8 ವೈದ್ಯರು, 7 ಪೊಲೀಸರಿಗೆ ಸೋಂಕು| ರಾಮನಗರದ ಜಿಲ್ಲೆಯ ಮಾಗಡಿ ಆಸ್ಪತ್ರೆ, ಸಾತನೂರು ಪೊಲೀಸ್ ಠಾಣೆ ಸೀಲ್‌ಡೌನ್| ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 385ಕ್ಕೆ ಹೆಚ್ಚಳ| ಶನಿವಾರ 7 ಮಂದಿ ಗುಣಮುಖ, ಈವರೆಗೆ ಒಟ್ಟಾರೆ 186 ಮಂದಿ ಗುಣಮುಖ 191 ಸಕ್ರಿಯ ಪ್ರಕರಣಗಳು|
ರಾಮನಗರ(ಜು.12): ಕೋವಿಡ್ ಗ್ರೀನ್ ಜೋನ್ ಎನಿಸಿಕೊಂಡಿದ್ದ ರೇಷ್ಮೆ ನಾಡಿನಲ್ಲಿನ ಇದೀಗ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಕೋರೋನಾ ವಾರಿಯರ್ಸ್ಗೂ ಸೋಂಕು ತಗುಲುತ್ತಿರುವು ಜನತೆ ಆತಂಕ ಪಡುವಂತಾಗಿದೆ.
ಶನಿವಾರ ಜಿಲ್ಲೆಯ ಸಾತನೂರು ಪೊಲೀಸ್ ಠಾಣೆಯ ಪೇದೆಯೊಬ್ಬರಿಗೆ ಸೋಂಕು ಪತ್ತೆಯಾಗಿದೆ. ಇತ್ತ ಮಾಗಡಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರಿಗೂ ಕೋವಿಡ್ ಸೋಂಕು ಇರುವುದು ಖಚಿತವಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ 8 ಮಂದಿ ವೈದ್ಯರು ಮತ್ತು 7 ಮಂದಿ ಪೊಲೀಸರಿಗೆ ಕೊರೋನಾ ಸೋಂಕು ತಗುಲಿದೆ.
ಕೊರೋನಾ ಸೋಂಕಿತ ಶವಕ್ಕೆ ಸಂಸ್ಕಾರ ನೆರವೇರಿಸುವ ಆಶಾಗೆ ಕುಮಾರಸ್ವಾಮಿ ಮೆಚ್ಚುಗೆ
ಪೊಲೀಸ್ ಠಾಣೆ ಸೀಲ್‌ಡೌನ್:
ಕನಕಪುರ ತಾಲೂಕಿನ ಸಾತನೂರು ಪೊಲೀಸ್ ಪೇದೆಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಕಳೆದ 6 ದಿನಗಳ ಹಿಂದೆ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದ ಪೊಲೀಸ್ ಪೇದೆ ಠಾಣೆಯ ಸಮೀಪದಲ್ಲೇ ಇರುವ ವಸತಿ ಸಮುಚ್ಚಯದ ಮನೆಯಲ್ಲಿ ಕ್ವಾಂಟೈನ್ ನಲ್ಲಿದ್ದರು. ಶನಿವಾರ ಬೆಳಿಗ್ಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರನ್ನು ಚಿಕಿತ್ಸೆಗಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಿಂದೆ ಇವರು ಕಾಡಶಿವನಹಳ್ಳಿಯಲ್ಲಿ ಭಧ್ರತಾ ಕರ್ತವ್ಯದಲ್ಲಿ ಭಾಗಿಯಾಗಿದ್ದರು. ಕಳೆದ ಹಲವು ದಿನಗಳಿಂದ ಠಾಣೆಗೆ ಬಂದಿರಲಿಲ್ಲ. ಸದ್ಯ ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ.
ಮಾಗಡಿ ಆಸ್ಪತ್ರೆ ಸೀಲ್‌ಡೌನ್:
ವೈದ್ಯರೊಬ್ಬರಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಮಾಗಡಿ ಸಾರ್ವಜಿಕ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ. ಮಹಿಳಾ ವೈದ್ಯರಿಗೆ ಕೋವಿಡ್-19 ಸೋಂಕು ತಗುಲಿರುವುದು ಶನಿವಾರ ದೃಢಪಟ್ಟಿದೆ. ಆಸ್ಪತ್ರೆಯನ್ನು ಸದ್ಯ ಸೀಲ್ ಡೌನ್ ಮಾಡಲಾಗಿದ್ದು, ಇಡೀ ಆಸ್ಪತ್ರೆಯನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಗಲಿದ್ದು, ರೋಗಿಗಳು ಪರದಾಡುವಂತಾಗಿದೆ.ಇನ್ನು ವೈದ್ಯರಿಗೆ ಸೋಂಕು ತಗುಲಿರುವ ಮಾಹಿತಿಯಿಂದ ಸಾರ್ವಜನಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಜಿಲ್ಲೆಯಲ್ಲಿ 30 ಪ್ರಕರಣ ದೃಢ
ಶನಿವಾರ ಜಿಲ್ಲೆಯಲ್ಲಿ 30 ಕೊರೋನಾ ಪ್ರಕರಣಗಳು ವರದಿಯಾಗಿದ್ದು, ಚನ್ನಪಟ್ಟಣ ತಾಲ್ಲೂಕಿನಲ್ಲಿ 14, ಕನಕಪುರದಲ್ಲಿ 3, ಮಾಗಡಿಯಲ್ಲಿ 9, ರಾಮನಗರ ತಾಲೂಕಿನಲ್ಲಿ 4 ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 385ಕ್ಕೆ ಹೆಚ್ಚಳ ಗೊಂಡಿದೆ. ಶನಿವಾರ 7 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟಾರೆ 186 ಮಂದಿ ಗುಣಮುಖರಾಗಿದ್ದು, 191 ಸಕ್ರಿಯ ಪ್ರಕರಣಗಳಿವೆ.