* ಜಿಲ್ಲಾ ಪ್ರವೇಶಕ್ಕೆ ನೆಗೆಟಿವ್ ವರದಿ ಕಡ್ಡಾಯ
* ಸೋಂಕಿತರ ಯೊಗಕ್ಷೇಮ ವಿಚಾರಿಸಿದ ಬೊಮ್ಮಾಯಿ
* ಒಳದಾರಿಗಳಲ್ಲಿ ನುಸುಳುವವರ ಮೇಲೆ ನಿಗಾವಹಿಸಲು ಪೊಲೀಸರ ನಿಯೋಜನೆ
ಹಾವೇರಿ(ಮೇ.23): ಕೋವಿಡ್ ಮೂರನೇ ಅಲೆಗೂ ಮುನ್ನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಚಿಕಿತ್ಸೆ ನೀಡಲು ಮೂಲ ಸೌಕರ್ಯ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ಗೃಹ, ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
undefined
ಜಿಲ್ಲೆಯ ಶಿಗ್ಗಾಂವಿ, ಬಂಕಾಪುರ ಸಾರ್ವಜನಿಕ ಆಸ್ಪತ್ರೆ, ಬಾಡ ಕೋವಿಡ್ ಕೇರ್ ಸೆಂಟರ್‌ಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ತಾಲೂಕು ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಮಾಡಲು ಮೂರನೇ ಅಲೆ ಆರಂಭವಾಗುವ ಹೊತ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಟ10 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗುವುದು ಎಂದರು.
ಭಾನುವಾರದಿಂದ ಬಂಕಾಪುರ ಆರೋಗ್ಯ ಕೇಂದ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಕೋವಿಡ್ ಆಸ್ಪತ್ರೆಯಾಗಿ ಬಳಸಲಾಗುವುದು. 30 ಹಾಸಿಗೆ ಈ ಆಸ್ಪತ್ರೆಯಲ್ಲಿ ಮೊದಲ ಹಂತದಲ್ಲಿ 10 ಹಾಸಿಗೆಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗುವುದು. ನಂತರ 10 ಹಾಸಿಗೆಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗುವುದು. 10 ಆಕ್ಸಿಜನ್ ಕಾನ್ಸಂಟ್ರೇಟರ್ ಒದಗಿಸಲಾಗುವುದು, ಪೋರ್ಟೆಬಲ್ ಎಕ್ಸರೇ ಮಷಿನ್, ಜನರೇಟರ್ ಸಹ ಒದಗಿಸಲು ಕ್ರಮವಹಿಸಲಾಗುತ್ತಿದೆ ಎಂದರು.
ಕೊರೋನಾ ನಡುವೆ ಬ್ಯಾಡಗಿ ಮೆಣಸಿನಕಾಯಿ 2,000 ಕೋಟಿ ವಹಿವಾಟು..!
ಬಂಕಾಪುರ ಆಸ್ಪತ್ರೆಗಳಿಗೆ ಕೋವಿಡ್ ಸಂದರ್ಭದಲ್ಲಿ 30 ಹಾಸಿಗೆಗಳಿಗೆ ಪ್ರೆಸರೈಸ್ ಆಕ್ಸಿಜನ್ ಸರಬರಾಜು, ಬೆಡ್‌ಗಳ ವ್ಯವಸ್ಥೆ ನಿಟ್ಟಿನಲ್ಲಿ ಆಕ್ಸಿಜನ್ ಪೂರೈಕೆ ಪೈಪ್‌ಲೈನ್ ಮ್ಯಾನಿಫೋಲ್ಡ್ ಅಳವಡಿಸಲಾಗಿತ್ತು. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆ ಸಕ್ರಿಯಗೊಳಿಸಲಾಗುವುದು. 30 ಹಾಸಿಗೆಗಳ ಪೈಕಿ ಕನಿಷ್ಟ20 ಆಕ್ಸಿಜನ್ ಬೆಡ್‌ಗಳನ್ನು ಕೋವಿಡ್ ರೋಗಿಗಳಿಗೆ ಮೀಸಲು ಇರಿಸಲಾಗುವುದು. ತಾಲೂಕಿನಲ್ಲಿ ಆರೋಗ್ಯ ಮೂಲ ಸೌಕರ್ಯ ಹೆಚ್ಚಿಸಲು ಕ್ರಮಕೈಗೊಳ್ಳಲಾಗಿದೆ. 2-3 ದಿನಗಳಲ್ಲಿ ಜಿಲ್ಲೆಗೆ 40 ಆಕ್ಸಿಜನ್ ಬೈಪ್ಯಾಕ್ ಪೂರೈಕೆಯಾಗಲಿದೆ. ವೆಂಟಿಲೇಟರ್‌ಗಳಿಗೆ ಪರ್ಯಾಯವಾಗಿ ಬೈಪ್ಯಾಕ್ ಬಳಸಿ ಕೋವಿಡ್ ಸೋಂಕಿತರ ಜೀವ ಉಳಿಸಬಹದಾಗಿದೆ. ಜಿಲ್ಲಾ ಆಸ್ಪತ್ರೆಗೆ 10 ಹಾಗೂ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ತಲಾ ಐದರಂತೆ ಹಂಚಿಕೆ ಮಾಡಲಾಗುವುದು. ಇದಲ್ಲದೆ ಬೊಮ್ಮಾಯಿ ಟ್ರಸ್ಟ್‌ನಿಂದ ಶಿಗ್ಗಾಂವಿ ಹಾಗೂ ಸವಣೂರು ಆಸ್ಪತ್ರೆಗೆ ತಲಾ ಎರಡರಂತೆ ಕಾನ್ಸಂಟ್ರೇಟರ್ ವಿತರಿಸಲಾಗಿದೆ ಎಂದರು.
ಆರೈಕೆ ಕೇಂದ್ರಕ್ಕೆ ಸ್ಥಳಾಂತರ:
ಹೋಂ ಐಸೋಲೇಶನ್‌ನಲ್ಲಿರುವ ಸೋಂಕಿತರ ಪೈಕಿ ಉಸಿರಾಟದ ಮಟ್ಟ90ಕ್ಕಿಂತ ಕಡಿಮೆ ಇದ್ದವರನ್ನು ಕೋವಿಡ್ ಕೇರ್ ಸೆಂಟರ್ ಶಿಫ್ಟ್ ಮಾಡುವ ಕೆಲಸ ನಡೆದಿದೆ. ಮನೆಯಲ್ಲಿರುವವರು ಕೋವಿಡ್ ಉಲ್ಬಣವಾಗಿ ಕೊನೆಯ ಹಂತದಲ್ಲಿ ಆಸ್ಪತ್ರೆಗೆ ಬರುವುದರಿಂದ ಚಿಕಿತ್ಸೆ ಫಲಕಾರಿಯಾಗುವುದಿಲ್ಲ. ಮುಂಚಿತವಾಗಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾದರೆ ವೈದ್ಯಕೀಯ ನಿಗಾದಲ್ಲಿ ಚಿಕಿತ್ಸೆ ದೊರೆತು ಗುಣಮುಖರಾಗಲಿದ್ದಾರೆ. ಗ್ರಾಮೀಣ ಕೋವಿಡ್ ಟಾಸ್ಕ್ ಫೋರ್ಸ್‌ಗೆ ಜವಾಬ್ದಾರಿ ನೀಡಲಾಗಿದೆ. ಮನೆ ಮನೆಗೆ ಭೇಟಿ ನೀಡಿ ಹೋಂ ಐಸೋಲೇಷನ್‌ನಲ್ಲಿರುವವರನ್ನು ನಿಗಾವಹಿಸಿ ಕೋವಿಡ್ ಕೇರ್ ಸೆಂಟರ್ ದಾಖಲಿಸುವ ಕೆಲಸ ಮಾಡಲಿದ್ದಾರೆ ಎಂದರು.
ಒಂದು ಗ್ರಾಮದಲ್ಲಿ 10ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು ಕಂಡುಬಂದರೆ ಸ್ಥಳೀಯವಾಗಿ ಲಾಕ್‌ಡೌನ್‌ನಂತಹ ಬಿಗಿ ಕ್ರಮಕೈಗೊಳ್ಳಲು ಪಂಚಾಯಿತಿಗೆ ಅಧಿಕಾರ ನೀಡಲಾಗುವುದು. ವಿಡಿಯೋ ಸಂವಾದದ ಮೂಲಕ ಗ್ರಾಮೀಣ ಸ್ಥಿಗತಿಯನ್ನು ಅರಿಯಲು ಕ್ರಮ ವಹಿಸಲಾಗುವುದು ಎಂದರು.
ಜಿಲ್ಲಾ ಪ್ರವೇಶಕ್ಕೆ ನೆಗೆಟಿವ್ ವರದಿ ಕಡ್ಡಾಯ
ಲಾಕ್‌ಡೌನ್ ನಿಯಮ ಕಡ್ಡಾಯವಾಗಿ ಪಾಲಿಸಬೇಕು. ಬಿಗಿ ಕ್ರಮಕೈಗೊಳ್ಳಲು ಎಲ್ಲ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೊರ ಜಿಲ್ಲೆ, ಗಡಿ ಜಿಲ್ಲೆಗಳಿಂದ ಬರುವ ಜನರು ಕಡ್ಡಾಯವಾಗಿ ಕೋವಿಡ್ ತಪಾಸಣೆ ಮಾಡಿಸಿಕೊಂಡು ನೆಗಟಿವ್ ವರದಿಯೊಂದಿಗೆ ಬರಬೇಕು. ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಿ ಒಳಗೆ ಬಿಡಲಾಗುವುದು. ಒಳದಾರಿಗಳಲ್ಲಿ ನುಸುಳುವವರ ಮೇಲೆ ನಿಗಾವಹಿಸಲು ಪೊಲೀಸ್ ನಿಯೋಜಿಸಲಾಗುವುದು. ಎಲ್ಲ ಗಡಿ ಭಾಗದಲ್ಲಿ ನಾಕಾಬಂದಿ ಹಾಕಲಾಗಿದೆ ಎಂದರು.
ಶಿಗ್ಗಾಂವಿ ವಾಜಪೇಯಿ ವಸತಿ ಶಾಲೆಯಲ್ಲಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ದಾಖಲಾಗಿರುವ ರೋಗಿಗಳೊಂದಿಗೆ ಗೃಹ ಸಚಿವ ಬೊಮ್ಮಾಯಿ ಸಂವಾದ ನಡೆಸಿ ಯೋಗಕ್ಷೇಮ ವಿಚಾರಿಸಿದರು.