ಕ್ರಿಮಿನಲ್ ನ್ಯಾಯಾಲಯ ಪ್ರಕರಣಗಳಲ್ಲಿ ಶೇ.95 ರಷ್ಟು ಮಂದಿ ವಿಚಾರಣೆಯಲ್ಲಿ ನಿರಪರಾಧಿಗಳೆಂದು ಬಿಡುಗಡೆಯಾಗುತ್ತಿದ್ದು, ಈ ಪ್ರಕರಣಗಳು ಇತ್ಯರ್ಥಗೊಳ್ಳುವುದಕ್ಕೆ ಸುಮಾರು 10 ವರ್ಷಗಳು ತೆಗದುಕೊಳ್ಳಲಿದ್ದು, ಈ ಬಗ್ಗೆ ಸುಧಾರಣೆಯ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಅಭಿಪ್ರಾಯ ಪಟ್ಟಿದ್ದಾರೆ.
ವರದಿ: ಶಶಿಧರ್ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣನ್ಯೂಸ್
ಉಡುಪಿ (ಡಿ.30): ಕ್ರಿಮಿನಲ್ ನ್ಯಾಯಾಲಯ ಪ್ರಕರಣಗಳಲ್ಲಿ ಶೇ.95 ರಷ್ಟು ಮಂದಿ ವಿಚಾರಣೆಯಲ್ಲಿ ನಿರಪರಾಧಿಗಳೆಂದು ಬಿಡುಗಡೆಯಾಗುತ್ತಿದ್ದು, ಈ ಪ್ರಕರಣಗಳು ಇತ್ಯರ್ಥಗೊಳ್ಳುವುದಕ್ಕೆ ಸುಮಾರು 10 ವರ್ಷಗಳು ತೆಗದುಕೊಳ್ಳಲಿದ್ದು, ಈ ಪ್ರಕ್ರಿಯೆಗಳು ಮುಗಿಯುವರೆಗೆ ಆಪಾದಿತ ವ್ಯಕ್ತಿಯು ಒಂದು ರೀತಿಯ ಶಿಕ್ಷೆಯನ್ನೇ ಅನುಭವಿಸುತ್ತಾನೆ. ಈ ಬಗ್ಗೆ ಸುಧಾರಣೆಯ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಅಭಿಪ್ರಾಯ ಪಟ್ಟಿದ್ದಾರೆ.
undefined
ಅವರು ಶುಕ್ರವಾರ ನಗರದ ಜಿಲ್ಲಾ ಕೋರ್ಟ್ ಆವರಣದಲ್ಲಿ ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಉಡುಪಿ, ವಕೀಲರ ಸಂಘ ಉಡುಪಿ ಮತ್ತು ಬೈಂದೂರು ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ನೂತನ ಅನೆಕ್ಸ್ ನ್ಯಾಯಾಲದ ಸಂಕೀರ್ಣದ ಶಿಲಾನ್ಯಾಸ ಮತ್ತು ನೂತನ ಸಿವಿಲ್ ಜಡ್ಜ್, ಜೆ.ಎಮ್.ಎಫ್.ಸಿ ನ್ಯಾಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಕ್ರಿಮಿನಲ್ ಪ್ರಕರಣದಲ್ಲಿ ಸಿಲುಕಿದ ಆಪಾದಿತ ಪೊಲೀಸ್ ಕಸ್ಟಡಿ, ನ್ಯಾಯಾಂಗ ಕಸ್ಟಡಿ, ವಿಚಾರಣೆ ಹೆಸರಿನಲ್ಲಿ ಬಹುಪಾಲು ಸಮಯ ಬಂಧನದಲ್ಲಿ ಸಿಲುಕುತ್ತಾನೆ. ಅಲ್ಲದೆ ಸುಲಭವಾಗಿ ಜಾಮೀನು ಕೂಡ ಸಿಗದೆ, ವಕೀಲರಿಗೆ ದುಬಾರಿ ಶುಲ್ಕ ಪಾವತಿಸಬೇಕಿರುವುದರಿಂದ ಆತ ಮತ್ತು ಆತನ ಕುಟುಂಬ ಆರ್ಥಿಕ ಮತ್ತು ಸಾಮಾಜಿಕವಾಗಿ ತೊಂದರೆ ಅನುಭವಿಸುತ್ತಾರೆ, ಇದಕ್ಕೆಲ್ಲಾ ಹೊಣೆ ಯಾರು ಎಂಬ ಪ್ರಶ್ನೆ ಮೂಡುತ್ತದೆ ಆದ್ದರಿಂದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ವ್ಯವಸ್ಥೆಯಲ್ಲಿ ಸುಧಾರಣೆ ಅತ್ಯಗತ್ಯವಾಗಿ ಆಗಬೇಕು ಎಂದರು.
ಪೊಲೀಸ್ ಠಾಣೆಗಳಲ್ಲಿ ಸಿವಿಲ್ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುತ್ತಿದೆ, ಪೊಲೀಸರು ಸಿವಿಲ್ ಪ್ರಕರಣ ವಿಚಾರಣೆ ಮಾಡುವಂತಿಲ್ಲ, ಇದರಿಂದ ಕ್ರಿಮಿನಲ್ ಪ್ರಕರಣ ಗಳು ಅಧಿಕವಾಗಲಿವೆ ಎಂದರು.
ಉಡುಪಿ ಜಿಲ್ಲೆಯಲ್ಲಿ ಸಿವಿಲ್ ಗಿಂತ ಕ್ರಿಮಿನಲ್ ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ ಇದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ, ಇಲ್ಲಿ ಜನರು ಕಾನೂನು ಕೈಗೆತ್ತಿಕೊಳ್ಳುತ್ತಾರೆ ಎಂಬ ಅಭಿಪ್ರಾಯ ಬರುತ್ತದೆ, ಎಫ್.ಐ.ಆರ್ ದಾಖಲಿಸಿ, ಸೂಕ್ತ ಚಾರ್ಜ್ ಶೀಟ್ ಸಲ್ಲಿಸುವುದು ಅಗತ್ಯ ಎಂದರು
ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ 3500 ಕ್ಕೂ ಅಧಿಕ ವ್ಯಾಜ್ಯಗಳಿದ್ದು ಇಲ್ಲಿಗೆ ಪ್ರತ್ಯೇಕ ನ್ಯಾಯಾಲಯ ಆರಂಭಿಸುವ ಅಗತ್ಯವಿದೆ ಎಂದರು. ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಧೀಶ ಪ್ರಸನ್ನ.ಬಿ.ವರಾಲೆ ಅಧ್ಯಕ್ಷತೆ ವಹಿಸಿದ್ದರು.
ಜಡ್ಜ್‌ಗಳ ನಿವೃತ್ತಿ ವಯಸ್ಸು ಹೆಚ್ಚಳಕ್ಕೆ ಕೇಂದ್ರ ವಿರೋಧ
ಈ ಸಂದರ್ಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಬಿ.ವೀರಪ್ಪ, ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎಸ್.ಜಿ.ಪಂಡಿತ್, ಪ್ರದೀಪ್ ಸಿಂಗ್ ಯೆರೂರ್, ವಿಶ್ವಜಿತ್ ಶೆಟ್ಟಿ, ಸಿ.ಎಮ್.ಜೋಶಿ, ಟಿ.ಜಿ ಶಿವಶಂಕರೇಗೌಡ, ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ವಿಲೇಖನಾಧಿಕಾರಿ ಮುರುಳೀಧರ ಪೈ.ಬಿ, ಶಿವಮೊಗ್ಗ ಕೇಂದ್ರದ ಲೋಕೊಪಯೋಗಿ ಮುಖ್ಯ ಇಂಜಿನಿಯರ್ ಕಾಂತರಾಜ್ ಬಿ.ಟಿ ಉಪಸ್ಥಿತರಿದ್ದರು.
Mangaluru Crime: ಮಂಗಳೂರಿನ ಕಾಟಿಪಳ್ಳದ ಜಲೀಲ್ ಹತ್ಯೆ: ಮೂವರು ಆರೋಪಿಗಳ ಬಂಧನ
ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ್ ಶಿವಪ್ಪ ಸ್ವಾಗತಿಸಿ, ಉಡುಪಿ ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್ ಸಂಕ್ಷಿಪ್ತ ವರದಿ ಮಂಡಿಸಿದರು. ಪ್ರ.ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ವಂದಿಸಿ, ನ್ಯಾಯವಾದಿ ಮೇರಿ.ಎ.ಆರ್.ಶ್ರೇಷ್ಠ ನಿರೂಪಿಸಿದರು. ಕಲಾವಿದೆ ಸಂಗೀತ ಬಾಲಚಂದ್ರ ನಾಡಗೀತೆ ಹಾಡಿದರು.