ಬಾದಾಮಿ: ಬನಶಂಕರಿ ಜಾತ್ರೆಯಲ್ಲಿ ಖರೀದಿ-ಮಾರಾಟ ಭರಾಟೆ

By Kannadaprabha NewsFirst Published Jan 8, 2023, 8:00 PM IST
Highlights

ಮಹಿಳೆಯರಿಗೆ ಶೃಂಗಾರದ ವಸ್ತು ಮನೆಯ ಬಾಗಿಲು ಚೌಕಟ್ಟುಗಳು ರೈತರಿಗೆ ಕೃಷಿ ಚಟುವಟಿಕೆಗಳಿಗೆ ಬಳಸುವ ಗುಡಾರ, ಚಕ್ಕಡಿ, ಎತ್ತುಗಳಿಗೆ ಶೃಂಗಾರ ವಸ್ತಗಳು ಸಿಗುತ್ತವೆ. ಅಂಗಡಿ ಮಾಲೀಕರ ಮತ್ತು ಜಾತ್ರಗೆ ಬಂದ ಗ್ರಾಹಕರ ವಿಸ್ವಾಸದಿಂದ ಲಕ್ಷಾಂತರ ರೂಪಾಯಿ ವ್ಯಾಪಾರು ವಹಿವಾಟು ನಡೆಯುತ್ತದೆ. 

ಶಂಕರ ಕುದರಿಮನಿ

ಬಾದಾಮಿ(ಜ.08): ಇಲ್ಲಿನ ಬನಶಂಕರಿದೇವಿ ಜಾತ್ರೆ 5 ದಿನಗಳಿಂದ ಆರಂಭಗೊಂಡಿದ್ದು ಜಾತ್ರೆಯಲ್ಲಿ ದೊರಕುವ ವಿವಿಧ ವಸ್ತುಗಳ ಖರೀದಿ ಮತ್ತು ಮಾರಟದ ಭರಾಟೆಯಲ್ಲಿ ಜನತೆ ಮಗ್ನರಾಗಿರುತ್ತಾರೆ. ಯಾತ್ರಿಕರನ್ನು ಆಕರ್ಷಿಸಲು ಅಂಗಡಿಕಾರರು ಅಂಗಡಿಗಳಿಗೆ ವಿದ್ಯುತ್‌ ಅಲಂಕಾರ ಮಾಡಿ ವಿವಿಧ ನಮೂನೆಯ ವಸ್ತುಗಳನ್ನು ಮಾರಾಟಕ್ಕೆ ಇಟ್ಟಿರುತ್ತಾರೆ. ಇವುಗಳನ್ನು ನೋಡಿದ ಜನತೆ ಖರೀದಿ ಮಾಡಲು ಮುಗಿ ಬೀಳುವಂತೆ ಆಕರ್ಷಣೆ ಮಾಡಿರುತ್ತಾರೆ.

ಗ್ರಾಮೀಣ ಪ್ರದೇಶದಿಂದ ಬಂದ ರೈತರು ಮತ್ತು ಮಹಿಳೆಯರು ಹಾಗೂ ನೌಕರರು ಮನೆ ಖರೀದಿಯ ಗೃಹೋಪಯೋಗಿ ವಸ್ತುಗಳ ಖರೀದಿಯನ್ನು ಜೋರಾಗಿ ನಡೆಸಿದ್ದರು. ಈಜಾತ್ರೆಯಲ್ಲಿ ವಿವಿಧ ಜಿಲ್ಲೆ ಮತ್ತು ರಾಜ್ಯಗಳಿಂದ ಉತ್ತರಪ್ರದೇಶ, ಹರಿಯಾಣ, ಗುಜರಾತ, ಸೊಲ್ಲಾಪೂರ, ವಿಜಯಪುರ, ಇಂಡಿ, ಸಿಂದಗಿ, ರಾಮದುರ್ಗ, ಅಮೀನಗಡ, ಹೊಳೆಆಲೂರ, ಊರುಗಳಿಂದ ಎಲ್ಲ ಬಗೆಯ ಅಂಗಡಿಗಳು ಟೆಂಟ್‌ಗಳ ಮುಖಾಂತರ ಹಾಕಿ ವ್ಯಾಪಾರ ವಹಿವಾಟುಗಳನ್ನು ಮಾಡುತ್ತಾರೆ.
ದೇವಾಲಯದ ಸುತ್ತ ಒಂದು ಕಿ.ಮೀ. ಸುತ್ತ ಅಂಗಡಿಗಳಿಂದ ಭರ್ತಿಯಾಗಿ ಈ ಪ್ರದೇಶದಲ್ಲಿ ಒಂದು ನೂತನ ನಗರವೇ ಸೃಷ್ಟಿಯಾದಂತೆ ಗೋಚರಿಸುತ್ತದೆ. ಈ ಜಾತ್ರೆಯಲ್ಲಿ ಅಂದಾಜು ಒಂದು ತಿಂಗಳದಲ್ಲಿ .50 ಕೋಟಿವರೆಗೂ ವ್ಯಾಪಾರ ವಹಿವಾಟು ನಡೆಯುತ್ತದೆ. ದೇವಿ ಜಾತ್ರೆಗೆ ಬಂದ ಭಕ್ತರು ಪೂಜೆಗೆ ಸೀರೆ, ಕಣ, ಕಾಯಿ, ಕರ್ಪೂರ, ಹಣ್ಣು, ಹೂವುಗಳನ್ನು ಸಲ್ಲಿಸಿದ ನಂತರ ಮಹಿಳೆಯರು ಕುಂಕುಮ ಖರೀದಿಸಿ ಬಳೆಯನ್ನು ಇಟ್ಟುಕೊಂಡು ಹೋಗುವ ಸಂಪ್ರದಾಯ ಪುರಾತನ ಕಾಲದಿಂದಲೂ ಬಂದಿದೆ.

ಬಾದಾಮಿ: ಬನಶಂಕರಿ ನಿನ್ನಪಾದಕೆ ಶಂಭುಕೋ..!

ಮದುವೆಯಾಗಿ ಪತಿಯ ಮನೆಗೆ ಹೋದ ಮಹಿಳೆಯರು ಮಕ್ಕಳ ಸಮೇತ ಬನಶಂಕರಿದೇವಿ ಜಾತ್ರೆಗೆ ಆಗಮಿಸುವರು. ಜಾತ್ರೆಯ ನಂತರ ಪತಿಯ ಮನೆಗೆ ತೆರಳಿದ ಮೇಲೆ ನೆರೆ ಹೊರೆಯವರಿಗೆ ಪಳಾರ, ಕುಂಕುಮ, ಬಳೆ, ಮತ್ತು ಬಾಳೆಹಣ್ಣನ್ನು ಪ್ರಸಾದವೆಂದು ವಿತರಿಸುವರು.

ಕೃಷಿ ಸಾಮಾನು:

ಕಬ್ಬಿಣದ ಕುಡುಚಿ, ಗುದ್ದಲಿ, ಸಲಿಕೆ, ರಂಟಿ ಕೂರಿಗೆಗೆ ಬೇಕಾಗುವ ಮತ್ತು ಎತ್ತುಗಳ ಸಿಂಗಾರ ಸಾಧನಗಳು, ಹಗ್ಗ, ಗಂಟೆ, ಸೇರಿ ಮತ್ತಿತರರ ಸಾಮಗ್ರಿಗಳನ್ನು ರೈತ ಭಾಂದವರು ಚೌಕಾಸಿ ನಡೆಸಿ ಖರೀದಿಸುವುದಕ್ಕೆ ಅವಕಾಶವಿರುತ್ತದೆ.

ಗೃಹೋಪಯೋಗಿ:

ನಿತ್ಯ ಜೀವನಕ್ಕೆ ಬೇಕಾದ ಅಡುಗೆ ಪಾತ್ರೆಗಳು, ಬಿದರಿನ ಬುಟ್ಟಿ, ಸ್ವಚ್ಛ ಮಾಡುವ ಮರಗಳು, ಹಂಚುಗಳು, ತರ ತರಹದ ಅಲ್ಯುಮಿನಿಯಂ ಹಾಗೂ ಕಬ್ಬಿಣದ ಪಾತ್ರೆಗಳು ದೊರಕುತ್ತವೆ. ಮಕ್ಕಳನ್ನು ಆಕರ್ಷಿಸುವ ಆಟಿಕೆ ಸಾಮಾನುಗಳು ಮಕ್ಕಳನ್ನು ಆಕರ್ಷಿಸುವಲ್ಲಿ ಯಶಸ್ವಿ ಕಂಡಿವೆ. ಜಾತ್ರೆಗೆ ಆಗಮಿಸಿರುವ ಪ್ರತಿಯೊಂದು ಮಕ್ಕಳು ನನಗೆ ಅದು ಬೇಕು ಇದು ಬೇಕು ಎನ್ನುವ ಆಟಿಕೆಗಳು ಲಭ್ಯವಿರುತ್ತವೆ

ಮಹಿಳೆಯರಿಗೆ ಶೃಂಗಾರದ ವಸ್ತು ಮನೆಯ ಬಾಗಿಲು ಚೌಕಟ್ಟುಗಳು ರೈತರಿಗೆ ಕೃಷಿ ಚಟುವಟಿಕೆಗಳಿಗೆ ಬಳಸುವ ಗುಡಾರ, ಚಕ್ಕಡಿ, ಎತ್ತುಗಳಿಗೆ ಶೃಂಗಾರ ವಸ್ತಗಳು ಸಿಗುತ್ತವೆ. ಅಂಗಡಿ ಮಾಲೀಕರ ಮತ್ತು ಜಾತ್ರಗೆ ಬಂದ ಗ್ರಾಹಕರ ವಿಸ್ವಾಸದಿಂದ ಲಕ್ಷಾಂತರ ರೂಪಾಯಿ ವ್ಯಾಪಾರು ವಹಿವಾಟು ನಡೆಯುತ್ತದೆ. ಇದಕ್ಕಾಗಿ ಎಲ್ಲ ವ್ಯಾಪಾರಸ್ಥರು ಹುಬ್ಬಳ್ಳಿ, ಗದಗ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಹೋಲಸೇಲ ರೂಪದಲ್ಲಿ ವಸ್ತುಗಳನ್ನು ಖರೀದಿಸಿ ತರುತ್ತಾರೆ.

click me!