ಎರಡನೇ ಬೆಳೆಗೆ ಬಹುತೇಕ ಭಾಗದ ರೈತರ ಭೂಮಿಗೆ ಸಿಗದ ನೀರು
ನಾಲೆಗಳು ಬಿರುಕು ಬಿಟ್ಟು ಅಪಾರ ಪ್ರಮಾಣದ ನೀರು ಪೋಲು
ಮಾದಾಪುರ, ಹೆಬ್ಬಾಲೆ, ಶಿರಂಗಾಲ ಮತ್ತು ನಲ್ಲೂರು ಗ್ರಾಮಗಳ ರೈತರ ಪರದಾಟ
ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜ.08): ಕೊಡಗು ಜಿಲ್ಲೆಯಲ್ಲಿ ಕಾವೇರಿ, ಹಾರಂಗಿ, ಪಯಶ್ವಿನಿ, ಲಕ್ಷ್ಮಣ ತೀರ್ಥ, ಚಿಕ್ಲಿಹೊಳೆ ಹೀಗೆ ಹಲವು ನದಿಗಳು ಹುಟ್ಟಿ ಹರಿಯುತ್ತವೆ. ಆದರೂ ಜಿಲ್ಲೆಯ ಕೆಲವೇ ಭಾಗದಲ್ಲಿ ಮಾತ್ರವೇ ರೈತರಿಗೆ ನೀರಾವರಿ ಸೌಲಭ್ಯವಿದೆ ಎನ್ನುವುದು ಬೇಸರದ ಸಂಗತಿ. ಅದು ಕೂಡ ಹಾರಂಗಿ ಜಲಾಶಯದಿಂದ ಮಾತ್ರ.
undefined
ಹೌದು 8.7 ಕ್ಯುಸೆಕ್ ನೀರು ಸಾಮರ್ಥ್ಯದ ಹಾರಂಗಿ ಜಲಾಶಯದಿಂದ ಕುಶಾಲನಗರ ತಾಲ್ಲೂಕಿನ ಮಾದಾಪುರ, ಹೆಬ್ಬಾಲೆ, ಶಿರಂಗಾಲ ಮತ್ತು ನಲ್ಲೂರು ಸೇರಿದಂತೆ ಒಂದಷ್ಟು ಭಾಗದಲ್ಲಿ ರೈತರಿಗೆ ಬೇಸಿಗೆ ಬೆಳೆಗೆ ನೀರು ಪೂರೈಸುವ ದೃಷ್ಟಿಯಿಂದ ಹಾರಂಗಿ ಜಲಾಶಯ ಮಾಡಲಾಗಿದೆ. ಜೊತೆಗೆ ಮೈಸೂರು ಜಿಲ್ಲೆಯ ಹುಣುಸೂರು, ಪಿರಿಯಾಪಟ್ಟಣ ಮತ್ತು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೆಲವು ಭಾಗದ ರೈತರಿಗೆ ನೀರು ಪೂರೈಸುವುದು ಉದ್ದೇಶದಿಂದ ಜಲಾಶಯ ನಿರ್ಮಿಸಲಾಗಿತ್ತು. ಹೀಗಾಗಿ ಎಡದಂಡೆ ಮತ್ತು ಬಲದಂಡೆ ನಾಲೆಗಳನ್ನು ನಿರ್ಮಿಸಲಾಗಿದೆ.
Kodagu: ಹೃದಯಾಘಾತಕ್ಕೆ 6ನೇ ತರಗತಿ ವಿದ್ಯಾರ್ಥಿ ಬಲಿ
ನಿರ್ವಹಣೆಯಿಲ್ಲದೆ ಸೋರುತ್ತಿದೆ ನಾಲೆ: ವಿಪರ್ಯಾಸವೆಂದರೆ ನಾಲೆಗಳ ನಿರ್ವಹಣೆ ಇಲ್ಲದೆ ಅಪಾರ ಪ್ರಮಾಣದ ನೀರು ಸೋರಿಕೆಯಾಗಿ ಪೋಲಾಗುತ್ತಿದೆ. ಇದರಿಂದಾಗಿ ಪಿರಿಯಾಪಟ್ಟಣ, ಹುಣುಸೂರು ಮತ್ತು ಅರಕಲಗೂಡು ವ್ಯಾಪ್ತಿಯ ರೈತರಿಗೆ ನೀರು ಪೂರೈಕೆ ಆಗುತ್ತಿಲ್ಲ. ಇದರಿಂದಾಗಿ ರೈತರು ಎರಡು ಬೆಳೆಗಳನ್ನು ಬೆಳೆಯುವ ಕನಸು ಸಂಪೂರ್ಣ ಭಗ್ನವಾಗಿದೆ. ಹಾರಂಗಿ ಜಲಾಶಯದಿಂದ ಒಂದೆರಡು ಕಿಲೋ ಮೀಟರ್ ದೂರದಿಂದಲೇ ಅಂದರೆ ಮಾದಲಾಪುರ, ಬ್ಯಾಡಗೊಟ್ಟ ಸೇರಿದಂತೆ ಹಲವೆಡೆ ಎಡದಂಡೆ ಮೇಲು ಕಾಲುವೆಯಲ್ಲಿ ಭಾರೀ ಪ್ರಮಾಣದ ನೀರು ಸೋರಿಕೆ ಆಗುತ್ತಿದೆ.
ಮೇಲು ಕಾಲುವೆಗಳು ಕುಸಿಯುವ ಆತಂಕ: ಜಲಾಶಯದ ಸ್ವಲ್ಪ ದೂರದಿಂದಲೇ ಭಾರೀ ಪ್ರಮಾಣದ ನೀರು ಸೋರಿಕೆ ಆಗುತ್ತಿರುವುದರಿಂದ ಪಿರಿಯಾಪಟ್ಟಣ, ಹುಣುಸೂರು ಮತ್ತು ಅರಕಲಗೂಡು ಭಾಗಗಳಿಗೆ ನೀರು ಪೂರೈಕೆ ಆಗುವ ಮಾತಿರಲಿ, ಕೊಡಗಿನ ಹೆಬ್ಬಾಲೆ, ಶಿರಂಗಾಲ ಭಾಗದ ರೈತರ ಭೂಮಿಗೆ ನೀರು ಪೂರೈಕೆ ಆಗುತ್ತಿಲ್ಲ. ಇದರಿಂದ ರೈತರು ಎರಡನೇ ಬೆಳೆಗೆ ನೀರಿಲ್ಲದೆ ಪರಿಪಾಟಲು ಪಡಬೇಕಾಗಿದೆ. ಇನ್ನು ಮೇಲು ಕಾಲುವೆಗಳು ಅಲ್ಲಲ್ಲಿ ಸಾಕಷ್ಟು ಬಿರುಕು ಬಿಟ್ಟಿದ್ದು ಕುಸಿದು ಬೀಳುತ್ತವೆಯೇ ಎನ್ನುವ ಆತಂಕವೂ ರೈತರು ಹಾಗೂ ಆ ಭಾಗಗಳ ರೈತರಲ್ಲಿ ಮನೆ ಮಾಡಿದೆ. ಒಂದು ವೇಳೆ ಆ ರೀತಿ ಆಗಿದ್ದೇ ಆದಲ್ಲಿ ದೊಡ್ಡ ಅನಾಹುತವೇ ಸಂಭವಿಸುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಾರೆ.
ಕೊನೆ ಭಾಗದ ನಾಲೆಗಳಿಗೆ ನೀರಿಲ್ಲ: ಹಾರಂಗಿ ಕಾಲುವೆಗಳ ನಿರ್ವಹಣೆಗಾಗಿ ಪ್ರತೀ ವರ್ಷ ಕೋಟ್ಯಂತರ ರೂಪಾಯಿ ಹಣ ಬಿಡುಗಡೆಯಾಗುತ್ತದೆ. ಅಲ್ಲದೆ ಹಲವು ಕಡೆಗಳಲ್ಲಿ ದುರಸ್ಥಿ ಕಾಮಗಾರಿಯೂ ನಡೆಯುತ್ತದೆ. ಆದರೂ ಮತ್ತೆ ಮತ್ತೆ ಇದೇ ರೀತಿ ದೊಡ್ಡ ಭಾರೀ ಪ್ರಮಾಣದ ನೀರು ಸೋರಿಕೆಯಾಗುತ್ತಿದೆ. ಜಲಾಶಯದಿಂದ ಕಾಲುವೆಗಳಲ್ಲಿ ಭರ್ತಿಯಾಗಿ ಹರಿಯುವಂತೆ ನೀರು ಹರಿಸಲಾಗುತ್ತದೆ. ಆದರೂ ಹಲವೆಡೆ ಹೀಗೆ ನೀರು ಸೋರಿಕೆಯಾಗುವುದರಿಂದ ಹುಣಸೂರು, ಪಿರಿಯಾಪಟ್ಟಣದ ಭಾಗಗಳಿಗೆ ನೀರು ಹರಿಯುತ್ತಿಲ್ಲ. ಹೀಗಾಗಿ ಭೂಮಿಗೆ ನೀರಿಲ್ಲದೆ ರೈತರು ಪರದಾಡುತ್ತಿದ್ದಾರೆ.
Kodagu: ಹಿಂದೂ ಧರ್ಮ ವಿರೋಧಿ ಪುಸ್ತಕ ಮಾರಾಟ ಯತ್ನ: ಓರ್ವನ ಬಂಧನ
ದೂರು ನೀಡಿದರೂ ಅಧಿಕಾರಿಗಳ ನಿರ್ಲಕ್ಷ್ಯ: ನೀರು ಸೂರಿಕೆ ಆಗುವ ಬಗ್ಗೆ ಹಲವು ಬಾರಿ ಹಾರಂಗಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಕೂಡ ಆಗಿಂದಾಗ್ಗೆ ಬಂದು ಪರಿಶೀಲಿಸುವುದರಿಲ್ಲ ಎನ್ನುವುದು ಮದಲಾಪುರದ ರೈತರಾದ ಪುಟ್ಟಣ್ಣಯ್ಯ ಅವರ ಆರೋಪ. ಒಟ್ಟಿನಲ್ಲಿ ರೈತರು ಎರಡು ಬೆಳೆಗಳನ್ನು ಬೆಳೆದು ತಮ್ಮ ಬದುಕನ್ನು ಹಸನಾಗಿಸಿಕೊಳ್ಳಲೆಂದು ಸರ್ಕಾರಗಳು ಜಾರಿಗೆ ತಂದಿರುವ ನೀರಾವರಿ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ವ್ಯರ್ಥವಾಗುತ್ತಿದೆ. ಬೇಸಿಗೆ ಸಮಯದಲ್ಲಿ ಮುಖ್ಯ ನಾಲೆಗಳಲ್ಲಿ ನೀರು ಹರಿಯುವುದಿಲ್ಲ. ಹೀಗಾಗಿ ಆ ಸಂದರ್ಭದಲ್ಲಾದರೂ ಕಾಲುವೆಗಳನ್ನು ಸರಿಪಡಿಸಿ ರೈತರಿಗೆ ಅನುಕೂಲವಾಗುವಂತೆ ರೈತರು ಮಾಡಬೇಕಾಗಿದೆ.