ಗಾದೆ ಮಾತಿನಂತೆ ನಿರ್ವಹಣೆ ಮತ್ತು ಕಾಯಾಚರಣೆ (ಒ ಅಂಡ್ ಎಂ)ಯಡಿ ಮೈಷುಗರ್ ಕಾರ್ಖಾನೆ ಪುನಾರಂಭಗೊಂಡಿದೆ. ಎರಡು ವರ್ಷದ ಹಿಂದೆಯೇ ಇದಕ್ಕೆ ಜಿಲ್ಲೆಯ ರೈತ-ಪ್ರಗತಿಪರ ಸಂಘಟನೆಗಳು ಒಲವು ತೋರಿದ್ದರೆ ಕಬ್ಬು ಸಾಗಣೆ ವೆಚ್ಚ 40 ಕೋಟಿಗೂ ಹೆಚ್ಚು ಹಣ ರೈತರಿಗೆ ಉಳಿಯುತ್ತಿತ್ತು ಎನ್ನುವುದು ವಾಸ್ತವ ಸತ್ಯವಾಗಿದೆ. ಸಂಘಟನೆಗಳಲ್ಲಿ ಉಂಟಾಗಿದ್ದ ಗೊಂದಲ ಹಾಗೂ ಭಿನ್ನಾಭಿಪ್ರಾಯಗಳಿಂದ ಮೈಷುಗರ್‌ನಲ್ಲಿ ಕಬ್ಬು ಅರೆಯುವಿಕೆ ಎರಡು ವರ್ಷ ತಡವಾಗಿ ಆರಂಭವಾಗಿದೆ. ಆಗಲೇ ಸಂಘಟನೆಗಳು ಒಗ್ಗಟ್ಟಾಗಿ ಸರ್ಕಾರದ ತೀರ್ಮಾನವನ್ನು ಒಪ್ಪಿದ್ದರೆ ಕಬ್ಬು ಬೆಳೆಗಾರರ ಮೇಲಿನ ಆರ್ಥಿಕ ಹೊರೆಯನ್ನು ತಪ್ಪಿಸಬಹುದಾಗಿತ್ತು ಎಂಬ ಮಾತುಗಳು ರೈತ ಸಮುದಾಯದಿಂದಲೇ ಕೇಳಿಬರುತ್ತಿವೆ.
ಒ ಅಂಡ್ ಎಂಗೆ ಬಿಎಸ್‌ವೈ ಆಸಕ್ತಿ: ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಸ್ಥಗಿತಗೊಂಡಿದ್ದ ಮೈಷುಗರ್ ಕಾರ್ಖಾನೆಗೆ ಮರು ಚಾಲನೆ ನೀಡುವುದಕ್ಕೆ ಆಸಕ್ತಿ ತೋರಿದ್ದರು. ಕಂಪನಿಯ ನಿರ್ವಹಣೆ ಮತ್ತು ಕಾರ್ಯಾಚರಣೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವುದಕ್ಕೆ ಮುಂದಾಗಿದ್ದರು. ಆದರೆ, ಸಂಘಟನೆಗಳಲ್ಲಿ ಯಡಿಯೂರಪ್ಪನವರ ತೀರ್ಮಾನದ ವಿರುದ್ಧ ಅಪಸ್ವರ ಎದ್ದಿತು. ಮೈಷುಗರ್‌ನ್ನು ಖಾಸಗೀಕರಣಗೊಳಿಸುವ ಮೊದಲ ಹೆಜ್ಜೆಯೇ ಒ ಅಂಡ್ ಎಂ ಎಂದು ಸಂಘಟನೆಗಳ ಮುಖಂಡರು ಭಾವಿಸಿದರು. ಹಾಗಾಗಿ ಒ ಅಂಡ್ ಎಂ ವಿಧಾನವನ್ನು ಅನುಸರಿಸದೆ ಸರ್ಕಾರವೇ ಕಾರ್ಖಾನೆಯನ್ನು ನಡೆಸಬೇಕೆಂದು ಕೆಲವು ಮುಖಂಡರು ಬಿಗಿಪಟ್ಟು ಹಿಡಿದರು.
ಆ.31ಕ್ಕೆ ಮೈಷುಗರ್ ಪ್ರಾಯೋಗಿಕ ಕಾರ್ಯಾರಂಭ: ಸಚಿವ ಶಂಕರ ಮುನೇನಕೊಪ್ಪ
ಸಂಘಟನೆಗಳಲ್ಲಿ ಭಿನ್ನಾಭಿಪ್ರಾಯ: ಸದ್ಯ ಸರ್ಕಾರದಿಂದ ಕಾರ್ಖಾನೆಯನ್ನು ನಡೆಸಲು ಸಾಧ್ಯವಾಗುವುದಿಲ್ಲ. ಈಗಾಗಲೇ ಕಾರ್ಖಾನೆ ಪುನಶ್ಚೇತನಕ್ಕೆ 2008-09 ರಿಂದ 2018-19ನೇ ಸಾಲಿನವರೆಗೆ .428.62 ಕೋಟಿ ನೀಡಲಾಗಿದೆ. ಆದರೂ ಪುನಶ್ಚೇತನ ಕಾಣಲಾಗಿಲ್ಲ. ಅದಕ್ಕಾಗಿ ನಿರ್ವಹಣೆ ಮತ್ತು ಕಾರ್ಯಾಚರಣೆಯನ್ನು ಮಾತ್ರ ಖಾಸಗಿಯವರಿಗೆ ವಹಿಸುವುದಾಗಿ 31.12.2019ರಂದು ಸಕ್ಕರೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಿಳಿಸಿದಾಗ ರೈತರ ಹಿತದೃಷ್ಟಿಯಿಂದ ಕೆಲವು ಸಂಘಟನೆ ಮುಖಂಡರು ಒಪ್ಪಿಗೆ ಸೂಚಿಸಿದರೆ, ಮತ್ತೆ ಕೆಲವರು ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ.
ಉಪ ಸಮಿತಿ ರಚನೆ: ರೈತ-ಪ್ರಗತಿಪರ ಸಂಘಟನೆಗಳಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರು ಬೇಸರಗೊಂಡು ಮೈಷುಗರ್ ಆರಂಭದ ಬಗ್ಗೆ ನಿರಾಸಕ್ತಿ ವಹಿಸಿದರು. 25,6,2020ರಂದು ಮೈಷುಗರ್ ಪುನಶ್ಚೇತನ ಸಂಬಂಧ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಲು ನಿರ್ಧರಿಸಿ ಕೈತೊಳೆದುಕೊಂಡರು. ಇದು ಮೈಷುಗರ್ ಕಾರ್ಖಾನೆ ವಿಳಂಬಕ್ಕೆ ಮುಖ್ಯ ಕಾರಣವಾಯಿತು ಎಂಬ ಆರೋಪಗಳು ಕೇಳಿಬರುತ್ತಿವೆ.
ಖಾಸಗೀಕರಣಕ್ಕೆ ತೀರ್ಮಾನ: ಆ ನಂತರದಲ್ಲಿ ಮೈಷುಗರ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆಗಾರರು, ಕಂಪನಿಯ ಷೇರುದಾರರು ಹಾಗೂ ಕಾರ್ಖಾನೆಯ ಕಾರ್ಮಿಕರ ಹಿತದೃಷ್ಟಿಯಿಂದ ಹಾಗೂ ಕಾರ್ಖಾನೆಯ ಸಾಲ ಮತ್ತು ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಲು ಕಾರ್ಖಾನೆ ವ್ಯಾಪ್ತಿಯಲ್ಲಿ ಸಿಗುವ 8.21 ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ಪೂರ್ಣ ಪ್ರಮಾಣದಲ್ಲಿ ನುರಿಸಲು 2020-21ನೇ ಹಂಗಾಮಿನಿಂದ 40 ವರ್ಷಗಳ ಕಾಲ ಖಾಸಗಿಯವರಿಗೆ ಗುತ್ತಿಗೆ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು. ಅದರಂತೆ ಮೈಷುಗರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ 285 ಕಾಯಂ ನೌಕರರ ಪೈಕಿ 39 ನೌಕರರನ್ನು ಹೊರತುಪಡಿಸಿ ಉಳಿದೆಲ್ಲರಿಗೂ ಸ್ವಯಂ ನಿವೃತ್ತಿ ಸೌಲಭ್ಯವನ್ನು ಕಲ್ಪಿಸಲಾಯಿತು. ಇದಕ್ಕಾಗಿ .21.80 ಕೋಟಿಯನ್ನೂ ಸರ್ಕಾರ ಬಿಡುಗಡೆಗೊಳಿಸಿತು.
ಅನಿರ್ದಿಷ್ಟಾವಧಿ ಧರಣಿ: ಮೈಸೂರು ಮಹಾರಾಜರು ಕೊಡುಗೆಯಾಗಿ ನೀಡಿದ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಸರ್ಕಾರದ ನಿರ್ಧಾರದ ವಿರುದ್ಧ ಜನಪ್ರತಿನಿಧಿಗಳು, ರೈತ-ಪ್ರಗತಿಪರ ಸಂಘಟನೆಗಳ ಮುಖಂಡರು ತೀವ್ರವಾಗಿ ವಿರೋಧಿಸಿದರು. ಹೋರಾಟಕ್ಕೆ ಚುರುಕು ನೀಡಿದರು. ಮೈಸೂರು ದಸರಾಗೆ ತಡೆ ಉಂಟು ಮಾಡುವ ಬೆದರಿಕೆ ಹಾಕಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು. ಅಷ್ಟರಲ್ಲಾಗಲೇ ಬಿ.ಎಸ್.ಯಡಿಯೂರಪ್ಪನವರು ಅಧಿಕಾರದಿಂದ ಕೆಳಗಿಳಿದು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಗದ್ದುಗೆ ಏರಿದ್ದರು.
ಖಾಸಗೀಕರಣ ನಿರ್ಧಾರ ವಾಪಸ್: ಮೈಸೂರು ದಸರಾ ಉದ್ಘಾಟನೆಗೆ ತೆರಳುವ ಸಮಯದಲ್ಲಿ ಧರಣಿ ನಿರತ ಪ್ರತಿಭಟನಾಕಾರರಿಗೆ ಮೈಷುಗರ್ ಕಾರ್ಖಾನೆಯನ್ನು ಖಾಸಗೀಕರಣಗೊಳಿಸದೆ ಸರ್ಕಾರಿ ಸ್ವಾಮ್ಯದಲ್ಲೇ ಮುನ್ನಡೆಸುವ ಭರವಸೆ ನೀಡಿದರು. ನಿರೀಕ್ಷೆಯಂತೆ ಬಜೆಟ್‌ನಲ್ಲಿ .50 ಕೋಟಿ ಹಣವನ್ನೂ ಘೋಷಿಸಿದರು. ಪುಣೆಯ ಆರ್.ಬಿ.ಟೆಕ್ನೋಕ್ರೇಟ್ಸ್ ಅಂಡ್ ರೀಕ್ಲೈಮರ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಹೈದರಾಬಾದ್‌ನ ಎಸ್ಸೆನ್ನಾರ್ ಪವರ್‌ಟೆಕ್ ಸವೀರ್‍ಸ್ ಸಂಸ್ಥೆಯವರು ಮೈಷುಗರ್ ಕಾರ್ಖಾನೆಯ ಯಂತ್ರೋಪಕರಣಗಳ ದುರಸ್ತಿ ಮತ್ತು ಓವರ್‌ಹಾಲಿಂಗ್ ಕೆಲಸ ಮಾಡಿಸಿ ಅವರಿಗೆ ನಿರ್ವಹಣೆ ಮತ್ತು ಕಾರ್ಯಾಚರಣೆ ಜವಾಬ್ದಾರಿ ಕೊಟ್ಟು ಮೈಷುಗರ್ ಪುನಾರಂಭಕ್ಕೆ ಚಾಲನೆ ದೊರಕಿಸಿದ್ದಾರೆ.
ಒ ಅಂಡ್ ಎಂಗೆ ಓಕೆ: ಕಾರ್ಖಾನೆಯ ನಿರ್ವಹಣೆ ಮತ್ತು ಕಾರ್ಯಾಚರಣೆ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸಿ ಮುನ್ನಡೆಸುವುದಾಗಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರು ಹೇಳಿದಾಗ ವಿರೋಧಿಸಿದ್ದ ರೈತ-ಪ್ರಗತಿಪರ ಸಂಘಟನೆಗಳೇ ಈಗ ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಒಪ್ಪಿ ಸಮ್ಮತಿ ಸೂಚಿಸಿವೆ. ಇದು ವಿಚಿತ್ರವೆನಿಸಿದರೂ ಸತ್ಯಸಂಗತಿ. ರೈತರ ಹಿತದೃಷ್ಟಿಯಿಂದ ಮೊದಲೇ ಅರಿತು ಸಮ್ಮತಿ ಸೂಚಿಸಿದ್ದರೆ ಎರಡು ವರ್ಷ ಮೊದಲೇ ಕಾರ್ಖಾನೆ ಆರಂಭವಾಗುತ್ತಿದ್ದರಲ್ಲಿ ಸಂದೇಹವಿರಲಿಲ್ಲ.
2019ರಲ್ಲೇ ಸಂಘಟನೆಗಳು ಯಡಿಯೂರಪ್ಪನವರ ತೀರ್ಮಾನಕ್ಕೆ ಸಮ್ಮತಿ ಸೂಚಿಸಿದ್ದರೆ ರೈತರು, ಕಬ್ಬು ಬೆಳೆಗಾರರು ಅನುಭವಿಸಿದ ಸಂಕಷ್ಟಗಳನ್ನು ದೂರ ಮಾಡಬಹುದಿತ್ತು. ರೈತರಿಗೆ ಕಬ್ಬು ಸಾಗಣೆ ಸಂಕಷ್ಟತಪ್ಪಿ, ಕಾರ್ಖಾನೆ ಸಕಾಲದಲ್ಲಿ ರೈತರ ಕಬ್ಬು ಅರೆದು ಈ ವೇಳೆಗೆ ಒಂದಷ್ಟುಸುಧಾರಣೆಯ ಹಂತ ತಲುಪುತ್ತಿತ್ತು ಎನ್ನುವುದು ರೈತರ ಪರವಾಗಿರುವವರ ವಾದವಾಗಿದೆ.
ಒ ಅಂಡ್ ಮೂಲಕ ಕಾರ್ಖಾನೆ ನಡೆಯುವುದು ಸೂಕ್ತ. ಇದರಿಂದ ಕಾರ್ಖಾನೆ ಮತ್ತು ಕಬ್ಬು ಬೆಳೆಗಾರರಿಗೆ ಆದಾಯವಾಗಲಿದೆ. ಒ ಅಂಡ್ ಎಂ ಎನ್ನುವುದು ಖಾಸಗೀಕರಣದ ಮೊದಲ ಹೆಜ್ಜೆ ಎಂದು ಭಾವಿಸುವುದೇ ಮೂರ್ಖತನ. ಇದರಿಂದ ಕಾರ್ಖಾನೆ ಆರಂಭ ಎರಡು ವರ್ಷ ತಡವಾಯಿತು. ಸಕಾಲಕ್ಕೆ ಕಬ್ಬು ಅರೆಯದಿರುವುದು, ಸಾಗಣೆ ವೆಚ್ಚ ಹೆಚ್ಚಳ, .40 ಕೋಟಿಗೂ ಹೆಚ್ಚು ಆರ್ಥಿಕ ಹೊರೆ ಅನುಭವಿಸುವಂತಾಯಿತು. ಯಾರೇ ಆದರೂ ರೈತರ ಸಮಸ್ಯೆಯನ್ನು ಮನಗಂಡು ಕಾರ್ಖಾನೆ ಸಮರ್ಥವಾಗಿ ಮುನ್ನಡೆಯುವುದಕ್ಕೆ ಆದ್ಯತೆ ನೀಡಬೇಕು.
- ಎಸ್.ಕೃಷ್ಣ, ಅಧ್ಯಕ್ಷರು, ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘ
ಅವೈಜ್ಞಾನಿಕ ಕಾಮಗಾರಿಯಿಂದ ಹೆದ್ದಾರಿ ಅವಾಂತರ: ಸುಮಲತಾ ಅಂಬರೀಶ್
ಸ್ವಾರ್ಥಕ್ಕಾಗಿ ಕೆಲವರು ಹೋರಾಟ ಮಾಡುತ್ತಿದ್ದಾರೆ. ಈ ಭಾಗದ ಕಬ್ಬು ಬೆಳೆಗಾರರಲ್ಲದವರು ಹೋರಾಟಕ್ಕಿಳಿದಿದ್ದಿರಿಂದ ಅವರಿಗೆ ಕಾರ್ಖಾನೆ ವ್ಯಾಪ್ತಿಯ ರೈತರ ಸಮಸ್ಯೆ ಅರ್ಥವಾಗಲಿಲ್ಲ. ಖಾಸಗಿ ಕಾರ್ಖಾನೆಯವರು ಈ ಭಾಗದವರನ್ನು ಗುಲಾಮರಂತೆ ಕಂಡರು. ಎಲ್ಲರ ಕಬ್ಬು ಕಡಿದ ಬಳಿಕ ಮೈಷುಗರ್ ವ್ಯಾಪ್ತಿಯ ಕಬ್ಬು ಬೆಳೆಗಾರರ ಕಬ್ಬು ಕಟಾಯಿಸುತ್ತಿದ್ದರು. ಸಾಗಣೆ ವೆಚ್ಚ ಹೆಚ್ಚಾಗಿ ಬೆಳೆಗಾರರು ಸಂಕಷ್ಟಅನುಭವಿಸಿದರು. ಎರಡು ವರ್ಷ ಮೊದಲೇ ಕಾರ್ಖಾನೆ ಆರಂಭಕ್ಕೆ ಸಮ್ಮತಿಸಿದ್ದರೆ ರೈತರು ಆರ್ಥಿಕವಾಗಿ ಚೇತರಿಕೆ ಕಂಡುಕೊಳ್ಳುತ್ತಿದ್ದರು. ಕಾರ್ಖಾನೆಯೂ ಸುಸ್ಥಿತಿ ಕಂಡುಕೊಳ್ಳುತ್ತಿತ್ತು.
- ನಾಗರಾಜು, ಹನಿಯಂಬಾಡಿ, ರೈತ