ತನ್ನ 6 ಮಂದಿ ಸಂಬಂಧಿಕರಿಗೆ ಕೊರೋನಾ ಸೋಂಕು ಹರಡುವುದಕ್ಕೆ ಕಾರಣವಾದ ಸೋಂಕಿತ ಮಹಿಳೆ ಮೇಲೆ ಉಡುಪಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.
ಉಡುಪಿ(ಜೂ.25): ತನ್ನ 6 ಮಂದಿ ಸಂಬಂಧಿಕರಿಗೆ ಕೊರೋನಾ ಸೋಂಕು ಹರಡುವುದಕ್ಕೆ ಕಾರಣವಾದ ಸೋಂಕಿತ ಮಹಿಳೆ ಮೇಲೆ ಉಡುಪಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.
ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿರುವ 30 ವರ್ಷ ವಯಸ್ಸಿನ ಅವರಿಗೆ ಕೆಲವು ದಿನಗಳ ಹಿಂದೆ ಸೋಂಕು ಪತ್ತೆಯಾಗಿತ್ತು. ನಿಯಮದಂತೆ ಅಧಿಕಾರಿಗಳು ಆಕೆಯ ಟ್ರಾವೆಲ್ - ಆ್ಯಕ್ಟಿವಿಟಿ ಹಿಸ್ಟರಿಯನ್ನು ಸಂಗ್ರಹಿಸಿ, ಆಕೆಯ ಸಂಪರ್ಕಕ್ಕೆ ಬಂದವರನ್ನೆಲ್ಲಾ ಪರೀಕ್ಷೆಗೊಳಪಡಿಸಿದ್ದರು. ಆಕೆಯ ಸಂಪರ್ಕದಲ್ಲಿ ಮಗ (5 ವರ್ಷ), ಅಪ್ಪ (63), ಮಾವ (61), ನಾದಿನಿ (23), ತುಂಬು ಗರ್ಭಿಣಿ ತಂಗಿ (22) ಮತ್ತು ಮುಂಬೈ ಸಂಬಂಧಿ (32)ಗೆ ಸೋಂಕು ಪತ್ತೆಯಾಗಿತ್ತು.
ದಕ್ಷಿಣ ಕನ್ನಡದಲ್ಲಿ ಕೊರೋನಾಕ್ಕೆ 10ನೇ ಬಲಿ, 45 ಡಿಸ್ಚಾರ್ಜ್
ಇದೀಗ ಮುಂಬೈ ಸಂಬಂಧಿ (32)ಯ ಸಂಬಂಧಿಕರಾದ 39 ವರ್ಷ, 20 ವರ್ಷ, 19 ವರ್ಷ ಮತ್ತು 15 ವರ್ಷ ವಯಸ್ಸಿನ 4 ಮಂದಿ ಮಹಿಳೆಯರಿಗೆ ಸೋಂಕು ತಗಲಿದೆ. ಆತನ ಟ್ರಾವೆಲ್ - ಆ್ಯಕ್ಟಿವಿಟಿ ಹಿಸ್ಟರಿ ತೆಗೆದಾಗ ಆತನೊಂದಿಗೆ ಈ ಲ್ಯಾಬ್ ಟೆಕ್ನಿಶಿಯನ್ ಮಹಿಳೆ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಪತ್ತೆಯಾಗಿದೆ. ಆದರೇ ಆಕೆ ಆದನ್ನು ಹೇಳದೇ ಮುಚ್ಚಿಟ್ಟಿದ್ದರು. ಇದರಿಂದ ಆಕೆಗೆ ಸೋಂಕು ಹೇಗೆ ಬಂತು ಪತ್ತೆ ಹಚ್ಚುವುದಕ್ಕೆ ಸಾಧ್ಯವಾಗದೇ ಜಿಲ್ಲಾಡಳಿತ ತಲೆಕೆಡಿಸಿಕೊಳ್ಳುವಂತಾಗಿತ್ತು.
ಆಕೆ ಮಾಹಿತಿಯನ್ನು ಮುಚ್ಚಿಟ್ಟು, ಸೋಂಕು ಹರಡುವುದನ್ನು ತಡೆಯುವುದಕ್ಕೆ ತೊಡಕಾದ್ದರಿಂದ ಆಕೆಯ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಮಾಹಿತಿ ಮುಚ್ಚಿಡುವುದು ತಪ್ಪು:
ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಯಾರೇ ಆದರೂ ಮಾಹಿತಿ ಮುಚ್ಚಿಡಬಾರದು. ಪಾಸಿಟಿವ್ ಬಂದವರು ತಮ್ಮ ಪ್ರಾಥಮಿಕ ಮತ್ತು ಸೆಕೆಂಡರಿ ಸಂಪರ್ಕದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಕೊರೋನಾ ನಿಯಂತ್ರಣಕ್ಕೆ ಜಿಲ್ಲಾಡಳಿದೊಂದಿಗೆ ಸಹಕರಿಸಬೇಕು ಎಂದು ಡಿಸಿ ತಿಳಿಸಿದ್ದಾರೆ.
ಸರ್ಕಾರದ ದಿಟ್ಟ ತೀರ್ಮಾನ, ಚೀನಾ ಮೇಡ್ ವಿದ್ಯುತ್ ಉಪಕರಣ ಬ್ಯಾನ್!
ಇದುವರೆಗೆ 6 ಪ್ರಕರಣಗಳು: ಈ ಹಿಂದೆ ದುಬೈಯಿಂದ ಬಂದಿದ್ದ ಸೋಂಕಿತ ವ್ಯಕ್ತಿಯೊಬ್ಬರು ಹೋಂ ಕ್ವಾರಂಟೈನ್ ಮಾಡದೆ ಊರು ತುಂಬಾ ತಿರುಗಿದ್ದ ಹಿನ್ನೆಲೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಹೋಂ ಕ್ವಾರಂಟೈನ್ ಮಾಡದ ಇನ್ನಿಬ್ಬರ ಮೇಲೂ ಕೇಸು ದಾಖಲಾಗಿದೆ. ಸೋಂಕಿತರಿಂದ ಆಸ್ಪತ್ರೆಯಲ್ಲಿ ಲಕ್ಷಾಂತರ ರು. ವಸೂಲಿ ಮಾಡಲಾಗುತ್ತಿದೆ ಎಂಬ ಸುಳ್ಳು ಸುದ್ದಿ ಹರಡಿದ ಮತ್ತು ಕೋವಿಡ್ ವಾರಿಯರ್ ಆಶಾ ಕಾರ್ಯಕರ್ತೆಗೆ ಜೀವಬೆದರಿಕೆ ಹಾಕಿದ ಬಗ್ಗೆಯೂ ಕೇಸು ದಾಖಲಾಗಿವೆ.