ಬೆಳಗಾವಿ: ಕೊರೋನಾ ವಾರಿಯರ್ಸ್‌ಗೂ ಸೋಂಕು, ಆರೈಕೆಯೇ ತೊಡಕು..!

By Kannadaprabha NewsFirst Published Jul 30, 2020, 1:08 PM IST
Highlights

ಬೆಳಗಾವಿ ಜಿಲ್ಲೆಯ ಹಲವೆಡೆ ಸೋಂಕಿತರ ಉಪಚರಿಸಬೇಕಾದ ವೈದ್ಯರು, ಸಿಬ್ಬಂದಿಗೆ ವಕ್ಕರಿಸಿದ ಕೊರೋನಾ| ನಗರದಲ್ಲಿ ಕೊರೋನಾ ಸೋಂಕಿತರಿಗೆ ಹೋಂ ಐಸೋಲೇಶನ್‌ ಮಾಡುವ ಪ್ರಕ್ರಿಯೆ ಆರಂಭ| ಕೊರೋನಾ ವೈರಸ್‌ ಹಾಟ್‌ಸ್ಪಾಟ್‌ ಆದ ಬೆಳಗಾವಿ|

ಶ್ರೀಶೈಲ ಮಠದ 

ಬೆಳಗಾವಿ(ಜು.30): ಜಿಲ್ಲೆಯಲ್ಲಿ ಕೊರೋನಾ ವೈರಸ್‌ ಪಾಸಿಟಿವ್‌ ಪ್ರಕರಣ ಪ್ರತಿನಿತ್ಯ ಹೆಚ್ಚಳವಾಗುತ್ತಲೇ ಸಾಗುತ್ತಿದೆ. ಕೊರೋನಾ ವಾರಿಯರ್ಸ್‌ಗಳಾದ ಆರೋಗ್ಯ ಇಲಾಖೆ ಸಿಬ್ಬಂದಿಗೂ ಸೋಂಕು ತಗುಲಿದೆ. ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ, ಬಿಮ್ಸ್‌ ಆಸ್ಪತ್ರೆಗೂ ಸೋಂಕು ವಕ್ಕರಿಸಿದೆ. ಇತರೆ ಸಿಬ್ಬಂದಿಗೂ ಇದೀಗ ಕೊರೋನಾ ಸೋಂಕಿನ ಭೀತಿ ಎದುರಾಗಿದೆ.

ಬಿಮ್ಸ್‌ ಆಸ್ಪತ್ರೆಯ ಸರ್ಜನ್‌, ಬಿಮ್ಸ್‌ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ ಸೋಂಕಿತರಿಗೆ ಆರೋಗ್ಯ ಸೇವೆಯಲ್ಲಿ ತೊಡಗಿರುವ 8 ವೈದ್ಯರಿಗೂ ಸೋಂಕು ತಗುಲಿದೆ. ಮಾತ್ರವಲ್ಲ, ಹುಕ್ಕೇರಿ ಸರ್ಕಾರಿ ಆಸ್ಪತ್ರೆಯ ಇಬ್ಬರು ಸೇರಿದಂತೆ ಕೊರೋನಾ ವಾರಿಯರ್ಸ್‌ಗೂ ಸೋಂಕು ತಗಲುತ್ತಿರುವುದು ತೀವ್ರ ಆತಂಕ ಮೂಡಿಸಿದೆ. ಬಿಮ್ಸ್‌ ಆಸ್ಪತ್ರೆಯಲ್ಲಿ ಕೋವಿಡ್‌ ವಾರ್ಡ್‌ನಲ್ಲಿ ಅಹೋರಾತ್ರಿ ಸೋಂಕಿತರ ಆರೈಕೆಯಲ್ಲಿ ತೊಡಗಿರುವ ವೈದ್ಯರು, ಸಿಬ್ಬಂದಿಗೂ ಸೋಂಕು ತಗುಲಿದೆ. ಇದರಿಂದಾಗಿ ಬಿಮ್ಸ್‌ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ಇದೀಗ ಸೋಂಕಿನ ಭೀತಿ ಎದುರಿಸುವಂತಾಗಿದೆ.

ಈ ಹಿಂದೆ ಬಿಮ್ಸ್‌ ಆಸ್ಪತ್ರೆಯ 8 ವೈದ್ಯರು, ಇಬ್ಬರು ಸ್ಟಾಫ್‌ ನರ್ಸ್‌, ಒಬ್ಬ ಡಾಟಾ ಎಂಟ್ರಿ ಆಪರೇಟರ್‌ ಹಾಗೂ ನಾಲ್ವರು ಟೆಕ್ನಿಷಿಯನ್‌ಗಳಿಗೆ ಸೋಂಕು ತಗುಲಿತ್ತು. ಇದೀಗ ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಗೂ ಕೊರೋನಾ ಸೋಂಕು ವ್ಯಾಪಿಸಿದೆ. ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ತಲಾ ಒಬ್ಬರು ಸಿಬ್ಬಂದಿಗೆ ಸೋಂಕು ತಗುಲಿದೆ.

ಕೊರೋನಾ ಬಗ್ಗೆ ಬೇಜವಾಬ್ದಾರಿ ಹೇಳಿಕೆ: ಶ್ರೀರಾಮುಲು ಆಯ್ತು, ಇದೀಗ ಮತ್ತೋರ್ವ ಸಚಿವರ ಸರದಿ

ಜಿಲ್ಲಾಡಳಿತಕ್ಕೆ ಸವಾಲು:

ಪ್ರತಿನಿತ್ಯವೂ ಕೊರೋನಾ ಪಾಸಿಟಿವ್‌ ವರದಿಗಳು ಬರುತ್ತಲೇ ಇರುವುದು, ಸಾವಿನ ಸಂಖ್ಯೆ ಏರುತ್ತಲೇ ಇರುವುದು ಜಿಲ್ಲಾಡಳಿತವನ್ನು ಮಾತ್ರವಲ್ಲ, ಸಾರ್ವಜನಿಕರನ್ನೂ ಬೆಚ್ಚಿ ಬೀಳಿಸಿದೆ. ಗ್ರಾಮೀಣ ಪ್ರದೇಶಗಳಿಂದಲೇ ಹೆಚ್ಚಿನ ಪ್ರಕರಣಗಳು ದೃಢಪಟ್ಟಿವೆ. ಸೋಂಕಿನ ಮೂಲವನ್ನು ಪತ್ತೆ ಹಚ್ಚಲು ಜಿಲ್ಲಾಡಳಿತಕ್ಕೆ ಸಾಧ್ಯವಾಗುತ್ತಿಲ್ಲ. ಸೋಂಕಿತರ ಸಂಪರ್ಕದಿಂದಲೇ ಸಾಕಷ್ಟು ಜನರಿಗೆ ಸೋಂಕು ಹರಡುತ್ತಿದೆ. ಜನರ ನೆಮ್ಮದಿಯನ್ನು ಕೊರೋನಾ ಕಸಿದಿದೆ.

ಕೊರೋನಾ ವೈರಸ್‌ ಹರಡುವುದನ್ನು ತಡೆಗಟ್ಟಲು ಬೆಳಗಾವಿ ಅರ್ಧ ಜಿಲ್ಲೆ ಲಾಕ್‌ಡೌನ್‌ ಮಾಡಲಾಗಿತ್ತು. ಇದೀಗ ತೆರವುಗೊಳಿಸಲಾಗಿದೆ. ಸಂಡೇ ಲಾಕ್‌ಡೌನ್‌ ಕೂಡ ಜಾರಿಯಲ್ಲಿದೆ. ಆದಾಗ್ಯೂ ಕೊರೋನಾ ವೈರಸ್‌ ನಿಯಂತ್ರಣಗೊಳ್ಳದೇ ತನ್ನ ಆರ್ಭಟವನ್ನು ಮುಂದುವರೆಸಿದೆ. ಎಲ್ಲಿ ಯಾವಾಗ, ಹೇಗೆ ಸೋಂಕು ತಗಲುತ್ತದೆಯೋ ಎಂಬ ಭೀತಿ ಎಲ್ಲರನ್ನು ಕಾಡುತ್ತಲೇ ಇದೆ. ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆ ಏರುತ್ತಲೇ ಸಾಗಿರುವುದು ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಿಸಿದೆ.

ಬೆಳಗಾವಿ ಕೊರೋನಾ ಹಾಟ್‌ಸ್ಪಾಟ್‌:

ಕುಂದಾನಗರಿ ಬೆಳಗಾವಿ ಕಿಲ್ಲರ್‌ ಕೊರೋನಾ ವೈರಸ್‌ ಹಾಟ್‌ಸ್ಪಾಟ್‌ ಆಗಿದೆ. ಪ್ರತಿನಿತ್ಯವೂ ಕೊರೋನಾ ಪಾಸಿಟಿವ್‌ ಪ್ರಕರಣದ ವರದಿ ಬರುತ್ತಿವೆ. ನಗರದಲ್ಲೇ ಸುಮಾರು 500 ಪಾಸಿಟಿವ್‌ ಪ್ರಕರಣ ಪತ್ತೆಯಾಗಿವೆ. ಜುಲೈ ತಿಂಗಳ ಮೊದಲ ವಾರದಿಂದ ಏರುಮುಖದತ್ತ ಸಾಗಿದ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಳವಾಗುತ್ತಲೇ ಸಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಕೊರೋನಾ ವೈರಸ್‌ ಸೋಂಕಿನ ನಿಯಂತ್ರಣಕ್ಕೆ ಜಿಲ್ಲೆಯನ್ನು ಸಂಪೂರ್ಣವಾಗಿ ಲಾಕ್‌ಡೌನ್‌ ಮಾಡಬೇಕು ಎಂಬ ಬೇಡಿಕೆ ವ್ಯಾಪಕವಾಗಿ ಕೇಳಿಬರುತ್ತಿದೆ. ಆದರೆ, ಜಿಲ್ಲಾಡಳಿತ ಲಾಕ್‌ಡೌನ್‌ಗೆ ಮುಂದಾಗುತ್ತಿಲ್ಲ.

ಬೆಳಗಾವಿ ನಗರದಲ್ಲಿ ಕೊರೋನಾ ಸೋಂಕಿತರಿಗೆ ಹೋಂ ಐಸೋಲೇಶನ್‌ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಸೋಂಕಿತರು 57 ವರ್ಷ ಮೇಲ್ಪಟ್ಟು ಇರಬಾರದು. ರಕ್ತದೊತ್ತಡ, ಮಧುಮೇಹ ಕಾಯಿಲೆ ಸೇರಿದಂತೆ ಇತರೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರಬಾರದು. ಹೋಂ ಐಸೋಲೇಷನ್‌ ಆಗಬಯಸುವ ಸೋಂಕಿತರ ಮನೆಯಲ್ಲಿ ಅಟ್ಯಾಚ್ಡ್‌ ಬಾತ್‌ರೂಂ, ಶೌಚಾಲಯ ಇರಬೇಕು. ಇಂತಹ ಸೌಲಭ್ಯ ಹೊಂದಿದರೆ ಮಾತ್ರ ಅಂತಹವರಿಗೆ ಹೋಂ ಐಸೋಲೇಶನ್‌ಗೆ ಅವಕಾಶ ನೀಡಲಾಗುತ್ತದೆ. ಈಗಾಗಲೇ ನಗರದಲ್ಲಿ 30ಕ್ಕೂ ಹೆಚ್ಚು ಜನರನ್ನು ಹೋಂ ಐಸೋಲೇಷನ್‌ ಮಾಡಲಾಗಿದ್ದು, ಸರ್ಕಾರಿ ಆಸ್ಪತ್ರೆಯ ವೈದ್ಯರೇ ಸೋಂಕಿತರ ಮನೆಗೆ ತೆರಳಿ, ಚಿಕಿತ್ಸೆ ನೀಡುತ್ತಿದ್ದಾರೆ.
 

click me!