ಸಿಎಂ ಯಡಿಯೂರಪ್ಪಗೆ ರೈತರ ಪರ ಕಾಳಜಿ ಇದೆ: ಜಾರಕಿಹೊಳಿ

By Kannadaprabha NewsFirst Published Jun 27, 2020, 7:47 AM IST
Highlights

370 ಕೋಟಿ ವೆಚ್ಚದಲ್ಲಿ ವಿಜಯನಗರ ಕಾಲುವೆ ಆಧುನಿಕರಣ| ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಚಾಲನೆ| ವಿಜಯನಗರ ಕಾಲುವೆಗಳನ್ನು 350 ವರ್ಷಗಳ ಹಿಂದೆ ಶ್ರೀಕೃಷ್ಣದೇವರಾಯರು ನಿರ್ಮಿಸಿದ್ದಾರೆ| ವಿಜಯನಗರ ಅರಸರು 15 ಕಾಲುವೆ ಹಾಗೂ 16 ಚೆಕ್‌ ಡ್ಯಾಂ ನಿರ್ಮಿಸಿ 11,000 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದ್ದಾರೆ|

ಮುನಿರಾಬಾದ(ಜೂ. 27): 370 ಕೋಟಿ ವೆಚ್ಚದಲ್ಲಿ ಆಧುನಿಕರಣವಾಗುತ್ತಿರುವ ಕೊಪ್ಪಳ ಜಿಲ್ಲಾ ವ್ಯಾಪ್ತಿಯ ವಿಜಯನಗರ ಕಾಲುವೆಗಳಾದ ಶಿವಪುರ, ಹುಲಿಗಿ ಹಾಗೂ ಇತರೆ ಕಾಲುವೆಗಳ ಕಾಮಗಾರಿಗೆ ಹುಲಿಗಿಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವರು, ವಿಜಯನಗರ ಕಾಲುವೆಗಳನ್ನು 350 ವರ್ಷಗಳ ಹಿಂದೆ ಶ್ರೀಕೃಷ್ಣದೇವರಾಯರು ನಿರ್ಮಿಸಿದ್ದಾರೆ. ವಿಜಯನಗರ ಅರಸರು 15 ಕಾಲುವೆ ಹಾಗೂ 16 ಚೆಕ್‌ ಡ್ಯಾಂ ನಿರ್ಮಿಸಿ 11,000 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದ್ದಾರೆ. ಈಗ ಈ ಕಾಲುವೆಗಳು ದುರಸ್ತಿಗೆ ಬಂದಿದ್ದು ಇವುಗಳನ್ನು ಆಧುನಿಕರಣಗೊಳಿಸಬೇಕು ಎಂಬ ಈ ಭಾಗದ ರೈತರ ಬಹು ದಿನದ ಬೇಡಿಕೆ ಹಿನ್ನೆಲೆಯಲ್ಲಿ . 370 ಕೋಟಿ ಬಿಡುಗಡೆ ಮಾಡಿ ಆಧುನಿಕರಣಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಎಡದಂಡೆ ಹಾಗೂ ಬಲದಂಡೆ ಭಾಗದಲ್ಲಿರುವ ಎಲ್ಲ ವಿಜಯನಗರ ಕಾಲುವೆಗಳು 215 ಕಿಮಿಗಳಿದ್ದು ಅಲ್ಲದೇ ಕೊಪ್ಪಳ, ಗಂಗಾವತಿ, ಹೊಸಪೇಟೆ, ಕಂಪ್ಲಿ ಹಾಗೂ ಸಿರುಗುಪ್ಪ ಭಾಗದಲ್ಲಿ 16 ಚೆಕ್‌ ಡ್ಯಾಂ ಆಧುನಿಕರಣ ಮಾಡಲಾಗುವುದು. ಈ ಕಾಮಗಾರಿ 30 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಸಚಿವರು ತಿಳಿಸಿದರು. ರಾಯ ಹಾಗೂ ಬಸವಣ್ಣ ಕಾಲುವೆಗಳಿಗೆ ವರ್ಷದ 11 ತಿಂಗಳು ನೀರು ಹರಿಸಲಾಗುತ್ತಿದೆ. ಈ ಕಾಲುವೆಗಳಲ್ಲಿ ನೀವು ಹೇಗೆ ಕಾಮಗಾರಿ ನಡೆಸಲಾಗುವುದು ಎಂಬ ಪ್ರಶ್ನೆಗೆ, ಎಲ್ಲ ತಾಂತ್ರಿಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರೈತರಿಗೆ ತೊಂದರೆ ಅಗದಂತೆ ಕಾಮಗಾರಿ ನಡೆಸಲಾಗುವುದು ಎಂದು ಸಚಿವರು ಹೇಳಿದರು.

ಅಂದು ಶೌಚಾಲಯ ತೊಳೆದಿದ್ದ ಕೈಗಳಲ್ಲಿ ಇಂದು ಗುದ್ದಲಿ: ಕಾಯಕವೇ ಕೈಲಾಸ ಎಂದ ಗವಿಮಠ ಶ್ರೀಗಳು..!

ಇದೇ ತಿಂಗಳು ಶಾಸಕ ರಾಘವೇಂದ್ರ ಹಿಟ್ನಾಳ್‌ ಇದೇ ಸ್ಥಳದಲ್ಲಿ ಕಾಮಗಾರಿ ಈ ಚಾಲನೆ ನೀಡಿದ್ದರು. ಇದೀಗ ಮತ್ತೊಮ್ಮೆ ನೀವು ಚಾಲನೆ ನೀಡಿದ್ದೀರಿ ಎಂಬ ಪ್ರಶ್ನೆಗೆ ಸಚಿವರು, ನಾನು ಇದೇ ಮೊದಲ ಬಾರಿಗೆ ಸಚಿವನಾದ ಬಳಿಕ ಬಂದಿದ್ದೇನೆ. ಈ ಬಗ್ಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.

ಈ ವೇಳೆ ಸಂಸದ ಕರಡಿ ಸಂಗಣ್ಣ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಹಾಲಪ್ಪ ಆಚಾರ್‌, ಪರಣ್ಣ ಮನವಳ್ಳಿ, ಬಸವರಾಜ ದಢೇಸಗೂರು, ಕಾಡಾ ಅಧ್ಯಕ್ಷ ಬಸವನಗೌಡ ತುರ್ವಿಹಾಳ, ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಮಂಜಪ್ಪ, ಅಧೀಕ್ಷಕ ಅಭಿಯಂತರ ರಾಠೋಡ್‌, ಪ್ರಗತಿಪರ ರೈತ ಹಾಗೂ ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ರಮೇಶ ವೈದ್ಯ, ಬಿಜೆಪಿ ಮುಖಂಡರಾದ ಪಾಲಕ್ಷಪ್ಪ ಗುಂಗಾಡಿ, ಪ್ರದೀಪ ಹಿಟ್ನಾಳ, ವಸಂತ ನಾಯಕ, ಜನಾರ್ದನ್‌ ಉಪಸ್ಥಿತರಿದ್ದರು.

ಯಡಿಯೂರಪ್ಪ ರೈತರ ಪರ ಕಾಳಜಿ 

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ರೈತರ ಪರ ಕಾಳಜಿ ಹೊಂದಿದ್ದಾರೆಂದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದರು. ಸಮೀಪದ ಮೈಲಾಪುರ ಬಳಿ ಎಡದಂಡೆ ಕಾಲುವೆಯ ಮೈಲ್‌ 0.0ದಿಂದ ಮೈಲ್‌ 47.0ರ ವರೆಗೆ 59 ಕೋಟಿ ವೆಚ್ಚದಲ್ಲಿ ಆಯ್ದ ಭಾಗಗಳಲ್ಲಿ ಕಾಲುವೆ ಲೈನಿಂಗ್‌ ಕಾಮಗಾರಿಗೆ ಭೂಮಿ ಪೂಜೆ ನೇರವೆರಿಸಿ ಮಾತನಾಡಿದರು. ನವಲಿ ಭಾಗದಲ್ಲಿ ಸಮನಾಂತರ ಜಲಾಶಯಕ್ಕೆ 14.30 ಕೋಟಿ ನೀಡಿದ್ದು ಸರ್ವೇ ಕಾಮಗಾರಿ ಪ್ರಾರಂಭವಾಗಿದೆ. ತಿಂತಿಣಿ ಮತ್ತು ನವಲಿಯ ಎರಡು ಜಲಾಶಯಗಳು ನಿರ್ಮಾಣವಾದರೆ ವಿದ್ಯುತ್‌ ಉತ್ಪಾದನೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಲಾಭವಾಗಲಿದೆ. ಕಾಲುವೆ ಕಾಮಗಾರಿ ವೇಳೆ ರೈತರು ಆತಂಕ ಪಡುವ ಅಗತ್ಯವಿಲ್ಲ. ನಿಯಮನುಸಾರ ಹಾಗೂ ಅಚ್ಚುಕಟ್ಟಾಗಿ ಕೆಲಸ ನಡೆಯಲಿದೆ ಎಂದು ಭರವಸೆ ನೀಡಿದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ಕೊಪ್ಪಳ ಭಾಗದ ಸಿಂಗಟಾಲೂರು, ಕೊಪ್ಪಳ ಏತನೀರಾವರಿ ಮತ್ತು ನವಲಿ ಜಲಾಶಯದ ಕಾಮಗಾರಿಗಳು ಇದೇ ಸರ್ಕಾರದ ಅವಧಿಯಲ್ಲಿ ಮುಗಿದರೆ ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ರೈತರ ಬದುಕು ಹಸನವಾಗಲಿದೆ. ಈ ಅವಧಿಯಲ್ಲಿಯೇ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂಬ ಭರವಸೆ ಇದೆ ಎಂದರು.

ಶಾಸಕ ಬಸವರಾಜ ದಢೇಸೂಗುರು ಮಾತನಾಡಿ, ಎಡದಂಡೆ ಕಾಲುವೆ ಹೊಡೆಯುವುದರಿಂದ ರೈತರಿಗೆ ತೊಂದರೆಯಾಗಲಿದೆ ಎಂದು ಸಚಿವರಿಗೆ ಹೇಳಿದ ತಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ತಕ್ಷಣವೆ ಕಾಲುವೆ ಲೈನಿಂಗ್‌ ಕಾಮಗಾರಿಗೆ . 63 ಕೋಟಿ ಅನುದಾನ ನೀಡಿದ್ದಾರೆ ಎಂದು ಅಭಿನಂದಿಸಿದರು.

31ನೇ ವಿತರಣೆ ಕಾಲುವೆ ಕೆಳಭಾಗದ ರೈತರಿಗೆ ನೀರು ತಲುಪುತ್ತಿಲ್ಲ ಎನ್ನುವ ಉದ್ದೇಶದಿಂದ . 160 ಕೋಟಿ ವೆಚ್ಚದಲ್ಲಿ ಏತನೀರಾವರಿ ಯೋಜನೆ ಪ್ರಾರಂಭಿಸಲಾಗಿದೆ. ಆದರೆ ಸರ್ವೇ ನಂ. 6ರಲ್ಲಿ ಒಬ್ಬರು ಕಾಮಗಾರಿ ನಿಲ್ಲಿಸಿದ್ದಾರೆ. ಅದನ್ನು ಇಲಾಖೆ ಅಧಿಕಾರಿಗೊಂದಿಗೆ ಹೇಳಿ ಸರಿಮಾಡಿಸುವಂತೆ ನೀರು ಬಳಕೆದಾರರ ಸಂಘದ ಅಧ್ಯಕ್ಷ ಸಂಗಮೇಶ ಗೌಡ ಬೂದಗುಂಪಾ ಸಚಿವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಶಾಸಕರಾದ ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್‌, ಜಿಪಂ ಅಧ್ಯಕ್ಷ ವಿಶ್ವನಾಥ ರೆಡ್ಡಿ, ಕಾಡಾ ಅಧ್ಯಕ್ಷ ಬಸನಗೌಡ ತುರ್ವಿಹಾಳ, ಕಾರಟಗಿ ಎಪಿಎಂಸಿ ಅಧ್ಯಕ್ಷ ಸೋಮಶೇಖರ ಗೌಡ ಮುಷ್ಟೂರು, ಗಂಗಾವತಿ ಎಪಿಎಂಸಿ ಅಧ್ಯಕ್ಷ ಚಂದ್ರುಗೌಡ ಯರಡೋಣಾ, ಕಾರಟಗಿ ಮಂಡಲ ಅಧ್ಯಕ್ಷ ಚಂದ್ರಶೇಖರ ಮುಸಾಲಿ ಇದ್ದರು.
 

click me!