ಉಳ್ಳಾಲದಲ್ಲಿ ಸಾಮುದಾಯಿಕವಾಗಿ ಕೊರೋನ ಸೋಂಕು ಹರಡುತ್ತಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಪ್ರದೇಶದ ಮೀನುಗಾರರ, ರಿಕ್ಷಾ ಚಾಲಕರ, ರಸ್ತೆ ಬದಿ ವ್ಯಾಪಾರಸ್ಥರನ್ನು ಕಡ್ಡಾಯವಾಗಿ ಪರೀಕ್ಷೆ ಮಾಡಬೇಕು ಮತ್ತು ಸೋಂಕಿತ ಪ್ರದೇಶದಲ್ಲಿ ರಾಂಡಮ್ ಪರೀಕ್ಷೆ ಮಾಡಬೇಕು ಎಂದು ಶಾಸಕ ಯು. ಟಿ. ಖಾದರ್ ತಿಳಿಸಿದ್ದಾರೆ.
ಉಳ್ಳಾಲ(ಜೂ.27): ಉಳ್ಳಾಲದಲ್ಲಿ ಸಾಮುದಾಯಿಕವಾಗಿ ಕೊರೋನ ಸೋಂಕು ಹರಡುತ್ತಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಪ್ರದೇಶದ ಮೀನುಗಾರರ, ರಿಕ್ಷಾ ಚಾಲಕರ, ರಸ್ತೆ ಬದಿ ವ್ಯಾಪಾರಸ್ಥರನ್ನು ಕಡ್ಡಾಯವಾಗಿ ಪರೀಕ್ಷೆ ಮಾಡಬೇಕು ಮತ್ತು ಸೋಂಕಿತ ಪ್ರದೇಶದಲ್ಲಿ ರಾಂಡಮ್ ಪರೀಕ್ಷೆ ಮಾಡಬೇಕು ಎಂದು ಶಾಸಕ ಯು. ಟಿ. ಖಾದರ್ ತಿಳಿಸಿದರು.
ಉಳ್ಳಾಲ ಪ್ರದೇಶದ ಆಝಾದ್ ನಗರ, ಕೋಡಿ, ಪೊಲೀಸ್ ಠಾಣೆ, ಬಂಗೇರ ಲೇನ್, ಖಾಸಗಿ ಆಸ್ಪತ್ರೆ ಪ್ರದೇಶದಲ್ಲಿ ಕೊರೋನಾ ಸೋಂಕು ದೃಢಪಟ್ಟು ಮಹಿಳೆಯೊಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪ್ರಕರಣ ಗಂಭೀರವಾಗಿ ಪರಿಗಣಿಸಿ ಆ ಪ್ರದೇಶದ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು ಮತ್ತು ಪ್ರಮುಖರೊಂದಿಗೆ ಉಳ್ಳಾಲ ನಗರಸಭೆ ಸಭಾಂಗಣದಲ್ಲಿ ನಡೆದ ತುರ್ತು ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ದೂರು ಕೊಟ್ಟವಳನ್ನು ಗಂಡನ ಮನೆ ಸೇರಿಸಿದ ಪೊಲೀಸರು: ಮಹಿಳೆಗೆ ಖಾಕಿ ಕಾವಲು
ಉಳ್ಳಾಲ ನಗರ ಸಭೆ ಆರೋಗ್ಯವಂತ ನಗರ ಸಭೆಯಾಗಬೇಕೆಂಬ ಉದ್ದೇಶದಿಂದ ಸೋಮವಾರ ಉಳ್ಳಾಲ ದರ್ಗಾ ಸಮಿತಿ, ಸಬೆಸ್ಟಿಯನ್ ಚರ್ಚಿನ ಧರ್ಮ ಗುರುಗಳು ಮತ್ತು ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರ, ಮೊಗವೀರ ಪಟ್ನದ ಮುಖಂಡರು ಮತ್ತು ಉಳಿಯ ಕ್ಷೇತ್ರ, ಬಂಡಿಕೊಟ್ಯ ಕ್ಷೇತ್ರದ ಮತ್ತು ಮಸೀದಿ, ಚರ್ಚಿನ ಹಾಗೂ ಸಂಘ ಸಂಸ್ಥೆ ಮುಖ್ಯಸ್ಥರೊಂದಿಗೆ ಸಭೆ ನಡೆಸಲಿದ್ದೇವೆ. ಎಲ್ಲರೂ ಸಹಕಾರ ನೀಡಬೇಕು. ಉಳ್ಳಾಲದಲ್ಲಿ ಮಾಸ್ಕ್ ಕಡ್ಡಾಯ ಮಾಡಲಿದ್ದು ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ದೈನಂದಿನ ಕಾರ್ಯ ನಡೆಸಬೇಕು ಎಂದರು.
ಸೀಲ್ಡೌನ್ ಪ್ರದೇಶದಲ್ಲಿ ಸಂಪೂರ್ಣ ಸ್ಯಾನಿಟೈಸರ್ ವ್ಯವಸ್ಥೆ: ಕೊರೋನಾ ಸೋಂಕು ಪ್ರದೇಶವನ್ನು ಸಂಪೂರ್ಣ ಸ್ಯಾನಿಟೈಸರ್ ಮಾಡಲು ಆದೇಶ ನೀಡಲಾಗಿದೆ. ಫಯರ್ ಸರ್ವಿಸ್ ವಾಹನ ಬಳಸಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಸಂಘ ಸಂಸ್ಥೆಯವರು, ಕೊರೋನಾದ ಬಗ್ಗೆ ಜನಪ್ರತಿನಿಧಿಗಳು, ಮನೆಮನೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ. ಈ ಪ್ರದೇಶದ ಜನರ ರಾರಯಂಡಂ ಗಂಟಲು ಧ್ರವ ಪರೀಕ್ಷೆಯನ್ನು ಮಾಡಲಾಗುವುದು ಎಂದರು.
ಉಳ್ಳಾಲ ನಗರಸಭೆ ಪೌರಾಯುಕ್ತ ರಾಯಪ್ಪ, ಉಳ್ಳಾಲ ದರ್ಗಾದ ಅಧ್ಯಕ್ಷ ಅಬ್ದುಲ್ ರಶೀದ್, ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಕಾರಿ ಡಾ. ಪ್ರಶಾಂತ್, ಉಳ್ಳಾಲ ನಗರ ಸಭೆಯ ಆರೋಗ್ಯ ಅಧಿಕಾರಿ ಜಯಶಂಕರ್, ಜಿಲ್ಲಾ ಆರೋಗ್ಯ ಕೇಂದ್ರದ ರತ್ನಾಕರ್, ಉಳ್ಳಾಲ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನದ ಮುಖ್ಯಸ್ಥರಾದ ಶ್ರೀಕರ ಕಿಣಿ, ಕೋಡಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಹಮೀದ್ ಕೋಡಿ, ಕೋಟೆಪುರ ಮಸೀದಿ ಅಧ್ಯಕ್ಷ ಅಬ್ಬಾಸ್ ಕೋಟೆಪುರ ಮತ್ತು ಮುಕ್ಕಚ್ಚೇರಿ ಮಸೀದಿ ಸದಸ್ಯ ನಾಝಿಂ ಮುಕ್ಕಚ್ಚೇರಿ, ಸಾಮಾಜಿಕ ಮುಂದಾಳು ಮೋನು ಯು. ಕೆ. ಎಫ್, ಉಳ್ಳಾಲ ನಗರ ಸಭೆ ಸದಸ್ಯರಾದ ಬಾಝಿಲ್ ಡಿ’ಸೋಜ, ಅಯ್ಯೂಬ್ ಯು. ಪಿ, ಇಬ್ರಾಹಿಂ ಅಶ್ರಫ್, ಅಝೀಝ್ ಕೋಡಿ, ರವಿಚಂದ್ರ ಗಟ್ಟಿ, ಸ್ವಪ್ನಾ ಹರೀಶ್, ಭಾರತಿ, ಶಶಿಕಲಾ, ನಗರ ಸಭಾ ಮಾಜಿ ಅಧ್ಯಕ್ಷ ಹುಸೈನ್ ಕುಂಞತಮೋನು, ಮನ್ಸೂರ್ ಅಳೇಕಲ ಮತ್ತು ಕರೀಂ ಅಳೇಕಲ ಉಪಸ್ಥಿತರಿದ್ದರು.