ಬೆಳಗಾವಿ: ಮಳೆ ಇಲ್ಲದೆ ಮೊಸಳೆ ಜೀವಕ್ಕೂ ಅಪಾಯ..!

By Kannadaprabha News  |  First Published Jul 5, 2023, 9:30 PM IST

ಕೃಷ್ಣಾ ನದಿ ವ್ಯಾಪ್ತಿಯಲ್ಲಿ ಕಂಡುಬರುತ್ತಿರುವೆ ಮಾರ್ಷ್‌/ಮಗ್ಗರ್‌ ಪ್ರಭೇದದ ಮೊಸಳೆಗಳು, ತನ್ನ ದೇಹವನ್ನು ತಂಪಾಗಿ ಇಡುವ ಸಂಬಂಧ ಹೊಲಗಳಲ್ಲಿ ಕಾಣಿಸಿಕೊಳ್ಳುತ್ತಿವೆ ಈ ಮೊಸಳೆಗಳು. 


ಬ್ರಹ್ಮಾನಂದ ಎನ್‌. ಹಡಗಲಿ

ಬೆಳಗಾವಿ(ಜು.05):  ಮಳೆ ಅಭಾವ ಕೇವಲ ಜನರಿಗೆ ಮಾತ್ರವಲ್ಲ ಸಂಕಷ್ಟತಂದಿಲ್ಲ. ಜಲಚರ ಪ್ರಾಣಿಗಳ ಜೀವಕ್ಕೂ ಅಪಾಯ ತಂದೊಡ್ಡಿದೆ. ಜೂನ್‌ ಮುಗಿದು ಜುಲೈ ಆರಂಭಗೊಂಡಿದೆ. ಆದರೂ ಆಲಮಟ್ಟಿ, ಘಟಪ್ರಭಾ, ನವಿಲುತೀರ್ಥ, ತುಂಗಭದ್ರಾ, ನಾರಾಯಣಪುರ, ಸೂಪಾ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಡ್ಯಾಂಗಳಿಗೆ ಇನ್ನೂ ಒಳಹರಿವು ಆರಂಭಗೊಂಡಿಲ್ಲ. ಕಾರಣ ಮಳೆಯಾಗದ ಕಾರಣ ನದಿಗಳಿಗೆ ಇನ್ನೂ ನೀರೇ ಬಂದಿಲ್ಲ. ಈಗಲೂ ನದಿಗಳು ಬತ್ತಿದ ಸ್ಥಿತಿಯಲ್ಲಿವೆ.

Tap to resize

Latest Videos

ಮಳೆಯ ಕೊರತೆಯಿಂದಾಗಿ ಜನರಿಗಿಂತ ಹೆಚ್ಚಾಗಿ ಮೊಸಳೆ, ಮೀನುಗಳಂತಹ ಜಲಚರಗಳ ಜೀವಕ್ಕೆ ಹೆಚ್ಚು ಅಪಾಯ ತಂದಿದೆ. ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳು ಸೇರಿದಂತೆ ಆಲಮಟ್ಟಿಜಲಾಶಯದ ಭಾಗಗಳಲ್ಲಿ ಈಗೀಗ ಮೊಸಳೆಗಳೇ ಹೆಚ್ಚಾಗಿ ಕಾಣ ಸಿಗುತ್ತಿವೆ. ಮಳೆಗಾಲದಲ್ಲಿಯೂ ನದಿಗಳು ಸೇರಿದಂತೆ ಜಲಾಶಯಗಳು ಸಂಪೂರ್ಣ ಬರಿದಾಗುತ್ತಿರುವುದರಿಂದ ಮೊಸಳೆಗಳು ಅಲ್ಲಲ್ಲಿ ದರ್ಶನವಾಗುತ್ತಿವೆ. ಆದರೆ, ಮೊಸಳೆಗಳು ಹೀಗೆ ಹೊರಗೆ ಕಾಣಿಸಿಕೊಳ್ಳುತ್ತಿರುವುದು ಅವುಗಳು ತಮ್ಮ ದೇಹವನ್ನು ತಂಪಾಗಿ ಇಟ್ಟುಕೊಳ್ಳಲು ಮಾತ್ರ. ಆದರೆ, ಅವು ಆಹಾರ ಹುಡುಕಿಕೊಂಡು ಬಂದು ಜನ, ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ.

ಬೆಳಗಾವಿ: ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡ ರೈತರು, ಕೃಷಿಯಲ್ಲಿ ಡ್ರೋಣ್‌ ಬಳಕೆ..!

ಮಾರ್ಷ್‌/ಮಗ್ಗರ್‌ ಪ್ರಭೇದಕ್ಕೆ ಸೇರಿದ ಮೊಸಳೆಗಳು:

ಕೃಷ್ಣಾ, ಘಟಪ್ರಭಾ ನದಿ ವ್ಯಾಪ್ತಿಯಲ್ಲಿ ಅಂದಾಜು 200ಕ್ಕೂ ಅಧಿಕ ಮೊಸಳೆಗಳಿವೆ ಎಂದು ವನ್ಯಜೀವಿ ತಜ್ಞರು ಅಂದಾಜಿಸಿದ್ದಾರೆ. ಇವೆಲ್ಲ ಮಾಷ್‌ರ್‍ ಅಥವಾ ಮಗ್ಗರ್‌ ಪ್ರಭೇದಗಳಿಗೆ ಸೇರಿದ ಮೊಸಳೆಗಳು. ಉದ್ದವಾದ ದೇಹ, ಮೂತಿಯನ್ನು ಹೊಂದಿರುತ್ತದೆ. ಜತೆಗೆ ಸಿಹಿ ನೀರಿನಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಪ್ರಭೇದದ ಮೊಸಳೆ ಹೆಚ್ಚು ಬಲಶಾಲಿಯಾಗಿರುತ್ತದೆ. ಬಾಲ ಕೂಡ ಉದ್ದವಾಗಿರುವುದರಿಂದ ವೇಗವಾಗಿ ಈಜಲು ಇದಕ್ಕೆ ಸಹಕಾರಿಯಾಗಿದೆ.

ಈಗೇಕೆ ಮೊಸಳೆಗಳು ಹೊರಗೆ ಕಾಣಿಸಿಕೊಳ್ಳುತ್ತಿವೆ?:

ಇತ್ತೀಚೆಗೆ ಮೊಸಳೆಗಳು ಬಾಗಲಕೋಟೆ ಜಿಲ್ಲೆಯ ಜಮಖಂಡಿ, ರಬಕವಿ ಮತ್ತು ಬೆಳಗಾವಿ ಜಿಲ್ಲೆಯ ಅಥಣಿಯ ಕೃಷ್ಣಾ ವ್ಯಾಪ್ತಿಯಲ್ಲಿ ಕಂಡುಬಂದಿವೆ. ಮಳೆಗಾಲದ ಸಂದರ್ಭದಲ್ಲಿ ನದಿಗಳು ಮತ್ತು ಅಣೆಕಟ್ಟೆಯಲ್ಲಿ ತುಂಬಿ ಹರಿಯುತ್ತವೆ. ಜತೆಗೆ ಜಲಾಶಯದಲ್ಲಿ ನೀರು ಕೂಡ ಹೆಚ್ಚು ವಿಸ್ತಾರವಾಗುತ್ತದೆ. ಹೀಗಾಗಿ ಮೊಸಳೆಗಳು ಅದೇ ನೀರಿನಲ್ಲಿ ಎಲ್ಲೆಂದರಲ್ಲಿ ಹೋಗುತ್ತವೆ. ನೀರು ಕಡಿಮೆಯಾಗುವುದು ಮೊಸಳೆಗಳಿಗೆ ತಿಳಿಯುವುದಿಲ್ಲ. ಹೆಚ್ಚು ನೀರು ಇರುವ ತೆಗ್ಗು ಪ್ರದೇಶ ಅಥವಾ ಆಳವಾದ ಗುಂಡಿಗಳಲ್ಲಿ ವಾಸ ಮಾಡುತ್ತಾ ಹೋಗುತ್ತದೆ. ನಂತರ ಗುಂಡಿ ಅಥವಾ ತೆಗ್ಗು ಪ್ರದೇಶದಲ್ಲಿನ ನೀರು ಸಂಪೂರ್ಣ ಬತ್ತಿ ಹೋದ ನಂತರ ಹೊರಗಡೆ ಕಾಣಿಸಿಕೊಳ್ಳಲು ಆರಂಭಿಸುತ್ತವೆ.

ಮಾರ್ಷ್‌/ ಮಗ್ಗರ್‌ ಮೊಸಳೆಗಳು ಹೆಚ್ಚಾಗಿ ತಂಪು ವಾತಾವರಣಕ್ಕೆ ಮಾತ್ರ ಹೊಂದಿಕೊಳ್ಳುತ್ತವೆ. ಹೀಗಾಗಿ ಅವು ತಮ್ಮ ದೇಹವನ್ನು ತಂಪಾಗಿಟ್ಟುಕೊಳ್ಳಲು ಬಯಸುತ್ತವೆ. ಆದರೆ, ಹೆಚ್ಚು ಶಾಖ ತಡೆದುಕೊಳ್ಳುವಷ್ಟುದೇಹ ರಚನೆಯನ್ನು ಈ ಮೊಸಳೆಗಳು ಹೊಂದಿರುವುದಿಲ್ಲ. ಒಂದು ವೇಳೆ ಹೆಚ್ಚು ತಾಪ ತಗುಲಿದರೆ ಸಾಯುವ ಸಾಧ್ಯತೆಯೂ ಇರುತ್ತದೆ ಎನ್ನುತ್ತಾರೆ ವನ್ಯಜೀವಿ ತಜ್ಞರು.

ಪ್ರಸ್ತುತ ನದಿಗಳು, ಅಣೆಕಟ್ಟಿಯಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿದೆ. ಈ ಕಾರಣಕ್ಕಾಗಿಯೇ ಮೊಸಳೆಗಳು ತಮ್ಮ ದೇಹವನ್ನು ಹೆಚ್ಚು ತಂಪಾಗಿ ಇಟ್ಟುಕೊಳ್ಳುವ ಸಂಬಂಧ ನೀರಾವರಿ ಪ್ರದೇಶಗಳು, ತೋಟದ ಪಟ್ಟಿಗಳು, ಕಬ್ಬಿನ ಹೊಲಗಳು ಸೇರಿದಂತೆ ತಂಪಾಗಿರುವ ಪ್ರದೇಶಗಳನ್ನು ಅರಸಿಕೊಂಡು ಹೋಗುತ್ತಿವೆ. ಆದರೆ, ಆಹಾರ ಹುಡುಕಿಕೊಂಡು ಮೊಸಳೆಗಳು ಬರುತ್ತಿವೆ ಎಂದು ತಪ್ಪು ಕಲ್ಪನೆ ಜನರಲ್ಲಿ ಮೂಡಿದೆ. ಅದು ತಪ್ಪು ಎನ್ನುತ್ತಾರೆ ಬಾಗಲಕೋಟೆ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಶಂಕಿನಮಠ.

ಮೊಸಳೆಗಳು ಕಂಡರೆ ಏನು ಮಾಡಬೇಕು?:

ನದಿಗಳ ತಟದಲ್ಲಿ ಮೊಸಳೆಗಳು ಕಂಡುಬಂದರೆ ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು. ಒಂದು ವೇಳೆ ನೀವೇ ಮೊಸಳೆ ಹಿಡಿದಿದ್ದರೆ, ಬಿಸಿಲು ಇರದ ಜಾಗದಲ್ಲಿ ಸಂರಕ್ಷಿಸಿ ಇಡಬೇಕು. ಅಲ್ಲದೆ, ಅವುಗಳ ಮೈಮೇಲೆ ಸೆಣಬಿನ ಚೀಲಗಳನ್ನು ಒದ್ದೆ ಮಾಡಿ ಹಾಕಬೇಕು. ಇದರಿಂದ ಅವುಗಳು ಬಿಸಿ ತಾಪದಿಂದ ಸಂರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ.

ಮುಂಗಾರು ವಿಳಂಬ: ಜಲಾಶಯ, ನದಿಗಳು ಭಣ ಭಣ, ಭೀಕರ ಬರಗಾಲದ ಛಾಯೆ?

ಮಳೆಗಾಲದಲ್ಲಿ ಹೆಚ್ಚು ಇರುವ ಪ್ರದೇಶಗಳಲ್ಲಿ ವಾಸ ಮಾಡುವ ಮೊಸಳೆಗಳು ಬೇಸಿಗೆ ವೇಳೆ ನೀರು ಖಾಲಿಯಾದ ನಂತರ ಹೊರಗಡೆ ಕಾಣಿಸಿಕೊಳ್ಳಲು ಆರಂಭಿಸುತ್ತವೆ. ಮೊಸಳೆಗಳು ಹಿಡಿದ ಮೇಲೆ ಅವುಗಳನ್ನು ಆಲಮಟ್ಟಿಹಿನ್ನೀರಿಗೆ ಬಿಡುತ್ತೇವೆ. ಇವು ಮಾಷ್‌ರ್‍ ಅಥವಾ ಮಗ್ಗರ್‌ ಪ್ರಭೇದಕ್ಕೆ ಒಳಪಟ್ಟಿದ್ದು, ಹೆಚ್ಚಾಗಿ ಕೃಷ್ಣಾ ನದಿ ವ್ಯಾಪ್ತಿಯಲ್ಲಿ ಕಂಡುಬರುತ್ತವೆ ಅಂತ ಬಾಗಲಕೋಟೆ ವಿಭಾಗ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಶಂಕಿನಮಠ ಹೇಳಿದ್ದಾರೆ.

ಮೊಸಳೆಗಳು ಯಾರ ಮೇಲೆಯೂ ದಾಳಿ ಮಾಡಲು ಹೊರಗಡೆ ಬರುವುದಿಲ್ಲ. ಅವುಗಳ ತಮ್ಮ ದೇಹವನ್ನು ತಂಪಾಗಿಡುವ ಸಂಬಂಧ ನೀರಾವರಿ ಪ್ರದೇಶವಿರುವ ಹೊಲಗಳಲ್ಲಿ ಕಾಣುತ್ತಿವೆ. ಆಹಾರ ಹುಡುಕಿಕೊಂಡು ಅವುಗಳು ಲಗ್ಗೆ ಹಾಕುವುದಿಲ್ಲ. ಜತೆಗೆ ಅವು ಯಾರ ಮೇಲೆಯೂ ದಾಳಿ ಮಾಡುವುದಿಲ್ಲ. ಆದರೆ, ಅತಿಯಾದ ಬಿಸಿಲನ್ನು ತಾಳಿಕೊಳ್ಳುವ ಶಕ್ತಿ ಅವು ಹೊಂದಿರುವುದಿಲ್ಲ. ಹೀಗಾಗಿ ಅವುಗಳು ತಂಪು ಪ್ರದೇಶವನ್ನು ಹುಡುಕಿಕೊಂಡು ಹೋಗುತ್ತವೆ ಅಂತ ಬಾಗಲಕೋಟೆಯ ಪರಿಸರ ಪ್ರೇಮಿ ಎಂ.ಆರ್‌.ದೇಸಾಯಿ ತಿಳಿಸಿದ್ದಾರೆ.  

click me!